IPL 2025: ರಾಜಸ್ಥಾನ್ ರಾಯಲ್ಸ್ ವೈಫಲ್ಯಕ್ಕೆ ನೈಜ ಕಾರಣ ತಿಳಿಸಿದ ಆಡಂ ಗಿಲ್‌ಕ್ರಿಸ್ಟ್!
Adam Gilchrist slams RR Management: ಪ್ರಸ್ತುತ ನಡೆಯುತ್ತಿರುವ 2025ರ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಸತತ ಸೋಲುಗಳನ್ನು ಅನುಭವಿಸಿದ ರಾಜಸ್ಥಾನ್ ರಾಯಲ್ಸ್ ತಂಡ ಪ್ಲೇಆಫ್ಸ್ ರೇಸ್‌ನಿಂದ ಅಧಿಕೃತವಾಗಿ ಹೊರಬಿದ್ದದೆ. ಈ ಹಿನ್ನೆಲೆಯಲ್ಲಿ ರಾಜಸ್ಥಾನ್ ರಾಯಲ್ಸ್ ತಂಡದ ಟೀಮ್ ಮ್ಯಾನೇಜ್‌ಮೆಂಟ್ ಅನ್ನು ಆಸ್ಟ್ರೇಲಿಯಾ ಮಾಜಿ ವಿಕೆಟ್ ಕೀಪರ್ ಆಡಂ ಗಿಲ್‌ಕ್ರಿಸ್ಟ್ ಟೀಕಿಸಿದ್ದಾರೆ.

ರಾಜಸ್ಥಾನ್ ರಾಯಲ್ಸ್ ತಂಡವನ್ನು ಟೀಕಿಸಿದ ಆಡಂ ಗಿಲ್‌ಕ್ರಿಸ್ಟ್.

ನವದೆಹಲಿ: ಮೇ ಒಂದರಂದು ಮುಂಬೈ ಇಂಡಿಯನ್ಸ್ (Mumbai Indains) ವಿರುದ್ಧ 100 ರನ್‌ಗಳ ಅಂತರದಲ್ಲಿ ಸೋಲು ಅನುಭವಿಸಿದ ಬಳಿಕ ರಾಜಸ್ಥಾನ್ ರಾಯಲ್ಸ್ (Rajasthan Royals) ತಂಡ 2025ರ ಇಂಡಿಯನ್ ಪ್ರೀಮಿಯರ್ ಲೀಗ್ (IPL 2025) ಟೂರ್ನಿಯ ಪ್ಲೇಆಫ್ಸ್ ರೇಸ್‌ನಿಂದ ಅಧಿಕೃತವಾಗಿ ಹೊರ ನಡೆದಿತ್ತು. ಇದಾದ ಬಳಿಕ ರಾಜಸ್ಥಾನ್ ರಾಯಲ್ಸ್ ತಂಡದ ವೈಫಲ್ಯಕ್ಕೆ ಕಾರಣಗಳ ಬಗ್ಗೆ ಚರ್ಚೆ ನಡೆಸಲಾಗುತ್ತಿದೆ. ಅದರಂತೆ ಆಸ್ಟ್ರೇಲಿಯಾ ಮಾಜಿ ವಿಕೆಟ್ ಕೀಪರ್ ಆಡಂ ಗಿಲ್‌ಕಿಸ್ಟ್, ರಾಜಸ್ಥಾನ್ ರಾಯಲ್ಸ್‌ನ ವೈಫಲ್ಯಕ್ಕೆ ಕಾರಣವನ್ನು ತಿಳಿಸಿದ್ದಾರೆ. ಜೋಸ್ ಬಟ್ಲರ್ ಅವರನ್ನು ರಿಲೀಸ್ ಮಾಡಿದ್ದೇಕೆ ಆರ್‌ಆರ್ ಮ್ಯಾನೇಜ್‌ಮೆಂಟ್ ಅನ್ನು ಆಡಂ ಗಿಲ್‌ಕ್ರಿಸ್ಟ್ ಪ್ರಶ್ನೆ ಮಾಡಿದ್ದಾರೆ.
