ಫೋಟೋ ಗ್ಯಾಲರಿ ಐಪಿಎಲ್​ ಅಕ್ಷಯ ತೃತೀಯ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

CSK vs PBKS: ಐಪಿಎಲ್‌ ಟೂರ್ನಿಯಿಂದ ಸಿಎಸ್‌ಕೆ ಔಟ್‌, ಪಂಜಾಬ್‌ಗೆ ದಕ್ಕಿದ ಜಯ!

CSK vs PBKS Match Highlights: ಯುಜ್ವೇಂದ್ರ ಚಹಲ್‌ ಹ್ಯಾಟ್ರಿಕ್‌ ಹಾಗೂ ನಾಯಕ ಶ್ರೇಯಸ್‌ ಅಯ್ಯರ್‌ ಅವರ ಆಕರ್ಷಕ ಅರ್ಧಶತಕದ ಬಲದಿಂದ ಪಂಜಾಬ್‌ ಕಿಂಗ್ಸ್‌ ತಂಡ, 2025ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಟೂರ್ನಿಯ 49ನೇ ಪಂದ್ಯದಲ್ಲಿ ಚೆನ್ನೈ ಸೂಪರ್‌ ಕಿಂಗ್ಸ್‌ ವಿರುದ್ದ 4 ವಿಕೆಟ್‌ ಗೆಲುವು ಪಡೆದಿದೆ. ಈ ಗೆಲುವಿನ ಮೂಲಕ ಪಂಜಾಬ್‌ ಪಾಯಿಂಟ್ಸ್‌ ಟೇಬಲ್‌ನಲ್ಲಿ ಎರಡನೇ ಸ್ಥಾನಕ್ಕೆ ಲಗ್ಗೆ ಇಟ್ಟಿದೆ.

ಪಂಜಾಬ್‌ ಕಿಂಗ್ಸ್‌ ವಿರುದ್ಧ ಸೋತ ಸಿಎಸ್‌ಕೆ ಪ್ಲೇಆಫ್ಸ್‌ನಿಂದ ಔಟ್‌!

ಸಿಎಸ್‌ಕೆ ಎದುರು ಪಂಜಾಬ್‌ ಕಿಂಗ್ಸ್‌ಗೆ 4 ವಿಕೆಟ್‌ ಜಯ.

Profile Ramesh Kote Apr 30, 2025 11:40 PM

ಚೆನ್ನೈ: ಯುಜ್ವೇಂದ್ರ ಚಹಲ್‌ ಹ್ಯಾಟ್ರಿಕ್‌ ವಿಕೆಟ್‌ ಹಾಗೂ ನಾಯಕ ಶ್ರೇಯಸ್‌ ಅಯ್ಯರ್‌ ಮತ್ತು ಪ್ರಭ್‌ಸಿಮ್ರಾನ್‌ ಸಿಂಗ್‌ ಅರ್ಧಶತಕಗಳ ಬಲದಿಂದ ಪಂಜಾಬ್‌ ಕಿಂಗ್ಸ್‌ ತಂಡ, 2025ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ (IPL 2025) ಟೂರ್ನಿಯ 49ನೇ ಪಂದ್ಯದಲ್ಲಿ (CSK vs PBKS) ಚೆನ್ನೈ ಸೂಪರ್‌ ಕಿಂಗ್ಸ್‌ ವಿರುದ್ದ 4 ವಿಕೆಟ್‌ ಗೆಲುವು ಪಡೆಯಿತು. ಈ ಜಯದ ಮೂಲಕ ಪಂಜಾಬ್‌ ಟೂರ್ನಿಯ ಪಾಯಿಂಟ್ಸ್‌ ಟೇಬಲ್‌ನಲ್ಲಿ ಎರಡನೇ ಸ್ಥಾನಕ್ಕೆ ಪ್ರವೇಶ ಮಾಡಿತು. ಇನ್ನು ಈ ಟೂರ್ನಿಯಲ್ಲಿ 10ನೇ ಸೋಲು ಅನುಭವಿಸಿದ ಎಂಎಸ್‌ ಧೋನಿ ನಾಯಕತ್ವದ ಸಿಎಸ್‌ಕೆ ಪ್ಲೇಆಫ್ಸ್‌ ರೇಸ್‌ನಿಂದ ಅಧಿಕೃತವಾಗಿ ಹೊರ ಬಿದ್ದಿದೆ.

