ಪ್ರೀತಿ ಜಿಂಟಾ ಜೊತೆ ಡೇಟಿಂಗ್ ಊಹಾಪೋಹಗಳಿಗೆ ಸ್ಪಷ್ಟನೆ ನೀಡಿದ ಬ್ರೆಟ್ ಲೀ!
Brett Lee Preity Zinta Dating Rumours: ಬಾಲಿವುಡ್ ನಟಿ ಹಾಗೂ ಪಂಜಾಬ್ ಕಿಂಗ್ಸ್ ಓನರ್ ಪ್ರೀತಿ ಜಿಂಟಾ ಅವರೊಂದಿಗಿನ ಡೇಟಿಂಗ್ ಊಹಾಪೋಹಗಳ ಬಗ್ಗೆ ಆಸ್ಟ್ರೇಲಿಯಾ ಮಾಜಿ ವೇಗಿ ಬ್ರೆಟ್ ಲೀ ಪ್ರತಿಕ್ರಿಯೆ ನೀಡಿದ್ದಾರೆ. ನಾವಿಬ್ಬರೂ ಎಂದಿಗೂ ಡೇಟ್ ಮಾಡಿಲ್ಲ ಹಾಗೂ ನಾವು ಈಗಲೂ ಒಳ್ಳೆಯ ಸ್ನೇಹಿತರು ಎಂದು ಹೇಳಿದ್ದಾರೆ.
ಪ್ರೀತಿ ಜಿಂಟಾ ಜೊತೆ ಡೇಟಿಂಗ್ ಊಹಾಪೋಹಗಳಿಗೆ ಸ್ಪಷ್ಟನೆ ನೀಡಿದ ಬ್ರೆಟ್ ಲೀ. -
ನವದೆಹಲಿ: ಬಾಲಿವುಡ್ ನಟಿ ಹಾಗೂ ಪಂಜಾಬ್ ಕಿಂಗ್ಸ್ ಓನರ್ ಪ್ರೀತಿ ಜಿಂಟಾ ಅವರೊಂದಿಗೆ ಡೇಟಿಂಗ್ ನಡೆಸುತ್ತಿದ್ದಾರೆಂಬ ಹಲವು ವರ್ಷಗಳ ವದಂತಿಗಳಿಗೆ ಆಸ್ಟ್ರೇಲಿಯಾದ ದಿಗ್ಗಜ ವೇಗಿ ಬ್ರೆಟ್ ಲೀ ಕೊನೆಗೂ ಸ್ಪಷ್ಟನೆ ನೀಡಿದ್ದಾರೆ. ಇಂಡಿಯನ್ ಪ್ರೀಮಿಯರ್ ಲೀಗ್ (IPL 2028) ಆರಂಭವಾದ 2008ರಲ್ಲಿ ಪ್ರೀತಿ ಜಿಂಟಾ ಸಹ-ಮಾಲೀಕತ್ವದ ಕಿಂಗ್ಸ್ ಇಲೆವನ್ ಪಂಜಾಬ್ (ಈಗಿನ ಪಂಜಾಬ್ ಕಿಂಗ್ಸ್) ತಂಡವನ್ನು ಸೇರಿದ್ದ ಬ್ರೆಟ್ ಲೀ, 2010ರವರೆಗೆ ಆ ತಂಡದ ಪರ ಆಡಿದ್ದರು. ಬಳಿಕ 2011ರಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ತಂಡಕ್ಕೆ ಸೇರಿದ್ದರು.
ಈ ಅವಧಿಯಲ್ಲಿ ಬ್ರೆಟ್ ಲೀ ಮತ್ತು ಪ್ರೀತಿ ಜಿಂಟಾ ನಡುವೆ ಪ್ರೇಮ ಸಂಬಂಧವಿದೆ ಎಂಬ ಊಹಾಪೋಹಗಳು ಹಲವು ಬಾರಿ ಹರಿದಾಡಿದ್ದರೂ, ಲೀ ಈ ಬಗ್ಗೆ ಎಂದಿಗೂ ಪ್ರತಿಕ್ರಿಯಿಸಿರಲಿಲ್ಲ. ಇದೀಗ ಬಾಂಬೆ ಟೈಮ್ಸ್‌ಗೆ ನೀಡಿದ ಸಂದರ್ಶನದಲ್ಲಿ ಅವರು ಮೊದಲ ಬಾರಿ ಈ ವಿಚಾರದ ಬಗ್ಗೆ ಮಾತನಾಡಿದ್ದಾರೆ.
"ಒಂದು ವಿಷಯ ಸ್ಪಷ್ಟವಾಗಿ ಹೇಳುತ್ತೇನೆ. ನಾನು ಯಾವತ್ತೂ ಯಾವುದೇ ಬಾಲಿವುಡ್ ನಟಿಯೊಂದಿಗೆ ಡೇಟಿಂಗ್ ನಡೆಸಿಲ್ಲ. ಪ್ರೀತಿ ಜಿಂಟಾ ಮತ್ತು ನಾನು ಆಗಲೂ ಒಳ್ಳೆಯ ಸ್ನೇಹಿತರಾಗಿದ್ದೆವು, ಈಗಲೂ ಹಾಗೆಯೇ ಇದ್ದೇವೆ. ಆಗ ಅವರು ಪಂಜಾಬ್ ತಂಡದ ಮಾಲೀಕರಾಗಿದ್ದರು. ಅವರು ಅತ್ಯಂತ ಬುದ್ಧಿವಂತ ಮಹಿಳೆ. ಅವರ ಬಗ್ಗೆ ನನಗೆ ಅಪಾರ ಗೌರವವಿದೆ," ಎಂದು ಬ್ರೆಟ್ ಲೀ ಹೇಳಿದ್ದಾರೆ.
