ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

KAR vs TN: ದೇವದತ್‌ ಪಡಿಕ್ಕಲ್‌ ಶತಕ, ತಮಿಳುನಾಡಿಗೆ ಶಾಕ್‌ ನೀಡಿದ ಕರ್ನಾಟಕ!

KAR vs TN Match Highlights: ದೇವದತ್‌ ಪಡಿಕ್ಕಲ್‌ ಸ್ಪೋಟಕ ಶತಕದ ಬಲದಿಂದ ಕರ್ನಾಟಕ ತಂಡ, ಸೈಯದ್‌ ಮುಷ್ತಾಕ್‌ ಅಲಿ ಟ್ರೋಫಿ ಟೂರ್ನಿಯ ಎಲೈಟ್‌ ಡಿ ಪಂದ್ಯದಲ್ಲಿ ತಮಿಳುನಾಡು ವಿರುದ್ಧ 145 ರನ್‌ಗಳ ಭರ್ಜರಿ ಗೆಲುವು ಪಡೆದಿದೆ. ಆ ಮೂಲಕ ಈ ಟೂರ್ನಿಯಲ್ಲಿ ಕರ್ನಾಟಕ ತಂಡ ಎರಡನೇ ಗೆಲುವನ್ನು ತನ್ನದಾಗಿಸಿಕೊಂಡಿದೆ.

SMAT 2025: ತಮಿಳುನಾಡು ವಿರುದ್ಧ ಗೆದ್ದು ಬೀಗಿದ ಕರ್ನಾಟಕ!

ತಮಿಳುನಾಡು ಎದುರು ಭರ್ಜರಿ ಶತಕ ಸಿಡಿಸಿದ ದೇವದತ್‌ ಪಡಿಕ್ಕಲ್‌. -

Profile
Ramesh Kote Dec 2, 2025 8:31 PM

ನವದೆಹಲಿ: ದೇವದತ್‌ ಪಡಿಕ್ಕಲ್‌ ( Devdutt Padikkal) ಶತಕದ ಬಲದಿಂದ ಕರ್ನಾಟಕ (Karnataka) ತಂಡ, ಸೈಯದ್‌ ಮುಷ್ತಾಕ್‌ ಅಲಿ ಟ್ರೋಫಿ (Syed Mushtaq Ali Trophy 2025) ಟೂರ್ನಿಯ ಎಲೈಟ್‌ ಡಿ ಪಂದ್ಯದಲ್ಲಿ ತಮಿಳುನಾಡು ವಿರುದ್ಧ 145 ರನ್‌ಗಳ ಭರ್ಜರಿ ಗೆಲುವು ಪಡೆದಿದೆ. ಆ ಮೂಲಕ ಈ ಟೂರ್ನಿಯಲ್ಲಿ ಮಯಾಂಕ್‌ ಅಗರ್ವಾಲ್‌ ನಾಯಕತ್ವದ ಕರ್ನಾಟಕ ತಂಡ ಎರಡನೇ ಜಯ ಪಡೆದು, ಪಾಯಿಂಟ್ಸ್‌ ಟೇಬಲ್‌ನಲ್ಲಿ ಮೂರನೇ ಸ್ಥಾನಕ್ಕೆ ಲಗ್ಗೆ ಇಟ್ಟಿದೆ. ಆದರೆ, ಇಲ್ಲಿಯವರೆಗೂ ಮೂರು ಸೋಲುಗಳನ್ನು ಕಂಡಿರುವ ತಮಿಳುನಾಡು ತಂಡ ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನಕ್ಕೆ ಇಳಿದಿದೆ. 46 ಎಸೆತಗಳಲ್ಲಿ ಅಜೇಯ 102 ರನ್‌ ಗಳಿಸಿದ ದೇವದತ್‌ ಪಡಿಕ್ಕಲ್‌ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.

ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಮಂಗಳವಾರ ನಡೆದಿದ್ದ ಪಂದ್ಯದಲ್ಲಿ ಕರ್ನಾಟಕ ನೀಡಿದ್ದ 246 ರನ್‌ಗಳ ಗುರಿಯನ್ನು ಹಿಂಬಾಲಿಸಿದ ತಮಿಳುನಾಡು ತಂಡ, ಬ್ಯಾಟಿಂಗ್‌ ವೈಫಲ್ಯ ಅನುಭವಿಸಿತು. ಶ್ರೇಯಸ್‌ ಗೋಪಾಲ್‌ ಹಾಘೂ ಪ್ರವೀಣ್‌ ದುಬೆ ಅವರ ಸ್ಪಿನ್‌ ಮೋಡಿಗೆ ನಲುಗಿದ ತಮಿಳುನಾಡು ತಂಡ, ಕೇವಲ 14.2 ಓವರ್‌ಗಳಿಗೆ 100 ರನ್‌ಗಳಿಗೆ ಆಲ್‌ಔಟ್‌ ಆಯಿತು. ತಮಿಳುನಾಡು ಪರ ತುಷಾರ್‌ ರೆಹೇಜಾ (29) ಹಾಗೂ ಎನ್‌ ಜಗದೀಶನ್‌ (21) ಅವರನ್ನು ಹೊರತುಪಡಿಸಿ ಇನ್ನುಳಿದ ಯಾವುದೇ ಬ್ಯಾಟ್ಸ್‌ಮನ್‌ ವೈಯಕ್ತಿಕವಾಗಿ 20 ರನ್‌ಗಳನ್ನು ಕಲೆ ಹಾಕಲು ಸಾಧ್ಯವಾಗಲಿಲ್ಲ.

SMAT 2025: 47 ಎಸೆತಗಳಲ್ಲಿ ಚೊಚ್ಚಲ ಟಿ20 ಶತಕ ಸಿಡಿಸಿದ ಸರ್ಫರಾಝ್‌ ಖಾನ್!

ಮಿಂಚಿದ ಶ್ರೇಯಸ್‌ ಗೋಪಾಲ್‌

ಪ್ರಸ್ತುತ ದೇಶಿ ಕ್ರಿಕೆಟ್‌ನ ಆವೃತ್ತಿಯಲ್ಲಿ ಭರ್ಜರಿ ಫಾರ್ಮ್‌ನಲ್ಲಿರುವ ಶ್ರೇಯಸ್‌ ಗೋಪಾಲ್‌, ತಮಿಳುನಾಡು ಬ್ಯಾಟ್ಸ್‌ಮನ್‌ಗಳಿಗೆ ಸಿಂಹಸ್ವಪ್ನರಾದರು. ಅವರು ಬೌಲ್‌ ಮಾಡಿದ 3 ಓವರ್‌ಗಳಲ್ಲಿ 21 ರನ್‌ ನೀಡಿ ಮೂರು ವಿಕೆಟ್‌ ಕಿತ್ತರು. ಇವರು ಅಮಿತ್‌ ಸಾತ್ವಿಕ್‌, ಎನ್‌ ಜಗದೀಶನ್‌ ಹಾಗೂ ಆರ್‌ ರಾಜ್‌ಕುಮಾರ್‌ ಅವರ ಪ್ರಮುಖ ವಿಕೆಟ್‌ಗಳನ್ನು ಕಬಳಿಸಿದರು. ಇನ್ನು ಇವರಿಗೆ ಸಾಥ್‌ ನೀಡಿದ ಪ್ರವೀಣ್‌ ದುಬೆ ಅವರು 2.2 ಓವರ್‌ಗಳಿಗೆ ಕೇವಲ 12 ರನ್‌ ನೀಡಿ ಮೂರು ವಿಕೆಟ್‌ ಕಿತ್ತರು. ಶುಭಾಂಗ್‌ ಹೆಗ್ಡೆ ಹಾಗೂ ವೈಶಾಖ್‌ವಿಜಯ್‌ ಕುಮಾರ್‌ ತಲಾ ಎರಡೆರಡು ವಿಕೆಟ್‌ ಪಡೆದರು.



245 ರನ್‌ ಕಲೆ ಹಾಕಿದ ಕರ್ನಾಟಕ

ಇದಕ್ಕೂ ಮುನ್ನ ಟಾಸ್‌ ಸೋತು ಮೊದಲು ಬ್ಯಾಟ್‌ ಮಾಡುವಂತಾಗಿದ್ದ ಕರ್ನಾಟಕ ತಂಡದ ಅಗ್ರ ಕ್ರಮಾಂಕದ ಬ್ಯಾಟ್ಸ್‌ಮನ್‌ಗಳು ಅದ್ಭುತ ಪ್ರದರ್ಶನವನ್ನು ತೋರಿದರು. ಶರತ್‌ ಬಿಆರ್‌ ಅರ್ಧಶತಕ ಹಾಗೂ ದೇವದತ್‌ ಪಡಿಕ್ಕಲ್‌ ಅವರ ಶತಕದ ಬಲದಿಂದ ಕರ್ನಾಟಕ ತಂಡ, ತನ್ನ ಪಾಲಿನ 20 ಓವರ್‌ಗಳಿಗೆ 3 ವಿಕೆಟ್‌ಗಳ ನಷ್ಟಕ್ಕೆ 245 ರನ್‌ಗಳನ್ನು ಕಲೆ ಹಾಕಿತ್ತು. ಆ ಮೂಲಕ ಎದುರಾಳಿ ತಮಿಳುನಾಡು ತಂಡಕ್ಕೆ 246 ರನ್‌ಗಳ ಬೃಹತ್‌ ಮೊತ್ತದ ಗುರಿಯನ್ನು ನೀಡಿತು.

