ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

DC vs SRH: ಅಭಿಷೇಕ್‌ ಶರ್ಮಾ ಸ್ಪೋಟಕ ಶತಕದಿಂದ ಗೆದ್ದು ಬೀಗಿದ ಸನ್‌ರೈಸರ್ಸ್‌ ಹೈದರಾಬಾದ್‌!

DC vs SRH Match Highlights: ಅಭಿಷೇಕ್‌ ಶರ್ಮಾ ಅವರ ಭರ್ಜರಿ ಶತಕದ ಬಲದಿಂದ ಸನ್‌ರೈಸರ್ಸ್‌ ಹೈದರಾಬಾದ್‌ ತಂಡ 2026ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಟೂರ್ನಿಯ 31ನೇ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್‌ ವಿರುದ್ಧ 47 ರನ್‌ಗಳ ಗೆಲುವು ಪಡೆಯಿತು. ಆ ಮೂಲಕ ಟೂರ್ನಿಯ ಪಾಯಿಂಟ್ಸ್‌ ಟೇಬಲ್‌ನಲ್ಲಿ ಮೂರನೇ ಸ್ಥಾನಕ್ಕೆ ಲಗ್ಗೆ ಇಟ್ಟಿದೆ.

IPL 2026: ಡೆಲ್ಲಿ ಕ್ಯಾಪಿಟಲ್ಸ್‌ಗೆ ಮಣ್ಣು ಮುಕ್ಕಿಸಿದ ಸನ್‌ರೈಸರ್ಸ್‌!

ಡೆಲ್ಲಿ ಕ್ಯಾಪಿಟಲ್ಸ್‌ ಎದುರು ಶತಕ ಸಿಡಿಸಿದ ಅಭಿಷೇಕ್‌ ಶರ್ಮಾ. -

Profile
Ramesh Kote Apr 21, 2026 11:26 PM

ಹೈದರಾಬಾದ್‌: ಅಭಿಷೇಕ್‌ ಶರ್ಮಾ (Abhishek Sharma) ಅವರ ಸ್ಪೋಟಕ ಶತಕದ ಬಲದಿಂದ ಸನ್‌ರೈಸರ್ಸ್‌ ಹೈದರಾಬಾದ್‌ ತಂಡ, 2026ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ (IPL 2026) ಟೂರ್ನಿಯ 31ನೇ ಪಂದ್ಯದಲ್ಲಿ (DC vs SRH) ಡೆಲ್ಲಿ ಕ್ಯಾಪಿಟಲ್ಸ್‌ ವಿರುದ್ಧ 47 ರನ್‌ಗಳ ಭರ್ಜರಿ ಗೆಲುವು ಪಡೆಯಿತು. ಆ ಮೂಲಕ ಟೂರ್ನಿಯಲ್ಲಿ ನಾಲ್ಕನೇ ಗೆಲುವು ಪಡೆಯುವ ಮೂಲಕ ಅಂಕಪಟ್ಟಿಯಲ್ಲಿ ಮೂರನೇ ಸ್ಥಾನಕ್ಕೆ ಪ್ರವೇಶ ಮಾಡಿತು. ಇನ್ನು ಸೋಲು ಅನುಭವಿಸಿದ ಅಕ್ಷರ್‌ ಪಟೇಲ್‌ ನಾಯಕತ್ವದ ಡೆಲ್ಲಿ ಐದನೇ ಸ್ಥಾನದಲ್ಲಿಯೇ ಉಳಿಯಿತು.

ಮಂಗಳವಾರ ಇಲ್ಲಿನ ರಾಜೀವ್‌ ಗಾಂಧಿ ಇಂಟರ್‌ನ್ಯಾಷನಲ್‌ ಕ್ರಿಕೆಟ್‌ ಕ್ರೀಡಾಂಗಣದಲ್ಲಿ ನಡೆದಿದ್ದ ಪಂದ್ಯದಲ್ಲಿ ಎಸ್‌ಆರ್‌ಎಚ್‌ ನೀಡಿದ್ದ 243 ರನ್‌ಗಳ ಗುರಿಯನ್ನು ಹಿಂಬಾಲಿಸಿದ ಡೆಲ್ಲಿ ಕ್ಯಾಪಿಟಲ್ಸ್‌ ತಂಡ 21 ರನ್‌ ಇರುವಾಗಲೇ ಪಥುಮ್‌ ನಿಸಾಂಕ ಅವರ ವಿಕೆಟ್‌ ಅನ್ನು ಕಳೆದುಕೊಂಡಿತು. ಇದರ ಪರಿಣಾಮ ಪವರ್‌ಪ್ಲೇನಲ್ಲಿ ಡೆಲ್ಲಿ 59 ರನ್‌ಗಳಿಗೆ ಸೀಮಿತವಾಗಿತ್ತು. 23 ಎಸೆತಗಳಲ್ಲಿ 37 ರನ್‌ ಗಳಿಸಿದ ಬಳಿಕ ಕೆಎಲ್‌ ರಾಹುಲ್‌ ವಿಕೆಟ್‌ ಒಪ್ಪಿಸಿದರು.