2025ರ ಐಪಿಎಲ್ ಟೂರ್ನಿಯ ನಿಮಿತ್ತ ರಾಜಸ್ಥಾನ್ ರಾಯಲ್ಸ್ ತಂಡ ಐವರು ಆಟಗಾರರನ್ನು ಉಳಿಸಿಕೊಂಡಿತ್ತು. ಆದರೆ, ಕೀ ಆಟಗಾರರಾದ ಜೋಸ್ ಬಟ್ಲರ್, ಟ್ರೆಂಟ್ ಬೌಲ್ಟ್ ಹಾಗೂ ಯುಜ್ವೇಂದ್ರ ಚಹಲ್ ಅವರನ್ನು ಆರ್‌ಆರ್ ರಿಟೈನ್ ಮಾಡಿಕೊಂಡಿರಲಿಲ್ಲ. ಇದಕ್ಕೆ ರಾಜಸ್ಥಾನ್ ರಾಯಲ್ಸ್ ತಂಡ ಟೂರ್ನಿಯಲ್ಲಿ ದುಬಾರಿ ಬೆಲೆಯನ್ನು ತೆತ್ತಬೇಕಾಯಿತು. ಸಂಜು ಸ್ಯಾಮ್ಸನ್ ಗಾಯಕ್ಕೆ ತುತ್ತಾಗಿದ್ದರಿಂದ ಆರ್‌ಆರ್, ರಿಯಾನ್ ಪರಾಗ್ ನಾಯಕತ್ವದಲ್ಲಿ ಬಹುತೇಕ ಪಂದ್ಯಗಳನ್ನು ಆಡಿತು. ಆಡಿದ್ದ 11 ಪಂದ್ಯಗಳಿಂದ ಗೆದ್ದಿದ್ದು ಕೇವಲ ಮೂರರಲ್ಲಿ ಮಾತ್ರ. ಇನ್ನುಳಿದ ಪಂದ್ಯಗಳಲ್ಲಿ ಸೋಲು ಅನುಭವಿಸುವ ಮೂಲಕ ಟೂರ್ನಿಯಿಂದ ಎಲಿಮಿನೇಟ್ ಆಯಿತು.
IPL 2025: ಡೆಲ್ಲಿ vs ಪಂಜಾಬ್ ಪಂದ್ಯ ರದ್ದಾದ ಬಳಿಕ 7 ತಂಡಗಳ ಪ್ಲೇಆಫ್ಸ್ ಲೆಕ್ಕಾಚಾರ!
ಜೋಸ್ ಬಟ್ಲರ್ ಕೈ ಬಿಟ್ಟು ಆರ್‌ಆರ್ ತಪ್ಪು ಮಾಡಿದೆ: ಗಿಲ್‌ಕ್ರಿಸ್ಟ್
ಕ್ರಿಕ್‌ಬಝ್ ಜೊತೆ ಮಾತನಾಡಿದ ಆಡಂ ಗಿಲ್‌ಕ್ರಿಸ್ಟ್, "ಮೆಗಾ ಹರಾಜಿನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಪ್ಪು ಮಾಡಿದೆ ಎಂದು ಮೈಕ್ ಹಸ್ಸಿ ಹೇಳಿದ್ದನ್ನು ನಾನು ಕೇಳಿದ್ದೇನೆ. ಜೋಸ್ ಬಟ್ಲರ್ ವಿಷಯದಲ್ಲಿ ಏನಾಯಿತು ಎಂಬುದಕ್ಕೆ ಯಾರಾದರೂ ಇಲ್ಲಿ ಹೊಣೆಯಾಗಬೇಕು. ಈ ವಿಷಯದಲ್ಲಿ ಆರ್‌ಆರ್ ತಪ್ಪು ಮಾಡಿದೆ, ಈ ಕಾರಣದಿಂದಲೇ ರಾಜಸ್ಥಾನ್ ರಾಯಲ್ಸ್ ಎಲಿಮಿನೇಟ್ ಆಯಿತು. ಆದ್ದರಿಂದ ಇದಕ್ಕೆ ಯಾರಾದರೂ ಹೊಣೆಯಾಗಬೇಕು. ಅವರು ಆಂತರಿಕವಾಗಿ ಪ್ರಶ್ನೆಗಳನ್ನು ಕೇಳುತ್ತಿರಬೇಕೆಂದು ಭಾವಿಸುತ್ತೇನೆ. ಜೋಸ್ ಬಟ್ಕರ್ ಅವರನ್ನು ಕೈ ಬಿಟ್ಟಿದ್ದು ದೊಡ್ಡ ತಪ್ಪು," ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಮೆಗಾ ಹರಾಜಿನಲ್ಲಿ ಜೋಸ್ ಬಟ್ಲರ್ ಅವರನ್ನು ಗುಜರಾತ್ ಟೈಟನ್ಸ್ ತಂಡ 15.75 ಕೋಟಿ ರೂ. ಗಳಿಗೆ ಖರೀದಿಸಿತ್ತು. ಅದರಂತೆ ಜಿಟಿಯಲ್ಲಿ ಇಂಗ್ಲೆಂಡ್ ಬ್ಯಾಟ್ಸ್‌ಮನ್ ಅತ್ಯುತ್ತಮ ಬ್ಯಾಟಿಂಗ್ ಪ್ರದರ್ಶನ ತೋರುತ್ತಿದ್ದಾರೆ. ಆರಂಭಿಕ ಬ್ಯಾಟ್ಸ್‌ಮನ್ ಬದಲು ಮೂರನೇ ಕ್ರಮಾಂಕದಲ್ಲಿ ಅವರು ಯಶಸ್ವಿಯಾಗಿದ್ದಾರೆ. ಅವರು 9 ಇನಿಂಗ್ಸ್‌ಗಳಿಂದ 406 ರನ್‌ಗಳನ್ನು ಕಲೆ ಹಾಕಿದ್ದಾರೆ.
