ಫೋಟೋ ಗ್ಯಾಲರಿ ಆಪರೇಷನ್​ ಸಿಂಧೂರ ಐಪಿಎಲ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

IPL 2025: ಸಿಎಸ್‌ಕೆ ಎದುರು ಅರ್ಧಶತಕ ಸಿಡಿಸಿ ವಿಶೇಷ ದಾಖಲೆ ಬರೆದ ವೈಭವ್‌ ಸೂರ್ಯವಂಶಿ!

2025ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಟೂರ್ನಿಯಲ್ಲಿ ರಾಜಸ್ಥಾನ್‌ ರಾಯಲ್ಸ್‌ ತಂಡದ ಆರಂಭಿಕ ವೈಭವ್‌ ಸೂರ್ಯವಂಶಿ ಗುಜರಾತ್‌ ಟೈಟನ್ಸ್‌ ವಿರುದ್ಧದ ಪಂದ್ಯದಲ್ಲಿ ಚೊಚ್ಚಲ ಶತಕ ಸಿಡಿಸಿದ್ದರು. ಇದೀಗ ಚೆನ್ನೈ ಸೂಪರ್‌ ಕಿಂಗ್ಸ್‌ ವಿರುದ್ಧದ ಮಂಗಳವಾರದ ಪಂದ್ಯದಲ್ಲಿ ಅರ್ಧಶತಕವನ್ನು ಸಿಡಿಸುವ ಮೂಲಕ 14ರ ವಯಸ್ಸಿನ ವೈಭವ್‌ ಸೂರ್ಯವಂಶಿ ಮತ್ತೊಂದು ವಿಶೇಷ ದಾಖಲೆಯನ್ನು ಬರೆದಿದ್ದಾರೆ.

ಐಪಿಎಲ್‌ ಟೂರ್ನಿಯಲ್ಲಿ ವಿಶೇಷ ದಾಖಲೆ ಬರೆದ ವೈಭವ್‌ ಸೂರ್ಯವಂಶಿ!

ಅರ್ಧಶತಕ ಬಾರಿಸಿ ವಿಶೇಷ ದಾಖಲೆ ಬರೆದ ವೈಭವ್‌ ಸೂರ್ಯವಂಶಿ.

Profile Ramesh Kote May 21, 2025 12:30 PM

ನವದೆಹಲಿ: ಹದಿನೆಂಟನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್‌ (ಐಪಿಎಲ್) ಟೂರ್ನಿಯಲ್ಲಿ 14ರ ವಯಸ್ಸಿನ ರಾಜಸ್ಥಾನ್‌ ರಾಯಲ್ಸ್‌ ತಂಡದ ಆರಂಭಿಕ ವೈಭವ್ ಸೂರ್ಯವಂಶಿ (Vaibhav Suryavanshi) ಅದ್ಭುತ ಪ್ರದರ್ಶನ ತೋರುವ ಮೂಲಕ ಎಲ್ಲರ ಗಮನವನ್ನು ಸೆಳೆಯುತ್ತಿದ್ದಾರೆ. ರಾಜಸ್ಥಾನ ರಾಯಲ್ಸ್ (RR) ಹಾಗೂ ಚೆನ್ನೈ ಸೂಪರ್ ಕಿಂಗ್ಸ್ (CSK)ನಡುವಣ ಮಂಗಳವಾರದ ಪಂದ್ಯದಲ್ಲಿ ವೈಭವ್ ಕೇವಲ 33 ಎಸೆತಗಳಲ್ಲಿ 57 ರನ್ ಬಾರಿಸಿ ಆರ್‌ಆರ್‌ ಗೆಲುವಿಗೆ ನೆರವು ನೀಡಿದ್ದರು. ಆ ಮೂಲಕ ಇಲ್ಲಿನ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ನಡೆದಿದ್ದ ಈ ಪಂದ್ಯದಲ್ಲಿ ರಾಜಸ್ಥಾನ್‌ ರಾಯಲ್ಸ್ ತಂಡ ಆರು ವಿಕೆಟ್‌ಗಳ ಜಯ ದಾಖಲಿಸುವ ಮೂಲಕ 2025 ಐಪಿಎಲ್‌ ಟೂರ್ನಿಯಲ್ಲಿ ತನ್ನ ಅಭಿಯಾನವನ್ನು ಮುಗಿಸಿತ್ತು.

