IND vs SA: ಕ್ವಿಂಟಕ್ ಡಿ ಕಾಕ್ ಅಬ್ಬರ, ಭಾರತ ತಂಡಕ್ಕೆ ತಿರುಗೇಟು ನೀಡಿದ ದಕ್ಷಿಣ ಆಫ್ರಿಕಾ!
IND vs SA 2nd T20I Highlights: ಬ್ಯಾಟಿಂಗ್ ಹಾಗೂ ಬೌಲಿಂಗ್ ವೈಫಲ್ಯದಿಂದಾಗಿ ಭಾರತ ತಂಡ, ಎರಡನೇ ಟಿ20ಐ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ 51 ರನ್‌ಗಳಿಂದ ಸೋಲು ಅನುಭವಿಸಿದೆ. ಮೊದಲನೇ ಪಂದ್ಯವನ್ನು ಸೋತಿದ್ದ ಹರಿಣ ಪಡೆ, ಕ್ವಿಂಟನ್ ಡಿ ಕಾಕ್ ಸ್ಪೋಟಕ ಬ್ಯಾಟಿಂಗ್ ನೆರವಿನಿಂದ ಗೆದ್ದು 5 ಪಂದ್ಯಗಳ ಸರಣಿಯಲ್ಲಿ 1-1 ಸಮಬಲ ಕಾಯ್ದುಕೊಂಡಿದೆ.
ದಕ್ಷಿಣ ಆಫ್ರಿಕಾ ಎದುರು ಎರಡನೇ ಟಿ20 ಸೋತ ಭಾರತ. -
ಮುಲ್ಲಾನ್‌ಪುರ: ಕ್ವಿಂಟನ್ ಡಿ ಕಾಕ್ (90 ರನ್) ಅವರ ಸ್ಪೋಟಕ ಬ್ಯಾಟಿಂಗ್ ಬಲದಿಂದ ದಕ್ಷಿಣ ಆಫ್ರಿಕಾ ತಂಡ ಎರಡನೇ ಟಿ20ಐ ಪಂದ್ಯದಲ್ಲಿ(IND vs SA) ಭಾರತ ತಂಡದ ವಿರುದ್ಧ 51 ರನ್‌ಗಳ ಗೆಲುವು ಪಡೆದಿದೆ. ಆ ಮೂಲಕ ಐದು ಪಂದ್ಯಗಳ ಟಿ20ಐ ಸರಣಿಯನ್ನು 1-1 ಅಂತರದಲ್ಲಿ ಸಮಬಲ ಕಾಯ್ದುಕೊಂಡಿದೆ. ಹರಿಣ ಪಡೆಯ ಗೆಲುವಿನಲ್ಲಿ ಪ್ರಮುಖ ಪಾತ್ರವನ್ನು ವಹಿಸಿದ ಆರಂಭಿಕ ಬ್ಯಾಟ್ಸ್‌ಮನ್ ಡಿ ಕಾಕ್ (Quinton De Kock), 46 ಎಸೆತಗಳಲ್ಲಿ 7 ಸಿಕ್ಸರ್ ಹಾಗೂ 5 ಬೌಂಡರಿಗಳೊಂದಿಗೆ 90 ರನ್‌ಗಳನ್ನು ಬಾರಿಸಿದರು ಹಾಗೂ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು. ಇನ್ನು ತಿಲಕ್ ವರ್ಮಾ (Tilak Verma) ಏಕಾಂಗಿ ಹೋರಾಟದ ಹೊರತಾಗಿಯೂ ಬೌಲಿಂಗ್ ಹಾಗೂ ಬ್ಯಾಟಿಂಗ್ ಎರಡೂ ವಿಭಾಗಗಳಲ್ಲಿ ವೈಫಲ್ಯ ಅನುಭವಿಸಿದ ಟೀಮ್ ಇಂಡಿಯಾ ಪಂದ್ಯವನ್ನು ಸೋತು, ತವರು ಅಭಿಮಾನಿಗಳ ಎದುರು ಮುಖಭಂಗ ಅನುಭವಿಸಿತು.
