ಸ್ಪೋಟಕ ಅರ್ಧಶತಕ ಸಿಡಿಸಿದ ಬಳಿಕ ವೀರೇಂದ್ರ ಸೆಹ್ವಾಗ್ ಸಲಹೆ ನೆನೆದ ಅಭಿಷೇಕ್ ಶರ್ಮಾ!
ಪಾಕಿಸ್ತಾನ ತಂಡದ ವಿರುದ್ಧ 2025ರ ಏಷ್ಯಾ ಕಪ್ ಟೂರ್ನಿಯ ಸೂಪರ್-4ರ ಪಂದ್ಯದಲ್ಲಿ ಭಾರತ ತಂಡದ ಪರ ಸ್ಪೋಟಕ ಅರ್ಧಶತಕ ಸಿಡಿಸಿದ ಬಳಿಕ ಅಭಿಷೇಕ್ ಶರ್ಮಾ, ಮಾಜಿ ಆರಂಭಿಕ ಬ್ಯಾಟ್ಸ್‌ಮನ್ ವೀರೇಂದ್ರ ಸೆಹ್ವಾಗ್ ನೀಡಿದ್ದ ಸಲಹೆಯನ್ನು ಬಹಿರಂಗಪಡಿಸಿದ್ದಾರೆ.

ವೀರೇಂದ್ರ ಸೆಹ್ವಾಗ್ ಅವರ ಸಲಹೆಯನ್ನು ನೆನೆದ ಅಭಿಷೇಕ್ ಶರ್ಮಾ. -

ನವದೆಹಲಿ: ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ವಿರುದ್ಧ 2025ರ ಏಷ್ಯಾ ಕಪ್ (Asia Cup 2025) ಟೂರ್ನಿಯ ಸೂಪರ್-4ರ ಪಂದ್ಯದಲ್ಲಿ ಆರಂಭಿಕ ಬ್ಯಾಟ್ಸ್‌ಮನ್ ಅಭಿಷೇಕ್ ಶರ್ಮಾ(Abhishek Sharma) ಸ್ಪೋಟಕ ಅರ್ಧಶತಕ ಬಾರಿಸಿ ಭಾರತ ತಂಡದ ಗೆಲುವಿಗೆ ನೆರವು ನೀಡಿದ್ದರು. ಆ ಮೂಲಕ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾಗಿದ್ದರು. ಪಂದ್ಯದ ಬಳಿಕ ಮಾತನಾಡಿದ ಅಭಿಷೇಕ್ ಶರ್ಮಾ, ಈ ಹಿಂದೆ ಮಾಜಿ ಆರಂಭಿಕ ಬ್ಯಾಟ್ಸ್‌ಮನ್ ವೀರೇಂದ್ರ ಸೆಹ್ವಾಗ್ (Virender Sehwag) ಅವರು ನೀಡಿದ್ದ ಸಲಹೆಯನ್ನು ರಿವೀಲ್ ಮಾಡಿದ್ದಾರೆ. ಈ ಪಂದ್ಯದಲ್ಲಿ ಪಾಕಿಸ್ತಾನ ನೀಡಿದ್ದ 172 ರನ್‌ಗಳ ಗುರಿಯನ್ನು ಹಿಂಬಾಲಿಸಿದ ಭಾರತದ ಪರ ಅಭಿಷೇಕ್ ಶರ್ಮಾ 39 ಎಸೆತಗಳಲ್ಲಿ 5 ಸಿಕ್ಸರ್ ಹಾಗೂ 6 ಬೌಂಡರಿಗಳೊಂದಿಗೆ 74 ರನ್‌ಗಳನ್ನು ಸಿಡಿಸಿದ್ದರು.
ಭಾನುವಾರ ಪಂದ್ಯದ ಬಳಿಕ ವೀರೇಂದ್ರ ಸೆಹ್ವಾಗ್ ಅವರ ಜೊತೆಗಿನ ಅಭಿಷೇಕ್ ಶರ್ಮಾ ಅವರ ವಿಡಿಯೊ ಸಂಭಾಷಣೆ ಸಂಪೂರ್ಣ ವೈರಲ್ ಆಗಿತ್ತು. ಈ ವಿಡಿಯೊದಲ್ಲಿ ನೀವು 70 ಅಥವಾ 80 ರನ್‌ಗಳನ್ನು ಕಲೆ ಹಾಕಿದರೆ, ಅದರನ್ನು ಶತಕವನ್ನಾಗಿ ಪರಿವರ್ತಿಸಬೇಕೆಂದು ಸೆಹ್ವಾಗ್ ಸಲಹೆ ನೀಡಿದ್ದರು. ಈ ಸಲಹೆಯನ್ನು ಬ್ಯಾಟಿಂಗ್ ದಿಗ್ಗಜ ಸುನೀಲ್ ಗವಾಸ್ಕರ್ ನೀಡಿದ್ದರು ಎಂದು ಮಾಜಿ ಸ್ಪೋಟಕ ಬ್ಯಾಟ್ಸ್‌ಮನ್ ತಿಳಿಸಿದ್ದರು.
IND vs PAK: ಪಾಕಿಸ್ತಾನದ ಎದುರು ಸೂಪರ್-4ರ ಪಂದ್ಯದಲ್ಲಿ ಭಾರತಕ್ಕೆ ಗೆಲುವಿನ ಅಭಿಷೇಕ!
