Vishwavani Editorial: ತುಟಿ ಮೀರಿದ ಮಾತು
ಬಿಹಾರದ ಪಾಟ್ನಾದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಲ್ಲಿಕಾರ್ಜುನ ಖರ್ಗೆ ಅವರು ಮಾತನಾಡು ತ್ತಿದ್ದಾಗ ಸಭಿಕರಲ್ಲಿದ್ದ ಯುವಕನೊಬ್ಬ ಮಧ್ಯ ಪ್ರವೇಶಿಸಿ ‘ಮೋದಿ ನಹೀ ಜಾಯೇಗಾ’ ಎಂದು ಹೇಳಿದ್ದಕ್ಕೆ ಪ್ರತಿಯಾಗಿ ಖರ್ಗೆಯವರು ‘ಮೋದಿ ಕಾ ಬಾಪ್ ಭೀ ಜಾಯೇಗಾ’ (ಮೋದಿಯವರ ತಂದೆಯೂ ಹೋಗಬೇಕಾ ಗುತ್ತದೆ) ಎಂದು ಹೇಳಿದ್ದಾರೆ.
-
ಪ್ರಧಾನಿ ನರೇಂದ್ರ ಮೋದಿ ಅವರ ತಂದೆಯ ಕುರಿತು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಆಡಿರುವ ಮಾತು ದೇಶಾದ್ಯಂತ ಪ್ರತಿಭಟನೆಯ ಅಲೆ ಎಬ್ಬಿಸಿದೆ. ಬಿಹಾರದ ಪಾಟ್ನಾದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಲ್ಲಿಕಾರ್ಜುನ ಖರ್ಗೆ ಅವರು ಮಾತನಾಡುತ್ತಿದ್ದಾಗ ಸಭಿಕರಲ್ಲಿದ್ದ ಯುವಕನೊಬ್ಬ ಮಧ್ಯ ಪ್ರವೇಶಿಸಿ ‘ಮೋದಿ ನಹೀ ಜಾಯೇಗಾ’ ಎಂದು ಹೇಳಿದ್ದಕ್ಕೆ ಪ್ರತಿಯಾಗಿ ಖರ್ಗೆಯವರು ‘ಮೋದಿ ಕಾ ಬಾಪ್ ಭೀ ಜಾಯೇಗಾ’ (ಮೋದಿಯವರ ತಂದೆಯೂ ಹೋಗಬೇಕಾ ಗುತ್ತದೆ) ಎಂದು ಹೇಳಿದ್ದಾರೆ.
ಖರ್ಗೆಯವರು ಆ ಕ್ಷಣದ ಆವೇಶದಲ್ಲಿ ಈ ಮಾತನಾಡಿರಬಹುದು. ಆದರೆ ಕಾಂಗ್ರೆಸ್‌ನಂಥ ಶತಮಾನದ ಪಕ್ಷದ ಅಧ್ಯಕ್ಷ ಸ್ಥಾನದಲ್ಲಿರುವ ಅವರು ಇನ್ನಷ್ಟು ಜವಾಬ್ದಾರಿಯುತವಾಗಿ ಮಾತನಾಡುವ, ಸ್ಪಂದಿಸುವ ಅಗತ್ಯವಿದೆ. ಕಾಂಗ್ರೆಸ್ ನಲ್ಲಿ ಇಂಥ ಕೀಳು ಮಟ್ಟದ ರಾಜಕಾರಣಕ್ಕೆ ಇತ್ತೀಚೆಗೆ ಹೆಚ್ಚಿನ ಆಸ್ಪದ ಇರುವಂತೆ ಕಂಡುಬರುತ್ತಿದೆ.
ಉದಾಹರಣೆಗೆ, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಛಾತ್ರೋಂ ಕಿ ಗೂಂಜ್ ಕಾರ್ಯಕ್ರಮ ಒಂದರಲ್ಲಿ ಪುಲ್ಕಿತ್ ಮಣಿ ಎಂಬ ಕಾಮಿಡಿಯನ್ ಒಬ್ಬನನ್ನು ತಬ್ಬಿಕೊಂಡು, ನರೇಂದ್ರ ಮೋದಿ ಅವರನ್ನು ಅಣಕವಾಡುವ ಪ್ರಹಸನವೊಂದರಲ್ಲಿ ಕಾಣಿಸಿಕೊಂಡು ಸ್ವತಃ ತಾವೇ ಅಪಹಾಸ್ಯ ಕ್ಕೀಡಾಗಿದ್ದರು.