ಲೆಜೆಂಡ್ಸ್ ಪ್ರೊ ಟಿ20 ಲೀಗ್‌ ಆಡುವ ಬಗ್ಗೆ ಖಚಿತಪಡಿಸಿದ ದಿನೇಶ್ ಕಾರ್ತಿಕ್, ಶಾನ್ ಮಾರ್ಷ್‌!

ಕರ್ನಾಟಕ ಪರ ಇನಿಂಗ್ಸ್‌ ಆರಂಭಿಸಿದ ಬಿಆರ್‌ ಶರತ್‌, 23 ಎಸೆತಗಳಲ್ಲಿ 4 ಸಿಕ್ಸರ್‌ ಹಾಗೂ 4 ಬೌಂಡರಿಗಳೊಂದಿಗೆ 53 ರನ್‌ಗಳನ್ನು ಸಿಡಿಸಿದರು. ಅಲ್ಲದೆ ಮುರಿಯದ ಮೊದಲನೇ ವಿಕೆಟ್‌ಗೆ ಮಯಾಂಕ್‌ ಅಗರ್ವಾಲ್‌ (24) ಅವರೊಂದಿಗೆ 69 ರನ್‌ಗಳನ್ನು ಕಲೆ ಹಾಕಿತು. ಆ ಮೂಲಕ ಕರ್ನಾಟಕ ತಂಡಕ್ಕೆ ಭರ್ಜರಿ ಆರಂಭವನ್ನು ತಂದುಕೊಟ್ಟ ಬಳಿಕ ಮಯಾಂಕ್‌ ಅಗರ್ವಾಲ್‌ ಮತ್ತು ಶರತ್‌ ವಿಕೆಟ್‌ ಒಪ್ಪಿಸಿದರು. ನಂತರ ಕರುಣ್‌ ನಾಯರ್‌ ಕೇವಲ 4 ರನ್‌ಗೆ ವಿಕೆಟ್‌ ಒಪ್ಪಿಸಿದರು.



ದೇವದತ್‌ ಪಡಿಕ್ಕಲ್‌ ಭರ್ಜರಿ ಶತಕ

ಮೂರನೇ ಕ್ರಮಾಂಕದಲ್ಲಿ ಕ್ರೀಸ್‌ಗೆ ಬಂದು ಸ್ಪೋಟಕ ಬ್ಯಾಟಿಂಗ್‌ ಪ್ರದರ್ಶನವನ್ನು ತೋರಿದ ದೇವದತ್‌ ಪಡಿಕ್ಕಲ್‌, 221.74ರ ಸ್ಟ್ರೈಕ್‌ ರೇಟ್‌ನಲ್ಲಿ 46 ಎಸೆತಗಳಲ್ಲಿ 6 ಸಿಕ್ಸರ್‌ ಹಾಗೂ 10 ಬೌಂಡರಿಗಳೊಂದಿಗೆ 102 ರನ್‌ಗಳನ್ನು ಬಾರಿಸಿದರು. ಅಲ್ಲದೆ 29 ಎಸೆತಗಳಲ್ಲಿ 46 ರನ್‌ ಬಾರಿಸಿದ ಸ್ಮರಣ್‌ ರವಿಚಂದ್ರನ್‌ ಅವರ ಜೊತೆ 115 ರನ್‌ಗಳ ಜೊತೆಯಾಟವನ್ನು ಆಡಿದರು. ಆ ಮೂಲಕ ತಂಡದ ಮೊತ್ತವನ್ನು 245 ರನ್‌ಗಳಿಗೆ ತಲುಪಿಸುವಲ್ಲಿ ಪ್ರಮುಖ ಪಾತ್ರವನ್ನು ವಹಿಸಿದರು.