ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಐಪಿಎಲ್​ ತಂಡಗಳ ರಿಟೇನ್​ ಮುಗಿಯಿತು, ಇನ್ನು ಹರಾಜು ಕೌತುಕ

IPL 2027 mini-auction: ಸಂಜೀವ್‌ ಗೋಯೆಂಕಾ ಮಾಲಿಕತ್ವದ ಲಕ್ನೋ ತಂಡದ ಬಳಿ 41.65 ಕೋಟಿ ರೂಪಾಯಿಗಳಿದ್ದು, ವಿದೇಶಿ ಆಟಗಾರರ ಮೂರು ಸ್ಥಾನಗಳು ಸೇರಿದಂತೆ ಒಟ್ಟು ಎಂಟು ಸ್ಥಾನಗಳನ್ನು ಭರ್ತಿ ಮಾಡಬೇಕಿದೆ. ಕೆಕೆಆರ್‌ ತಂಡದ ಬಳಿಯೂ 41.65 ಕೋಟಿ ರೂಪಾಯಿಗಳಿದೆ.

ಐಪಿಎಲ್​ ತಂಡಗಳ ರಿಟೇನ್​ ಮುಗಿಯಿತು, ಇನ್ನು ಹರಾಜು ಕೌತುಕ

IPL 2027 mini-auction -

Abhilash BC
Abhilash BC Nov 18, 2026 8:33 AM

ಮುಂಬಯಿ, ನ.18: ಐಪಿಎಲ್ 2027ರ 'ರಿಟೆನ್ಷನ್' (ಆಟಗಾರರನ್ನು ಉಳಿಸಿಕೊಳ್ಳುವ) ಪ್ರಕ್ರಿಯೆಯ ಗಡುವು ಮಂಗಳವಾರ ಮುಕ್ತಾಯಗೊಂಡಿದ್ದು, ಈ ವೇಳೆ ಒಟ್ಟು ಹತ್ತು ತಂಡಗಳು ಸೇರಿ 66 ಸ್ಥಾನಗಳನ್ನು ಹಾಗೂ 297.95 ಕೋಟಿ ರೂಪಾಯಿ ಮೊತ್ತವನ್ನು ಮುಕ್ತಗೊಳಿಸಿವೆ. ಈಗ ಎಲ್ಲರ ಗಮನ ಡಿಸೆಂಬರ್ 16 ರಂದು ಗೋವಾದಲ್ಲಿ ನಡೆಯಲಿರುವ ಐಪಿಎಲ್ ಹರಾಜಿನತ್ತ ನೆಟ್ಟಿದೆ.

ತಮ್ಮ ಫ್ರಾಂಚೈಸಿಗಳಿಂದ ಬಿಡುಗಡೆಗೊಂಡ ಪ್ರಮುಖ ಆಟಗಾರರಲ್ಲಿ ಮಿಚೆಲ್ ಸ್ಟಾರ್ಕ್, ಟ್ರಾವಿಸ್ ಹೆಡ್, ಟ್ರೆಂಟ್ ಬೌಲ್ಟ್, ಜಾಕೋಬ್ ಬೆಥೆಲ್ ಮತ್ತು ಎಂ.ಎಸ್. ಧೋನಿ ಸೇರಿದ್ದಾರೆ. ಧೋನಿ ನಿವೃತ್ತಿಯಾಗಿದ್ದು ಮುಂದಿನ ಋತುವಿನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಮಾರ್ಗದರ್ಶಕರಾಗಿ (ಮೆಂಟರ್) ಜವಾಬ್ದಾರಿ ವಹಿಸಿಕೊಳ್ಳಲಿದ್ದಾರೆ.

ಆರ್‌ಸಿಬಿ ಬಳಿ ಅತಿ ಕಡಿಮೆ ಮೊತ್ತ

ಲಕ್ನೋ ಸೂಪರ್ ಜೈಂಟ್ಸ್ ಮತ್ತು ಕೋಲ್ಕತ್ತಾ ನೈಟ್ ರೈಡರ್ಸ್ ತಂಡಗಳು ಅತಿ ದೊಡ್ಡ ಮೊತ್ತದೊಂದಿಗೆ (ಪರ್ಸ್) ಹರಾಜಿನಲ್ಲಿ ಭಾಗವಹಿಸಲಿವೆ. ಅದೇ ಸಮಯದಲ್ಲಿ, ಕಳೆದ ವರ್ಷದ ಫೈನಲಿಸ್ಟ್‌ಗಳಾದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಗುಜರಾತ್ ಟೈಟಾನ್ಸ್ ತಂಡಗಳು ಅತ್ಯಂತ ಕಡಿಮೆ ಮೊತ್ತದೊಂದಿಗೆ ಹರಾಜಿಗೆ ಪ್ರವೇಶಿಸಲಿವೆ. ಇವುಗಳಿಗೆ ಈ ಹರಾಜಿನಲ್ಲಿ ಮಾಡಬೇಕಾದ ಕೆಲಸವೂ ಅತ್ಯಂತ ಕಡಿಮೆಯಿದೆ.

