ಭಾರತದಲ್ಲಿ ಟಿ20 ವಿಶ್ವಕಪ್ ಪಂದ್ಯ ಆಡದಿರಲು ನಿರ್ಧರಿಸಿದ ಬಾಂಗ್ಲಾದೇಶ
T20 World Cup: ಒಂದು ವೇಳೆ ಬಿಸಿಸಿಐ ದ್ವಿಪಕ್ಷೀಯ ಸರಣಿ ರದ್ದು ಮಾಡಿದರೆ ಬಾಂಗ್ಲಾದೇಶ ಕ್ರಿಕೆಟ್ ಮಂಡಳಿಗೆ ಭಾರೀ ಆರ್ಥಿಕ ಪೆಟ್ಟು ಬೀಳಲಿದೆ. ಪಂದ್ಯಾವಳಿಗಾಗಿ ಐಸಿಸಿ ನೀಡುವ ಹಣ, ಪ್ರಸಾರದ ಹಕ್ಕಿನಿಂದ ಬರುವ ಆದಾಯವೂ ಬಾಂಗ್ಲಾದ ಕೈತಪ್ಪಲಿದೆ. ಭವಿಷ್ಯದಲ್ಲು ಬಾಂಗ್ಲಾ ಆಟಗಾರರಿಗೆ ಐಪಿಎಲ್ ಸೇರ್ಪಡೆ ಅವಕಾಶ ತಪ್ಪಲಿದೆ.
T20 World Cup 2026 -
ಢಾಕಾ, ಜ.4: ಮುಸ್ತಾಫಿಜುರ್ ರಹಮಾನ್‌ನ್ನು(Mustafizur's IPL exit) ಐಪಿಎಲ್‌ನಿಂದ ಹೊರಹಾಕಿ, ತನ್ನೊಂದಿಗೆ ದ್ವಿಪಕ್ಷೀಯ ಸರಣಿ ಆಡದಿರಲು ಬಿಸಿಸಿಐ ಚಿಂತನೆ ನಡೆಸುತ್ತಿದೆ ಎನ್ನುವ ಸುದ್ದಿ ಹೊರಬೀಳುತ್ತಿದ್ದಂತೆ ವಿಚಲಿತಗೊಂಡಿರುವ ಬಾಂಗ್ಲಾ ಕ್ರಿಕೆಟ್ ಮಂಡಳಿ, ಫೆ.7ರಿಂದ ಆರಂಭಗೊಳ್ಳಲಿರುವ ಟಿ20 ವಿಶ್ವಕಪ್(T20 World Cup)ನಲ್ಲಿ ತನ್ನ ಪಂದ್ಯಗಳನ್ನು ಭಾರತದಿಂದ ಸ್ಥಳಾಂತರಿಸುವಂತೆ ಐಸಿಸಿಗೆ ಒತ್ತಾಯಿಸಿದೆ. ತನ್ನ ಪಾಲಿನ ಪಂದ್ಯಗಳನ್ನು ತಟಸ್ಥ ತಾಣದಲ್ಲಿ ಆಡಿಸುವಂತೆ ಮನವಿ ಮಾಡಿದೆ.
ಈ ನಿರ್ಧಾರವನ್ನು ಬಾಂಗ್ಲಾದೇಶದ ಕ್ರೀಡಾ ಸಲಹೆಗಾರ ಆಸಿಫ್ ನಜ್ರುಲ್ ಅವರು ಸಾಮಾಜಿಕ ಮಾಧ್ಯಮ ಪೋಸ್ಟ್‌ನಲ್ಲಿ ಪ್ರಕಟಿಸಿದ್ದಾರೆ. ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿಗೆ ಔಪಚಾರಿಕವಾಗಿ ತಿಳಿಸಲು ಮತ್ತು ಟೂರ್ನಮೆಂಟ್‌ನಲ್ಲಿ ಬಾಂಗ್ಲಾದೇಶದ ಪಂದ್ಯಗಳಿಗೆ ಪರ್ಯಾಯ ಸ್ಥಳವಾಗಿ ಶ್ರೀಲಂಕಾವನ್ನು ಪ್ರಸ್ತಾಪಿಸಲು ಮಧ್ಯಂತರ ಸರ್ಕಾರವು ಬಿಸಿಬಿಗೆ ನಿರ್ದೇಶನ ನೀಡಿದೆ ಎಂದು ನಜ್ರುಲ್ ಹೇಳಿದರು.