"ಇಂತಹ ವದಂತಿಗಳು ನನಗೆ ಎಂದಿಗೂ ತೊಂದರೆ ನೀಡಲಿಲ್ಲ. ಏಕೆಂದರೆ ಸತ್ಯ ಏನು ಎಂಬುದು ನನಗೆ ಗೊತ್ತಿತ್ತು. ಜನರು ಏನು ಬೇಕಾದರೂ ಊಹಿಸಬಹುದು. ಆದರೆ ಅದು ನನ್ನ ಮೇಲೆ ಯಾವುದೇ ಪರಿಣಾಮ ಬೀರಲು ನಾನು ಅವಕಾಶ ನೀಡಲಿಲ್ಲ," ಎಂದು ಅವರು ತಿಳಿಸಿದ್ದಾರೆ.
ಈ ವದಂತಿಗಳ ಬಗ್ಗೆ ಬ್ರೆಟ್ ಲೀ ಸುಮಾರು ಎರಡು ದಶಕಗಳ ಕಾಲ ಮೌನವಾಗಿದ್ದರೆ, ಪ್ರೀತಿ ಜಿಂಟಾ 2010ರಲ್ಲೇ ಪ್ರತಿಕ್ರಿಯಿಸಿದ್ದರು. "ಪ್ರತಿ ವರ್ಷ ಬ್ರೆಟ್ ಲೀ ಜೊತೆ ನನ್ನ ಹೆಸರನ್ನು ಜೋಡಿಸುವುದು ಈಗ ಹಳೆಯ ಸುದ್ದಿ. ಆದ್ದರಿಂದ ಎಲ್ಲರಿಗೂ ಹೇಳುತ್ತೇನೆ, ಇಲ್ಲಿ ಯಾವುದೇ ಪ್ರೇಮಕಥೆ ಇಲ್ಲ. ನಾವು ಕೇವಲ ಸ್ನೇಹಿತರು," ಎಂದು ಅವರು ಬ್ರೆಟ್ ಲೀ ಸ್ಟಷ್ಟನೆ ನೀಡಿದ್ದಾರೆ.
ಬಿಸಿಸಿಐ ಮುಖ್ಯ ಆಯ್ಕೆದಾರ ಸ್ಥಾನದಿಂದ ಅಜಿತ್ ಅಗರ್ಕರ್‌ಗೆ ಕೊಕ್?
ವೈಯಕ್ತಿಕ ಜೀವನದ ವಿಚಾರದಲ್ಲಿ ಬ್ರೆಟ್ ಲೀ 2006ರಲ್ಲಿ ಎಲಿಜಬೆತ್ ಕೆಂಪ್ ಅವರನ್ನು ವಿವಾಹವಾಗಿದ್ದು, ಅವರಿಗೆ ಒಬ್ಬ ಪುತ್ರನಿದ್ದಾನೆ. ಆದರೆ ವಿವಾಹದ ಕೆಲವೇ ವರ್ಷಗಳಲ್ಲಿ ಇಬ್ಬರೂ ದೂರವಾಗಿದ್ದು, 2009ರಲ್ಲಿ ವಿಚ್ಛೇದನ ಪಡೆದಿದ್ದರು. ಬಳಿಕ 2014ರಲ್ಲಿ ಲಾನಾ ಆಂಡರ್ಸನ್ ಅವರನ್ನು ಮದುವೆಯಾದ ಬ್ರೆಟ್ ಲೀಗೆ ಇಬ್ಬರು ಮಕ್ಕಳಿದ್ದಾರೆ.
ಇತ್ತ ಪ್ರೀತಿ ಜಿಂಟಾ ಕಳೆದ ಕೆಲವು ವರ್ಷಗಳಿಂದ ಬಾಲಿವುಡ್‌ನಲ್ಲಿ ಹೆಚ್ಚು ಸಕ್ರಿಯರಾಗಿರದಿದ್ದರೂ, ಸನ್ನಿ ಡಿಯೋಲ್ ಅಭಿನಯದ 'ಬಟ್ವಾರಾ 1947' ಚಿತ್ರದ ಚಿತ್ರೀಕರಣದಲ್ಲಿ ತೊಡಗಿದ್ದಾರೆ. ಈ ಚಿತ್ರ ಆಗಸ್ಟ್ 14ರಂದು ಬಿಡುಗಡೆಯಾಗಲಿದೆ. ಕ್ರೀಡಾ ಕ್ಷೇತ್ರದಲ್ಲಿ ಪ್ರೀತಿ ಜಿಂಟಾ ಈಗಲೂ ಐಪಿಎಲ್‌ನ ಪಂಜಾಬ್ ಕಿಂಗ್ಸ್ ತಂಡದ ಸಹ-ಮಾಲೀಕರಾಗಿದ್ದು, ತಂಡದ ಪಂದ್ಯಗಳ ವೇಳೆ ಕ್ರೀಡಾಂಗಣದಲ್ಲಿ ಕಾಣಿಸಿಕೊಳ್ಳುತ್ತಾರೆ.