ಲಕ್ನೋ, ಕೆಕೆಆರ್‌ ಬಳಿ ಅತ್ಯಧಿಕ ಮೊತ್ತ

ಸಂಜೀವ್‌ ಗೋಯೆಂಕಾ ಮಾಲಿಕತ್ವದ ಲಕ್ನೋ ತಂಡದ ಬಳಿ 41.65 ಕೋಟಿ ರೂಪಾಯಿಗಳಿದ್ದು, ವಿದೇಶಿ ಆಟಗಾರರ ಮೂರು ಸ್ಥಾನಗಳು ಸೇರಿದಂತೆ ಒಟ್ಟು ಎಂಟು ಸ್ಥಾನಗಳನ್ನು ಭರ್ತಿ ಮಾಡಬೇಕಿದೆ. ಮತ್ತೊಂದೆಡೆ, ಕೆಕೆಆರ್‌ ತಂಡದ ಬಳಿಯೂ 41.65 ಕೋಟಿ ರೂಪಾಯಿಗಳಿದ್ದು, ವಿದೇಶಿ ಆಟಗಾರರ ಮೂರು ಸ್ಥಾನಗಳು ಸೇರಿದಂತೆ ಎಂಟು ಸ್ಥಾನಗಳನ್ನು ತುಂಬಬೇಕಿದೆ.

IPL 2027: ಎಲ್ಲಾ 10 ತಂಡಗಳು ಉಳಿಸಿಕೊಂಡ ಆಟಗಾರರ ವಿವರ!

ಉಳಿದಂತೆ 40.15 ಕೋಟಿ ರೂಪಾಯಿಗಳೊಂದಿಗೆ ಸನ್‌ರೈಸರ್ಸ್ ಹೈದರಾಬಾದ್ ನಂತರದ ಸ್ಥಾನದಲ್ಲಿದೆ. ಡೆಲ್ಲಿ ಕ್ಯಾಪಿಟಲ್ಸ್ ಮತ್ತು ಮುಂಬೈ ಇಂಡಿಯನ್ಸ್ ತಂಡಗಳು ತಲಾ ಒಂಬತ್ತು ಸ್ಥಾನಗಳನ್ನು ಭರ್ತಿ ಮಾಡಬೇಕಿದ್ದು, ಈ ವಿಷಯದಲ್ಲಿ ಅವು ಮುಂಚೂಣಿಯಲ್ಲಿವೆ. ಡೆಲ್ಲಿ ಬಳಿ 39.5 ಕೋಟಿ ಮತ್ತು ಮುಂಬೈ ಬಳಿ 32.6 ಕೋಟಿ. ಮೊತ್ತವಿದೆ.

ಕರ್ನಾಟಕದ ಕುರುಣ್ ನಾಯರ್, ಲವನೀತ್ ಸಿಸೋಡಿಯಾ, ಪ್ರವೀಣ್ ದುಬೆ, ಮ್ಯಾಕ್ನಿಲ್ ನೊರೋನ್ಹಾ ಅವರು ಮತ್ತೆ ಹರಾಜಿನಲ್ಲಿ ಅದೃಷ್ಟ ಪರೀಕ್ಷೆಗೆ ಒಳಗಾಗಲಿದ್ದಾರೆ. ಮನೀಷ್ ಪಾಂಡೆ (ಕೆಕೆಆರ್), ದೇವದತ್ ಪಡಿಕ್ಕಲ್ (ಆರ್‌ಸಿಬಿ), ಕೆಎಲ್ ರಾಹುಲ್, ಮನ್ವಂತ್ ಕುಮಾರ್ (ಡೆಲ್ಲಿ), ವೈಶಾಖ್ ವಿಜಯಕುಮಾರ್ (ಪಂಜಾಬ್), ಆರ್. ಸ್ಮರಣ್ (ಸನ್‌ರೈಸರ್ಸ್‌), ಪ್ರಸಿದ್ಧಕೃಷ್ಣ (ಗುಜರಾತ್), ಯಶ್‌ರಾಜ್ ಪೂಂಜಾ (ರಾಜಸ್ಥಾನ), ಶ್ರೇಯಸ್ ಗೋಪಾಲ್ (ಸಿಎಸ್​ಕೆ) ರಿಟೇನ್ ಆಗಿದ್ದಾರೆ.