T20 World Cup: ಅಫ್ಘಾನಿಸ್ತಾನ ಔಟ್, ಕೆನಡಾ ವಿರುದ್ಧ ಗೆದ್ದು ಸೂಪರ್-8ಕ್ಕೆ ಪ್ರವೇಶಿಸಿದ ನ್ಯೂಜಿಲೆಂಡ್!
NZ vs CAN Match Highlights: ಯುವರಾಜ್ ಶರ್ಮಾ ಅವರ ದಾಖಲೆಯ ಶತಕದ ಹೊರತಾಗಿಯೂ ಗ್ಲೆನ್ ಫಿಲಿಪ್ಸ್ ಹಾಗೂ ರಚಿನ್ ರವೀಂದ್ರ ಅವರ ಅರ್ಧಶತಕಗಳ ಬಲದಿಂದ ನ್ಯೂಜಿಲೆಂಡ್ ತಂಡ, ಕೆನಡಾ ವಿರುದ್ಧ 8 ವಿಕೆಟ್‌ಗಳ ಗೆಲುವು ಪಡೆಯಿತು. ಈ ಗೆಲುವಿನ ಮೂಲಕ ಕಿವೀಸ್ 2026ರ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯ ಸೂಪರ್-8ಕ್ಕೆ ಲಗ್ಗೆ ಇಟ್ಟಿತು.
ಕೆನಡಾ ವಿರುದ್ಧ ಗೆದ್ದು ಸೂಪರ್-8ಕ್ಕೆ ಪ್ರವೇಶಿಸಿದ ನ್ಯೂಜಿಲೆಂಡ್. -
ಚೆನ್ನೈ: ಗ್ಲೆನ್ ಫಿಲಿಪ್ಸ್ (Glenn Phillips) ಹಾಗೂ ರಚಿನ್ ರವೀಂದ್ರ ಅವರ ಅರ್ಧಶತಕಗಳ ಬಲದಿಂದ ನ್ಯೂಜಿಲೆಂಡ್ ತಂಡ 2026ರ ಐಸಿಸಿ ಟಿ20 ವಿಶ್ವಕಪ್ (ICC T20 World Cup 2026) ಟೂರ್ನಿಯ ಪಂದ್ಯದಲ್ಲಿ ಕೆನಡಾ ವಿರುದ್ಧ 8 ವಿಕೆಟ್‌ಗಳ ಭರ್ಜರಿ ಗೆಲುವು ಪಡೆಯಿತು ಹಾಗೂ ಟೂರ್ನಿಯ ಸೂಪರ್-8ಕ್ಕೆ ಪ್ರವೇಶ ಮಾಡಿತು. ಕಿವೀಸ್ ತಂಡದ ಗೆಲುವಿನ ಮೂಲಕ ಅಫ್ಘಾನಿಸ್ತಾನ ತಂಡದ ಟೂರ್ನಿಯಿಂದ ಅಧಿಕೃತವಾಗಿ ಹೊರ ನಡೆಯಿತು. ಆದರೆ, ಯುವರಾಜ್ ಶರ್ಮಾ (Yuvraj Sharma) ಅವರ ದಾಖಲೆಯ ಶತಕದ ಹೊರತಾಗಿಯೂ ಕೆನಡಾ ತಂಡ ತನ್ನ ಬೌಲಿಂಗ್ ವೈಫಲ್ಯದಿಂದ ಈ ಪಂದ್ಯದಲ್ಲಿ ಸೋಲು ಅನುಭವಿಸಿತು. ಆಡಿದ ಮೂರೂ ಪಂದ್ಯಗಳನ್ನು ಸೋತ ಕೆನಡಾ, ಇನ್ನೂ ಒಂದು ಪಂದ್ಯ ಬಾಕಿ ಇರುವಾಗಲೇ ಎಲಿಮಿನೇಟ್ ಆಯಿತು.
