IND vs AUS: ಆಸ್ಟ್ರೇಲಿಯಾ ಎದುರು ಎರಡನೇ ಪಂದ್ಯದಲ್ಲಿಯೂ ಸೋತು ಒಡಿಐ ಸರಣಿ ಕಳೆದುಕೊಂಡ ಭಾರತ!
IND vs AUS 2nd ODI Highlights: ರೋಹಿತ್ ಶರ್ಮಾ ಹಾಗೂ ಶ್ರೇಯಸ್ ಅಯ್ಯರ್ ಅರ್ಧಶತಕಗಳ ಹೊರತಾಗಿಯೂ ಭಾರತ ತಂಡ ಎರಡನೇ ಏಕದಿನ ಪಂದ್ಯದಲ್ಲಿ ಆಸ್ಟ್ರೇಲಿಯಾ ಎದುರು 2 ವಿಕೆಟ್‌ಗಳಿಂದ ಸೋಲು ಅನುಭವಿಸಿತು. ಆ ಮೂಲಕ ಟೀಮ್ ಇಂಡಿಯಾ ಏಕದಿನ ಸರಣಿಯನ್ನು ಇನ್ನೂ ಒಂದು ಪಂದ್ಯ ಬಾಕಿ ಇರುವಾಗಲೇ 0-2 ಅಂತರದಲ್ಲಿ ಕಳೆದುಕೊಂಡಿತು.

ಆಸ್ಟ್ರೇಲಿಯಾ ಎದುರು ಎರಡನೇ ಏಕದಿನ ಪಂದ್ಯದಲ್ಲಿಯೂ ಸೋತ ಭಾರತ. -

ಅಡಿಲೇಡ್: ರೋಹಿತ್ ಶರ್ಮಾ (Rohit Sharma) ಹಾಗೂ ಶ್ರೇಯಸ್ ಅಯ್ಯರ್ (Shreyas Iyer) ಅವರ ಅರ್ಧಶತಕಗಳ ಹೊರತಾಗಿಯೂ ಇನ್ನುಳಿದ ಬ್ಯಾಟ್ಸ್‌ಮನ್‌ಗಳ ವೈಫಲ್ಯದಿಂದ ಭಾರತ ತಂಡ, ಎರಡನೇ ಏಕದಿನ ಪಂದ್ಯದಲ್ಲಿಯೂ (IND vs AUS) 2 ವಿಕೆಟ್‌ಗಳಿಂದ ಸೋಲು ಅನುಭವಿಸಿತು. ಆ ಮೂಲಕ ಇನ್ನೂ ಒಂದು ಪಂದ್ಯ ಬಾಕಿ ಇರುವಾಗಲೇ ಟೀಮ್ ಇಂಡಿಯಾ ಒಡಿಐ ಸರಣಿಯನ್ನು 0-2 ಅಂತರದಲ್ಲಿ ಕಳೆದುಕೊಂಡಿತು. ಮ್ಯಾಥ್ಯೂ ಶಾರ್ಟ್ ಹಾಗೂ ಕೂಪರ್ ಕಾನೋಲಿ ಅವರ ನಿರ್ಣಾಯಕ ಅರ್ಧಶತಕಗಳ ಮೂಲಕ ಆಸ್ಟ್ರೇಲಿಯಾ ತವರು ಅಭಿಮಾನಿಗಳ ಎದುರು ಏಕದಿನ ಸರಣಿಯನ್ನು ವಶಪಡಿಸಿಕೊಂಡು ಪ್ರಾಬಲ್ಯ ಮೆರೆಯಿತು.