"ತೀವ್ರವಾದಿ ಕೋಮುವಾದಿ ಶಕ್ತಿಗಳಿಗೆ ಮಣಿದು, ಭಾರತೀಯ ಕ್ರಿಕೆಟ್ ಮಂಡಳಿಯು ಬಾಂಗ್ಲಾದೇಶದ ಕ್ರಿಕೆಟಿಗ ಮುಸ್ತಾಫಿಜುರ್ ರೆಹಮಾನ್ ಅವರನ್ನು ತಂಡದಿಂದ ಕೈಬಿಡುವಂತೆ ಕೋಲ್ಕತ್ತಾ ನೈಟ್ ರೈಡರ್ಸ್‌ಗೆ ನಿರ್ದೇಶನ ನೀಡಿದೆ. ಇದನ್ನು ನಾನು ಬಲವಾಗಿ ಖಂಡಿಸುತ್ತೇನೆ ಮತ್ತು ಪ್ರತಿಭಟಿಸುತ್ತೇನೆ" ಎಂದು ಆಸಿಫ್ ನಜ್ರುಲ್ ಫೇಸ್‌ಬುಕ್‌ನಲ್ಲಿ ಬರೆದಿದ್ದಾರೆ.
ಇದನ್ನೂ ಓದಿ ಐಪಿಎಲ್‌ನಿಂದ ಮುಸ್ತಾಫಿಜುರ್ ರೆಹಮಾನ್ ಬಿಡುಗಡೆ; ಬಿಸಿಸಿಐ ವಿರುದ್ಧ ಶಶಿ ತರೂರ್ ವಾಗ್ದಾಳಿ
"ಕ್ರೀಡಾ ಸಚಿವಾಲಯದ ಉಸ್ತುವಾರಿ ಸಚಿವನಾಗಿ, ಇಡೀ ವಿಷಯವನ್ನು ವಿವರಿಸಿ ಐಸಿಸಿಗೆ ಬರೆಯುವಂತೆ ನಾನು ಕ್ರಿಕೆಟ್ ಮಂಡಳಿಗೆ ಸೂಚಿಸಿದ್ದೇನೆ. ಬಾಂಗ್ಲಾದೇಶದ ಕ್ರಿಕೆಟಿಗನೊಬ್ಬ ಮಾನ್ಯ ಒಪ್ಪಂದವನ್ನು ಹೊಂದಿದ್ದರೂ ಭಾರತದಲ್ಲಿ ಆಡಲು ಸಾಧ್ಯವಾಗದಿದ್ದರೆ, ಬಾಂಗ್ಲಾದೇಶ ತನ್ನ ಇಡೀ ಕ್ರಿಕೆಟ್ ತಂಡವು ವಿಶ್ವಕಪ್ ಆಡಲು ಭಾರತಕ್ಕೆ ಪ್ರಯಾಣಿಸುವುದು ಸುರಕ್ಷಿತವೆಂದು ಪರಿಗಣಿಸಲು ಸಾಧ್ಯವಿಲ್ಲ ಎಂದು ಮಂಡಳಿಯು ಸ್ಪಷ್ಟವಾಗಿ ಹೇಳಬೇಕು. ಬಾಂಗ್ಲಾದೇಶದ ವಿಶ್ವಕಪ್ ಪಂದ್ಯಗಳನ್ನು ಶ್ರೀಲಂಕಾದಲ್ಲಿ ನಡೆಸುವಂತೆ ಔಪಚಾರಿಕವಾಗಿ ವಿನಂತಿಸುವಂತೆ ನಾನು ಮಂಡಳಿಗೆ ನಿರ್ದೇಶನ ನೀಡಿದ್ದೇನೆ" ಎಂದು ಅವರು ಹೇಳಿದರು.
