ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಐರ್ಲೆಂಡ್‌ ಎದುರು ಭಾರತದ ಸೋಲಿನ ಬಳಿಕ ಗೌತಮ್‌ ಗಂಭೀರ್‌ ವಿರುದ್ಧ ಮನೋಜ್‌ ತಿವಾರಿ ಕಿಡಿ!

ಭಾರತ ತಂಡ, ಇಂಗ್ಲೆಂಡ್ ವಿರುದ್ಧದ ಸರಣಿ ಅಥವಾ ಮುಂಬರುವ ವಿಶ್ವಕಪ್‌ ಟೂರ್ನಿಯಲ್ಲಿ ಉತ್ತಮ ಪ್ರದರ್ಶನ ನೀಡುವ ಸಾಧ್ಯತೆಯಿದ್ದರೂ, ಇತ್ತೀಚೆಗೆ ಐರ್ಲೆಂಡ್ ವಿರುದ್ಧ ಅನುಭವಿಸಿದ ಸೋಲಿನ ಹೊಣೆಯನ್ನು ಸ್ವೀಕರಿಸುವಲ್ಲಿ ಭಾರತೀಯ ಕ್ರಿಕೆಟ್ ತಂಡದ ಆಡಳಿತ ಮಂಡಳಿ ವಿಫಲವಾಗಿದೆ ಎಂದು ಮಾಜಿ ಕ್ರಿಕೆಟಿಗ ಮನೋಜ್ ತಿವಾರಿ ಟೀಕಿಸಿದ್ದಾರೆ.

ಗೌತಮ್‌ ಗಂಭೀರ್‌ ಮೇಲೆ ಮನೋಜ್‌ ತಿವಾರಿ ಆಕ್ರೋಶ!

ಗೌತಮ್‌ ಗಂಭೀರ್‌ ವಿರುದ್ಧ ಮನೋಜ್‌ ತಿವಾರಿ ಕಿಡಿ. -

Profile
Ramesh Kote Jun 29, 2026 10:51 PM

ನವದೆಹಲಿ: ಭಾರತ ತಂಡ ಮುಂದಿನ ಇಂಗ್ಲೆಂಡ್ ವಿರುದ್ಧದ (IND vs ENG) ಟಿ20ಐ ಸರಣಿಯನ್ನು ಗೆದ್ದರೂ ಐರ್ಲೆಂಡ್ ವಿರುದ್ಧದ ಸೋಲಿನ ಬಗ್ಗೆ ಪ್ರಶ್ನೆ ಕೇಳಲೇಬೇಕು ಎಂದು ಭಾರತದ ಮಾಜಿ ಕ್ರಿಕೆಟಿಗ ಮನೋಜ್ ತಿವಾರಿ (Manoj Tiwary) ಹೇಳಿದ್ದಾರೆ. ನಿರ್ಧಾರಗಳನ್ನು ತೆಗೆದುಕೊಳ್ಳುವವರ ಹೊಣೆಗಾರಿಕೆಯನ್ನು ಒಪ್ಪಿಕೊಳ್ಳುವ ಬದಲು, ಅವರ 'ಪಿಆರ್ ಏಜೆನ್ಸಿಗಳು' ಈಗ ತಂಡದ ನಾಯಕ ಶ್ರೇಯಸ್ ಅಯ್ಯರ್ ಅವರ ಮೇಲೆಯೇ ಸೋಲಿನ ಹೊಣೆಯನ್ನು ಹೊರಿಸಲು ಪ್ರಯತ್ನಿಸುತ್ತವೆ ಎಂದು ತಿವಾರಿ ಟೀಕಿಸಿದ್ದಾರೆ.

ಬೆಲ್‌ಫಾಸ್ಟ್‌ನಲ್ಲಿ ನಡೆದಿದ್ದ ಸರಣಿಯ ಮೊದಲ ಟಿ20ಐ ಪಂದ್ಯದಲ್ಲಿ ಭಾರತ ತಂಡ 34 ರನ್‌ಗಳಿಂದ ಸೋತರೆ, ನಿರ್ಣಾಯಕ ಎರಡನೇ ಟಿ20ಐ ಪಂದ್ಯದಲ್ಲಿ ಕೇವಲ ಒಂದು ರನ್ ಅಂತರದಿಂದ ಸೋಲು ಕಂಡಿತು. ಇದರೊಂದಿಗೆ 2023ರ ಬಳಿಕ ಭಾರತ ತನ್ನ ಮೊದಲ ದ್ವಿಪಕ್ಷೀಯ ಟಿ20ಐ ಸರಣಿಯನ್ನು ಕಳೆದುಕೊಂಡಿತು.

ಇಂಗ್ಲೆಂಡ್‌ ವಿರುದ್ಧದ ಮೊದಲನೇ ಟಿ20ಐಗೆ ಭಾರತ ತಂಡಕ್ಕೆ 3 ಬದಲಾವಣೆ ಅಗತ್ಯ!

ಮನೋಜ್‌ ತಿವಾರಿ ಹೇಳಿದ್ದೇನು?

