ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

IND vs NZ 1st ODI: ಅರ್ಷದೀಪ್‌ ಸಿಂಗ್‌ ಮಾರಕ ವೇಗಕ್ಕೆ 185ಕ್ಕೆ ನ್ಯೂಜಿಲೆಂಡ್‌ ಆಲ್‌ಔಟ್‌!

ನ್ಯೂಜಿಲೆಂಡ್ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಭಾರತ ಬೌಲರ್‌ಗಳು ಉತ್ತಮ ಪ್ರದರ್ಶನ ನೀಡಿದ್ದಾರೆ. ಟಾಸ್ ಗೆದ್ದು ಬೌಲಿಂಗ್ ಆಯ್ಕೆ ಮಾಡಿಕೊಂಡ ಭಾರತ, ಆತಿಥೇಯ ತಂಡವನ್ನು 40.2 ಓವರ್‌ಗಳಲ್ಲಿ 185 ರನ್‌ಗಳಿಗೆ ಆಲೌಟ್ ಮಾಡಿದೆ. ಇದೀಗ ಭಾರತ ಗೆಲುವಿಗಾಗಿ 186 ರನ್‌ಗಳ ಗುರಿ ಬೆನ್ನಟ್ಟಲಿದೆ.

ಅರ್ಷದೀಪ್‌ ಮಾರಕ ದಾಳಿ,185  ರನ್‌ಗಳಿಗೆ ನ್ಯೂಜಿಲೆಂಡ್‌ ಆಲ್‌ಔಟ್‌!

ಮೊದಲನೇ ಏಕದಿನ ಪಂದ್ಯದಲ್ಲಿ 185ಕ್ಕೆ ನ್ಯೂಜಿಲೆಂಡ್‌ ಆಲೌಟ್‌. -

Profile
Ramesh Kote Nov 4, 2026 11:19 AM

ಆಕ್ಲೆಂಡ್‌: ಇಲ್ಲಿನ ಈಡನ್ ಪಾರ್ಕ್‌ನಲ್ಲಿ ನಡೆಯುತ್ತಿರುವ ಭಾರತ ಮತ್ತು ನ್ಯೂಜಿಲೆಂಡ್ (IND vs NZ) ನಡುವಿನ ಮೊದಲ ಏಕದಿನ ಪಂದ್ಯದಲ್ಲಿ ಆತಿಥೇಯ ನ್ಯೂಜಿಲೆಂಡ್ ತಂಡ ಭಾರತದ ಬೌಲರ್‌ಗಳ ಸಂಘಟಿತ ದಾಳಿಗೆ ತತ್ತರಿಸಿದೆ. ಟಾಸ್‌ ಸೋತು ಮೊದಲು ಬ್ಯಾಟಿಂಗ್ ನಡೆಸುವಂತಾದ ನ್ಯೂಜಿಲೆಂಡ್ ತಂಡ, ಅರ್ಷದೀಪ್‌ ಸಿಂಗ್‌ (Arshdeep Singh) ಸೇರಿದಂತೆ ಭಾರತದ ಬೌಲರ್‌ಗಳ ದಾಳಿಗೆ ತತ್ತರಿಸಿ 40.2 ಓವರ್‌ಗಳಲ್ಲಿ 185 ರನ್‌ಗಳಿಗೆ ತನ್ನೆಲ್ಲ ವಿಕೆಟ್‌ಗಳನ್ನು ಕಳೆದುಕೊಂಡಿದೆ. ಆ ಮೂಲಕ ಭಾರತ ತಂಡಕ್ಕೆ 186 ರನ್‌ಗಳ ಸಾಧಾರಣ ಗುರಿಯನ್ನು ನೀಡಿದೆ.

