'ಅದ್ಭುತ ಐಪಿಎಲ್ ವೃತ್ತಿಜೀವನಕ್ಕೆ ಅಭಿನಂದನೆಗಳು'; ಧೋನಿಗೆ ಗೌರವ ಸಲ್ಲಿಸಿದ ರೋಹಿತ್ ಶರ್ಮಾ
Rohit Sharma: ಧೋನಿ ಅವರ ನಾಯಕತ್ವದಲ್ಲಿ ರೋಹಿತ್ ಭಾರತಕ್ಕಾಗಿ ತಮ್ಮ ಟೆಸ್ಟ್ ಮತ್ತು ಏಕದಿನ (ODI) ಕ್ರಿಕೆಟ್ ಜೀವನವನ್ನು ಪ್ರಾರಂಭಿಸಿದರು. ಅಲ್ಲದೆ, ಧೋನಿ ಅವರ ನೇತೃತ್ವದಲ್ಲಿ 2007ರ ಟಿ20 ವಿಶ್ವಕಪ್ ಮತ್ತು 2013ರ ಚಾಂಪಿಯನ್ಸ್ ಟ್ರೋಫಿಯನ್ನು ಗೆದ್ದ ಭಾರತೀಯ ತಂಡಗಳಲ್ಲಿಯೂ ಅವರು ಭಾಗವಾಗಿದ್ದರು.
MS Dhoni -
ಮುಂಬಯಿ, ನ.18: ಐಪಿಎಲ್ನಿಂದ ನಿವೃತ್ತಿ ಘೋಷಿಸಿದ ಮರುದಿನವೇ ಎಂ.ಎಸ್. ಧೋನಿ ಅವರಿಗೆ ಅವರ ಅದ್ಭುತ ಐಪಿಎಲ್ ವೃತ್ತಿಜೀವನಕ್ಕಾಗಿ ಭಾರತ ಮತ್ತು ಮುಂಬೈ ಇಂಡಿಯನ್ಸ್ ತಂಡದ ದಿಗ್ಗಜ ರೋಹಿತ್ ಶರ್ಮಾ ಅವರು ಎಕ್ಸ್ (ಟ್ವಿಟರ್) ಖಾತೆಯಲ್ಲಿ ಅಭಿನಂದನೆ ಸಲ್ಲಿಸಿದ್ದಾರೆ.
2013 ಮತ್ತು 2020ರ ನಡುವೆ ಮುಂಬೈ ಇಂಡಿಯನ್ಸ್ ತಂಡವನ್ನು ಐದು ಐಪಿಎಲ್ ಐಪಿಎಲ್ ಪ್ರಶಸ್ತಿಗಳತ್ತ ಮುನ್ನಡೆಸಿದ ರೋಹಿತ್, ಐಪಿಎಲ್ನಲ್ಲಿ ತಾವಿಬ್ಬರೂ ಕ್ರಮವಾಗಿ ಮುಂಬೈ ಇಂಡಿಯನ್ಸ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ತಂಡಗಳ ನಾಯಕರಾಗಿದ್ದ ಕಾಲದ, ಧೋನಿ ಜೊತೆಗಿರುವ ತಮ್ಮ ಫೋಟೋವೊಂದನ್ನು ಹಂಚಿಕೊಂಡಿದ್ದಾರೆ.
ಈ ಫೋಟೊಗೆ ಅವರು, "ಅದ್ಭುತ ಐಪಿಎಲ್ ವೃತ್ತಿಜೀವನಕ್ಕೆ ಅಭಿನಂದನೆಗಳು ಧೋನಿ ಭಾಯ್. ಕಳೆದ ಹಲವು ವರ್ಷಗಳಲ್ಲಿ ನಿಮ್ಮೊಂದಿಗೆ ಮೈದಾನವನ್ನು ಹಂಚಿಕೊಂಡಿದ್ದು ಮತ್ತು ಅನೇಕ ನೆನಪುಗಳನ್ನು ಸೃಷ್ಟಿಸಿದ್ದು ತುಂಬಾ ಸಂತೋಷದಾಯಕವಾಗಿತ್ತು. ನಿಮಗೆ ಅಪಾರ ಗೌರವ!" ಎಂದು ಬರೆದುಕೊಂಡಿದ್ದಾರೆ.
