SMAT 2025: 47 ಎಸೆತಗಳಲ್ಲಿ ಚೊಚ್ಚಲ ಟಿ20 ಶತಕ ಸಿಡಿಸಿದ ಸರ್ಫರಾಝ್ ಖಾನ್!
ಮುಂಬೈ ಬ್ಯಾಟ್ಸ್‌ಮನ್ ಸರ್ಫರಾಝ್ ಖಾನ್ ಸೈಯದ್ ಮುಷ್ತಾಕ್ ಅಲಿ ಟ್ರೋಫಿ ಟೂರ್ನಿಯಲ್ಲಿ ಅಸ್ಸಾಂ ವಿರುದ್ಧ ತಮ್ಮ ಮೊದಲ ಟಿ20 ಶತಕವನ್ನು ಸಿಡಿಸಿದರು. 47 ಎಸೆತಗಳಲ್ಲಿ ಅವರ ಅಬ್ಬರದ 100 ರನ್ ಮುಂಬೈ ತಂಡವನ್ನು 220 ರನ್‌ಗಳಿಗೆ ತಲುಪಲು ಸಹಾಯ ಮಾಡಿತು. ಇವರ ಈ ಇನಿಂಗ್ಸ್ 2026ರ ಐಪಿಎಲ್ ಆಟಗಾರರ ಮಿನಿ ಹರಾಜಿಗೆ ಮುಂಚಿತವಾಗಿ ಫ್ರಾಂಚೈಸಿಗಳ ಗಮನ ಸೆಳೆಯಬಹುದು.
ಅಸ್ಸಾಂ ವಿರುದ್ಧ ಸ್ಪೋಟಕ ಶತಕ ಬಾರಿಸಿದ ಸರ್ಫರಾಝ್ ಖಾನ್. -
ನವದೆಹಲಿ: ಮುಂಬೈನ ಸ್ಟಾರ್ ಬ್ಯಾಟ್ಸ್‌ಮನ್ ಸರ್ಫರಾಝ್ ಖಾನ್ (Sarfaraz Khan) 2025ರ ಸೈಯದ್ ಮುಷ್ತಾಕ್ ಅಲಿ ಟ್ರೋಫಿ (SMAT) ಟೂರ್ನಿಯಲ್ಲಿ ಅಸ್ಸಾಂ ವಿರುದ್ಧ (Mumbai vs Assam) ತಮ್ಮ ಟಿ20 ವೃತ್ತಿಜೀವನದ ಮೊದಲ ಶತಕವನ್ನು ಗಳಿಸುವ ಮೂಲಕ ಅದ್ಭುತವಾಗಿ ಕಮ್‌ಬ್ಯಾಕ್ ಮಾಡಿದ್ದಾರೆ. 28ನೇ ವಯಸ್ಸಿನ ಅವರು ಲಖನೌದ ಏಕಾನಾ ಕ್ರಿಕೆಟ್ ಕ್ರೀಡಾಂಗಣದಲ್ಲಿ ಕೇವಲ 47 ಎಸೆತಗಳಲ್ಲಿ ಈ ಸಾಧನೆ ಮಾಡಿದ್ದಾರೆ. ಸರ್ಫರಾಝ್ ಖಾನ್ ಅವರ ಸ್ಫೋಟಕ ಇನಿಂಗ್ಸ್‌ನ ನೆರವಿನಿಂದ ಮುಂಬೈ ತಂಡ, ತನ್ನ ಪಾಲಿನ 20 ಓವರ್‌ಗಳಿಗೆ 4 ವಿಕೆಟ್ ನಷ್ಟಕ್ಕೆ 220 ರನ್‌ಗಳ ಬೃಹತ್ ಮೊತ್ತವನ್ನು ಕಲೆ ಹಾಕಿತು.
ಮೂರನೇ ಸ್ಥಾನದಲ್ಲಿ ಆಡಿದ ಸರ್ಫರಾಝ್ ಖಾನ್ 47 ಎಸೆತಗಳಲ್ಲಿ ಎಂಟು ಬೌಂಡರಿಗಳು ಮತ್ತು ಏಳು ಭರ್ಜರಿ ಸಿಕ್ಸರ್‌ಗಳೊಂದಿಗೆ ಅಜೇಯ 100 ರನ್ ಗಳಿಸಿದರು. ಅವರು ಅಜಿಂಕ್ಯ ರಹಾನೆ ಮತ್ತು ಭಾರತ ತಂಡದ ನಾಯಕ ಸೂರ್ಯಕುಮಾರ್ ಯಾದವ್ ಅವರೊಂದಿಗೆ ಅರ್ಧಶತಕದ ಪಾಲುದಾರಿಕೆಯನ್ನು ಹಂಚಿಕೊಂಡರು. ಎರಡು ವರ್ಷಗಳಿಗೂ ಹೆಚ್ಚು ಕಾಲದ ನಂತರ ಟಿ20 ಪಂದ್ಯವನ್ನು ಆಡುತ್ತಿರುವ ಸರ್ಫರಾಝ್ ಖಾನ್‌ಗೆ ಈ ಪಂದ್ಯ ಅತ್ಯಂತ ವಿಶೇಷವಾಗಿತ್ತು. ಇದು ಅವರ ಟಿ20 ವೃತ್ತಿಜೀವನದಲ್ಲಿ ಅವರ ನಾಲ್ಕನೇ 50+ ಸ್ಕೋರ್ ಆಗಿದೆ. ಅವರ ಹಿಂದಿನ ಅತ್ಯುತ್ತಮ ಸ್ಕೋರ್ 67 ಆಗಿತ್ತು.