"ಭಾರತ ತಂಡ ದಕ್ಷಿಣ ಆಫ್ರಿಕಾದಲ್ಲಿ ನಡೆಯಲಿರುವ ವಿಶ್ವಕಪ್‌ ಟೂರ್ನಿಯಲ್ಲಿ ಗೆಲ್ಲಬಹುದು. ಇಂಗ್ಲೆಂಡ್ ವಿರುದ್ಧದ ಟಿ20ಐ ಸರಣಿಯನ್ನೂ ಗೆಲ್ಲಬಹುದು. ಆದರೆ ಐರ್ಲೆಂಡ್ ವಿರುದ್ಧ ಸೋತಿರುವ ಟಿ20ಐ ಸರಣಿಯ ಬಗ್ಗೆ ಏನು? ಅದರ ಹೊಣೆಯನ್ನು ಯಾರು ಹೊರುತ್ತಾರೆ? ನಾನು ಈ ಪ್ರಮುಖ ವಿಷಯದ ಬಗ್ಗೆ ಮಾತನಾಡಿ ಎಂದು ಹೇಳಿದ್ದೆ, ಆದರೆ ನನ್ನ ಮಾತನ್ನು ಯಾರೂ ನಂಬಲಿಲ್ಲ," ಎಂದು ಮನೋಜ್ ತಿವಾರಿ ತಮ್ಮ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿರುವ ವಿಡಿಯೊದಲ್ಲಿ ಹೇಳಿದ್ದಾರೆ.

"ನಿರ್ಧಾರಗಳನ್ನು ತೆಗೆದುಕೊಳ್ಳುವ ವ್ಯಕ್ತಿಯ ಪರವಾಗಿರುವ ಪಿಆರ್ ಏಜೆನ್ಸಿಗಳು ಮತ್ತು ಅವರ ಆಪ್ತರು ಈಗ ಸೋಲಿನ ಸಂಪೂರ್ಣ ಹೊಣೆಯನ್ನು ಶ್ರೇಯಸ್ ಅಯ್ಯರ್ ಅವರ ಮೇಲೆಯೇ ಹಾಕಲು ಆರಂಭಿಸುತ್ತಾರೆ ಎಂಬುದು ನನಗೆ ಗೊತ್ತಿದೆ," ಎಂದು ತಿವಾರಿ ಆರೋಪಿಸಿದ್ದಾರೆ.

IND vs ENG: ʻತಂಡದಲ್ಲಿ ನೀವು ಸ್ಥಾನವನ್ನು ಕಳೆದುಕೊಳ್ಳುತ್ತೀರಿʼ-ಸಂಜು ಸ್ಯಾಮ್ಸನ್‌ಗೆ ಆಕಾಶ್‌ ಚೋಪ್ರಾ ವಾರ್ನಿಂಗ್‌!

ವೈಭವ್‌ಗೆ ಚಾನ್ಸ್‌ ನೀಡದ ಬಗ್ಗೆ ಮನೋಜ್‌ ತಿವಾರಿ ಪ್ರಶ್ನೆ

ಐರ್ಲೆಂಡ್ ಪ್ರವಾಸದಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪದಾರ್ಪಣೆ ಮಾಡುವ ಅವಕಾಶ ವೈಭವ್ ಸೂರ್ಯವಂಶಿಗೆ ಸಿಗಲಿಲ್ಲ. ಟೀಮ್‌ ಮ್ಯಾನೇಜ್‌ಮೆಂಟ್‌ ಈಗಾಗಲೇ ಇರುವ ಆರಂಭಿಕ ಬ್ಯಾಟಿಂಗ್ ಜೋಡಿಯ ಮೇಲೆಯೇ ವಿಶ್ವಾಸ ಮುಂದುವರಿಸಿತು. ವೈಭವ್ ಸೂರ್ಯವಂಶಿ ಅವರನ್ನು ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪರಿಚಯಿಸಲು ಈ ಸರಣಿ ಸೂಕ್ತ ವೇದಿಕೆಯಾಗಿತ್ತು ಮತ್ತು ಅವರ ಐತಿಹಾಸಿಕ ಪದಾರ್ಪಣೆಯನ್ನು ಎಲ್ಲರೂ ನಿರೀಕ್ಷಿಸಿದ್ದರು.

"ಮೊದಲ ಪಂದ್ಯದಿಂದಲೇ ಅವರನ್ನು ಆಡುವ ಹನ್ನೊಂದರ ಬಳಗದಲ್ಲಿ ಏಕೆ ಆಡಿಸಲಿಲ್ಲ? ಬದಲಾಗಿ, ಐಪಿಎಲ್‌ಗೂ ಮುನ್ನ ನಡೆದ ವಿಶ್ವಕಪ್‌ ಟೂರ್ನಿಯಲ್ಲಿ ಉತ್ತಮ ಪ್ರದರ್ಶನ ನೀಡಿದ್ದ ಆಟಗಾರರನ್ನೇ ಮುಂದುವರಿಸಿದ್ದೀರಿ. ನಿಮ್ಮ ಅರೆಕಾಲಿಕ ಆಟಗಾರನ ಮೇಲಿನ (ವಾಷಿಂಗ್ಟನ್ ಸುಂದರ್) ಅತಿಯಾದ ಒಲವು ನಿರೀಕ್ಷಿಸಿದ ಫಲ ನೀಡಲಿಲ್ಲ. ಅದಕ್ಕಾಗಿಯೇ ಅವರಿಗೆ ಕೇವಲ ಒಂದು ಪಂದ್ಯದಲ್ಲಿ ಮಾತ್ರ ಅವಕಾಶ ನೀಡಬೇಕಾಯಿತು," ಎಂದು ಮನೋಜ್ ತಿವಾರಿ ಹೇಳಿದ್ದಾರೆ.