IND vs ENG: ʻಜಸ್‌ಪ್ರೀತ್ ಬುಮ್ರಾಗೆ ವಿಶ್ರಾಂತಿ ಬೇಕಿತ್ತಾ?ʼ-ರವಿಶಾಸ್ತ್ರಿ ಟೀಕೆ!
Ravi Shastri slams selection call: ಬರ್ಮಿಂಗ್‌ಹ್ಯಾಮ್‌ನಲ್ಲಿ ಜುಲೈ 2 (ಬುಧವಾರ) ರಂದು ಆರಂಭವಾದ ಎರಡನೇ ಟೆಸ್ಟ್ ಪಂದ್ಯದಲ್ಲಿ ಭಾರತ ತಂಡದ ಪ್ಲೇಯಿಂಗ್ XIನಲ್ಲಿ ಮೂರು ಪ್ರಮುಖ ಬದಲಾವಣೆ ತರಲಾಗಿದೆ. ಯಾರ್ಕರ್ ಸ್ಪೆಷಲಿಸ್ಟ್ ಜಸ್‌ಪ್ರೀತ್ ಬುಮ್ರಾಗೆ ವಿಶ್ರಾಂತಿ ನೀಡಿರುವ ಆಯ್ಕೆ ಮಂಡಳಿ ನಿರ್ಧಾರವನ್ನು ಮಾಜಿ ಹೆಡ್ ಕೋಚ್ ರವಿಶಾಸ್ತ್ರಿ ಟೀಕಿಸಿದ್ದಾರೆ.

ಗೌತಮ್ ಗಂಭೀರ್ ವಿರುದ್ಧ ರವಿ ಶಾಸ್ತ್ರಿ ಅಸಮಾಧಾನ.

ನವದೆಹಲಿ: ಭಾರತ ತಂಡದ ಅನುಭವಿ ವೇಗಿ ಜಸ್‌ಪ್ರೀತ್ ಬುಮ್ರಾ (Jasprit Bumrah)ಗೆ ಎರಡನೇ ಟೆಸ್ಟ್ ಪಂದ್ಯದಲ್ಲಿ ವಿಶ್ರಾಂತಿ ನೀಡಿರುವ ನಾಯಕ ಶುಭಮನ್ ಗಿಲ್, ಹೆಡ್ ಕೋಚ್ ಗೌತಮ್ ಗಂಭೀರ್ ಹಾಗೂ ಆಯ್ಕೆ ಮಂಡಳಿಯ ನಿಲುವನ್ನು ಮಾಜಿ ಹೆಡ್ ಕೋಚ್ ರವಿಶಾಸ್ತ್ರಿ (Ravi Shastri) ಟೀಕಿಸಿದ್ದಾರೆ. ಲೀಡ್ಸ್‌ನ ಹೆಡಿಂಗ್ಲ್ ಟೆಸ್ಟ್ ಪಂದ್ಯದಲ್ಲಿ ಭಾರತ ತಂಡ 5 ವಿಕೆಟ್ ಸೋಲು ಅನುಭವಿಸಿದ ನಂತರ ಜಸ್‌ಪ್ರೀತ್ ಬುಮ್ರಾರನ್ನು ಎರಡನೇ ಟೆಸ್ಟ್ ಪಂದ್ಯದಲ್ಲಿ ಆಡಿಸಲಾಗುವುದು ಎಂದು ಹೆಡ್ ಕೋಚ್ ಗೌತಮ್ ಗಂಭೀರ್ ಹೇಳಿದ್ದರು. ಆದರೆ ಎಜ್‌ಬಾಸ್ಟನ್ ಟೆಸ್ಟ್‌ಗೆ ಬುಮ್ರಾಗೆ ವಿಶ್ರಾಂತಿ ನೀಡುವುದರ ಜೊತೆಗೆ ತಂಡದಲ್ಲಿ ಮೂರು ಪ್ರಮುಖ ಬದಲಾವಣೆ ಮಾಡಲಾಗಿದೆ.
ಸ್ಕೈ ಸ್ಪೋರ್ಟ್ಸ್ ಜೊತೆ ಮಾತನಾಡಿದ ಭಾರತ ತಂಡದ ಮಾಜಿ ನಾಯಕ ರವಿಶಾಸ್ತ್ರಿ, ಇಂಗ್ಲೆಂಡ್ ವಿರುದ್ಧ ನಡೆಯುತ್ತಿರುವ ಐದು ಪಂದ್ಯಗಳ ಟೆಸ್ಟ್ ಸರಣಿಯನ್ನು ಜೀವಂತವಾಗಿ ಉಳಿಸಿಕೊಳ್ಳಲು ಎರಡನೇ ಟೆಸ್ಟ್ ಮಹತ್ವ ಪಡೆದುಕೊಂಡಿರುವಾಗಲೇ ತಂಡದಲ್ಲಿರುವ ವಿಶ್ವಶ್ರೇಷ್ಠ ಬೌಲರ್‌ಗೆ ವಿಶ್ರಾಂತಿ ನೀಡಬಾರದಿತ್ತು ಎಂದು ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.