ವೈಭವ್ ಸೂರ್ಯವಂಶಿ ತಮ್ಮ ಐಪಿಎಲ್ ಪದಾರ್ಪಣೆಯ ಆವೃತ್ತಿಯಲ್ಲಿಯೇ ಉತ್ತಮ ಪ್ರದರ್ಶನ ತೋರಿದ್ದಾರೆ. ಮಂಗಳವಾರ ಚೆನ್ನೈ ಸೂಪರ್‌ ಕಿಂಗ್ಸ್‌ ವಿರುದ್ದದ ಪಂದ್ಯದಲ್ಲಿ ಅವರು ಎರಡನೇ ಅರ್ಧ ಶತಕವನ್ನು ಬಾರಿಸಿದ್ದಾರೆ. ಮೊದಲ ಮೂರು ಓವರ್‌ಗಳಲ್ಲಿ ಕೇವಲ ಮೂರು ಎಸೆತಗಳನ್ನು ಎದುರಿಸಿದ್ದ ಅವರು, ಯಶಸ್ವಿ ಜೈಸ್ವಾಲ್ ಔಟಾದ ಬಳಿಕ ನಿಧಾನಗತಿಯ ಆಟಕ್ಕೆ ಮೊರೆ ಹೋದರು. ಪವರ್‌ಪ್ಲೇ ಮುಗಿಯುವುದರೊಳಗಾಗಿ ಕೇವಲ 11 ರನ್ ಮಾತ್ರ ಗಳಿಸಿದ್ದರು. ನಂತರ ತಮ್ಮ ಬ್ಯಾಟಿಂಗ್‌ ವೇಗವನ್ನು ಹೆಚ್ಚಿಸಿಕೊಂಡರು.

IPL 2025: ಚೆನ್ನೈ ಸೂಪರ್‌ ಕಿಂಗ್ಸ್‌ನಿಂದ ಬಿಡುಗಡೆಯಾಗಲಿರುವ ಟಾಪ್‌ 5 ಆಟಗಾರರು!

ಈ ಟೂರ್ನಿಯ ಆರಂಭದಲ್ಲಿ ಗುಜರಾತ್ ಟೈಟನ್ಸ್ ವಿರುದ್ಧ ಚೊಚ್ಚಲ ಶತಕವನ್ನು ಬಾರಿಸಿದ್ದ ವೈಭವ್, ಈಗ ಎರಡನೇ ಅರ್ಧಶತಕವನ್ನು ಪೂರ್ಣಗೊಳಿಸಿದ್ದಾರೆ. ಆ ಮೂಲಕ ಐಪಿಎಲ್ ಇತಿಹಾಸದಲ್ಲಿ 18ರ ವಯಸ್ಸಿನೊಳಗಿನ ಎರಡು ಅರ್ಧಶತಕಗಳನ್ನು ಸಿಡಿಸಿದ ಮೊದಲ ಆಟಗಾರ ಎಂಬ ನೂತನ ದಾಖಲೆಯನ್ನು ಬರೆದಿದ್ದಾರೆ. ಇದರ ಜೊತೆಗೆ ಐಪಿಎಲ್‌ ಟೂರ್ನಿಯಲ್ಲಿ 250ಕ್ಕಿಂತ ಹೆಚ್ಚು ರನ್ ಗಳಿಸಿರುವ ಏಕೈಕ 18 ವರ್ಷದೊಳಗಿನ ಆಟಗಾರ ಎನಿಸಿಕೊಂಡಿದ್ದಾರೆ.

ಆಯುಷ್ ಮ್ಹಾತ್ರೆ (200 ರನ್) ಮತ್ತು ರಿಯಾನ್ ಪರಾಗ್ ಜೊತೆ ಈ ಸಾಧನೆ ಮಾಡಿದ ಮೂವರು ಆಟಗಾರರಲ್ಲಿ ವೈಭವ್ ಸೂರ್ಯವಂಶಿ ಕೂಡ ಸೇರಿದ್ದಾರೆ. ಈಗಾಗಲೇ ಐಪಿಎಲ್ ಇತಿಹಾಸದಲ್ಲಿ ಶತಕ ಸಿಡಿಸಿದ ಅತ್ಯಂತ ಕಿರಿಯ ಬ್ಯಾಟ್ಸ್‌ಮನ್‌ ಎಂಬ ದಾಖಲೆ ವೈಭವ್‌ ಸೂರ್ಯವಂಶಿ ಅವರ ಹೆಸರಿನಲ್ಲಿದೆ. ಈ ಸಾಧನೆಯ ಮೂಲಕ ಕೋಲ್ಕತಾ ನೈಟ್‌ ರೈಡರ್ಸ್‌ ತಂಡದ ಮನೀಷ್‌ ಪಾಂಡೆ (19 ವರ್ಷ, 153 ದಿನ) ಅವರ ದಾಖಲೆಯನ್ನು ಹಿಂದಿಕ್ಕಿದ್ದಾರೆ.



