ʻಮೈದಾನದಲ್ಲಿ ನಿಮ್ಮ ವರ್ತನೆ ಎಲ್ಲೆ ಮೀರಬಾರದುʼ: ಗುರ್ನೂರ್ ಬ್ರಾರ್‌ಗೆ ದಿನೇಶ್ ಕಾರ್ತಿಕ್ ವಾರ್ನಿಂಗ್!
ನ್ಯೂಜಿಲೆಂಡ್ ವಿರುದ್ಧದ ಪಂದ್ಯದಲ್ಲಿ ಟಿಮ್ ಸೈಫರ್ಟ್‌ಗೆ ಆಕ್ರಮಣಕಾರಿ ಬೀಳ್ಕೊಡುಗೆ ನೀಡಿದ ಗುರ್ನೂರ್ ಬ್ರಾರ್ ವರ್ತನೆಯನ್ನು ದಿನೇಶ್ ಕಾರ್ತಿಕ್ ಸಮರ್ಥಿಸಿಕೊಂಡಿದ್ದಾರೆ. ಬ್ರಾರ್ ಅವರಲ್ಲಿರುವ ಉತ್ಸಾಹ ಮತ್ತು ಹೋರಾಟದ ಮನೋಭಾವ ಉತ್ತಮವಾಗಿದ್ದು, ಸಂಭ್ರಮಾಚರಣೆಯಲ್ಲಿ ಮಾತ್ರ ಸ್ವಲ್ಪ ಸಂಯಮ ಅಗತ್ಯ ಎಂದು ಸಲಹೆ ನೀಡಿದ್ದಾರೆ.
ಗುರ್ನೂರ್ ಬ್ರಾರ್‌ಗೆ ಕ್ಲಾಸ್ ತೆಗೆದುಕೊಂಡ ದಿನೇಶ್ ಕಾರ್ತಿಕ್. -
ನವದೆಹಲಿ: ನ್ಯೂಜಿಲೆಂಡ್ ವಿರುದ್ಧದ ನಾಲ್ಕನೇ ಏಕದಿನ ಪಂದ್ಯದಲ್ಲಿ (IND vs NZ) ಟಿಮ್ ಸೈಫರ್ಟ್ (Tim Seifert) ಅವರನ್ನು ಔಟ್ ಮಾಡಿದ ಬಳಿಕ ಟೀಮ್ ಇಂಡಿಯಾದ ಯುವ ವೇಗಿ ಗುರ್ನೂರ್ ಬ್ರಾರ್(Gurnoor Brar) ಅವರ ವರ್ತನೆ ಕ್ರಿಕೆಟ್ ವಲಯದಲ್ಲಿ ಚರ್ಚೆಗೆ ಕಾರಣವಾಗಿದೆ. ಇದೀಗ ಅವರ ಆಕ್ರಮಣಕಾರಿ ವರ್ತನೆಯ ಬಗ್ಗೆ ಭಾರತದ ಮಾಜಿ ಕ್ರಿಕೆಟಿಗ ದಿನೇಶ್ ಕಾರ್ತಿಕ್ ಪ್ರತಿಕ್ರಿಯಿಸಿದ್ದು, ಬ್ರಾರ್ ಅವರಲ್ಲಿರುವ ಉತ್ಸಾಹ ಮತ್ತು ಹೋರಾಟದ ಮನೋಭಾವವನ್ನು ಕಳೆದುಕೊಳ್ಳಬಾರದು ಎಂದು ಹೇಳಿದ್ದಾರೆ.