IPL 2025: ದೇವದತ್ ಪಡಿಕ್ಕಲ್ ಔಟ್, ಆರ್‌ಸಿಬಿಗೆ ಮರಳಿದ ಮಯಾಂಕ್ ಅಗರ್ವಾಲ್!
ಆರು ಆಟಗಾರರನ್ನು ಉಳಿಸಿಕೊಂಡಿದ್ದ ಆರ್‌ಆರ್
ಸಂಜು ಸ್ಯಾಮ್ಸನ್, ಯಶಸ್ವಿ ಜೈಸ್ವಾಲ್, ರಿಯಾನ್ ಪರಾಗ್, ಧ್ರುವ್ ಜುರೆಲ್, ಶಿಮ್ರಾನ್ ಹೆಟ್ಮಾಯರ್ ಹಾಗೂ ಸಂದೀಪ್ ಶರ್ಮಾ ಅವರನ್ನು ಉಳಿಸಿಕೊಳ್ಳಲು ಆರ್‌ಆರ್, 79 ಕೋಟಿ ರೂ. ಗಳನ್ನು ಖರ್ಚು ಮಾಡಿತ್ತು. ಇನ್ನುಳಿದ 41 ಕೋಟಿ ರೂ. ಗಳೊಂದಿಗೆ ಆರ್‌ಆರ್ ಮೆಗಾ ಹರಾಜಿಗೆ ಹೋಗಿತ್ತು. ಆ ಮೂಲಕ ಯುವ ತಂಡವನ್ನು ಕಟ್ಟಲು ರಾಜಸ್ಥಾನ್ ಬಯಸಿತ್ತು. ಜೋಸ್ ಬಟ್ಲರ್ ಅವರನ್ನು ಕೈ ಬಿಟ್ಟಿದ್ದು ನನಗೆ ವೈಯಕ್ತಿಕವಾಗಿ ಬೇಸರ ತರಿಸಿತ್ತು ಎಂದು ಆರಂಭದಲ್ಲಿ ಸಂಜು ಸ್ಯಾಮ್ಸನ್ ಹೇಳಿಕೊಂಡಿದ್ದರು.
ಜೋಸ್ ಬಟ್ಲರ್‌ರನ್ನು ಕೈ ಬಿಟ್ಟಿದ್ದ ಬಗ್ಗೆ ಸಂಜು ಹೇಳಿದ್ದೇನು?
"ಅವರನ್ನು ಬಿಟ್ಟುಕೊಡುವುದು ನನಗೆ ಅತ್ಯಂತ ಸವಾಲಿನ ನಿರ್ಧಾರಗಳಲ್ಲಿ ಒಂದಾಗಿದೆ. ಇಂಗ್ಲೆಂಡ್ ಸರಣಿಯ ವೇಳೆ ಭೋಜನದ ಸಮಯದಲ್ಲಿ ನಿಮ್ಮನ್ನು ಕೈ ಬಿಟ್ಟಿರುವ ವಿಷಯದಿಂದ ನಾನಿನ್ನೂ ಹೊರಗಡೆ ಬಂದಿಲ್ಲ ಎಂದು ಹೇಳಿದ್ದೆ. ಐಪಿಎಲ್‌ನಲ್ಲಿ ನಾನು ಒಂದು ವಿಷಯವನ್ನು ಬದಲಾಯಿಸಲು ಸಾಧ್ಯವಾದರೆ, ಪ್ರತಿ ಮೂರು ವರ್ಷಗಳಿಗೊಮ್ಮೆ ಆಟಗಾರರನ್ನು ಬಿಡುಗಡೆ ಮಾಡುವ ನಿಯಮವನ್ನು ನಾನು ಬದಲಾಯಿಸುತ್ತೇನೆ," ಎಂದು ಆರ್‌ಆರ್ ನಾಯಕ ಸ್ಯಾಮ್ಸನ್ ಜಿಯೋ ಹಾಟ್‌ಸ್ಟಾರ್‌ಗೆ ತಿಳಿಸಿದ್ದರು.