IND vs NZ: ಕುಮಾರ ಸಂಗಕ್ಕಾರ ದಾಖಲೆ ಮುರಿಯುವ ಸನಿಹದಲ್ಲಿ ವಿರಾಟ್ ಕೊಹ್ಲಿ!
Virat Kohli need 55 Runs to Overtake Sangakkara: ಭಾರತ ತಂಡದ ಮಾಜಿ ನಾಯಕ ವಿರಾಟ್ ಕೊಹ್ಲಿ, ಏಕದಿನ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ರನ್ ಗಳಿಸಿದ ಬ್ಯಾಟ್ಸ್‌ಮನ್‌ಗಳ ಸಾಲಿನಲ್ಲಿ ಶ್ರೀಲಂಕಾ ದಿಗ್ಗಜ ಕುಮಾರ ಸಂಗಕ್ಕಾರ ಅವರನ್ನು ಹಿಂದಿಕ್ಕುವ ಸನಿಹದಲ್ಲಿದ್ದಾರೆ. ಭಾನುವಾರ ನಡೆಯುವ ಐಸಿಸಿ ಚಾಂಪಿಯನ್ಸ್ ಟ್ರೋಫಿ ಟೂರ್ನಿಯ ಫೈನಲ್ ಪಂದ್ಯದಲ್ಲಿ 55 ರನ್ ಗಳಿಸಿದರೆ, ಲಂಕಾ ಮಾಜಿ ನಾಯಕನನ್ನು ಕೊಹ್ಲಿ ಹಿಂದಿಕ್ಕಲಿದ್ದಾರೆ.

ನ್ಯೂಜಿಲೆಂಡ್ ವಿರುದ್ದ ಚಾಂಪಿಯನ್ಸ್ ಟ್ರೋಫಿ ಫೈನಲ್‌ಗೆ ವಿರಾಟ್ ಕೊಹ್ಲಿ ಸಜ್ಜಾಗುತ್ತಿದ್ದಾರೆ.

ದುಬೈ: ಭಾರತ ಹಾಗೂ ನ್ಯೂಜಿಲೆಂಡ್ (IND vs NZ) ನಡುವಣ 2025ರ ಐಸಿಸಿ ಚಾಂಪಿಯನ್ಸ್ ಟ್ರೋಫಿ ಟೂರ್ನಿಯ (ICC Champions Trophy 2025) ಫೈನಲ್ ಪಂದ್ಯ ಭಾನುವಾರ (ಮಾರ್ಚ್ 9) ದುಬೈ ಇಂಟರ್‌ನ್ಯಾಷನಲ್ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆಯಲಿದೆ. ಸದ್ಯ ಅದ್ಭುತ ಫಾರ್ಮ್‌ನಲ್ಲಿರುವ ಭಾರತ ತಂಡದ ಮಾಜಿ ನಾಯಕ ವಿರಾಟ್ ಕೊಹ್ಲಿ (Virat Kohli) ಏಕದಿನ ಕ್ರಿಕೆಟ್‌ನಲ್ಲಿ ಈಗಾಗಲೇ ಸಾಕಷ್ಟು ದಾಖಲೆಗಳನ್ನು ಬರೆದಿದ್ದಾರೆ. ಇದೀಗ ಅವರು ಮತ್ತೊಂದು ಮೈಲುಗಲ್ಲು ತಲುಪುವ ಸನಿಹದಲ್ಲಿದ್ದಾರೆ. ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ಅವರು ಶತಕ ಸಿಡಿಸಿ ಭಾರತ ತಂಡವನ್ನು ಗೆಲ್ಲಿಸಿದ್ದರು ಹಾಗೂ ಸೆಮಿಫೈನಲ್ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ 84 ರನ್ ಗಳಸಿ ಟೀಮ್ ಇಂಡಿಯಾ ಗೆಲುವಿಗೆ ನೆರವು ನೀಡಿದ್ದಾರೆ. ಈ ಎರಡೂ ಪಂದ್ಯಗಳಲ್ಲಿ ವಿರಾಟ್ ಕೊಹ್ಲಿ ಪಂದ್ಯ ಶ್ರೇಷ್ಠ ಪ್ರಶಸ್ತಿಯನ್ನು ಪಡೆದಿದ್ದರು.