DC vs SRH: ಎರಡನೇ ಐಪಿಎಲ್‌ ಶತಕ ಸಿಡಿಸಿ ರೋಹಿತ್‌ ಶರ್ಮಾ ದಾಖಲೆ ಮುರಿದ ಅಭಿಷೇಕ್‌ ಶರ್ಮಾ!

ಸ್ಪೋಟಕ ಬ್ಯಾಟ್‌ ಮಾಡಿದ ನಿತೀಶ್‌ ರಾಣಾ 30 ಎಸೆತಗಳಲ್ಲಿ 3 ಸಿಕ್ಸರ್‌ ಹಾಗೂ 7 ಬೌಂಡರಿಗಳೊಂದಿಗೆ 57 ರನ್‌ ಗಳಿಸಿ ಡೆಲ್ಲಿ ತಂಡವನ್ನು ಗೆಲುವಿನ ಹಾದಿಯಲ್ಲಿರಿಸಿದ್ದರು. ಆದರೆ, ಇಶಾನ್‌ ಮಾಲಿಂಗ ಬುದ್ದಿವಂತಿಕೆಯಿಂದ ರಾಣಾ ಅವರನ್ನು ಔಟ್‌ ಮಾಡಿದರು. 16 ಎಸೆತಗಳಲ್ಲಿ 27 ರನ್‌ ಗಳಿಸಿ ಉತ್ತಮವಾಗಿ ಆಡುತ್ತಿದ್ದ ಟ್ರಿಸ್ಟನ್‌ ಸ್ಟಬ್ಸ್‌ ಅವರನ್ನು ಕೂಡ ಇಶಾನ್‌ ಮಾಲಿಂಗ ಪೆವಿಲಿಯನ್‌ ಹಾದಿ ತೋರಿಸಿದರು. ಇದಕ್ಕೂ ಮುನ್ನ ಇವರು ಡೇವಿಡ್‌ ಮಿಲ್ಲರ್‌ ಅವರನ್ನು ಡಕ್‌ಔಟ್‌ ಮಾಡಿದ್ದರು.



ಮಧ್ಯಮ ಕ್ರಮಾಂಕದಲ್ಲಿ ಕ್ರೀಸ್‌ಗೆ ಬಂದು ಕೊನೆಯವರೆಗೂ ಹೋರಾಟ ನಡೆಸಿದ ಸಮೀರ್‌ ರಿಝ್ವಿ 28 ಎಸೆತಗಳಲ್ಲಿ 41 ರನ್‌ಗಳನ್ನು ಗಳಿಸಿದರೂ ತಮ್ಮ ತಂಡವನ್ನು ಗೆಲ್ಲಿಸಲು ಸಾಧ್ಯವಾಗಲಿಲ್ಲ. ಅಂತಿಮವಾಗಿ ಡೆಲ್ಲಿ ಕ್ಯಾಪಿಟಲ್ಸ್‌ ತಂಡ 20 ಓವರ್‌ಗಳಿಗೆ 9 ವಿಕೆಟ್‌ ನಷ್ಟಕ್ಕೆ 195 ರನ್‌ ಗಳಿಗೆ ಶಕ್ತವಾಯಿತು.

ಎಸ್‌ಆರ್‌ಎಚ್‌ ಪರ ಮಾರಕ ಬೌಲಿಂಗ್‌ ದಾಳಿ ನಡೆಸಿದ ಇಶಾನ್‌ ಮಾಲಿಂಗ 32 ರನ್‌ ನೀಡಿ 4 ವಿಕೆಟ್‌ ಸಾಧನೆ ಮಾಡಿದರು. 20ನೇ ಓವರ್‌ನಲ್ಲಿ ಹರ್ಷ್‌ ದುಬೇ ಮೂರು ವಿಕೆಟ್‌ ಪಡೆದರು.



242 ರನ್‌ಗಳನ್ನು ಕಲೆ ಹಾಕಿದ ಸನ್‌ರೈಸರ್ಸ್‌

ಇದಕ್ಕೂ ಮುನ್ನ ಟಾಸ್‌ ಸೋತು ಮೊದಲು ಬ್ಯಾಟ್‌ ಮಾಡುವಂತಾಗಿದ್ದ ಸನ್‌ರೈಸರ್ಸ್‌ ಹೈದರಾಬಾದ್‌ ತಂಡ, ಅಭಿಷೇಕ್‌ ಶರ್ಮಾ ಅವರ ಸ್ಪೋಟಕ ಶತಕದ ಬಲದಿಂದ ತನ್ನ ಪಾಲಿನ 20 ಓವರ್‌ಗಳಿಗೆ ಎರಡು ವಿಕೆಟ್‌ ನಷ್ಟಕ್ಕೆ 242 ರನ್‌ಗಳನ್ನು ಕಲೆ ಹಾಕಿತು. ಆ ಮೂಲಕ ಎದುರಾಳಿ ಡೆಲ್ಲಿ ಕ್ಯಾಪಿಟಲ್ಸ್‌ಗೆ 243 ರನ್‌ಗಳ ಕಠಿಣ ಗುರಿಯನ್ನು ನೀಡುವಲ್ಲಿ ಯಶಸ್ವಿಯಾಯಿತು.