ನವೆಂಬರ್ 13ರಂದು ಮೌಂಟ್ ಮೌಂಗನುಯಿಯ ಬೇ ಓವಲ್ ಮೈದಾನದಲ್ಲಿ ನಡೆದಿದ್ದ ಭಾರತದ ನಾಲ್ಕನೇ ಏಕದಿನ ಪಂದ್ಯದಲ್ಲಿ ನ್ಯೂಜಿಲೆಂಡ್ ಬ್ಯಾಟರ್ ಟಿಮ್ ಸೈಫರ್ಟ್ 58 ರನ್ ಗಳಿಸಿದ್ದಾಗ 12ನೇ ಓವರ್‌ನಲ್ಲಿ ಗುರ್ನೂರ್ ಬ್ರಾರ್ ಬೌಲಿಂಗ್‌ನಲ್ಲಿ ವಿಕೆಟ್ ಒಪ್ಪಿಸಿದರು. ಈ ವಿಕೆಟ್ ಪಡೆದ ಬಳಿಕ ಬ್ರಾರ್ ಅತ್ಯಂತ ಆಕ್ರಮಣಕಾರಿಯಾಗಿ ಸಂಭ್ರಮಿಸಿದರು. ಸೈಫರ್ಟ್ ಅವರ ಮುಖದ ಎದುರು ನಿಂತು ಜೋರಾಗಿ ಕೂಗುವ ಮೂಲಕ ತಮ್ಮ ಸಂಭ್ರಮಿಸಿದರು.
ಇದರಿಂದ ಮೈದಾನದಲ್ಲಿ ಕೆಲಕಾಲ ಬಿಸಿಯ ವಾತಾವರಣ ನಿರ್ಮಾಣವಾಯಿತು. ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸುವುದನ್ನು ಗಮನಿಸಿದ ವಿರಾಟ್ ಕೊಹ್ಲಿ ತಕ್ಷಣ ಮಧ್ಯಪ್ರವೇಶಿಸಿ ಬ್ರಾರ್ ಅವರನ್ನು ಅಲ್ಲಿಂದ ದೂರ ಸರಿಸಿದರು.
IND vs NZ: ಗೋಲ್ಡನ್ ಡಕ್‌ಔಟ್ ಆಗಿ ಅನಗತ್ಯ ದಾಖಲೆ ಬರೆದ ರೋಹಿತ್ ಶರ್ಮಾ!
ಈ ಘಟನೆಯ ಬಗ್ಗೆ ಮಾತನಾಡಿರುವ ದಿನೇಶ್ ಕಾರ್ತಿಕ್, ಬ್ರಾರ್ ಅವರಲ್ಲಿರುವ ಆಕ್ರಮಣಕಾರಿ ಮನೋಭಾವ ಉತ್ತಮ ಗುಣವಾಗಿದ್ದು, ಅದನ್ನು ಸಂಪೂರ್ಣವಾಗಿ ನಿಯಂತ್ರಿಸುವ ಪ್ರಯತ್ನ ಮಾಡಬಾರದು ಎಂದು ಅಭಿಪ್ರಾಯಪಟ್ಟಿದ್ದಾರೆ. ಆದರೆ ಕೆಲವೊಮ್ಮೆ ಸಂಭ್ರಮದ ವೇಳೆ ಮಿತಿ ಮೀರದಂತೆ ಎಚ್ಚರಿಕೆ ವಹಿಸಬೇಕು ಎಂದು ಹೇಳಿದ್ದಾರೆ.