IND vs ENG: ಶುಭಮನ್ ಗಿಲ್ ಶತಕ; ಉತ್ತಮ ಸ್ಥಿತಿಯಲ್ಲಿ ಭಾರತ
ಜಸ್‌ಪ್ರೀತ್ ಬುಮ್ರಾಗೆ ವಿಶ್ರಾಂತಿ ನೀಡಬಾರದಿತ್ತು: ರವಿಶಾಸ್ತ್ರಿ
"ಇಂಗ್ಲೆಂಡ್ ವಿರುದ್ಧ ನಡೆಯುತ್ತಿರುವ ಟೆಸ್ಟ್ ಸರಣಿಯ ದೃಷ್ಟಿಯಿಂದ ಈ ಪಂದ್ಯ ಭಾರತ ತಂಡಕ್ಕೆ ತುಂಬಾ ಮುಖ್ಯವಾಗಿತ್ತು. ನ್ಯೂಜಿಲೆಂಡ್ ವಿರುದ್ಧ ನಾವು ಮೂರು ಪಂದ್ಯಗಳಲ್ಲಿ , ಆಸ್ಟ್ರೇಲಿಯಾ ವಿರುದ್ಧ ಮೂರು ಪಂದ್ಯಗಳಲ್ಲಿ ಸೋಲು ಕಂಡಿದ್ದೇವೆ. ಅಲ್ಲದೆ ಪ್ರಸಕ್ತ ಸರಣಿಯ ಮೊದಲ ಟೆಸ್ಟ್ ಪಂದ್ಯದಲ್ಲೂ ಮುಖಭಂಗ ಅನುಭವಿಸಿದ್ದೇವೆ. ಆದ್ದರಿಂದ ಈಗ ತಂಡ ಗೆಲುವಿನ ಲಯಕ್ಕೆ ಮರಳಬೇಕಾಗಿದೆ. ಅಲ್ಲದೆ ತಂಡದಲ್ಲಿ ವಿಶ್ವಶ್ರೇಷ್ಠ ಬೌಲರ್ ಕೂಡ ಇದ್ದಾರೆ. ಏಳು ದಿನಗಳ ವಿಶ್ರಾಂತಿ ನಂತರವೂ ನೀವು ಅವರಿಗೆ (ಜಸ್‌ಪ್ರೀತ್ ಬುಮ್ರಾ) ವಿಶ್ರಾಂತಿ ನೀಡಿದ್ದೀರಿ. ಅವರನ್ನು ತಂಡದಿಂದ ಹೊರಗಿಟ್ಟಿರುವುದು ನಿಜಕ್ಕೂ ನಂಬಲಾಗದ ಸಂಗತಿಯಾಗಿದೆ," ಎಂದು ಮಾಜಿ ಹೆಡ್ ಕೋಚ್ ಅಸಮಾಧಾನವನ್ನು ವ್ಯಕ್ತಪಡಿಸಿದ್ದಾರೆ.
Ravi Shastri Just Cooked Gautam Gambhir 😭.
— 𝐉𝐨𝐝 𝐈𝐧𝐬𝐚𝐧𝐞 (@jod_insane) July 2, 2025
pic.twitter.com/k9XxgmCAGH
ಜಸ್‌ಪ್ರೀತ್ ಅವರನ್ನು ಕೈಬಿಟ್ಟಿರುವುದು ಅಚ್ಚರಿ ಮೂಡಿಸಿದೆ
"ಎರಡು ಪಂದ್ಯಗಳ ನಡುವೆ ಒಂದು ವಾರ ಅಂತರವಿತ್ತು. ಹೀಗಿದ್ದರೂ ಜಸ್‌ಪ್ರೀತ್ ಬುಮ್ರಾಗೆ ವಿಶ್ರಾಂತಿ ನೀಡಿರುವುದು ನನಗೆ ಅಚ್ಚರಿ ಮೂಡಿಸಿದೆ. ಪಂದ್ಯದಲ್ಲಿ ಆಡುವುದು ಆಟಗಾರರ ಕೈಯಲ್ಲಿರುವುದಿಲ್ಲ. ಅದು ನಾಯಕ ಹಾಗೂ ತರಬೇತಿ ಸಿಬ್ಬಂದಿಯ ನಿರ್ಣಯವಾಗಿರುತ್ತದೆ. ಟೆಸ್ಟ್ ಸರಣಿಯ ದೃಷ್ಟಿಯಿಂದ ಈ ಪಂದ್ಯ ಸಾಕಷ್ಟು ಮಹತ್ವ ಪಡೆದಿದೆ. ಆದ್ದರಿಂದ ಜಸ್‌ಪ್ರೀತ್ ಬುಮ್ರಾ ಈ ಪಂದ್ಯದಲ್ಲಿ ಆಡುವುದು ನಿರ್ಣಾಯಕವಾಗಿತ್ತು. ಮುಂದಿನ ಪಂದ್ಯ ಲಾರ್ಡ್ಸ್‌ನಲ್ಲಿ ನಡೆಯಲಿದೆ. ಆದ್ದರಿಂದ ಈ ಪಂದ್ಯದಲ್ಲಿ ಇಂಗ್ಲೆಂಡ್ ವಿರುದ್ಧದ ಗೆಲುವು ಪ್ರಮುಖವಾಗಿತ್ತು," ಎಂದು ಮಾಜಿ ನಾಯಕ ತಿಳಿಸಿದ್ದಾರೆ.