ವೈಭವ್ ಸೂರ್ಯವಂಶಿ ವಿಶ್ವ ಟಿ20 ಕ್ರಿಕೆಟ್‌ನಲ್ಲಿ ಎರಡು ಅರ್ಧಶತಕಗಳನ್ನು ಬಾರಿಸಿದ ಅತ್ಯಂತ ಕಿರಿಯ ಆಟಗಾರರಾಗಿದ್ದಾರೆ. 16 ವರ್ಷ ದಾಟುವ ಮೊದಲು 50 ರನ್ ಗಡಿ ದಾಟಿದ ಇತರೆ ಆಟಗಾರರಲ್ಲಿ ಹಸನ್ ಐಸಾಖಿಲ್ ಇದ್ದಾರೆ. ಐಸಾಖಿಲ್, ಇಶಾನ್ ಕಿಶನ್, ಮೀಟ್ ಭವಸರ್ ಮತ್ತು ಎಸ್ ಮಥುರ್ ತಮ್ಮ 16ನೇ ವಯಸ್ಸಿನ ಒಳಗೆ 100 ರನ್ ಗಳಿಸಿದ್ದರೆ, ವೈಭವ್ 200 ರನ್ ಪೂರೈಸಿ ದಾಖಲೆ ಬರೆದಿದ್ದಾರೆ.

IPL 2025: ಎಂಎಸ್‌ ಧೋನಿಯ ಪಾದ ಸ್ಪರ್ಶಿಸಿ ಆಶಿರ್ವಾದ ಪಡೆದ ವೈಭವ್‌ ಸೂರ್ಯವಂಶಿ!

ಗೆಲುವಿನ ಮೂಲಕ ಐಪಿಎಲ್‌ ಅಭಿಯಾನ ಮುಗಿಸಿದ ಆರ್‌ಆರ್‌

ರಾಜಸ್ಥಾನ್‌ ರಾಯಲ್ಸ್‌ ತಂಡ 2025ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಟೂರ್ನಿಯಲ್ಲಿ ನಿರೀಕ್ಷಿತ ಪ್ರದರ್ಶನವನ್ನು ತೋರಲಿಲ್ಲ. ಎರಡು ಬಾರಿ ನಾಯಕರ ಬದಲಾವಣೆ ಜೊತೆಗೆ, ಅನುಭವಿ ಬ್ಯಾಟ್ಸ್‌ಮನ್‌ಗಳ ಕೊರತೆಯಿಂದ ಆರ್‌ಆರ್‌ ಪ್ಲೇಆಫ್ಸ್‌ಗೆ ಅರ್ಹತೆ ಪಡೆಯಲು ಸಾಧ್ಯವಾಗಿಲ್ಲ. ಈ ಟೂರ್ನಿಯಲ್ಲಿ ಆಡಿದ 14 ಪಂದ್ಯಗಳಲ್ಲಿ 4ರಲ್ಲಿ ಗೆಲುವು ಪಡೆದ ರಾಜಸ್ಥಾನ್‌ ರಾಯಲ್ಸ್‌ ತಂಡ, ಇನ್ನುಳಿದ 10 ಪಂದ್ಯಗಳಲ್ಲಿ ಸೋಲು ಅನುಭವಿಸಿತು. ಆ ಮೂಲಕ ಪ್ಲೇಆಫ್ಸ್‌ನಿಂದ ಅಧಿಕೃತವಾಗಿ ಹೊರ ಬಿದ್ದಿದೆ. ಆದರೆ, ಮಂಗಳವಾರ ಚೆನ್ನೈ ಸೂಪರ್‌ ಕಿಂಗ್ಸ್‌ ವಿರುದ್ಧದ ಗೆಲುವಿನೊಂದಿಗೆ ರಾಜಸ್ಥಾನ್‌ ರಾಯಲ್ಸ್‌ ತಂಡ ಟೂರ್ನಿಯಲ್ಲಿ ತನ್ನ ಅಭಿಯಾನವನ್ನು ಮುಗಿಸಿದೆ.