"ಅವರಲ್ಲಿ ಇಂತಹ ಉತ್ಸಾಹ ಮತ್ತು ಆಕ್ರಮಣಕಾರಿ ಮನೋಭಾವ ಇರುವುದು ನನಗೆ ಇಷ್ಟ. ಕೆಲವೊಮ್ಮೆ ಅವರು ಮಿತಿಯನ್ನು ಮೀರುವ ಸಾಧ್ಯತೆಯಿದೆ. ಆದರೆ ಅದನ್ನು ನಿಯಂತ್ರಿಸಲು ಸಾಧ್ಯವಿರುವವರೆಗೆ ಯಾವುದೇ ಸಮಸ್ಯೆಯಿಲ್ಲ. ಕ್ರಿಕೆಟ್ ಆಡುವ ಉತ್ಸಾಹವನ್ನು ಅವರು ಕಳೆದುಕೊಳ್ಳಬಾರದು. ವಿಕೆಟ್ ಪಡೆದಾಗ ಹೇಗೆ ಸಂಭ್ರಮಿಸಬೇಕು ಎಂಬುದಕ್ಕೆ ಒಂದು ನಿರ್ದಿಷ್ಟ ನಿಯಮವಿರುವ ಪರಿಪೂರ್ಣ ಕ್ರಿಕೆಟಿಗನಾಗಬೇಕೆಂದು ನಾನು ಬಯಸುವುದಿಲ್ಲ. ಸದ್ಯಕ್ಕೆ ಅವರು ಹಸಿವು ಮತ್ತು ಆಕ್ರಮಣಕಾರಿ ಮನೋಭಾವ ಹೊಂದಿದ್ದಾರೆ. ಇದು ಕೆಟ್ಟ ಗುಣವಲ್ಲ," ಎಂದು ಕಾರ್ತಿಕ್ ಕ್ರಿಕ್‌ಬಜ್ ಲೈವ್‌ನಲ್ಲಿ ಹೇಳಿದ್ದಾರೆ.
🔴HEATED ARGUMENT B/W GURNOOR BRAR & TIM SEIFERT 🤯 - Seifert smashed 14 runs in a single over off Brar. - Gurnoor then told him, "You're lucky today, that's why you're batting like this." Seifert replied, "Go & bowl, I always bat like this!" 😭 https://t.co/y0bKkNVcMJ
— Sam (@cricsam02) November 13, 2026
ಬ್ರಾರ್ ಆಕ್ರಮಣಕಾರಿ ವರ್ತನೆ ಬಗ್ಗೆ ಕಾರ್ತಿಕ್ ಹೇಳಿದ್ದೇನು?
ಬ್ರಾರ್ ಅವರ ಬೌಲಿಂಗ್‌ನಲ್ಲಿರುವ ಆಕ್ರಮಣಕಾರಿ ಮನೋಭಾವವನ್ನು ಕಾರ್ತಿಕ್ ಮೆಚ್ಚಿಕೊಂಡಿದ್ದರೂ, ವಿಕೆಟ್ ಪಡೆದ ಬಳಿಕ ಎದುರಾಳಿ ಬ್ಯಾಟರ್‌ನ ವಿರುದ್ಧ ತೋರುವ ವರ್ತನೆಯಲ್ಲಿ ಸ್ವಲ್ಪ ಬದಲಾವಣೆ ಅಗತ್ಯವಿದೆ ಎಂದು ಹೇಳಿದ್ದಾರೆ. ಎದುರಾಳಿ ಆಟಗಾರನನ್ನು ಗುರಿಯಾಗಿಸಿಕೊಂಡು ಸಂಭ್ರಮಿಸುವ ಬದಲು ತಮ್ಮ ಸಹ ಆಟಗಾರರೊಂದಿಗೆ ಸಂಭ್ರಮಿಸುವುದು ಉತ್ತಮ ಎಂದು ಸಲಹೆ ನೀಡಿದ್ದಾರೆ.
