IND vs IRE: ಜಸ್‌ಪ್ರೀತ್ ಬುಮ್ರಾ ಭವಿಷ್ಯದ ಪಾತ್ರದ ಬಗ್ಗೆ ಸಂಜಯ್ ಮಾಂಜ್ರೇಕರ್ ಪ್ರಶ್ನೆ!
ಐರ್ಲೆಂಡ್ ಹಾಗೂ ಇಂಗ್ಲೆಂಡ್ ವಿರುದ್ಧದ ಮುಂಬರುವ ಟಿ20ಐ ಸರಣಿಗಳ ಭಾರತ ತಂಡದಲ್ಲಿ ಜಸ್‌ಪ್ರೀತ್ ಬುಮ್ರಾಗೆ ವಿಶ್ರಾಂತಿ ನೀಡಿರುವ ಬಗ್ಗೆ ಮಾಜಿ ಕ್ರಿಕೆಟಿಗ ಸಂಜಯ್ ಮಾಂಜ್ರೇಕರ್ ಪ್ರಶ್ನೆ ಮಾಡಿದ್ದಾರೆ. ಹಿರಿಯ ವೇಗಿಯ ಭವಿಷ್ಯದ ಪಾತ್ರದ ಬಗ್ಗೆ ಯಾವುದೇ ಸ್ಪಷ್ಟತೆ ಕಾಣುತ್ತಿಲ್ಲ ಎಂದು ಹೇಳಿದ್ದಾರೆ.
ಜಸ್‌ಪ್ರೀತ್ ಬುಮ್ರಾ ವಿರುದ್ಧ ಮಾಂಜ್ರೇಕರ್ ಹೇಳಿಕೆ. -
ನವದೆಹಲಿ: ಐರ್ಲೆಂಡ್ ಹಾಗೂ ಇಂಗ್ಲೆಂಡ್ ವಿರುದ್ಧದ ಮುಂಬರುವ ಟಿ20ಐ ಸರಣಿಗಳ ಭಾರತ ತಂಡದಲ್ಲಿ ಅವಕಾಶ ನೀಡದೆ ಹಿರಿಯ ವೇಗಿ ಜಸ್‌ಪ್ರೀತ್ ಬುಮ್ರಾಗೆ (Jasprit Bumrah) ವಿಶ್ರಾಂತಿ ನೀಡಿರುವುದರ ಬಗ್ಗೆ ಮಾಜಿ ಕ್ರಿಕೆಟಿಗ ಸಂಜಯ್ ಮಾಂಜ್ರೇಕರ್ (Sanjay Manjrekar) ಪ್ರಶ್ನೆ ಮಾಡಿದ್ದಾರೆ. ಇತ್ತೀಚೆಗೆ ಬಿಸಿಸಿಐ ಏಷ್ಯನ್ ಗೇಮ್ಸ್ ಹಾಗೂ ಯುರೋಪ್ ಪ್ರವಾಸದ ಟಿ20ಐ ಸರಣಿಗಳಿಗೆ ಭಾರತ ತಂಡವನ್ನು ಪ್ರಕಟಿಸಿತ್ತು. ಆದರೆ, ಬುಮ್ರಾಗೆ ಟೆಸ್ಟ್ ಸರಣಿಯ ನಿಮಿತ್ತ ವಿಶ್ರಾಂತಿ ನೀಡಲಾಗಿದೆ. ಸೂರ್ಯಕುಮಾರ್ ಯಾದವ್ ಅವರನ್ನು ಕೈ ಬಿಟ್ಟು ಶ್ರೇಯಸ್ ಅಯ್ಯರ್‌ಗೆ ಭಾರತ ಟಿ20 ತಂಡದ ನಾಯಕತ್ವವನ್ನು ನೀಡಲಾಗಿದೆ.
ಈ ನಿರ್ಧಾರವು ವೇಗದ ಬೌಲರ್‌ರ ಮೇಲಿನ ವರ್ಕ್‌ಲೋಡ್ ಮ್ಯಾನೇಜ್‌ಮೆಂಟ್ ತಂತ್ರದ ಭಾಗವಾಗಿದ್ದು, ಮುಂಬರುವ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಪಂದ್ಯಗಳಿಗೆ ಅವರನ್ನು ಸಂಪೂರ್ಣ ಫಿಟ್ ಆಗಿ ಉಳಿಸಿಕೊಳ್ಳುವ ಉದ್ದೇಶ ಹೊಂದಿದೆ ಎಂದು ಬಿಸಿಸಿಐ ಸ್ಪಷ್ಟಪಡಿಸಿದೆ. ಆದರೆ, ಈ ವಿವರಣೆಯಿಂದ ಮಾಜಿ ಕ್ರಿಕೆಟಿಗ ಸಂಜಯ್ ಮಾಂಜ್ರೇಕರ್ ತೃಪ್ತರಾಗಿಲ್ಲ.
ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ ಮಾಂಜ್ರೇಕರ್, 2026ರ ಐಪಿಎಲ್ ಟೂರ್ನಿಯಲ್ಲಿ ಜಸ್‌ಪ್ರೀತ್ ಬುಮ್ರಾ ಸಾಕಷ್ಟು ಪಂದ್ಯಗಳನ್ನು ಆಡಿರುವುದನ್ನು ಉಲ್ಲೇಖಿಸಿ, ಟಿ20ಐ ಸರಣಿಗಳಲ್ಲೂ ಅವರು ಭಾರತೀಯ ತಂಡಕ್ಕೆ ಇನ್ನಷ್ಟು ಬದ್ಧತೆಯನ್ನು ತೋರಿಸಬಹುದಾಗಿತ್ತು ಎಂದು ಅಭಿಪ್ರಾಯಪಟ್ಟಿದ್ದಾರೆ.
ಮುಲ್ಲನ್‌ಪುರ ಟೆಸ್ಟ್: ಇನಿಂಗ್ಸ್ ಹಾಗೂ 300 ರನ್ ಅಂತರದ ಗೆಲುವು ಸಾಧಿಸಿದ ಭಾರತ
"ಬುಮ್ರಾ ಲಭ್ಯತೆಯ ವಿಚಾರದಲ್ಲಿ ಅವರ ವೃತ್ತಿಜೀವನ ಯಾವ ದಿಕ್ಕಿನಲ್ಲಿ ಸಾಗುತ್ತಿದೆ ಎಂಬುದರ ಬಗ್ಗೆ ನನಗೆ ಗೊಂದಲವಿದೆ. ಅವರು ಭಾರತ ಟಿ20 ತಂಡದ ನಾಯಕತ್ವದ ಪ್ರಮುಖ ಸ್ಪರ್ಧಿಯಾಗಿದ್ದರು ಎಂದು ನಾನು ಭಾವಿಸಿದ್ದೆ. ಏಕೆಂದರೆ ಟಿ20 ಮಾದರಿಯಲ್ಲಿನ ಕೆಲಸದ ಒತ್ತಡವನ್ನು ಅವರು ಸುಲಭವಾಗಿ ನಿಭಾಯಿಸಬಲ್ಲರು ಎಂದು ನನಗೆ ಅನಿಸಿತ್ತು. ಆದರೆ, ಭಾರತ ತಂಡ ಆಡುತ್ತಿರುವ ಪ್ರತಿಯೊಂದು ಪಂದ್ಯದಲ್ಲೂ ಭಾಗವಹಿಸಲು ಅವರಿಗೆ ವಿಶೇಷ ಆಸಕ್ತಿ ಇರುವಂತೆ ಕಾಣುತ್ತಿಲ್ಲ," ಎಂದು ಸಂಜಯ್ ಮಾಂಜ್ರೇಕರ್ ಸೋನಿ ಸ್ಪೋರ್ಟ್ಸ್‌ಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ.
ಜಸ್‌ಪ್ರೀತ್ ಬುಮ್ರಾ ಅವರ ಕೆಲಸದ ಒತ್ತಡ ನಿರ್ವಹಣೆ (ವರ್ಕ್‌ಲೋಡ್ ಮ್ಯಾನೇಜ್‌ಮೆಂಟ್) ಹಲವು ವರ್ಷಗಳಿಂದ ಚರ್ಚೆಯ ವಿಷಯವಾಗಿದ್ದು, ತಂಡದ ಪ್ರಮುಖ ವೇಗದ ಬೌಲರ್‌ರನ್ನು ನಿರ್ವಹಿಸುವಲ್ಲಿ ತಂಡದ ಆಡಳಿತ ಮಂಡಳಿ ಅನುಸರಿಸಿರುವ ವಿಧಾನವನ್ನು ಅನೇಕ ವಿಮರ್ಶಕರು ಪ್ರಶ್ನಿಸಿದ್ದಾರೆ.
