ಫೋಟೋ ಗ್ಯಾಲರಿ ಆಪರೇಷನ್​ ಸಿಂಧೂರ ಐಪಿಎಲ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Vishwavani Editorial: ಯಾವ ಹುತ್ತದಲ್ಲಿ ಯಾವ ಹಾವೋ?

ಪಂಜಾಬ್ ಪೊಲೀಸರು ಭಾನುವಾರ ಭರ್ಜರಿ ಕಾರ್ಯಾಚರಣೆಯನ್ನು ನಡೆಸಿ 113 ಮಂದಿ ಡ್ರಗ್ ಪೆಡ್ಲರ್‌ಗಳನ್ನು ಬಂಧಿಸಿ ಅವರಿಂದ ಗಣನೀಯ ಪ್ರಮಾಣದ ಮಾದಕ ವಸ್ತುಗಳನ್ನು ವಶಪಡಿಸಿಕೊಂಡ ಸುದ್ದಿಯನ್ನು ನೀವು ಈಗಾಗಲೇ ಓದಿದ್ದೀರಿ. ಹೀಗೆ ವಶಪಡಿಸಿಕೊಳ್ಳಲಾದ ದ್ರವ್ಯಗಳಲ್ಲಿ 2 ಕೆ.ಜಿ.ಗೂ ಹೆಚ್ಚಿನ ಹೆರಾಯಿನ್, 330 ಗ್ರಾಂ.ನಷ್ಟು ಅಫೀಮು, 32 ಸಾವಿರಕ್ಕೂ ಹೆಚ್ಚಿನ ಮಾದಕ ವಸ್ತು ಮಾತ್ರೆಗಳು ಸೇರಿದ್ದವು

ಯಾವ ಹುತ್ತದಲ್ಲಿ ಯಾವ ಹಾವೋ?

Profile Ashok Nayak Jun 4, 2025 6:00 AM

ಇದು ನಿಜಕ್ಕೂ ಎಚ್ಚರಿಕೆಯ ಗಂಟೆಯೇ ಸರಿ. ಪಂಜಾಬ್ ಪೊಲೀಸರು ಭಾನುವಾರ ಭರ್ಜರಿ ಕಾರ್ಯಾಚರಣೆಯನ್ನು ನಡೆಸಿ 113 ಮಂದಿ ಡ್ರಗ್ ಪೆಡ್ಲರ್‌ಗಳನ್ನು ಬಂಧಿಸಿ ಅವರಿಂದ ಗಣನೀಯ ಪ್ರಮಾಣದ ಮಾದಕ ವಸ್ತುಗಳನ್ನು ವಶಪಡಿಸಿಕೊಂಡ ಸುದ್ದಿಯನ್ನು ನೀವು ಈಗಾಗಲೇ ಓದಿದ್ದೀರಿ. ಹೀಗೆ ವಶಪಡಿಸಿಕೊಳ್ಳಲಾದ ದ್ರವ್ಯಗಳಲ್ಲಿ 2 ಕೆ.ಜಿ.ಗೂ ಹೆಚ್ಚಿನ ಹೆರಾಯಿನ್, 330 ಗ್ರಾಂ.ನಷ್ಟು ಅಫೀಮು, 32 ಸಾವಿರಕ್ಕೂ ಹೆಚ್ಚಿನ ಮಾದಕ ವಸ್ತು ಮಾತ್ರೆಗಳು ಸೇರಿದ್ದವು ಎಂಬುದು ಲಭ್ಯ ಮಾಹಿತಿ.

ಮಾದಕ ದ್ರವ್ಯಗಳ ವಿರುದ್ಧ ಪಂಜಾಬ್ ಸರಕಾರವು ಹಮ್ಮಿಕೊಂಡಿರುವ ಅಭಿಯಾನದ ಭಾಗವಾಗಿ ಕಳೆದ 92 ದಿನಗಳಲ್ಲಿ 14944 ಮಂದಿ ಡ್ರಗ್ ಪೆಡ್ಲರ್‌ಗಳನ್ನು ಬಂಧಿಸಲಾಗಿದೆ ಎಂಬ ಸಂಗತಿಯು, ಮಾದಕ ವಸ್ತುಗಳ ತಯಾರಕರು ಮತ್ತು ಮಾರಾಟಗಾರರ ಜಾಲವು ಅಲ್ಲಿ ಅದೆಷ್ಟು ವ್ಯಾಪಕವಾಗಿದೆ ಎಂಬುದಕ್ಕೆ ಸಾಕ್ಷಿಯಾಗಬಲ್ಲದು.