ಟಾಸ್ ಗೆದ್ದ ಭಾರತ ತಂಡದ ನಾಯಕ ಶುಭಮನ್ ಗಿಲ್ ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡರು ಹಾಗೂ ಬೌಲರ್‌ಗಳು ತಮ್ಮ ನಾಯಕನ ನಿರ್ಧಾರವನ್ನು ಸಮರ್ಥಿಸಿಕೊಂಡರು. ನ್ಯೂಜಿಲೆಂಡ್ ತಂಡವನ್ನು ಕಡಿಮೆ ಮೊತ್ತಕ್ಕೆ ನಿಯಂತ್ರಿಸುವಲ್ಲಿ ಭಾರತದ ಬೌಲರ್‌ಗಳು ಯಶಸ್ವಿಯಾಗಿದ್ದಾರೆ. ವಿಶೇಷವಾಗಿ ಅರ್ಷದೀಪ್‌ ಸಿಂಗ್‌ ಶಿಸ್ತುಬದ್ಧವಾಗಿ ಬೌಲಿಂಗ್‌ ದಾಳಿ ನಡೆಸಿ 4 ವಿಕೆಟ್‌ಗಳನ್ನು ಕಬಳಿಸಿದರೆ, ಇವರಿಗೆ ಸಾಥ್‌ ನೀಡಿದ ಅನ್ಶುಲ್‌ ಕಾಂಬೋಜ್‌ ಅವರು ಎರಡು ವಿಕೆಟ್‌ ಹಾಗೂ ಗುರ್ನೂರ್‌ ಬ್ರಾರ್‌ ಮೂರು ವಿಕೆಟ್‌ಗಳನ್ನು ಕಿತ್ತರು.

ಫಿಟ್‌ನೆಸ್‌ ಟೆಸ್ಟ್‌ ಪಾಸ್‌ ಮಾಡಿದ ಪ್ರಸಿಧ್‌ ಕೃಷ್ಣ; ನ್ಯೂಜಿಲೆಂಡ್ ಟೆಸ್ಟ್ ಸರಣಿಗೂ ಮುನ್ನ ಭಾರತ ತಂಡಕ್ಕೆ ಬಲ!

ಕಿವೀಸ್‌ ಪರ ಇನಿಂಗ್ಸ್‌ ಆರಂಭಿಸಿದ ವಿಲ್‌ ಯಂಗ್‌ ಅವರನ್ನು ಅರ್ಷದೀಪ್‌ ಸಿಂಗ್‌ ಬಹುಬೇಗ ಔಟ್‌ ಮಾಡಿದರು ಹಾಗೂ ಮೂರನೇ ಕ್ರಮಾಂಕದಲ್ಲಿ ಕ್ರೀಸ್‌ಗೆ ಬಂದ ಹೆನ್ರಿ ನೊಕೋಲ್ಸ್‌ ಅವರನ್ನು ಕೂಡ ಎಡಗೈ ವೇಗಿ ಔಟ್‌ ಮಾಡಿದರು. ಒಂದು ತುದಿಯಲ್ಲಿ ನಿಂತು ಉತ್ತಮವಾಗಿ ಬ್ಯಾಟ್‌ ಮಾಡುತ್ತಿದ್ದ ಟಿಮ್‌ ಸೈಫರ್ಟ್‌ ಅವರು 43 ಎಸೆತಗಳಲ್ಲಿ 38 ರನ್‌ಗಳನ್ನು ಕಲೆ ಹಾಕಿದರು. ಆದರೆ, ಗುರ್ನೂರ್‌ ಬ್ರಾರ್‌ ಅವರ ಬೌಲಿಂಗ್‌ನಲ್ಲಿ ಸೈಫರ್ಟ್‌ ವಿಕೆಟ್‌ ಒಪ್ಪಿಸಿದರು.