ಗುರುವಾರ ಇಲ್ಲಿನ ಅಡಿಲೇಡ್ ಓವಲ್ ಕ್ರೀಡಾಂಗಣದಲ್ಲಿ ನಡೆದಿದ್ದ ಎರಡನೇ ಏಕದಿನ ಪಂದ್ಯದಲ್ಲಿ ಭಾರತ ನೀಡಿದ್ದ 265 ರನ್‌ಗಳ ಗುರಿಯನ್ನು ಹಿಂಬಾಲಿಸಿದ ಆಸ್ಟ್ರೇಲಿಯಾ ತಂಡ, 54 ರನ್‌ಗಳಿಗೆ ಎರಡು ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. ಆದರೆ, ಮಧ್ಯಮ ಕ್ರಮಾಂಕದಲ್ಲಿ ಮ್ಯಾಥ್ಯೂ ಶಾರ್ಟ್ (74 ರನ್) ಹಾಗೂ ಕೂಪರ್ ಕಾನೋಲಿ (61 ರನ್) ಅವರ ಅರ್ಧಶತಕಗಳ ಬಲದಿಂದ ಆಸ್ಟ್ರೇಲಿಯಾ, 46.2 ಓವರ್‌ಗಳಿಗೆ 8 ವಿಕೆಟ್ ನಷ್ಟಕ್ಕೆ 265 ರನ್ ಗಳಿಸಿ ಎರಡು ವಿಕೆಟ್ ಗೆಲುವು ತನ್ನದಾಗಿಸಿಕೊಂಡಿತು. ಮ್ಯಾಟ್ ರೆನ್‌ಶಾ (30) ಹಾಗೂ ಮಿಚೆಲ್ ಒವೆನ್ (36) ಅವರು ಕೂಡ ಬ್ಯಾಟಿಂಗ್‌ನಲ್ಲಿ ಉಪಯುಕ್ತ ಕೊಡುಗೆಯನ್ನು ನೀಡಿದ್ದರು.
Virat Kohli: ದುಃಖದಿಂದ ತಲೆ ತಗ್ಗಿಸಿ, ಕೈಗವಸು ಮೇಲಕ್ಕೆತ್ತಿದ ವಿರಾಟ್ ಕೊಹ್ಲಿ; ಇದು ನಿವೃತ್ತಿ ಸುಳಿವೇ?
ಈ ಪಂದ್ಯದಲ್ಲಿಯೂ ಟಾಸ್ ಸೋತು ಮೊದಲು ಬ್ಯಾಟ್ ಮಾಡುವಂತಾಗಿದ್ದ ಭಾರತ ತಂಡಕ್ಕೆ ಹೊಸ ಚೆಂಡಿನಲ್ಲಿ ಬ್ಯಾಟಿಂಗ್ ನಡೆಸಲು ಕಷ್ಟವಾಗಿತ್ತು. ಆದರೆ, ಆಸ್ಟ್ರೇಲಿಯಾ ತಂಡಕ್ಕೆ ತವರು ಪಿಚ್ ನೆರವು ನೀಡಿತ್ತು. ಆಸ್ಟ್ರೇಲಿಯಾ ಪರ ನಾಯಕ ಮಿಚೆಲ್ ಮಾರ್ಷ್ (11) ಹಾಗೂ ಅಲೆಕ್ಸ್ ಕೇರಿ (9) ಅವರನ್ನು ಹೊರತುಪಡಿಸಿ ಇನ್ನುಳಿದ ಬ್ಯಾಟ್ಸ್‌ಮನ್‌ಗಳು ಸಫಲರಾದರು. ಟ್ರಾವಿಸ್ ಹೆಡ್ 28 ರನ್ ಗಳಿಸಿ ವಿಕೆಟ್ ಒಪ್ಪಿಸಿದರು.