ಏಕದಿನ ಕ್ರಿಕೆಟ್‌ನಲ್ಲಿ ನೂತನ ದಾಖಲೆ ಬರೆಯಲು ವಿರಾಟ್ ಕೊಹ್ಲಿಗೆ ಇನ್ನು ಕೇವಲ 55 ರನ್‌ಗಳ ಅಗತ್ಯವಿದೆ. ಭಾನುವಾರ ನ್ಯೂಜಿಲೆಂಡ್ ವಿರುದ್ಧದ ಫೈನಲ್ ಹಣಾಹಣಿಯಲ್ಲಿ 55 ರನ್ ಗಳಿಸಿದರೆ, ಏಕದಿನ ಕ್ರಿಕೆಟ್‌ನಲ್ಲಿ ಟೀಮ್ ಇಂಡಿಯಾ ಮಾಜಿ ನಾಯಕ ದೊಡ್ಡ ದಾಖಲೆಯನ್ನು ಬರೆಯಲಿದ್ದಾರೆ.
ವಿರಾಟ್ ಕೊಹ್ಲಿ ಸದ್ಯ ಒಡಿಐ ಕ್ರಿಕೆಟ್‌ನಲ್ಲಿ 14180 ರನ್‌ಗಳನ್ನು ಕಲೆ ಹಾಕಿದ್ದಾರೆ. ಇದರೊಂದಿಗೆ ಒಡಿಐ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ರನ್ ಗಳಿಸಿದ ಬ್ಯಾಟ್ಸ್‌ಮನ್‌ಗಳ ಸಾಲಿನಲ್ಲಿ ಮೂರನೇ ಸ್ಥಾನದಲ್ಲಿದ್ದಾರೆ. ನ್ಯೂಜಿಲೆಂಡ್ ವಿರುದ್ಧದ ಪಂದ್ಯದಲ್ಲಿ 55 ರನ್ ಕಲೆ ಹಾಕಿದರೆ, ಅತಿ ಹೆಚ್ಚು ರನ್ ಗಳಿಸಿದ ಬ್ಯಾಟರ್‌ಗಳ ಸಾಲಿನಲ್ಲಿ ಶ್ರೀಲಂಕಾ ಮಾಜಿ ನಾಯಕ ಕುಮಾರ ಸಂಗಕ್ಕಾರ ಅವರನ್ನು ಹಿಂದಿಕ್ಕಿ ಎರಡನೇ ಸ್ಥಾನಕ್ಕೆ ಲಗ್ಗೆ ಇಡಲಿದ್ದಾರೆ.
ಶ್ರೀಲಂಕಾ ದಿಗ್ಗಜ ಕುಮಾರ ಸಂಗಕ್ಕಾರ ಅವರು ತಮ್ಮ ಏಕದಿನ ಕ್ರಿಕೆಟ್ ವೃತ್ತಿ ಜೀವನದಲ್ಲಿ 14234 ರನ್‌ಗಳನ್ನು ಕಲೆ ಹಾಕಿದ್ದಾರೆ. ಅವಚರು ಇದರಲ್ಲಿ 25 ಶತಕಗಳು ಹಾಗೂ 93 ಅರ್ಧಶತಕಗಳನ್ನು ಬಾರಿಸಿದ್ದಾರೆ. ಇದರಲ್ಲಿ ವಿರಾಟ್ ಕೊಹ್ಲಿ 51 ಶತಕಗಳು ಹಾಗೂ 74 ಅರ್ಧಶತಕಗಳನ್ನು ಸಿಡಿಸಿದ್ದಾರೆ.