ಮಂಗಳವಾರ ಇಲ್ಲಿನ ಎಂಎ ಚಿದಂಬರಂ ಕ್ರೀಡಾಂಗಣದಲ್ಲಿ ನಡೆದಿದ್ದ ಡಿ ಗುಂಪಿನ ಪಂದ್ಯದಲ್ಲಿ 174 ರನ್‌ಗಳ ಗುರಿಯನ್ನು ಹಿಂಬಾಲಿಸಿದ ನ್ಯೂಜಿಲೆಂಡ್ ತಂಡ, ರಚಿನ್ ರವೀಂದ್ರ (59 ರನ್) ಹಾಗೂ ಗ್ಲೆನ್ ಫಿಲಿಪ್ಸ್ (76 ರನ್) ಅರ್ಧಶತಕಗಳ ಬಲದಿಂದ 15.1 ಓವರ್‌ಗಳಿಗೆ ಎರಡು ವಿಕೆಟ್ ನಷ್ಟಕ್ಕೆ 176 ರನ್ ಗಳಿಸಿ ಗೆಲುವು ಪಡೆಯಿತು. ಆ ಮೂಲಕ ಕಳೆದ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಸೋತಿದ್ದ ಕಿವೀಸ್, ಗೆಲುವಿನ ಲಯಕ್ಕೆ ಮರಳಿತು. ಸ್ಪೋಟಕ ಬ್ಯಾಟಿಂಗ್ ನಡೆಸಿ ಕಿವೀಸ್ ಗೆಲುವಿನಲ್ಲಿ ಮಹತ್ತರ ಪಾತ್ರವನ್ನು ವಹಿಸಿದ ಗ್ಲೆನ್ ಫಿಲಿಪ್ಸ್ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾಗಿದ್ದಾರೆ.
'ತಂಡದ ಭವಿಷ್ಯ ದೇವರ ಮಡಿಲಲ್ಲಿ'; ಸೋಲಿನ ಬಳಿಕ ಭಾವುಕರಾದ ಮಿಚೆಲ್ ಮಾರ್ಷ್
ಗ್ಲೆನ್ ಫಿಲಿಪ್ಸ್-ರಚಿನ್ ರವೀಂದ್ರ ಜುಗಲ್‌ಬಂದಿ
ಗುರಿಯನ್ನು ಹಿಂಬಾಲಿಸಿದ ಕಿವೀಸ್ ಬಹುಬೇಗ ಆರಂಭಿಕರಾದ ಟಿಮ್ ಸೀಫರ್ಟ್ (6) ಹಾಗೂ ಫಿನ್ ಆಲೆನ್ (21) ಅವರನ್ನು ಕಳೆದುಕೊಂಡಿತು. ಆದರೆ, ಎರಡನೇ ವಿಕೆಟ್‌ಗೆ ಜೊತೆಯಾದ ರಚಿನ್ ರವೀಂದ್ರ ಹಾಗೂ ಗ್ಲೆನ್ ಫಿಲಿಪ್ಸ್ ಸ್ಪೋಟಕ ಬ್ಯಾಟ್ ಮಾಡಿ ಕೇವಲ 72 ಎಸೆತಗಳಲ್ಲಿ 146 ರನ್‌ಗಳನ್ನು ಕಲೆ ಹಾಕಿದರು. ಆ ಮೂಲಕ ಕಿವೀಸ್ ಗೆಲುವಿನಲ್ಲಿ ಮಹತ್ತರ ಪಾತ್ರವನ್ನು ವಹಿಸಿದರು. ರಚಿನ್ ರವೀಂದ್ರ ಕೇವಲ 39 ಎಸೆತಗಳಲ್ಲಿ 3 ಸಿಕ್ಸರ್ ಹಾಗೂ 4 ಬೌಂಡರಿಗಳೊಂದಿಗೆ ಅಜೇಯ 59 ರನ್ ಗಳಿಸಿದರೆ, ಗ್ಲೆನ್ ಫಿಲಿಪ್ಸ್ 36 ಎಸೆತಗಳಲ್ಲಿ 6 ಸಿಕ್ಸರ್ ಹಾಗೂ 4 ಬೌಂಡರಿಗಳೊಂದಿಗೆ ಅಜೇಯ 76 ರನ್ ಗಳಿಸಿ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.