ವಿಕೆಟ್‌ ಕೀಪರ್‌ ಟಾಮ್‌ ಲೇಥಮ್‌ ಅವರು ಕೇವಲ ಮೂರು ರನ್‌ ಗಳಿಸಿದ ಬಳಿಕ ಗುರ್ನೂರ್‌ ಬ್ರಾರ್‌ಗೆ ಔಟ್‌ ಆದರು. 41 ಎಸೆತಗಳಲ್ಲಿ 28 ರನ್‌ ಗಳಿಸಿ ಉತ್ತಮ ಆರಂಭವನ್ನು ಪಡೆದಿದ್ದ ಡ್ಯಾರಿಲ್‌ ಮಿಚೆಲ್‌ ಭರವಸೆ ಮೂಡಿಸಿದ್ದರು. ಆದರೆ, ಅವರು ರನ್‌ಔಟ್‌ ಆದರು. ನಾಯಕ ಮಿಚೆಲ್‌ ಸ್ಯಾಂಟ್ನರ್‌ ಹಾಗೂ ನೇಥನ್‌ ಸ್ಮಿತ್‌ ಅವರನ್ನು ಅನ್ಶುಲ್‌ ಕಾಂಬೋಜ್‌ಗೆ ಔಟ್‌ ಮಾಡಿದರು. ಆಲ್‌ರೌಂಡರ್‌ ಕೈಲ್‌ ಜೇಮಿಸನ್‌ ಅವರನ್ನು ಅರ್ಷದೀಪ್‌ ಸಿಂಗ್‌ ಪೆವಿಲಿಯನ್‌ಗೆ ಕಳುಹಿಸಿದರು.



ಅದ್ಭುತ ಫಾರ್ಮ್‌ನಲ್ಲಿರುವ ಗ್ಲೆನ್‌ ಫಿಲಿಪ್ಸ್‌ ಅವರು 51 ಎಸೆತಗಳಲ್ಲಿ 30 ರನ್‌ ಗಳಿಸಿ ಕಿವೀಸ್‌ಗೆ ಭರವಸೆ ಮೂಡಿಸಿದ್ದರು. ಆದರೂ ಅವರು ದೀರ್ಘಾವಧಿ ಬ್ಯಾಟ್‌ ಮಾಡಲು ಅರ್ಷದೀಪ್‌ ಸಿಂಗ್‌ ಅವಕಾಶವನ್ನು ನೀಡಲಿಲ್ಲ. ಆ ಮೂಲಕ ಕಿವೀಸ್‌ 146 ರನ್‌ಗಳಿಗೆ 9 ವಿಕೆಟ್‌ಗಳನ್ನು ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. ಈ ವೇಳೆ ಬ್ಲೈರ್‌ ಟಿಕ್ನರ್‌ ಹಾಗೂ ಜೇಕಬ್‌ ಡಫಿ ಅವರು 39 ರನ್‌ಗಳ ಜೊತೆಯಾಟವನ್ನು ಆಡಿದರು. ಟಿಕ್ನರ್‌ ಅವರು 23 ಎಸೆತಗಳಲ್ಲಿ 34 ರನ್‌ಗಳ ಉಪಯುಕ್ತ ಕೊಡುಗೆಯನ್ನು ನೀಡಿದರು. ಡಫಿ ಅವರು 15 ರನ್‌ ಗಳಿಸಿ ಅಜೇಯರಾಗಿ ಉಳಿದರು.

ಸ್ಕೋರ್‌ ವಿವರ (ಇನಿಂಗ್ಸ್‌ ಬ್ರೇಕ್‌)

ನ್ಯೂಜಿಲೆಂಡ್‌: 40.2 ಓವರ್‌ಗಳಿಗೆ 185-10 (ಗ್ಲೆನ್‌ ಫಿಲಿಪ್ಸ್‌ 30 ರನ್‌, ಡ್ಯಾರಿಲ್‌ ಮಿಚೆಲ್‌ 28 ರನ್‌, ಬ್ಲೈರ್‌ ಟಿಕ್ನರ್‌ 34 ರನ್‌, ಟಿಮ್‌ ಸೈಫರ್ಟ್‌ 38 ರನ್‌; ಅರ್ಷದೀಪ್‌ ಸಿಂಗ್‌ 70ಕ್ಕೆ 4, ಗುರ್ನೂರ್‌ ಬ್ರಾರ್‌ 44 ಕ್ಕೆ 3, ಅನ್ಶೂಲ್‌ ಕಾಂಬೋಜ್‌ 22 ಕ್ಕೆ 2)