ಶಾರ್ಟ್-ಕಾನೋಲಿ ಅರ್ಧಶತಕ
ಮ್ಯಾಥ್ಯೂ ಶಾರ್ಟ್ ಹಾಗೂ ಕೂಪರ್ ಕಾನೋಲಿ ಅತ್ಯುತ್ತಮ ಬ್ಯಾಟಿಂಗ್ ಪ್ರದರ್ಶನವನ್ನು ತೋರಿ ಅರ್ಧಶತಕಗಳನ್ನು ಪೂರ್ಣಗೊಳಿಸಿದರು. ಮ್ಯಾಥ್ಯೂ ಶಾರ್ಟ್ 78 ಎಸೆತಗಳಲ್ಲಿ ಎರಡು ಸಿಕ್ಸರ್ ಹಾಗೂ ನಾಲ್ಕು ಬೌಂಡರಿಗಳೊಂದಿಗೆ 74 ರನ್ ಗಳಿಸಿದರೆ, ಕಾನೋಲಿ 53 ಎಸೆತಗಳಲ್ಲಿ ಒಂದು ಸಿಕ್ಸ್ ಹಾಗೂ ಐದು ಬೌಂಡರಿಗಳೊಂದಿಗೆ ಅಜೇಯ 61 ರನ್ ಬಾರಿಸಿ ಆಸ್ಟ್ರೇಲಿಯಾ ತಂಡವನ್ನು ಗೆಲ್ಲಿಸಿದರು. ಭಾರತ ತಂಡದ ಪರ ಹರ್ಷಿತ್ ರಾಣಾ, ವಾಷಿಂಗ್ಟನ್ ಸುಂದರ್ ಹಾಗೂ ಅರ್ಷದೀಪ್ ಸಿಂಗ್ ತಲಾ ಎರಡೆರಡು ವಿಕೆಟ್‌ಗಳನ್ನು ಕಬಳಿಸಿದರು.
#TeamIndia with a spirited performance but it’s Australia who win the 2️⃣nd ODI by 2 wickets.
— BCCI (@BCCI) October 23, 2025
They take an unassailable 2-0 lead in the series
Scorecard ▶ https://t.co/aB0YqSCClq#AUSvIND pic.twitter.com/dNjwbXIsXU
ರೋಹಿತ್ ಶರ್ಮಾ-ಶ್ರೇಯಸ್ ಅಯ್ಯರ್ ಜುಗಲ್‌ಬಂದಿ
ಇದಕ್ಕೂ ಮುನ್ನ ಟಾಸ್ ಸೋತು ಮೊದಲು ಬ್ಯಾಟ್ ಮಾಡುವಂತಾಗಿದ್ದ ಭಾರತ ತಂಡಕ್ಕೆ ಉತ್ತಮ ಆರಂಭ ಸಿಕ್ಕಿರಲಿಲ್ಲ. ಶುಭಮನ್ ಗಿಲ್ ಹಾಗೂ ರೋಹಿತ್ ಶರ್ಮಾ ಜೋಡಿಯಿಂದ ದೊಡ್ಡ ಜೊತೆಯಾಟ ಮೂಡಿಬರಲಿಲ್ಲ. ನೂತನ ನಾಯಕ ಶುಭಮನ್ ಗಿಲ್ (9) ರನ್ ಗಳಿಸಿ ವಿಕೆಟ್ ಒಪ್ಪಿಸಿದರೆ, ವಿರಾಟ್ ಕೊಹ್ಲಿ ಈ ಪಂದ್ಯದಲ್ಲಿಯೂ ಶೂನ್ಯಕ್ಕೆ ಔಟ್ ಆಗಿ ನಿರಾಶೆ ಮೂಡಿಸಿದರು. ಆದರೆ, ರೋಹಿತ್ ಶರ್ಮಾ ಮತ್ತು ಶ್ರೇಯಸ್ ಅಯ್ಯರ್ ನಡುವೆ ಮೂರನೇ ವಿಕೆಟ್‌ಗೆ 128 ರನ್‌ಗಳ ಶತಕದ ಜೊತೆಯಾಟ ಮೂಡಿ ಬಂದಿತ್ತು. ಆ ಮೂಲಕ ಆರಂಭಿಕ ಆಘಾತ ಅನುಭವಿಸಿದ್ದ ಭಾರತ ತಂಡವನ್ನು ಈ ಜೋಡಿ ಅಪಾಯದಿಂದ ಪಾರು ಮಾಡಿತ್ತು.
