ಏಷ್ಯನ್ ಗೇಮ್ಸ್: ಹಾಕಿ ಸ್ಪರ್ಧೆಯಲ್ಲಿ ಭಾರತದ ಭರ್ಜರಿ ಗೆಲುವಿನ ಶುಭಾರಂಭ
Asian Games 2026: ಈ ಪಂದ್ಯವು ಭಾರತದ ಹೊಸ ಪ್ರಮುಖ ಕೇಸರಿ ಬಣ್ಣದ ಸಮವಸ್ತ್ರದ (ಕಿಟ್) ಏಷ್ಯನ್ ಕ್ರೀಡಾಕೂಟದ ಚೊಚ್ಚಲ ಪ್ರದರ್ಶನಕ್ಕೂ ಸಾಕ್ಷಿಯಾಯಿತು. ಕ್ರೀಡಾಕೂಟದಲ್ಲಿ ಭಾರತದ ಎರಡೂ ತಂಡಗಳು ಕೇಸರಿ ಬಣ್ಣದ ಜೆರ್ಸಿ ಧರಿಸಿತು.
india mens and womens hockey team -
ನಗೋಯಾ(ಜಪಾನ್), ಸೆ.20: ಇಲ್ಲಿ ನಡೆಯುತ್ತಿರುವ ಏಷ್ಯನ್ ಕ್ರೀಡಾಕೂಟದಲ್ಲಿ ಭಾರತೀಯ ಹಾಕಿ ತಂಡಗಳು ಭರ್ಜರಿ ಗೆಲುವುಗಳೊಂದಿಗೆ ತಮ್ಮ ಅಭಿಯಾನವನ್ನು ಆರಂಭಿಸಿದೆ. ಪಂದ್ಯಗಳಲ್ಲಿ ಗೋಲುಗಳ ಸುರಿಮಳೆಯೇ ಹರಿಸಿ ಗೆಲುವು ದಾಖಲಿಸಿದೆ. ಭಾನುವಾರ ನಡೆದ ದಿನ ಮೊದಲ ಪಂದ್ಯದಲ್ಲಿ ಭಾರತೀಯ ಮಹಿಳಾ ತಂಡವು ಉಜ್ಬೇಕಿಸ್ತಾನ್ ವಿರುದ್ಧ 19-0 ಅಂತರದ ಗೆಲುವು ಸಾಧಿಸಿದರೆ, ಪುರುಷರ ತಂಡವು ಇಂಡೋನೇಷ್ಯಾವನ್ನು 13-1 ಅಂತರದಿಂದ ಸೋಲಿಸಿತು.
ಪಂದ್ಯದಲ್ಲಿ ಎರಡೂ ತಂಡಗಳು ಗೋಲು ಗಳಿಕೆಯನ್ನೇ ಪ್ರಮುಖವಾಗಿ ಅವಲಂಬಿಸಿದ್ದವು. ಮಹಿಳಾ ತಂಡದಲ್ಲಿ ದೀಪಿಕಾ ಒಟ್ಟು ಎಂಟು ಗೋಲುಗಳನ್ನು ಗಳಿಸಿ ಮಿಂಚಿದರು. ಪುರುಷರ ತಂಡದ ಪರವಾಗಿ ದಿಲ್‌ಪ್ರೀತ್ ಸಿಂಗ್ ನಾಲ್ಕು ಗೋಲುಗಳನ್ನು ಗಳಿಸಿದರು. ಇತ್ತಂಡಗಳು ಆರಂಭಿಕ ಹಂತದಲ್ಲೇ ಪ್ರಭಾವಶಾಲಿ ಪ್ರದರ್ಶನ ನೀಡುವ ಮೂಲಕ ತಮ್ಮ ಪ್ರಾಬಲ್ಯವನ್ನು ಮೆರೆಯಿತು.
ಮಹಿಳಾ ಹಾಕಿಯ 'ಬಿ' ಗುಂಪಿನ ಮೊದಲ ಪಂದ್ಯದಲ್ಲಿ ಕಣಕ್ಕಿಳಿದ ಭಾರತ ತಂಡವು ಪಂದ್ಯದ ಆರಂಭದಿಂದಲೂ ಉಜ್ಬೇಕಿಸ್ತಾನ್ ವಿರುದ್ಧ ಮೇಲುಗೈ ಸಾಧಿಸಿತು. ಪಂದ್ಯದ ಮೊದಲಾರ್ಧದಲ್ಲಿ 8 ಗೋಲು ಗಳಿಸಿದ್ದ ಭಾರತ, ದ್ವಿತಿಯಾರ್ಧದಲ್ಲಿ 11 ಗೋಲುಗಳನ್ನು ಬಾರಿಸಿತು. 22 ವರ್ಷದ ಯುವ ಆಟಗಾರ್ತಿ ದೀಪಿಕಾ ಸೆಹ್ರಾವತ್ ಅವರು ದಾಖಲೆಯ 8 ಗೋಲುಗಳನ್ನು ದಾಖಲಿಸಿದರು. ಇದು ಏಷ್ಯನ್ ಕ್ರೀಡಾಕೂಟದ ಪಂದ್ಯದಲ್ಲಿ ಭಾರತದ ಆಟಗಾರ್ತಿಯೊಬ್ಬರ ಅತ್ಯುತ್ತಮ ಪ್ರದರ್ಶನವಾಗಿದೆ.