ಐಪಿಎಲ್ ಇತಿಹಾಸದಲ್ಲಿ ಆರು ಪ್ರಶಸ್ತಿಗಳನ್ನು ಗೆಲ್ಲುವ ಮೂಲಕ ಜಂಟಿಯಾಗಿ ಅತ್ಯಂತ ಯಶಸ್ವಿ ಆಟಗಾರನಾಗಿರುವ ರೋಹಿತ್, 2013, 2015, 2017, 2019 ಮತ್ತು 2020ರಲ್ಲಿ ಮುಂಬೈ ಇಂಡಿಯನ್ಸ್ ತಂಡವನ್ನು ಐಪಿಎಲ್ ಪ್ರಶಸ್ತಿಗಳತ್ತ ಮುನ್ನಡೆಸಿದರು. ಇದರಲ್ಲಿ ಮೂರು ಬಾರಿ (2013, 2015 ಮತ್ತು 2019ರಲ್ಲಿ) ಅವರು ಫೈನಲ್ ಪಂದ್ಯದಲ್ಲಿ ಎಂ.ಎಸ್. ಧೋನಿ ನೇತೃತ್ವದ ಸಿಎಸ್ಕೆ ತಂಡವನ್ನು ಸೋಲಿಸಿದ್ದರು.
Congratulations on an incredible IPL career, Dhoni bhai. It's been fun sharing the field and so many memories with you over the years. Much respect! https://t.co/EI4KqVRavv
— Rohit Sharma (@ImRo45) November 18, 2026
ಅಲ್ಲದೆ, 2017ರ ಫೈನಲ್ ಪಂದ್ಯದಲ್ಲಿ, ಮುಂಬೈ ಇಂಡಿಯನ್ಸ್ ವಿರುದ್ಧ ಒಂದು ರನ್ ಅಂತರದ ಸೋಲನ್ನು ಅನುಭವಿಸಿದ 'ರೈಸಿಂಗ್ ಪುಣೆ ಸೂಪರ್ಜೈಂಟ್' ತಂಡದ ಆಡುವ ಹನ್ನೊಂದರ ಬಳಗದಲ್ಲಿ ಧೋನಿ ಕೂಡ ಇದ್ದರು.
ಧೋನಿ ಅವರ ನಾಯಕತ್ವದಲ್ಲಿ ರೋಹಿತ್ ಭಾರತಕ್ಕಾಗಿ ತಮ್ಮ ಟೆಸ್ಟ್ ಮತ್ತು ಏಕದಿನ (ODI) ಕ್ರಿಕೆಟ್ ಜೀವನವನ್ನು ಪ್ರಾರಂಭಿಸಿದರು. ಅಲ್ಲದೆ, ಧೋನಿ ಅವರ ನೇತೃತ್ವದಲ್ಲಿ 2007ರ ಟಿ20 ವಿಶ್ವಕಪ್ ಮತ್ತು 2013ರ ಚಾಂಪಿಯನ್ಸ್ ಟ್ರೋಫಿಯನ್ನು ಗೆದ್ದ ಭಾರತೀಯ ತಂಡಗಳಲ್ಲಿಯೂ ಅವರು ಭಾಗವಾಗಿದ್ದರು.
ಚಾಂಪಿಯನ್ ಭಾರತ ತಂಡಕ್ಕೆ 'ಗಾರ್ಡ್ ಆಫ್ ಆನರ್' ನೀಡಿದ ಪಾಕಿಸ್ತಾನ ಆಟಗಾರರು
ಭಾರತ ತಂಡದ ನಾಯಕನಾಗಿ ಧೋನಿ ಅವರ ಎರಡನೇ ಅವಧಿಯಲ್ಲಿ, ರೋಹಿತ್ ಅವರು ಧೋನಿ ಹೆಚ್ಚು ನಂಬಿಕೆ ಇಟ್ಟಿದ್ದ ಆಟಗಾರರಲ್ಲಿ ಒಬ್ಬರಾಗಿದ್ದರು. 2013ರಲ್ಲಿ ಧೋನಿ ಅವರು ರೋಹಿತ್ಗೆ ಭಾರತದ ಪರ ಇನ್ನಿಂಗ್ಸ್ ಆರಂಭಿಸುವಂತೆ (ಓಪನರ್ ಆಗಿ ಆಡುವಂತೆ) ಸೂಚಿಸಿದ ನಂತರ, ರೋಹಿತ್ ಅವರ ವೃತ್ತಿಜೀವನವೇ ಸಂಪೂರ್ಣವಾಗಿ ಬದಲಾಯಿತು.
