IND vs ENG: `ಒಂದು ಗಂಟೆಯಲ್ಲಿ 6 ವಿಕೆಟ್ ಪಡೆಯುತ್ತೇವೆ'-ಭಾರತಕ್ಕೆ ಇಂಗ್ಲೆಂಡ್ ಕೋಚ್ ವಾರ್ನಿಂಗ್!
ಲಂಡನ್‌ನ ಲಾರ್ಡ್ಸ್ ಅಂಗಣದಲ್ಲಿ ನಡೆಯುತ್ತಿರುವ ಭಾರತ ಹಾಗೂ ಇಂಗ್ಲೆಂಡ್ ತಂಡಗಳ ನಡುವಣ ಮೂರನೇ ಟೆಸ್ಟ್ ಪಂದ್ಯ ತೀವ್ರ ಕುತೂಹಲ ಘಟ್ಟ ತಲುಪಿದೆ. ಇದರ ನಡುವೆ ಭಾರತ ತಂಡಕ್ಕೆ ಇಂಗ್ಲೆಂಡ್‌ನ ಸಹಾಯಕ ಕೋಚ್ ಟ್ರೆಸ್ಕೋಥಿಕ್ ಎಚ್ಚರಿಕೆ ನೀಡಿದ್ದಾರೆ.


ಲಂಡನ್: ಇಲ್ಲಿನ ಐತಿಹಾಸಿಕ ಲಾರ್ಡ್ಸ್ ಅಂಗಣದಲ್ಲಿ ನಡೆಯುತ್ತಿರುವ ಭಾರತ ಹಾಗೂ ಇಂಗ್ಲೆಂಡ್ ನಡುವಣ ಮೂರನೇ ಟೆಸ್ಟ್ ಪಂದ್ಯ ಅತ್ಯಂತ ರೋಚಕ ಘಟ್ಟವನ್ನು ತಲುಪಿದೆ. ಇಂಗ್ಲೆಂಡ್ ನೀಡಿದ್ದ 193 ರನ್‌ಗಳ ಗುರಿಯನು ಹಿಂಬಾಲಿಸಿದ ಭಾರತ ತಂಡ, ನಾಲ್ಕನೇ ದಿನದಾಟದ ಅಂತ್ಯಕ್ಕೆ 4 ವಿಕೆಟ್ ನಷ್ಟಕ್ಕೆ 58 ರನ್ ಗಳಿಸಿದೆ. ಇದೀಗ ಐದನೇ ದಿನವಾದ ಸೋಮವಾರ ಭಾರತ ತಂಡಕ್ಕೆ ಗೆಲ್ಲಲು ಇನ್ನೂ 135 ರನ್‌ಗಳ ಅಗತ್ಯವಿದೆ. ಇನ್ನು ಇಂಗ್ಲೆಂಡ್ ತಂಡಕ್ಕೆ ಗೆಲ್ಲಲು 6 ವಿಕೆಟ್‌ಗಳ ಅಗತ್ಯವಿದೆ. ಇದರ ನಡುವೆ ಇಂಗ್ಲೆಂಡ್ ಸಹಾಯಕ ಕೋಚ್ ಮಾರ್ಕಸ್ ಟ್ರೆಸ್ಕೋಥಿಕ್ ಪ್ರವಾಸಿ ಟೀಮ್ ಇಂಡಿಯಾಗೆ ಎಚ್ಚರಿಕೆ ನೀಡಿದ್ದಾರೆ.
ಭಾನುವಾರ ಇಂಗ್ಲೆಂಡ್ ತಂಡ ದ್ವಿತೀಯ ಇನಿಂಗ್ಸ್‌ನಲ್ಲಿ 192 ರನ್ ಗಳಿಗೆ ಆಲ್‌ಔಟ್ ಆಗಿತ್ತು. ಬಳಿಕ ಗುರಿ ಹಿಂಬಾಲಿಸಿದ್ದ ಭಾರತ ತಂಡ ಬಹುಬೇಗ 4 ವಿಕೆಟ್‌ಗಳನ್ನು ಕಳೆದುಕೊಂಡಿತ್ತು. ಮೊದಲಿಗೆ ಯಶಸ್ವಿ ಜೈಸ್ವಾಲ್ ಅವರನ್ನು ಜೋಫ್ರಾ ಆರ್ಚರ್ ಔಟ್ ಮಾಡಿದ್ದರು. ನಂತರ ಮಾರಕ ಬೌಲಿಂಗ್ ನಡೆಸಿದ್ದ ಬ್ರೈಡೆನ್ ಕಾರ್ಸ್, ಕರುಣ್ ನಾಯರ್ ಹಾಗೂ ಶುಭಮನ್ ಗಿಲ್ ಅವರನ್ನು ಔಟ್ ಮಾಡಿದ್ದರು. ನಂತರ ಕೊನೆಯ ಹಂತದಲ್ಲಿ ನಾಯಕ ಬೆನ್ ಸ್ಟೋಕ್ಸ್, ನೈಟ್ ವಾಚ್‌ಮನ್ ಆಗಿ ಬಂದಿದ್ದ ಆಕಾಶ್ ದೀಪ್ ಅವರನ್ನು ಕ್ಲೀನ್ ಬೌಲ್ಡ್ ಮಾಡಿದ್ದರು. ಇದೀಗ ಐದನೇ ಭಾರತ ತಂಡಕ್ಕೆ ಇನ್ನು 6 ವಿಕೆಟ್‌ಗಳು ಬಾಕಿ ಇವೆ.
IND vs ENG: ವಾಷಿಂಗ್ಟನ್ ಸ್ಪಿನ್ ಮೋಡಿ, ಗೆಲುವಿನ ಸನಿಹದಲ್ಲಿ ಟೀಮ್ ಇಂಡಿಯಾ!