ರಚನಾತ್ಮಕ ಟೀಕೆಗೂ ಅಣಕಕ್ಕೂ, ವಸ್ತುನಿಷ್ಠ ವಿಮರ್ಶೆಗೂ ಕಾಮಿಡಿಗೂ, ಅಂಕಿಅಂಶಗಳ ಮೂಲಕ ಸತ್ಯಾಂಶವನ್ನು ಮುಂದಿಡುವುದಕ್ಕೂ ಕ್ಷಣಿಕ ಆವೇಶದಲ್ಲಿ ಕೀಳು ಮಾತುಗಳನ್ನಾಡುವು ದಕ್ಕೂ ಅಜಗಜಾಂತರವಿದೆ. ಇಂಥ ಮಾತುಗಳಿಂದ ಬೆತ್ತಲಾಗುವವರು ಎದುರಿಗಿರುವವರೋ ಮಾತಿಗೆ ಒಳಗಾದವರೋ ಅಲ್ಲ. ಬದಲಾಗಿ ಆ ಮಾತನ್ನು ಆಡುತ್ತಿರುವವರೇ. ಅದು ಅವರ ಸಂಸ್ಕಾರ, ಅಭಿರುಚಿಯನ್ನು ತೋರುತ್ತದೆ.
ದಶಕಗಳ ಕಾಲ ಜವಾಬ್ದಾರಿಯುತ ರಾಜಕಾರಣ ನಡೆಸಿದ ಬಳಿಕವೂ ಬರುವ ಇಂಥ ಮಾತೊಂದು ಎಲ್ಲ ಬಣ್ಣ ಮಸಿ ನುಂಗಿತು ಎಂಬಂತೆ ವ್ಯಕ್ತಿಯ ವರ್ಚಸ್ಸನ್ನು ಹಾಳುಗೆಡಹುವುದು ಸಾಧ್ಯವಿದೆ. ಮೋದಿಯವರ ರಾಜಕಾರಣವನ್ನು ಟೀಕಿಸುವುದಾದರೆ ಸಾಕಷ್ಟು ಸರಕು ಲಭ್ಯವಿದೆ. ಅದನ್ನು ಸಭ್ಯ ಭಾಷೆಯಲ್ಲಿ ಮಾಡುವುದು ಸಾಧ್ಯ. ನಾಯಕರು ಹದ ತಪ್ಪಿದಾಗ ಕಾರ್ಯಕರ್ತರು ಇನ್ನಷ್ಟು ಮೇರೆ ಮೀರುತ್ತಾರೆ. ನಾಯಕರು ಒಂದಡಿ ಜಾರಿದರೆ ಕಾರ್ಯಕರ್ತರು ಹತ್ತಡಿ ಜಾರುತ್ತಾರೆ.
ನಾಯಕರು ತಮ್ಮ ನಡವಳಿಕೆ ಹಾಗೂ ಮಾತುಗಳಿಂದ ದೇಶದ ಜನತೆಗೆ, ತಮ್ಮ ಪಕ್ಷದ ಸದಸ್ಯರಿಗೆ ಮೇಲ್ಪಂಕ್ತಿ ಹಾಕಿಕೊಡಬೇಕು. ಇದು ಎಲ್ಲ ಪಕ್ಷಗಳಿಗೆ ಅನ್ವಯಿಸುವ ಮಾತು. ನೆಹರು, ವಾಜಪೇಯಿ ಮೊದಲಾದ ಮುತ್ಸದ್ಧಿಗಳನ್ನು ಈ ದೇಶ ಅವರ ಸೊಗಸಾದ, ಮತ್ತೆ ಮತ್ತೆ ಕೇಳಬೇಕೆನಿಸುವ ಮಾತು, ಭಾಷಣಗಳಿಗಾಗಿಯೇ ನೆನಪಿಸಿಕೊಳ್ಳುವುದುಂಟು.