ಬುಧವಾರ ಇಲ್ಲಿನ ಎಂಎ ಚಿದಂಬರಂ ಕ್ರೀಡಾಂಗಣದಲ್ಲಿ ಸಿಎಸ್‌ಕೆ ನೀಡಿದ 191 ರನ್‌ಗಳ ಗುರಿಯನ್ನು ಹಿಂಬಾಲಿಸಿದ ಪಂಜಾಬ್‌ ಕಿಂಗ್ಸ್‌ ತಂಡ, ಪ್ರಭ್‌ಸಿಮ್ರಾನ್‌ ಸಿಂಗ್‌ (54 ರನ್‌) ಹಾಗೂ ಶ್ರೇಯಸ್‌ ಅಯ್ಯರ್‌ (72) ಅವರ ಸ್ಪೋಟಕ ಅರ್ಧಶತಕಗಳ ಬಲದಿಂದ 19.4 ಓವರ್‌ಗಳಿಗೆ 6 ವಿಕೆಟ್‌ಗಳ ನಷ್ಟಕ್ಕೆ 194 ರನ್‌ಗಳನ್ನು ಗಳಿಸಿ ಟೂರ್ನಿಯಲ್ಲಿ ಆರನೇ ಗೆಲುವು ಪಡೆಯಿತು. ಇನ್ನು ಎಂಎಸ್‌ ಧೋನಿ ನಾಯಕತ್ವದ ಸಿಎಸ್‌ಕೆ ಇದೇ ಮೊದಲ ಬಾರಿ ತವರು ಅಂಗಣ ಚೆಪಾಕ್‌ನಲ್ಲಿ ಸತತ ಐದನೇ ಸೋಲು ಅನುಭವಿಸಿದಂತಾಯಿತು.

CSK vs PBKS: ಹ್ಯಾಟ್ರಿಕ್‌ ವಿಕೆಟ್‌ ಕಿತ್ತು ವಿಶೇಷ ದಾಖಲೆ ಬರೆದ ಯುಜ್ವೇಂದ್ರ ಚಹಲ್!

ಶ್ರೇಯಸ್‌ ಅಯ್ಯರ್‌ಗೆ ಪಂದ್ಯ ಶ್ರೇಷ್ಠ ಪ್ರಶಸ್ತಿ

ಪಂಜಾಬ್‌ ಕಿಂಗ್ಸ್‌ ತಂಡದ ಇನಿಂಗ್ಸ್‌ನಲ್ಲಿ ಎಲ್ಲರ ಗಮನ ಸೆಳೆದದ್ದು ನಾಯಕ ಶ್ರೇಯಸ್‌ ಅಯ್ಯರ್‌ ಹಾಗೂ ಪ್ರಭ್‌ ಸಿಮ್ರಾನ್‌ ಸಿಂಗ್‌. ಮೊದಲಿಗೆ ಇನಿಂಗ್ಸ್‌ ಆರಂಭಿಸಿದ್ದ ಪ್ರಭ್‌ಸಿಮ್ರಾನ್‌ 34 ಎಸೆತಗಳಲ್ಲಿ 54 ರನ್‌ ಗಳಿಸಿದರು ಹಾಗೂ ನಾಯಕ ಶ್ರೇಯಸ್‌ ಅಯ್ಯರ್‌ 41 ಎಸೆತಗಳಲ್ಲಿ 4 ಸಿಕ್ಸರ್‌ ಹಾಗೂ 5 ಬೌಂಡರಿಗಳೊಂದಿಗೆ 72 ರನ್‌ ಗಳಿಸಿದರು. ಆ ಮೂಲಕ ಪಂಜಾಬ್‌ ಕಿಂಗ್ಸ್‌ ಗೆಲುವಿಗೆ ನೆರವಾಗುವ ಮೂಲಕ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜರಾದರು. ಶಶಾಂಕ್‌ ಸಿಂಗ್‌ ಹಾಗೂ ಪ್ರಿಯಾಂಶ್‌ ಆರ್ಯ ತಲಾ 23 ರನ್‌ಗಳನ್ನು ಗಳಿಸಿದರು.



190 ರನ್‌ ಕಲೆ ಹಾಕಿದ್ದ ಸಿಎಸ್‌ಕೆ

ಇದಕ್ಕೂ ಮುನ್ನ ಟಾಸ್‌ ಸೋತು ಮೊದಲು ಬ್ಯಾಟ್‌ ಮಾಡುವಂತಾಗಿದ್ದ ಚೆನ್ನೈ ಸೂಪರ್‌ ಕಿಂಗ್ಸ್‌ ತಂಡ, ಸ್ಯಾಮ್‌ ಕರನ್‌ (88 ರನ್‌) ಅವರ ಸ್ಪೋಟಕ ಬ್ಯಾಟಿಂಗ್‌ ಬಲದಿಂದ ತನ್ನ ಪಾಲಿನ 19.2 ಓವರ್‌ಗಳಿಗೆ 190 ರನ್‌ಗಳನ್ನು ಕಲೆ ಹಾಕಿ ಆಲ್‌ಔಟ್‌ ಆಯಿತು. ಆ ಮೂಲಕ ಎದುರಾಳಿ ಪಂಜಾಬ್‌ ಕಿಂಗ್ಸ್‌ ತಂಡಕ್ಕೆ 191 ರನ್‌ಗಳ ಗುರಿಯನ್ನು ನೀಡಿತು.