ಹಿಟ್‌ಮ್ಯಾನ್ ಅರ್ಧಶತಕ
ಅದ್ಭುತ ಬ್ಯಾಟಂಗ್ ಪ್ರದರ್ಶನವನ್ನು ತೋರಿದ ರೋಹಿತ್ ಶರ್ಮಾ 97 ಎಸೆತಗಳಲ್ಲಿ ಎರಡು ಸಿಕ್ಸರ್ ಹಾಗೂ 7 ಬೌಂಡರಿಗಳೊಂದಿಗೆ 73 ರನ್ ಗಳಿಸಿ ಮಿಚೆಲ್ ಸ್ಟಾರ್ಕ್‌ಗೆ ವಿಕೆಟ್ ಒಪ್ಪಿಸಿದರು. ರೋಹಿತ್ ಶರ್ಮಾ ಜೊತೆ ದೀರ್ಘಾವಧಿ ಬ್ಯಾಟ್ ಮಾಡಿದ್ದ ಶ್ರೇಯಸ್ ಅಯ್ಯರ್, 77 ಎಸೆತಗಳಲ್ಲಿ 61 ರನ್‌ಗಳನ್ನು ಕಲೆ ಹಾಕಿದರು. ನಂತರ ಆಡಂ ಝಾಂಪ ಎಸೆತವನ್ನು ಅರಿಯುವಲ್ಲಿ ವಿಫಲರಾಗಿ ಕ್ಲೀನ್ ಬೌಲ್ಡ್ ಆದರು.
FIFTY!
— BCCI (@BCCI) October 23, 2025
After early jitters, Rohit Sharma gets going, brings up a fine half-century.
His 59th in ODIs 🔥
Live - https://t.co/q4oFmXx6kr #TeamIndia #AUSvIND #2ndODI | @ImRo45 pic.twitter.com/f90bJRSBSK
264 ರನ್ ಕಲೆ ಹಾಕಿದ ಭಾರತ
ಅಕ್ಷರ್ ಪಟೇಲ್ ಕೆಲ ಕಾಲ ಬ್ಯಾಟ್ ಮಾಡಿ 44 ರನ್ ಗಳಿಸಿ ಔಟ್ ಆದರು. ಆದರೆ, ಇನ್ನುಳಿದಂತೆ ಕೆಎಲ್ ರಾಹುಲ್ (11) ಹಾಗೂ ವಾಷಿಂಗ್ಟನ್ ಸುಂದರ್ (12) ಹಾಗೂ ನಿತೀಶ್ ರೆಡ್ಡಿ (8) ಅವರು ವಿಫಲರಾದರು. ಅಂತಿಮವಾಗಿ ಭಾರತ ತನ್ನ ಪಾಲಿನ 50 ಓವರ್‌ಗಳಿಗೆ 9 ವಿಕೆಟ್‌ಗಳ ನಷ್ಟಕ್ಕೆ 264 ರನ್‌ಗಳನ್ನು ಕಲೆ ಹಾಕಿತು. ಭಾರತದ ಪರ ಕೊನೆಯಲ್ಲಿ ಹರ್ಷಿತ್ ರಾಣಾ (24) ಹಾಗೂ ಅರ್ಷದೀಪ್ ಸಿಂಗ್ (13) ಉಪಯುಕ್ತ ಕಾಣಿಕೆ ನೀಡಿದ್ದರು. ಆಸೀಸ್ ಪರ ಆಡಂ ಝಾಂಫ 4 ವಿಕೆಟ್ ಕಿತ್ತರೆ, ಕ್ಸಿವಿಯರ್ ಬಾನೆಟ್ 3 ವಿಕೆಟ್ ಕಬಳಿಸಿದರು.