ಇದನ್ನೂ ಓದಿ: Vishwavani Editorial: ಕೆಟ್ಟ ಮೇಲೆ ಬುದ್ಧಿ ಬಂತು!

ಹೀಗಾಗಿ ಮಾದಕದ್ರವ್ಯ ವ್ಯಸನಪೀಡಿತ ಪಂಜಾಬ್ ರಾಜ್ಯವನ್ನು ಉದ್ದೇಶಿಸಿ ‘ಉಡ್ತಾ ಪಂಜಾಬ್’ ಎಂಬ ಗ್ರಹಿಕೆ ಹೊಮ್ಮಿದ್ದರಲ್ಲಿ ಅತಿಶಯೋಕ್ತಿಯೇನಿಲ್ಲ ಎನಿಸುತ್ತದೆ. ಪಂಜಾಬ್ ಒಂದರಲ್ಲೇ ಈ ಪ್ರಮಾಣದಲ್ಲಿದ್ದರೆ ದೇಶದ ಮಿಕ್ಕ ಭಾಗಗಳಲ್ಲಿ ಈ ದುರುಳರ ಕಾರ್ಯಜಾಲ ಅದೆಷ್ಟು ವ್ಯಾಪಿಸಿರ ಬಹುದು ಎಂಬುದನ್ನು ಊಹಿಸಿಕೊಳ್ಳಿ. ಆದ್ದರಿಂದ, ಅನುಮಾನಾಸ್ಪದ ಚಟುವಟಿಕೆಗಳು ಕಂಡು ಬಂದಲ್ಲಿ ಅದನ್ನು ಆಳುಗ ವ್ಯವಸ್ಥೆಯ ಗಮನಕ್ಕೆ ತರುವುದು ಪ್ರಜ್ಞಾವಂತ ನಾಗರಿಕರ ಹೊಣೆಗಾರಿಕೆ ಯಾಗಬೇಕು ಹಾಗೂ ಅಂಥ ಮಾಹಿತಿಯನ್ನು ಅನುಸರಿಸಿ ಸೂಕ್ತ ಕ್ರಮಗಳಿಗೆ, ಕಾರ್ಯಾಚರಣೆಗಳಿಗೆ ಮುಂದಾಗುವುದು ಆಳುಗರ ಆದ್ಯತಾ ಕಾರ್ಯವಾಗಬೇಕು.

ಮಾದಕ ವಸ್ತುಗಳ ಮಾರಾಟಗಾರರಿಗೆ ಯುವಜನರೇ ಮುಖ್ಯಗುರಿ. ವಿಶ್ವದ ವಿವಿಧ ದೇಶಗಳಿಗೆ ಹೋಲಿಸಿದರೆ, ಭಾರತದಲ್ಲಿನ ಯುವಸಮುದಾಯದ ಸಂಖ್ಯೆ ಗಣನೀಯವಾಗಿದೆ. ‘ಭವ್ಯ ಭಾರತದ ಭವಿಷ್ಯ’ ಎನಿಸಿಕೊಂಡಿರುವ ಯುವಜನರನ್ನು ಮಾದಕ ವಸ್ತುಗಳ ಮಾರಾಟಗಾರರ ಕಬಂಧಬಾಹು ಗಳು ತಮ್ಮ ತೆಕ್ಕೆಗೆ ತೆಗೆದುಕೊಳ್ಳುವ ಮೊದಲೇ, ಅಂಥ ದುರುಳರಿಗೆ ತಕ್ಕ ಶಾಸ್ತಿ ಮಾಡಬೇಕಿದೆ. ಇದು ಈ ಕ್ಷಣದ ಅನಿವಾರ್ಯತೆಯೂ ಹೌದು.