"ನನ್ನ ಪ್ರಕಾರ ಅವರ ಸಂಭ್ರಮಾಚರಣೆಯಲ್ಲಿ ಮಾತ್ರ ಸ್ವಲ್ಪ ಟೀಕೆ ಇದೆ. ಬ್ಯಾಟರ್ ಔಟಾದಾಗ ಅವರು ಹೆಚ್ಚು ಆಕ್ರಮಣಕಾರಿಯಾಗಿ ವರ್ತಿಸುತ್ತಾರೆ. ಎದುರಾಳಿ ಬ್ಯಾಟರ್ ಎದುರು ಸಂಭ್ರಮಿಸುವ ಬದಲು ತಮ್ಮ ಸಹ ಆಟಗಾರರೊಂದಿಗೆ ಸಂಭ್ರಮಿಸುವುದನ್ನು ಕಲಿತರೆ ಉತ್ತಮ. ಆದರೆ ಬೌಲ್ ಮಾಡುವಾಗ ಎದುರಾಳಿ ಆಟಗಾರರೊಂದಿಗೆ ಮಾತಿನ ಚಕಮಕಿ ನಡೆಸುವ ಅವರ ಮನೋಭಾವವನ್ನು ಪ್ರೋತ್ಸಾಹಿಸಬೇಕು. ಅಂತಹ ಆಕ್ರಮಣಕಾರಿ ಆಟದ ಮನೋಭಾವವೇ ಭಾರತಕ್ಕೆ ಮೊದಲ ವಿಕೆಟ್ ತಂದುಕೊಟ್ಟಿತು. ಅವರು ಆಡುವ ರೀತಿಯೇ ಅದು. ಹೀಗಾಗಿ ಆ ಸ್ವಭಾವವನ್ನು ಮುಂದುವರಿಸಲು ಅವಕಾಶ ನೀಡಬೇಕು," ಎಂದು ದಿನೇಶ್ ಕಾರ್ತಿಕ್ ಹೇಳಿದ್ದಾರೆ.
ನ್ಯೂಜಿಲೆಂಡ್ ವಿರುದ್ಧದ 4ನೇ ಏಕದಿನ; ಭಾರತಕ್ಕೆ ಹೀನಾಯ ಸೋಲು
ಈ ಪಂದ್ಯದಲ್ಲಿ ಬ್ರಾರ್ ತಮ್ಮ ಬೌಲಿಂಗ್‌ನಲ್ಲಿ 69 ರನ್ ನೀಡಿ ಎರಡು ವಿಕೆಟ್ ಪಡೆದರು. ಟಿಮ್ ಸೈಫರ್ಟ್ ಅವರ ವಿಕೆಟ್ ವಿಶೇಷವಾಗಿತ್ತು. ಏಕೆಂದರೆ ತಮ್ಮ ಎಂಟನೇ ಏಕದಿನ ಪಂದ್ಯವನ್ನಾಡುತ್ತಿದ್ದ ಸೈಫರ್ಟ್ ಈ ಪಂದ್ಯದಲ್ಲಿ ಚೊಚ್ಚಲ ಅರ್ಧಶತಕ ದಾಖಲಿಸಿದ್ದರು. ವಿಕೆಟ್ ಪಡೆದ ಬಳಿಕ ಬ್ರಾರ್ ನೀಡಿದ ಬೀಳ್ಕೊಡುಗೆಗೆ ಅಂಪೈರ್ ಕ್ರಿಸ್ ಬ್ರೌನ್ ಎಚ್ಚರಿಕೆ ನೀಡಿದರು.
ಇನ್ನು ಈ ಪಂದ್ಯದಲ್ಲಿ ಭಾರತ ತಂಡ 244 ರನ್‌ಗಳ ಭಾರಿ ಅಂತರದಿಂದ ಸೋಲು ಅನುಭವಿಸಿತು. ಆದರೂ ಐದು ಪಂದ್ಯಗಳ ಏಕದಿನ ಸರಣಿಯಲ್ಲಿ ಭಾರತ 2-1 ಮುನ್ನಡೆ ಕಾಯ್ದುಕೊಂಡಿದೆ. ಭಾನುವಾರ ನಡೆಯಲಿರುವ ಅಂತಿಮ ಪಂದ್ಯದಲ್ಲಿ ಸರಣಿ ಗೆಲುವಿನ ನಿರೀಕ್ಷೆಯೊಂದಿಗೆ ಟೀಮ್ ಇಂಡಿಯಾ ಕಣಕ್ಕಿಳಿಯಲಿದೆ.