ಮಿಡ್‌ಫೀಲ್ಡರ್ ಇಶಿಕಾ ಚೌಧರಿ(11, 42, 54ನೇ ನಿಮಿಷ), ಲಾಲ್‌ರೆಮ್ಸಿಯಾಮಿ(7ನೇ ನಿಮಿಷ), ಬಲ್‌ಜೀತ್ ಕೌರ್(12ನೇ ನಿಮಿಷ), ನೇಹಾ(18ನೇ ನಿಮಿಷ), ನವನೀತ್ ಕೌರ್(23 ಹಾಗೂ 45ನೇ ನಿಮಿಷ), ಲಾಲ್ಥಾಂಟ್ಲುವಾಂಗಿ(43 ಹಾಗೂ 51ನೇ ನಿಮಿಷ) ಹಾಗೂ ಸಾಕ್ಷಿ ರಾಣಾ(43ನೇ ನಿಮಿಷ)ದಲ್ಲಿ ಗೋಲು ಗಳಿಸಿದರು.
ಏಷ್ಯನ್ ಗೇಮ್ಸ್ ಮಿಶ್ರ ಮಾರ್ಷಲ್ ಆರ್ಟ್ಸ್; ಪದಕ ಖಾತ್ರಿಪಡಿಸಿದ ಸುಚಿಕಾ ತರಿಯಾಲ್
ಕಳೆದ ತಿಂಗಳು ನಡೆದ ನಿರಾಶಾದಾಯಕ ವಿಶ್ವಕಪ್ ಅಭಿಯಾನದ ವೇಳೆ ಪುರುಚರ ತಂಡಕ್ಕಿದ್ದ ಒಂದು ಪ್ರಮುಖ ಸಮಸ್ಯೆಯನ್ನು ಈ ಫಲಿತಾಂಶವು ಪರಿಹರಿಸಿತು. ದಿಲ್‌ಪ್ರೀತ್ ಸಿಂಗ್ ಅತ್ಯುತ್ತಮ ಪ್ರದರ್ಶನ ನೀಡಿದರು. ಶಿಲಾನಂದ ಲಾಕ್ರಾ ಮತ್ತು ಸುಖ್‌ಜೀತ್ ಸಿಂಗ್ ತಲಾ ಎರಡು ಗೋಲುಗಳನ್ನು ಗಳಿಸಿದರೆ, ಅಭಿಷೇಕ್, ರಾಜಿಂದರ್ ಸಿಂಗ್, ಮಂದೀಪ್ ಸಿಂಗ್, ಹರ್ಮನ್‌ಪ್ರೀತ್ ಸಿಂಗ್ ಮತ್ತು ಜುಗ್ರಾಜ್ ಸಿಂಗ್ ಕೂಡ ಗೋಲು ಗಳಿಸುವಲ್ಲಿ ಯಶಸ್ವಿಯಾದರು.
ಕೇಸರಿ ಬಣ್ಣದ ಸಮವಸ್ತ್ರದಲ್ಲಿ ಕಣಕ್ಕೆ
ಈ ಪಂದ್ಯವು ಭಾರತದ ಹೊಸ ಪ್ರಮುಖ ಕೇಸರಿ ಬಣ್ಣದ ಸಮವಸ್ತ್ರದ (ಕಿಟ್) ಏಷ್ಯನ್ ಕ್ರೀಡಾಕೂಟದ ಚೊಚ್ಚಲ ಪ್ರದರ್ಶನಕ್ಕೂ ಸಾಕ್ಷಿಯಾಯಿತು. ಕ್ರೀಡಾಕೂಟದಲ್ಲಿ ಭಾರತದ ಎರಡೂ ತಂಡಗಳು ತಮ್ಮ ಸಾಂಪ್ರದಾಯಿಕ ನೀಲಿ ಬಣ್ಣದ ಜೆರ್ಸಿಗಳನ್ನು ಧರಿಸಲಿವೆ ಎಂದು ಹಾಕಿ ಇಂಡಿಯಾ ಅಧ್ಯಕ್ಷ ದಿಲೀಪ್ ಟಿರ್ಕಿ ಈ ಹಿಂದೆ ಹೇಳಿದ್ದರೂ, ಪುರುಷರ ಮತ್ತು ಮಹಿಳೆಯರ ತಂಡಗಳು ನೆದರ್ಲ್ಯಾಂಡ್ಸ್ ಮತ್ತು ಬೆಲ್ಜಿಯಂನಲ್ಲಿ ನಡೆದ ಇತ್ತೀಚಿನ ವಿಶ್ವಕಪ್‌ನಲ್ಲಿ ಮೊದಲು ಧರಿಸಿದ್ದ ಕೇಸರಿ ಬಣ್ಣದ ಸಮವಸ್ತ್ರವನ್ನೇ ಇಲ್ಲಿಯೂ ಧರಿಸಿದವು.