ಈ ಕುರಿತು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ ಮಾಂಜ್ರೇಕರ್, ನಿರ್ದಿಷ್ಟ ಟೂರ್ನಿಗಳಿಗೆ ಬುಮ್ರಾ ಅವರನ್ನು ತಾಜಾತನದಿಂದ ಉಳಿಸಿಕೊಳ್ಳುವ ಉದ್ದೇಶದಿಂದ ವಿಶ್ರಾಂತಿ ನೀಡುವ ತಂತ್ರದ ಬಗ್ಗೆ ತಮಗೆ ಕೆಲವು ಅನುಮಾನಗಳಿವೆ ಎಂದು ಹೇಳಿದರು. ಅಲ್ಲದೆ, ಈ ರೀತಿಯ ವಿಧಾನವನ್ನು ತಾವು ಸಂಪೂರ್ಣವಾಗಿ ಅರ್ಥಮಾಡಿಕೊಂಡಿಲ್ಲ ಹಾಗೂ ಅದನ್ನು ಸಂಪೂರ್ಣವಾಗಿ ಒಪ್ಪಿಕೊಳ್ಳುವುದಿಲ್ಲ ಎಂದು ಅವರು ಅಭಿಪ್ರಾಯಪಟ್ಟರು.
ಮುಂಬೈ ಇಂಡಿಯನ್ಸ್ ತೊರೆಯಲು ಮುಂದಾದ ಸೂರ್ಯಕುಮಾರ್ ಯಾದವ್!
"ಇಲ್ಲಿ ಒಬ್ಬರು ಆಟಗಾರರಿದ್ದಾರೆ. ನಿರ್ದಿಷ್ಟ ಸರಣಿಗಳಿಗಾಗಿ ಸಂಪೂರ್ಣ ಫಿಟ್ ಆಗಿರಲು ಅವರು ಭಾರತ ತಂಡದ ಕೆಲವು ಪಂದ್ಯಗಳಿಂದ ವಿಶ್ರಾಂತಿ ಪಡೆಯುತ್ತಾರೆ. ಇದು ತುಂಬಾ ವಿಭಿನ್ನವಾದ ವಿಧಾನವಾಗಿದೆ. ನಿಜ ಹೇಳಬೇಕೆಂದರೆ, ಈ ತಂತ್ರವನ್ನು ನಾನು ಸಂಪೂರ್ಣವಾಗಿ ಅರ್ಥಮಾಡಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಅವರು ಭಾರತ ತಂಡಕ್ಕೆ ಇನ್ನಷ್ಟು ಬದ್ಧತೆಯನ್ನು ತೋರಿಸಬೇಕು ಎಂಬುದು ನನ್ನ ಆಶಯ."
"ಟೆಸ್ಟ್ ಕ್ರಿಕೆಟ್‌ನಲ್ಲಿ ಕೆಲಸದ ಒತ್ತಡ ನಿರ್ವಹಣೆ ಅಗತ್ಯ ಎಂಬುದನ್ನು ನಾನು ಅರ್ಥಮಾಡಿಕೊಳ್ಳಬಲ್ಲೆ. 50 ಓವರ್‌ಗಳ ಕ್ರಿಕೆಟ್ ಕೂಡ ಸಾಕಷ್ಟು ಬೇಡಿಕೆಯಿರುವ ಮಾದರಿಯಾಗಿದೆ. ಆದರೆ, ಅವರು ಸಂಪೂರ್ಣ ಐಪಿಎಲ್ ಋತುವಿನಲ್ಲಿ ಆಡಿರುವುದನ್ನು ಗಮನಿಸಿದರೆ, ಐರ್ಲೆಂಡ್ ಮತ್ತು ಇಂಗ್ಲೆಂಡ್ ವಿರುದ್ಧದ ಕೆಲವು ಟಿ20 ಪಂದ್ಯಗಳಲ್ಲಿ ಆಡಲು ಅವರಿಗೆ ಸಾಧ್ಯವಾಗಬೇಕಿತ್ತು ಎಂದು ನಾನು ಭಾವಿಸಿದ್ದೆ," ಎಂದು ಸಂಜಯ್ ಮಾಂಜ್ರೇಕರ್ ಹೇಳಿದ್ದಾರೆ.