ಲೆಜೆಂಡ್ಸ್ ಪ್ರೊ ಟಿ20 ಲೀಗ್ ಆಡುವ ಬಗ್ಗೆ ಖಚಿತಪಡಿಸಿದ ದಿನೇಶ್ ಕಾರ್ತಿಕ್, ಶಾನ್ ಮಾರ್ಷ್!
2025ರ ಐಪಿಎಲ್ ಮಿನಿ ಹರಾಜಿನಲ್ಲಿ ಸರ್ಫರಾಝ್ ಖಾನ್ ಅವರನ್ನು ಯಾವುದೇ ತಂಡ ಖರೀದಿಸದಿದ್ದರೂ, ಅವರು 2026ರ ಹರಾಜಿಗೆ ತಮ್ಮ ಹೆಸರನ್ನು ನೋಂದಾಯಿಸಿಕೊಂಡಿದ್ದಾರೆ. ಅಸ್ಸಾಂ ವಿರುದ್ಧದ ಈ ಶತಕವು ಅವರ ದೀರ್ಘ ಕಾಯುವಿಕೆ ಮತ್ತು ಕಠಿಣ ಪರಿಶ್ರಮದ ಫಲಿತಾಂಶವಾಗಿದೆ, ಯಾವುದೇ ಸ್ವರೂಪದಲ್ಲಿ ರನ್ ಗಳಿಸುವ ಅವರ ಸಾಮರ್ಥ್ಯವನ್ನು ಪ್ರದರ್ಶಿಸಿದೆ.
2026ರ ಐಪಿಎಲ್ ಹರಾಜಿಗೆ ಸ್ವಲ್ಪ ಮುನ್ನ ಅವರ ಸ್ಫೋಟಕ ಬ್ಯಾಟಿಂಗ್ ಖಂಡಿತವಾಗಿಯೂ ಅವರನ್ನು ಫ್ರಾಂಚೈಸಿಗಳ ಗಮನಕ್ಕೆ ತರಬಹುದು ಮತ್ತು ಐಪಿಎಲ್‌ಗೆ ಮರಳಲು ಬಾಗಿಲು ತೆರೆಯಬಹುದು. ಸರ್ಫರಾಝ್ ಈ ಹಿಂದೆ ಐಪಿಎಲ್‌ನಲ್ಲಿ ಅದ್ಭುತ ಇನಿಂಗ್ಸ್ ಆಡಿದ್ದರು. ಅವರು ಈ ಹಿಂದೆ ಆರ್‌ಸಿಬಿಯಂತಹ ತಂಡಗಳ ಪರ ಆಡಿದ್ದಾರೆ. ಈ ಐಪಿಎಲ್ ಋತುವಿನಲ್ಲಿ ತಂಡಗಳು ಖಂಡಿತವಾಗಿಯೂ ಅವರನ್ನು ತಮ್ಮ ತಂಡಗಳಲ್ಲಿ ಸೇರಿಸಿಕೊಳ್ಳಲು ಬಯಸುತ್ತವೆ.
'ಗೌತಮ್ ಗಂಭೀರ್ ಕೋಚಿಂಗ್ ಬಗ್ಗೆ ದೊಡ್ಡ ಹೇಳಿಕೆ ಕೊಟ್ಟ ರಹಮಾನುಲ್ಲಾ ಗುರ್ಬಾಝ್!
ಮುಂಬೈ ತಂಡಕ್ಕೆ 98 ರನ್ ಜಯ
ಮುಂಬೈ ನೀಡಿದ್ದ 221 ರನ್‌ಗಳ ಗುರಿಯನ್ನು ಹಿಂಬಾಲಿಸಿದ ಅಸ್ಸಾಂ ತಂಡ, ಶಾರ್ದುಲ್ ಠಾಕೂರ್ ಮಾರಕ ಬೌಲಿಂಗ್ ದಾಳಿಗೆ ನಲುಗಿ 19.1 ಓವರ್‌ಗಳಿಗೆ 122 ರನ್‌ಗಳಿಗೆ ಆಲ್‌ಔಟ್ ಆಯಿತು. ಆ ಮೂಲಕ 98 ರನ್‌ಗಳ ಹೀನಾಯ ಸೋಲು ಅನುಭವಿಸಿತು. ಮುಂಬೈ ಪರ ಮಾರಕ ಬೌಲಿಂಗ್ ದಾಳಿ ನಡೆಸಿದ ಶಾರ್ದುಲ್, ತಮ್ಮ ಮೂರು ಓವರ್‌ಗಳ ಸ್ಪೆಲ್‌ನಲ್ಲಿ 23 ರನ್ ನೀಡಿ 5 ವಿಕೆಟ್‌ಗಳ ಸಾಧನೆ ಮಾಡಿದ್ದಾರೆ. ಇವರಿಗೆ ಸಾಥ್ ನೀಡಿದ ಸಾಯಿರಾಜ್ ಪಾಟೀಲ್ ಹಾಗೂ ಅಂಕೋಲೇಲರ್ ತಲಾ ಎರಡೆರಡು ವಿಕೆಟ್‌ಗಳನ್ನು ಕಬಳಿಸಿದರು. ಆದರೆ, ಈ ಪಂದ್ಯದಲ್ಲಿ ಭರ್ಜರಿ ಶತಕ ಬಾರಿಸಿದ ಸರ್ಫರಾಝ್ ಖಾನ್ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.