ಏಕದಿನ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ರನ್ ಗಳಿಸಿದ ಅಗ್ರ ಐವರು ಬ್ಯಾಟ್ಸ್‌ಮನ್‌ಗಳು
ಸಚಿನ್ ತೆಂಡೂಲ್ಕರ್: 18426
ಕುಮಾರ್ ಸಂಗಕ್ಕಾರ: 14234
ವಿರಾಟ್ ಕೊಹ್ಲಿ: 14180
ರಿಕಿ ಪಾಂಟಿಂಗ್: 13704
ಸನತ್ ಜಯಸೂರ್ಯ: 13430
IND vs NZ: ʻನಾ ಹೇಳಿದ ಹಾಗೆ ಕೇಳಿ ಭಾರತವನ್ನು ಸೋಲಿಸಬಹುದುʼ-ಕಿವೀಸ್‌ಗೆ ಅಖ್ತರ್ ಮಹತ್ವದ ಸಲಹೆ!
ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಈ ಪಟ್ಟಿಯಲ್ಲಿ ಅಗ್ರ ಸ್ಥಾನದಲ್ಲಿದ್ದಾರೆ. ತಮ್ಮ ಏಕದಿನ ಕ್ರಿಕೆಟ್ ವೃತ್ತಿ ಜೀವನವನ್ನು ಮುಗಿಸುವ ಹೊತ್ತಿಗೆ ಅವರು 463 ಏಕದಿನ ಪಂದ್ಯಗಳಿಂದ 18426 ರನ್‌ಗಳನ್ನು ಕಲೆ ಹಾಕಿದ್ದರು. ಇದರಲ್ಲಿ ಅವರು 49 ಶತಕಗಳನ್ನು ಹಾಗೂ 96 ಅರ್ಧಶತಕಗಳನ್ನು ಬಾರಿಸಿದ್ದಾರೆ. ವಿರಾಟ್ ಕೊಹ್ಲಿ ಎರಡನೇ ಸ್ಥಾನಕ್ಕೆ ಭಾನುವಾರ ಹೋಗಬಹುದು. ಆದರೆ, ಕ್ರಿಕೆಟ್ ದೇವರ ದಾಖಲೆಯನ್ನು ಮುರಿಯಲು ಕೊಹ್ಲಿಗೆ ಇನ್ನೂ 4000ಕ್ಕೂ ಅಧಿಕ ರನ್‌ಗಳ ಅಗತ್ಯವಿದೆ. ಅವರು ಇನ್ನೂ 3-4 ವರ್ಷಗಳ ಅಂತಾರಾಷ್ಟ್ರೀಯ ಕ್ರಿಕೆಟ್ ಆಡಿದರೆ, ಸಚಿನ್ ತೆಂಡೂಲ್ಕರ್ ಅವರನ್ನು ಹಿಂದಿಕ್ಕಬಹುದು.
ಭಾರತ vs ನ್ಯೂಜಿಲೆಂಡ್ ನಡುವೆ ಫೈನಲ್ ಪಂದ್ಯ
ಭಾರತ ಹಾಗೂ ನ್ಯೂಜಿಲೆಂಡ್ ತಂಡಗಳ ನಡುವಣ 2025ರ ಐಸಿಸಿ ಚಾಂಪಿಯನ್ಸ್ ಟ್ರೋಫಿ ಟೂರ್ನಿಯ ಫೈನಲ್ ಪಂದ್ಯ ಮಾರ್ಚ್ 9 ರಂದು ಭಾನುವಾರ ದುಬೈ ಇಂಟರ್‌ನ್ಯಾಷನಲ್ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆಯಲಿದೆ. ಭಾರತ ತಂಡ ಲೀಗ್ ಹಂತದಲ್ಲಿ ಬಾಂಗ್ಲಾದೇಶ, ಪಾಕಿಸ್ತಾನ ಹಾಗೂ ನ್ಯೂಜಿಲೆಂಡ್ ತಂಡಗಳನ್ನು ಮಣಿಸಿ ಸೆಮಿಫೈನಲ್‌ಗೆ ಪ್ರವೇಶ ಮಾಡಿತ್ತು. ಅಂತಿಮ ನಾಲ್ಕರ ಹಂತದಲ್ಲಿ ಬಲಿಷ್ಠ ಆಸ್ಟ್ರೇಲಿಯಾ ವಿರುದ್ದ ಟೀಮ್ ಇಂಡಿಯಾ ಫೈನಲ್‌ಗೆ ಪ್ರವೇಶ ಮಾಡಿತ್ತು.