ಸಂಕಟಗಳಿಗೆ ಯಾರು ಹೊಣೆ?
ದೇಶದ ವಿಮಾನಯಾನ ಮಾರುಕಟ್ಟೆಯಲ್ಲಿ ಶೇ.67 ಪಾಲು ಹೊಂದಿರುವ ಇಂಡಿಗೋ ಸಂಸ್ಥೆ ಡಿ.೫ ರಿಂದ ದಿಢೀರನೆ ವಿಮಾನಯಾನಗಳನ್ನು ರದ್ದು ಮಾಡಿದ್ದು, ಇಡೀ ದೇಶದಲ್ಲಿ ಗೊಂದಲಕ್ಕೆ ಕಾರಣ ವಾಗಿದೆ. ಕೇಂದ್ರ ಸರಕಾರ ಬಹಳ ಮುಂಚಿತವಾಗಿಯೇ ಮಾಹಿತಿ ನೀಡಿ ದೇಶದ ವಿಮಾನ ಯಾನ ಸಂಸ್ಥೆಗಳ ಪೈಲಟ್‌ಗಳೂ ಸೇರಿ ಎಲ್ಲ ಸಿಬ್ಬಂದಿಗೆ ಸೂಕ್ತ ವಿಶ್ರಾಂತಿ ನೀಡಬೇಕೆಂಬ ನಿಯಮ ಜಾರಿ ಮಾಡಿತ್ತು
-
ದೇಶದ ವಿಮಾನಯಾನ ಮಾರುಕಟ್ಟೆಯಲ್ಲಿ ಶೇ.67 ಪಾಲು ಹೊಂದಿರುವ ಇಂಡಿಗೋ ಸಂಸ್ಥೆ ಡಿ.೫ ರಿಂದ ದಿಢೀರನೆ ವಿಮಾನಯಾನಗಳನ್ನು ರದ್ದು ಮಾಡಿದ್ದು, ಇಡೀ ದೇಶದಲ್ಲಿ ಗೊಂದಲಕ್ಕೆ ಕಾರಣ ವಾಗಿದೆ. ಕೇಂದ್ರ ಸರಕಾರ ಬಹಳ ಮುಂಚಿತವಾಗಿಯೇ ಮಾಹಿತಿ ನೀಡಿ ದೇಶದ ವಿಮಾನ ಯಾನ ಸಂಸ್ಥೆಗಳ ಪೈಲಟ್‌ಗಳೂ ಸೇರಿ ಎಲ್ಲ ಸಿಬ್ಬಂದಿಗೆ ಸೂಕ್ತ ವಿಶ್ರಾಂತಿ ನೀಡಬೇಕೆಂಬ ನಿಯಮ ಜಾರಿ ಮಾಡಿತ್ತು.
ಪೈಲಟ್‌ಗಳು ನಿದ್ರೆಯಿಲ್ಲದೇ, ವಿಶ್ರಾಂತಿಯಿಲ್ಲದೇ ಕೆಲಸ ಮಾಡಿ ಅನಾಹುತಕ್ಕೆ ಕಾರಣವಾಗಬಾರದು ಎನ್ನುವುದು ಇದರ ಹಿಂದಿನ ಕಾಳಜಿ. ಇದರಲ್ಲಿ ಪೈಲಟ್‌ಗಳ ಆಗ್ರಹವೂ ಬಲವಾಗಿ ಕೆಲಸ ಮಾಡಿದೆ. ಇಷ್ಟೆಲ್ಲ ಗೊತ್ತಿದ್ದೂ ಕೂಡ ಇಂಡಿಗೋ ಸಂಸ್ಥೆ ಅಗತ್ಯವಿರುವಷ್ಟು ಪೈಲಟ್ ಗಳನ್ನು ನೇಮಕ ಮಾಡಿಕೊಂಡಿಲ್ಲ. ಬದಲಿಗೆ ವಿಮಾನಯಾನಗಳ ಸಂಖ್ಯೆಯನ್ನೂ ಹೆಚ್ಚಿಸಿದೆ.