New Zealand seal their #T20WorldCup Super 8 spot with a comfortable win against Canada in Chennai 👏
— ICC (@ICC) February 17, 2026
📝: https://t.co/meUw66ZU1j pic.twitter.com/xBKjYSNwaR
173 ರನ್ ಕಲೆ ಹಾಕಿದ್ದ ಕೆನಡಾ
ಇದಕ್ಕೂ ಮುನ್ನ ಟಾಸ್ ಗೆದ್ದು ಮೊದಲು ಬ್ಯಾಟ್ ಆಯ್ಕೆ ಮಾಡಿಕೊಂಡಿದ್ದ ಕೆನಡಾ ತಂಡ, ತನ್ನ ನಿರ್ಧಾರದಂತೆ ಉತ್ತಮ ಪ್ರದರ್ಶನವನ್ನು ತೋರಿತು. ಯುವರಾಜ್ ಶರ್ಮಾ ಅವರ ಚೊಚ್ಚಲ ಶತಕದ ಬಲದಿಂದ ಕೆನಡಾ ತಂಡ, ತನ್ನ ಪಾಲಿನ 20 ಓವರ್‌ಗಳಿಗೆ 4 ವಿಕೆಟ್‌ಗಳ ನಷ್ಟಕ್ಕೆ 173 ರನ್‌ಗಳನ್ನು ಕಲೆ ಹಾಕಿತು. ಆ ಮೂಲಕ ಎದುರಾಳಿ ನ್ಯೂಜಿಲೆಂಡ್ ತಂಡಕ್ಕೆ 174 ರನ್‌ಗಳ ಗುರಿಯನ್ನು ನೀಡಿತು.
𝐘𝐮𝐯𝐫𝐚𝐣 𝐒𝐚𝐦𝐫𝐚 🌟
— ICC (@ICC) February 17, 2026
Scripting #T20WorldCup history and taking all the spotlight 🫡
Watch the 19-year-old's stunning century in Chennai 🎥 https://t.co/b06a0d8IjY pic.twitter.com/vLOw7ql5gD
ಯುವರಾಜ್ ಶರ್ಮಾ ದಾಖಲೆಯ ಶತಕ
ಕೆನಡಾ ತಂಡದ ಬ್ಯಾಟಿಂಗ್‌ನಲ್ಲಿ 19ನೇ ವಯಸ್ಸಿನ ಯುವರಾಜ್ ಶರ್ಮಾ ಗಮನ ಸೆಳೆದರು. ಕೆನಡಾ ಪರ ಇನಿಂಗ್ಸ್ ಆರಂಭಿಸಿದ ಯುವರಾಜ್ ಶರ್ಮಾ, ತಮ್ಮ ಸ್ಪೋಟಕ ಬ್ಯಾಟಿಂಗ್ ಮೂಲಕ ಎದುರಾಳಿ ಕಿವೀಸ್ ಬೌಲಿಂಗ್ ದಾಳಿಯನ್ನು ಸಮರ್ಥವಾಗಿ ಮೆಟ್ಟಿ ನಿಂತರು. ಅವರು ಆಡಿದ 65 ಎಸೆತಗಳಲ್ಲಿ 6 ಸಿಕ್ಸರ್ ಹಾಗೂ 11 ಬೌಂಡರಿಗಳೊಂದಿಗೆ 110 ರನ್‌ಗಳನ್ನು ಸಿಡಿಸಿದರು. ಆ ಮೂಲಕ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಶತಕ ಬಾರಿಸಿದ ಮೊದಲ ಅಸೋಸಿಯೇಟ್ ದೇಶದ ಆಟಗಾರ ಎಂಬ ದಾಖಲೆಯನ್ನು ಬರೆದರು. ಇವರು ಮೊದಲನೇ ವಿಕೆಟ್‌ಗೆ ದಿಲ್‌ಪ್ರೀತ್ ಬಾಜ್ವಾ ಅವರ ಜೊತೆಗೆ 116 ರನ್‌ಗಳ ಜೊತೆಯಾಟವನ್ನು ಆಡಿದ್ದರು. ಅದ್ಭುತ ಬ್ಯಾಟಿಂಗ್ ನಡೆಸಿದ ದಿಲ್‌ಪ್ರೀತ್ ಬಾಜ್ವಾ 36 ರನ್ ಗಳಿಸಿದರು.