ಭಾರತಕ್ಕೆ ಎರಡು ಐಸಿಸಿ ಪ್ರಶಸ್ತಿಗಳು ಮತ್ತು ಮುಂಬೈ ಇಂಡಿಯನ್ಸ್ ತಂಡಕ್ಕೆ 5 ಐಪಿಎಲ್ ಪ್ರಶಸ್ತಿಗಳು ಮತ್ತು 1 ಚಾಂಪಿಯನ್ಸ್ ಲೀಗ್ ಟಿ20 ಟ್ರೋಫಿಯನ್ನು ಗೆದ್ದುಕೊಟ್ಟಿರುವ ರೋಹಿತ್, ಪೂರ್ಣಾವಧಿಯ ಆರಂಭಿಕ ಆಟಗಾರನಾಗುವ ಮೊದಲು ಸ್ಥಿರತೆಗಾಗಿ ಹೆಣಗಾಡುತ್ತಿದ್ದರು. ಅಗ್ರ ಕ್ರಮಾಂಕಕ್ಕೆ ಏರಿದ ನಂತರ, ರೋಹಿತ್ ಏಕದಿನಗಳಲ್ಲಿ ಆರಂಭಿಕ ಆಟಗಾರನಾಗಿ 10,000 ಕ್ಕೂ ಹೆಚ್ಚು ರನ್ ಗಳಿಸಿದ್ದಾರೆ ಮತ್ತು ಜೂನ್ 29, 2024 ರಂದು ಭಾರತದ ಪರ ಅತಿ ಹೆಚ್ಚು ರನ್ ಗಳಿಸಿದ ಆಟಗಾರನಾಗಿ ತಮ್ಮ T20I ವೃತ್ತಿಜೀವನವನ್ನು ಕೊನೆಗೊಳಿಸಿದರು.
ಧೋನಿ ಅಭಿಮಾನಿಗಳಿಗಾಗಿ ಭಾವನಾತ್ಮಕ ಸಂದೇಶ ಹಂಚಿಕೊಂಡ ಪತ್ನಿ ಸಾಕ್ಷಿ
ಮೆಂಟರ್ ಆಗಿ ನೇಮಕ
ಐಪಿಎಲ್ನಲ್ಲಿ ಆಟಗಾರನಾಗಿ ನಿವೃತ್ತಿ ಘೋಷಿಸಿದ್ದರೂ, ಧೋನಿ ಅವರು ಸಿಎಸ್ಕೆ ಮತ್ತು ಐಪಿಎಲ್ನೊಂದಿಗೆ ತಮ್ಮ ಒಡನಾಟವನ್ನು ಮುಂದುವರಿಸಲಿದ್ದಾರೆ. 2027ರಲ್ಲಿ ಅವರು 'ಮೆಂಟರ್' (ಮಾರ್ಗದರ್ಶಕ) ಆಗಿ ಹೊಸ ಇನ್ನಿಂಗ್ಸ್ ಆರಂಭಿಸಲಿದ್ದಾರೆ. ಐದು ಬಾರಿ ಚಾಂಪಿಯನ್ ಆಗಿರುವ ಚೆನ್ನೈ ಮೂಲದ ಈ ಫ್ರಾಂಚೈಸಿಯು, ಧೋನಿ ಅವರನ್ನು ತಂಡದ ಹೊಸ ಮೆಂಟರ್ ಆಗಿ ನೇಮಿಸಿರುವುದನ್ನು ಮಂಗಳವಾರ ಖಚಿತಪಡಿಸಿತ್ತು.