ಆದರೆ, ಭಾರತ ತಂಡದ ಪರ ಕೆಎಲ್ ರಾಹುಲ್ ಅಜೇಯ 33 ರನ್ ಗಳಿಸಿದ್ದು, ಐದನೇ ದಿನ ಬ್ಯಾಟಿಂಗ್ ಮುಂದುವರಿಸಲಿದ್ದಾರೆ. ಆ ಮೂಲಕ ರಾಹುಲ್ ಟೀಮ್ ಇಂಡಿಯಾಗೆ ಭರವಸೆ ಮೂಡಿಸಿದ್ದಾರೆ. ಈಗಾಗಲೇ ಪ್ರಥಮ ಇನಿಂಗ್ಸ್‌ನಲ್ಲಿ ಕೆಎಲ್ ರಾಹುಲ್ ಶತಕವನ್ನು ಬಾರಿಸಿದ್ದರು. ಇದೀಗ ಅದೇ ಲಯವನ್ನು ಮುಂದುವರಿಸಲು ಅವರು ಎದುರು ನೋಡುತ್ತಿದ್ದಾರೆ. ಇದರ ನಡುವೆ ಇಂಗ್ಲೆಂಡ್ ಸಹಾಯಕ ಕೋಚ್ ಟೀಮ್ ಇಂಡಿಯಾಗೆ ಎಚ್ಚರಿಕೆ ನೀಡಿದ್ದಾರೆ.
ನಾಲ್ಕನೇ ದಿನದಾಟದ ಅಂತ್ಯಕ್ಕೆ ಮಾತನಾಡಿದ ಇಂಗ್ಲೆಂಡ್ ಸಹಾಯಕ ಕೋಚ್ ಟ್ರೆಸ್ಕೋಥಿಕ್, "ಕೊನೆಯ ಗಂಟೆ ಅದ್ಭುತವಾಗಿತ್ತು. ಪ್ರತಿಯೊಬ್ಬರು ಉತ್ತಮ ಪ್ರಯತ್ನವನ್ನು ಹಾಕಿದ್ದಾರೆ ಹಾಗೂ ಪ್ರೇಕ್ಷಕರು ಕೂಡ ತಂಡದ ಹಿಂದೆ ಇದ್ದಾರೆ. ಅಂಗಣದಲ್ಲಿನ ಬೆಂಬಲ ಹಾಗೂ ವಾತಾವರಣ ಆಟಗಾರರ ವಿಶ್ವಾಸವನ್ನು ಹೆಚ್ಚಿಸಿದೆ. ಇದು ನಾಳೆಯ ಮೊದಲ ಗಂಟೆಯ ಸುತ್ತ ಸುತ್ತುತ್ತದೆ. ಭಾರತ ಎಷ್ಟು ಸಕಾರಾತ್ಮಕವಾಗಿದೆ, ಭಾರತ ಎಷ್ಟು ಪ್ರಬಲವಾಗಿರುತ್ತದೆ ಎಂದು ನೋಡಬೇಕಾಗಿದೆ. ನಾಳೆ ಮೊದಲ ಗಂಟೆಯಲ್ಲಿ ನಾವು ಆರು ವಿಕೆಟ್‌ಗಳನ್ನು ಪಡೆಯುತ್ತೇವೆ ಎಂದು ಆಶಿಸುತ್ತೇವೆ," ಎಂದು ಟ್ರೆಸ್ಕೋಥಿಕ್ ಎಚ್ಚರಿಕೆ ನೀಡಿದ್ದಾರೆ.
IND vs ENG: ಎರಡು ವಿಕೆಟ್ ಕಿತ್ತು ಅನಿಲ್ ಕುಂಬ್ಳೆ ದಾಖಲೆ ಮುರಿದ ಜಸ್‌ಪ್ರೀತ್ ಬುಮ್ರಾ!
ಮುನ್ನಡೆ ಸಾಧಿಸಲು ಉಭಯ ತಂಡಗಳಿಂದ ಪ್ರಯತ್ನ
ಲಾರ್ಡ್ಸ್ ಟೆಸ್ಟ್ ಪಂದ್ಯವನ್ನು ಗೆದ್ದು ಟೆಸ್ಟ್ ಸರಣಿಯಲ್ಲಿ 2-1 ಮುನ್ನಡೆ ಸಾಧಿಸಲು ಭಾರತ ಹಾಗೂ ಇಂಗ್ಲೆಂಡ್ ತಂಡಗಳು ಎದುರು ನೋಡುತ್ತಿವೆ. ಮೊದಲನೇ ಟೆಸ್ಟ್ ಪಂದ್ಯದಲ್ಲಿ ಇಂಗ್ಲೆಂಡ್ ತಂಡ 5 ವಿಕೆಟ್‌ಗಳಿಂದ ಗೆಲುವು ಪಡೆದು 1-0 ಅಂತರದಲ್ಲಿ ಟೆಸ್ಟ್ ಸರಣಿಯಲ್ಲಿ ಶುಭಾರಂಭ ಕಂಡಿತ್ತು. ನಂತರ ಎಜ್‌ಬಾಸ್ಟನ್ ಟೆಸ್ಟ್‌ನಲ್ಲಿ 336 ರನ್‌ಗಳ ಭರ್ಜರಿ ಗೆಲುವಿನ ಮೂಲಕ ಟೀಮ್ ಇಂಡಿಯಾ ಕಮ್‌ಬ್ಯಾಕ್ ಮಾಡಿತ್ತು. ಸದ್ಯ ಎರಡೂ ತಂಡಗಳು ಟೆಸ್ಟ್ ಸರಣಿಯಲ್ಲಿ 1-1 ಸಮಬಲ ಕಾಯ್ದುಕೊಂಡಿವೆ.