IND vs ENG 2n Test: ಅರ್ಧಶತಕ ಬಾರಿಸಿ ರೋಹಿತ್ ದಾಖಲೆ ಮುರಿದ ಜೈಸ್ವಾಲ್
ನಿತೀಶ್ ಕುಮಾರ್ ರೆಡ್ಡಿಗೆ ಸ್ಥಾನ ನೀಡಬಾರದಿತ್ತು
"ಈ ಮೈದಾನದಲ್ಲಿ ನಿತೀಶ್ ಕುಮಾರ್ ರೆಡ್ಡಿಗೆ ತಂಡದಲ್ಲಿ ಸ್ಥಾನ ನೀಡಿರುವುದು ತಂಡಕ್ಕೆ ದೊಡ್ಡ ಹಿನ್ನಡೆಯಾಗಿದೆ. ಇನ್ನು ಕುಲ್ದೀಪ್ ಯಾದವ್ ಬದಲಿಗೆ ವಾಷಿಂಗ್ಟನ್ ಸುಂದರ್‌ಗೆ ಸ್ಥಾನ ಕಲ್ಪಿಸಲಾಗುತ್ತದೆ ಎಂದು ನಾನು ಮೊದಲೇ ಚಿಂತಿಸಿದ್ದೆ. ಸಾಯಿ ಸುದರ್ಶನ್ ಅವರನ್ನು ತಂಡದಿಂದ ಕೈಬಿಟ್ಟಿದ್ದು ಕೂಡ ನನ್ನಲ್ಲಿ ಅಚ್ಚರಿ ಮೂಡಿಸಿದೆ. ಏಕೆಂದರೆ ಅವರು ಟೆಸ್ಟ್‌ನಲ್ಲಿ ಉತ್ತಮ ರನ್ ಗಳಿಸಿದ್ದಾರೆ. ಅವಕಾಶಕ್ಕಾಗಿ ಕಾಯುತ್ತಿರುವ ಕುಲ್ದೀಪ್ ಯಾದವ್ ಅವರ ಕಡೆಗಣನೆಯು ಸರಿಯಾದ ಕ್ರಮವಲ್ಲ," ಎಂದು ರವಿಶಾಸ್ತ್ರಿ ದೂರಿದ್ದಾರೆ.
ಬರ್ಮಿಂಗ್‌ಹ್ಯಾಮ್‌ನಲ್ಲಿ ಇಂಗ್ಲೆಂಡ್ ವಿರುದ್ಧ ನಡೆಯುತ್ತಿರುವ ಎರಡನೇ ಟೆಸ್ಟ್ ಪಂದ್ಯದಲ್ಲಿ ಭಾರತ ತಂಡದಲ್ಲಿ ಮೂರು ಪ್ರಮುಖ ಬದಲಾವಣೆ ಮಾಡಿದ್ದು, ಜಸ್‌ಪ್ರೀತ್ ಬುಮ್ರಾ, ಸಾಯಿ ಸುದರ್ಶನ್ ಹಾಗೂ ಶಾರ್ದುಲ್ ಠಾಕೂರ್ ಬದಲಿಗೆ ಆಕಾಶ್ ದೀಪ್, ನಿತೀಶ್ ಕುಮಾರ್ ರೆಡ್ಡಿ ಹಾಗೂ ವಾಷಿಂಗ್ಟನ್ ಸುಂದರ್‌ಗೆ ಸ್ಥಾನ ಕಲ್ಪಿಸಲಾಗಿದೆ.