ಎಸ್‌ಆರ್‌ಎಚ್‌ಗೆ ಭರ್ಜರಿ ಆರಂಭ

ಎಸ್‌ಆರ್‌ಎಚ್‌ ಪರ ಇನಿಂಗ್ಸ್‌ ಆರಂಭಿಸಿದ ಅಭಿಷೇಕ್‌ ಶರ್ಮಾ ಹಾಗೂ ಟ್ರಾವಿಸ್‌ ಹೆಡ್‌ ಜೋಡಿ ಭರ್ಜರಿಯಾಗಿ ಬ್ಯಾಟ್‌ ಬೀಸಿದರು. ಇವರು ಪವರ್‌ಪ್ಲೇನಲ್ಲಿ ಡೆಲ್ಲಿ ಬೌಲರ್‌ಗಳನ್ನು ಸಮರ್ಥವಾಗಿ ಎದುರಿಸಿ ವಿಕೆಟ್‌ ನಷ್ಟವಿಲ್ಲದೆ 67 ರನ್‌ ಗಳಿಸಿದ್ದರು. ನಂತರ ಸ್ಪೋಟಕ ಬ್ಯಾಟ್‌ ಮಾಡಿದ ಈ ಜೋಡಿ ಮೊದಲನೇ ವಿಕೆಟ್‌ಗೆ 53 ಎಸೆತಗಳಲ್ಲಿ 97 ರನ್‌ಗಳನ್ನು ಬಾರಿಸಿದರು. 26 ಎಸೆತಗಳಲ್ಲಿ 37 ರನ್‌ ಗಳಿಸಿದ ಬಳಿಕ ಟ್ರಾವಿಸ್‌ ಹೆಡ್‌ ವಿಕೆಟ್‌ ಒಪ್ಪಿಸಿದರು. ಬಳಿಕ ಇಶಾನ್‌ ಕಿಶನ್‌ 13 ಎಸೆತಗಳಲ್ಲಿ 25 ರನ್‌ ಗಳಿಸಿ ಔಟ್‌ ಆದರು.



ಎರಡನೇ ಐಪಿಎಲ್‌ ಶತಕ ಬಾರಿಸಿದ್ದ ಅಭಿಷೇಕ್‌ ಶರ್ಮಾ

ಒಂದು ತುದಿಯಲ್ಲಿ ಗಟ್ಟಿಯಾಗಿ ನಿಂತು ಸ್ಪೋಟಕ ಬ್ಯಾಟ್‌ ಮಾಡಿದ ಅಭಿಷೇಕ್‌ ಶರ್ಮಾ ಡೆಲ್ಲಿ ಕ್ಯಾಪಿಟಲ್ಸ್‌ ಬೌಲರ್‌ಗಳನ್ನು ಕೊನೆಯವರೆಗೂ ಕಾಡಿದರು. ಅವರು ತಮ್ಮ ವಿಕೆಟ್‌ ಅನ್ನು ನೀಡದೆ 68 ಎಸೆತಗಳಲ್ಲಿ 10 ಸಿಕ್ಸರ್‌ ಹಾಗೂ ಅಷ್ಟೇ ಸಂಖ್ಯೆಯ ಬೌಂಡರಿಗಳನ್ನು ಸಿಡಿಸಿ ಅಜೇಯ 135 ರನ್‌ ಚಚ್ಚಿದರು. ಅದರಲ್ಲಿಯೂ ಅವರು 198.53ರ ಸ್ಟ್ರೈಕ್‌ ರೇಟ್‌ನಲ್ಲಿ ಬ್ಯಾಟ್‌ ಬೀಸಿದ್ದು ವಿಶೇಷ. ಇವರು ಇದಕ್ಕೂ ಮುನ್ನ 47 ಎಸೆತಗಳಲ್ಲಿ ಶತಕ ಸಿಡಿಸಿದ್ದರು. ಇದು ಇವರ ಐಪಿಎಲ್‌ ವೃತ್ತಿ ಜೀವನದ ಎರಡನೇ ಶತಕ. ಇವರ ಜೊತೆ ಮೂರನೇ ವಿಕೆಟ್‌ಗೆ 66 ರನ್‌ ಜೊತೆಯಾಟವನ್ನು ಆಡಿದ ಹೆನ್ರಿಕ್‌ ಕ್ಲಾಸೆನ್‌ ಕೇವಲ 13 ಎಸೆತಗಳಲ್ಲಿ ಅಜೇಯ 37 ರನ್‌ ಚಚ್ಚಿದ್ದರು.