"ನಿಮಗೆ ತುಂಬಾ ತಂಬಾ ಧನ್ಯವಾದಗಳು ಹಾಗೂ ನೀವು 70 ರನ್‌ಗಳ ಗಡಿಗೆ ತಲುಪಿದರೆ, ಅದನ್ನು ಶತಕವನ್ನಾಗಿ ಪರಿವರ್ತಿಸಬೇಕು ಹಾಗೂ ಇದನ್ನೂ ಎಂದಿಗೂ ತಪ್ಪಿಸಿಕೊಳ್ಳಬಾರದು. ಇದನ್ನು ನನಗೆ ಸುನೀಲ್ ಗವಾಸ್ಕರ್ ಸಲಹೆ ನೀಡಿದ್ದರು. ನೀವು ಒಮ್ಮೆ ನಿವೃತ್ತಿ ಹೇಳಿದಾಗ, 70 ಹಾಗೂ 80 ರನ್‌ಗಳಿಗೆ ವಿಕೆಟ್ ಒಪ್ಪಿಸಿರುವುದು ನಿಮ್ಮ ನೆನಪಿಗೆ ಬರುತ್ತದೆ. ನಾನು ನನ್ನ ವೃತ್ತಿ ಜೀವನದಲ್ಲಿ ಇವುಗಳನ್ನು ಶತಕವನ್ನಾಗಿ ಪರಿವರ್ತಿಸಿದ್ದರೆ, ನನ್ನ ಖಾತೆಯಲ್ಲಿ ಸಾಕಷ್ಟು ಶತಕಗಳು ಇರುತ್ತಿದ್ದವು. ಏಕೆಂದರೆ ಇಂಥಾ ಅವಕಾಶಗಳು ಎಂದಿಗೂ ಬರುವುದಿಲ್ಲ. ನೀವು ಉತ್ತಮ ಬ್ಯಾಟಿಂಗ್ ಪ್ರದರ್ಶನವನ್ನು ತೋರುತ್ತಿದ್ದರೆ, ನೀವು ನಿಮ್ಮ ಹಾದಿಯಲ್ಲಿದ್ದರೆ, ಆ ಇನಿಂಗ್ಸ್‌ನಲ್ಲಿ ನೀವು ಅಜೇಯರಾಗಿ ಉಳಿಯಬೇಕು. ಇದು ಯಾವಾಗಲೂ ಉತ್ತಮವಾಗಿರುತ್ತದೆ. ಇದನ್ನು ನೀವು ಮನಸಿನಲ್ಲಿ ಇಟ್ಟುಕೊಳ್ಳಿ," ಎಂದು ಸೆಹ್ವಾಗ್ ಮಾತನ್ನು ಅಭಿಷೇಕ್ ಶರ್ಮಾ ರಿವೀಲ್ ಮಾಡಿದ್ದಾರೆ.
IND vs PAK: ಟಾಸ್ ವೇಳೆ ಶೇಕ್‌ಹ್ಯಾಂಡ್ ನೀಡಲು ನಿರಾಕರಿಸಿದ ಸೂರ್ಯಕುಮಾರ್-ಸಲ್ಮಾನ್ ಅಘಾ!
ತಮ್ಮ ಟಿ20ಐ ವೃತ್ತಿ ಜೀವನದಲ್ಲಿ ಅಭಿಷೇಕ್ ಶರ್ಮಾ ಎರಡು ಶತಕಗಳನ್ನು ಬಾರಿಸಿದ್ದಾರೆ. ಅಭಿಷೇಕ್ ಶರ್ಮಾಗೆ ಬಹುಶಃ ಅವರ ಗುರು ಯುವರಾಜ್ ಸಿಂಗ್ ಅವರೇ ಈ ಸಲಹೆಯನ್ನು ನೀಡಿರಬಹುದು ಎಂದು ಗೌರವ್ ಕಪೂರ್ ಅವರು ವಿರೇಂದ್ರ ಸೆಹ್ವಾಗ್‌ಗೆ ಹೇಳುವ ಮೂಲಕ ತಮಾಷೆ ಮಾಡಿದ್ದಾರೆ. ಕ್ರೀಸ್‌ನಲ್ಲಿ ಮತ್ತೊಂದು ತುದಿಯಲ್ಲಿ ಬೇರೆ ಬ್ಯಾಟ್ಸ್‌ಮನ್ ಇದ್ದರೆ, ಅವರಿಗೂ ಕೂಡ ಅವಕಾಶ ನೀಡಬೇಕೆಂದು ಯುವರಾಜ್ ಸಿಂಗ್ ತಿಳಿಸಿದ್ದರು ಎಂದು ಅಭಿಷೇಕ್ ಶರ್ಮಾ ಹೇಳಿದ್ದಾರೆ.
"ಅದು 100 ಪ್ರತಿಶತ ಖಚಿತ, ಏಕೆಂದರೆ ಅವರು ಯಾವಾಗಲೂ ಹೇಳುತ್ತಾರೆ- ನೀವು ಸಿಕ್ಸ್ ಹೊಡೆದ ನಂತರ, ಇನ್ನೊಬ್ಬ ವ್ಯಕ್ತಿಗೂ ಹೊಡೆಯಲು ಅವಕಾಶ ನೀಡಿ. ನಾನು ಅದರ ಮೇಲೆ ಕೆಲಸ ಮಾಡುತ್ತಿದ್ದೇನೆ," ಎಂದು ಟೀಮ್ ಇಂಡಿಯಾ ಓಪನರ್ ತಿಳಿಸಿದ್ದಾರೆ. ಭಾರತ ತಂಡ ತನ್ನ ಮುಂದಿನ ಸೂಪರ್-4ರ ಪಂದ್ಯವನ್ನು ಸೆಪ್ಟಂಬರ್ 24 ರಂದು ಬಾಂಗ್ಲಾದೇಶ ವಿರುದ್ಧ ಆಡಲಿದೆ.