ಇನಿಂಗ್ಸ್‌ ಆರಂಭಿಸಿದ ಶೇಖ್‌ ರಶೀದ್‌ ಹಾಗೂ ಆಯುಷ್‌ ಮ್ಹಾತ್ರೆ ಚೆನ್ನೈ ಸೂಪರ್‌ ಕಿಂಗ್ಸ್‌ಗೆ ಉತ್ತಮ ಆರಂಭ ತಂದುಕೊಡುವಲ್ಲಿ ವಿಫಲರಾದರು. ನಾಲ್ಕನೇ ಕ್ರಮಾಂಕದಲ್ಲಿ ಬ್ಯಾಟ್‌ ಮಾಡಿದ ರವೀಂದ್ರ ಜಡೇಜಾ ಕೂಡ ಕೇವಲ 17 ರನ್‌ ಗಳಿಸಿ ವಿಕೆಟ್‌ ಒಪ್ಪಿಸಿದರು. ನಾಲ್ಕನೇ ವಿಕೆಟ್‌ಗೆ ಜತೆಯಾದ ಡೆವಾಲ್ಡ್‌ ಬ್ರೆವಿಸ್‌ ಹಾಗೂ ಸ್ಯಾಮ್‌ ಕರನ್‌ 78 ರನ್‌ಗಳನ್ನು ಕಲೆ ಹಾಕಿದರು. ಆ ಮೂಲಕ ಆರಂಭಿಕ ಆಘಾತದಿಂದ ಸಿಎಸ್‌ಕೆಯನ್ನು ಪಾರು ಮಾಡಿದರು.‌



88 ರನ್‌ ಗಳಿಸಿದ ಸ್ಯಾಮ್‌ ಕರನ್

ಬ್ಯಾಟಿಂಗ್‌ನಲ್ಲಿ ಅಬ್ಬರಿಸಿದ ಡೆವಾಲ್ಡ್‌ ಬ್ರೆವಿಸ್‌, 26 ಎಸೆತಗಳಲ್ಲಿ 32 ರನ್‌ ಗಳಿಸಿ ಔಟ್‌ ಆದರು. ಒಂದು ತುದಿಯಲ್ಲಿ ಗಟ್ಟಿಯಾಗಿ ನಿಂತು ಬ್ಯಾಟ್‌ ಮಾಡಿದ ಸ್ಯಾಮ್‌ ಕರನ್‌, ಪಂಜಾಬ್‌ ಕಿಂಗ್ಸ್‌ ಬೌಲರ್‌ಗಳನ್ನು ಸಮರ್ಥವಾಗಿ ಎದುರಿಸಿದರು. ಅವರು ಆಡಿದ 47 ಎಸೆತಗಳಲ್ಲಿ 4 ಸಿಕ್ಸರ್‌ ಹಾಗೂ 9 ಬೌಂಡರಿಗಳೊಂದಿಗೆ 88 ರನ್‌ ಗಳಿಸಿ ವಿಕೆಟ್‌ ಒಪ್ಪಿಸಿದರು. ಎಂಎಸ್‌ ಧೋನಿಯನ್ನು ಔಟ್‌ ಮಾಡಿದ ಬಳಿಕ, ಯುಜ್ವೇಂದ್ರ ಚಹಲ್‌, ಹ್ಯಾಟ್ರಿಕ್‌ ವಿಕೆಟ್‌ ಕಿತ್ತರು.

ಪಂಜಾಬ್‌ ಕಿಂಗ್ಸ್‌ ಪರ ಅತ್ಯುತ್ತಮ ಬೌಲಿಂಗ್‌ ಪ್ರದರ್ಶನ ತೋರಿದ ಯುಜ್ವೇಂದ್ರ ಚಹಲ್‌ 4 ವಿಕೆಟ್‌ ಕಿತ್ತರೆ, ಅರ್ಷದೀಪ್‌ ಸಿಂಗ್‌ ಹಾಗೂ ಮಾರ್ಕೊ ಯೆನ್ಸನ್‌ ತಲಾ ಎರಡೆರಡು ವಿಕೆಟ್‌ ಕಿತ್ತರು.