ಶನಿವಾರ ನಡೆದ ಬಾಂಗ್ಲಾದೇಶ ಕ್ರಿಕೆಟ್ ಮಂಡಳಿಯ ತುರ್ತು ಸಭೆಯಲ್ಲಿಯೂ ಈ ವಿಷಯವನ್ನು ಚರ್ಚಿಸಲಾಗಿದೆ ಎಂದು ಮೂಲಗಳು ಇಂಡಿಯಾ ಟುಡೇಗೆ ತಿಳಿಸಿವೆ. ಬಾಂಗ್ಲಾದೇಶದ ವೇಗಿ ಮುಸ್ತಾಫಿಜುರ್ ರೆಹಮಾನ್ ಅವರ ಒಪ್ಪಂದವನ್ನು ರದ್ದುಗೊಳಿಸುವಂತೆ ಕೋಲ್ಕತ್ತಾ ನೈಟ್ ರೈಡರ್ಸ್‌ಗೆ ಭಾರತೀಯ ಕ್ರಿಕೆಟ್ ಮಂಡಳಿ (ಬಿಸಿಸಿಐ) ನಿರ್ದೇಶನ ನೀಡಿದ ನಂತರ ಈ ಕ್ರಮ ಕೈಗೊಳ್ಳಲಾಗಿದೆ. ಬಾಂಗ್ಲಾದೇಶದಲ್ಲಿ ಹಿಂದೂ ಅಲ್ಪಸಂಖ್ಯಾತರ ಮೇಲಿನ ದಾಳಿಯ ವರದಿಗಳ ನಡುವೆ ಬಾಂಗ್ಲಾದೇಶಿ ಆಟಗಾರನನ್ನು ಒಳಗೊಂಡ ಪರಿಸ್ಥಿತಿಯನ್ನು ನಿಭಾಯಿಸಿದ ರೀತಿಗೆ ಬಿಸಿಸಿಐ ಮತ್ತು ಕೆಕೆಆರ್ ವಿರುದ್ಧ ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕ ಟೀಕೆ ವ್ಯಕ್ತವಾಗಿದೆ.
ಒಂದು ವೇಳೆ ಬಿಸಿಸಿಐ ದ್ವಿಪಕ್ಷೀಯ ಸರಣಿ ರದ್ದು ಮಾಡಿದರೆ ಬಾಂಗ್ಲಾದೇಶ ಕ್ರಿಕೆಟ್ ಮಂಡಳಿಗೆ ಭಾರೀ ಆರ್ಥಿಕ ಪೆಟ್ಟು ಬೀಳಲಿದೆ. ಪಂದ್ಯಾವಳಿಗಾಗಿ ಐಸಿಸಿ ನೀಡುವ ಹಣ, ಪ್ರಸಾರದ ಹಕ್ಕಿನಿಂದ ಬರುವ ಆದಾಯವೂ ಬಾಂಗ್ಲಾದ ಕೈತಪ್ಪಲಿದೆ. ಭವಿಷ್ಯದಲ್ಲು ಬಾಂಗ್ಲಾ ಆಟಗಾರರಿಗೆ ಐಪಿಎಲ್ ಸೇರ್ಪಡೆ ಅವಕಾಶ ತಪ್ಪಲಿದೆ. ಅಲ್ಲದೆ ವಿದೇಶಗಳಲ್ಲಿರುವ ಐಪಿಎಲ್ ಮಾದರಿಯ ಕ್ರಿಕೆಟ್ ಪಂದ್ಯಾವಳಿಗಳಲ್ಲಿ ಭಾರತೀಯ ತಂಡಗಳ ಸೇರ್ಪಡೆ ಅವಕಾಶವೂ ಸಿಗಲ್ಲ.