ಇದನ್ನೂ ಓದಿ: Vishwavani Editorial: ಹಣ ಮಾಡುವ ದಂಧೆಯಾಗದಿರಲಿ
ಅದೇ ವೇಳೆ ಪೈಲಟ್‌ಗಳಿಗೆ ವಿಶ್ರಾಂತಿ ನಿಯಮವೂ ಜಾರಿಯಲ್ಲಿದ್ದರಿಂದ ಪ್ರತಿದಿನ 500ಕ್ಕೂ ಅಧಿಕ ವಿಮಾನಗಳು ದೇಶಾದ್ಯಂತ ರದ್ದಾಗುತ್ತ ಹೋದವು. ಸಾವಿರಾರು ಪ್ರಯಾಣಿಕರು ನಿತ್ಯ ವಿಮಾನ ನಿಲ್ದಾಣಗಳಲ್ಲಿ ಪರದಾಡುವುದು ನಡೆಯಿತು. ಇಂತಹ ಪರಿಸ್ಥಿತಿಯಲ್ಲಿ ಪ್ರಯಾಣಿಕರ ಕಷ್ಟದ ದುರ್ಲಾಭ ಪಡೆಯಲು ಇತರೆ ವಿಮಾನಯಾನ ಸಂಸ್ಥೆಗಳು ಹೇಸಲಿಲ್ಲ.
೬-೭ ಸಾವಿರ ರು. ಟಿಕೆಟ್ ದರ ಒಮ್ಮೆಲೆ ನಾಲ್ಕೈದು ಪಟ್ಟು ಏರಿತು. ಕೂಡಲೇ ಕೇಂದ್ರ ಸರಕಾರ ಮಧ್ಯಪ್ರವೇಶ ಮಾಡಿ ಎಷ್ಟು ದೂರಕ್ಕೆ ಎಷ್ಟು ಹಣ ಪಡೆಯಬೇಕೆಂದು ಮಿತಿ ನಿಗದಿಪಡಿಸಿತು. ಪ್ರಸ್ತುತ ಕೇಂದ್ರ ವಿಮಾನಯಾನ ಸಚಿವ ರಾಮಮೋಹನ್ ನಾಯ್ಡು ಪ್ರತಿಕ್ರಿಯೆ ನೀಡಿ, ಇಡೀ ಪ್ರಕರಣಕ್ಕೆ ಇಂಡಿಗೋ ಸಂಸ್ಥೆಯೇ ಹೊಣೆ. ಅದು ತನ್ನ ನಿತ್ಯದ ಕಾರ್ಯಾಚರಣೆಗಳನ್ನು ನಿಭಾಯಿಸಲು ಸೋತಿದೆ ಎಂದು ಹೇಳಿದ್ದಾರೆ.
ಆದರೆ ಪ್ರಯಾಣಿಕರಿಗೆ ಈ ಅವಧಿಯಲ್ಲಿ ಆದ ಅಸಂಖ್ಯ ಸಮಸ್ಯೆಗಳಿಗೆ ಯಾರು ಪರಿಹಾರ ನೀಡುತ್ತಾರೆ? ಕೆಲವರ ಮದುವೆಯೇ ರದ್ದಾಗಬೇಕಾಯಿತು. ಲಖನೌನಿಂದ ಬೆಂಗಳೂರಿಗೆ ಕಚೇರಿಗೆ ಬರಬೇಕಾದ ವ್ಯಕ್ತಿ ವಿಮಾನ ಸಿಕ್ಕದ ಪರಿಣಾಮ ಒತ್ತಡಕ್ಕೆ ಸಿಲುಕಿ ಮೃತಪಟ್ಟರು. ವಿದ್ಯಾರ್ಥಿಗಳಿಗೆ ಪರೀಕ್ಷೆಗಳು ತಪ್ಪಿಹೋದವು. ಇಂತಹ ಅನಾಹುತಗಳ ಹೊಣೆಯನ್ನು ಯಾರು ಹೊರುತ್ತಾರೆ?