ಗುರುವಾರ ಇಲ್ಲಿನ ಮಹಾರಾಜ ಯದವೀಂದ್ರ ಸಿಂಗ್ ಇಂಟರ್‌ನ್ಯಾಷನಲ್ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆದಿದ್ದ ಎರಡನೇ ಟಿ20ಐ ಪಂದ್ಯದಲ್ಲಿ ಟಾಸ್ ಗೆದ್ದಿದ್ದ ಭಾರತ ತಂಡದ ನಾಯಕ ಸೂರ್ಯಕುಮಾರ್ ಯಾದವ್ ಬೌಲಿಂಗ್ ಆಯ್ಕೆ ಮಾಡಿಕೊಂಡಿದ್ದರು. ಆದರೆ, ಬೌಲರ್‌ಗಳು ಪ್ರವಾಸಿ ಬ್ಯಾಟ್ಸ್‌ಮನ್‌ಗಳ ಎದುರು ಪರಿಣಾಮಕಾರಿಯಾಗುವಲ್ಲಿ ವಿಫಲರಾದರು. ಇದನ್ನು ಸದುಪಯೋಗಪಡಿಸಿಕೊಂಡ ಹರಿಣ ಪಡೆಯ ಆರಂಭಿಕ ಕ್ವಿಂಟನ್ ಡಿ ಕಾಕ್, ಸ್ಪೋಟಕ ಅರ್ಧಶತಕ ಬಾರಿಸಿದರು ಹಾಗೂ ದಕ್ಷಿಣ ಆಫ್ರಿಕಾ ತಂಡ ತನ್ನ ಪಾಲಿನ 20 ಓವರ್‌ಗಳಿಗೆ 4 ವಿಕೆಟ್‌ಗಳ ನಷ್ಟಕ್ಕೆ 213 ರನ್‌ಗಳನ್ನು ಕಲೆ ಹಾಕಲು ನೆರವು ನೀಡಿದ್ದರು. ಡಿ ಕಾಕ್ ಜೊತೆಗೆ ನಾಯಕ ಏಡೆನ್ ಮಾರ್ಕ್ರಮ್ (29) ಡೊನೊವಾನ್ ಪೆರಾರಿ (30) ಅವರು ಕೂಡ ದಕ್ಷಿಣ ಆಫ್ರಿಕಾ ತಂಡಕ್ಕೆ ಉಪಯುಕ್ತ ಕಾಣಿಕೆಯನ್ನು ನೀಡಿದ್ದರು.
IND vs SA: ಒಂದೇ ಓವರ್‌ನಲ್ಲಿ 7 ವೈಡ್ ಹಾಕಿದ ಅರ್ಷದೀಪ್ ಸಿಂಗ್ ವಿರುದ್ಧ ಗಂಭೀರ್ ಕಿಡಿ!
ಫೀಲ್ಡಿಂಗ್ ತೆಗೆದುಕೊಂಡ ನಾಯಜ ಸೂರ್ಯಕುಮಾರ್ ನಿರ್ಧಾರವನ್ನು ಭಾರತ ತಂಡದ ಬೌಲಿಂಗ್ ವಿಭಾಗ ಸಂಪೂರ್ಣ ವಿಫಲಗೊಳಿಸಿತು. ಸ್ಪಿನ್ನರ್ ವರುಣ್ ಚಕ್ರವರ್ತಿ (29ಕ್ಕೆ 2) ಅವರನ್ನು ಹೊರತುಪಡಿಸಿ ಇನ್ನುಳಿದ ಎಲ್ಲಾ ಬೌಲರ್‌ಗಳು 9ಕ್ಕಿಂಯ ಹೆಚ್ಚಿನ ಸರಾಸರಿಯಲ್ಲಿ ರನ್ ಬಿಟ್ಟುಕೊಟ್ಟರು. ಇದರಲ್ಲಿ ಲೋಕಲ್ ಬಾಯ್ ಅರ್ಷದೀಪ್ ಸಿಂಗ್ ವಿಕೆಟ್ ಪಡೆಯದೆ 54 ರನ್ ಕೊಟ್ಟರೆ, ಕೀ ವೇಗಿ ಜಸ್‌ಪ್ರೀತ್ ಬುಮ್ರಾ ಒಂದೂ ವಿಕೆಟ್ ಪಡೆಯದೆ 45 ರನ್‌ಗಳನ್ನು ಬಿಟ್ಟುಕೊಟ್ಟರು.
South Africa win the 2nd T20I by 51 runs.#TeamIndia will aim to come back strongly in the 3rd T20I in Dharamshala.
— BCCI (@BCCI) December 11, 2025
Scorecard ▶️ https://t.co/japA2CIofo#INDvSA | @IDFCFIRSTBank pic.twitter.com/P2HOiMUPDo
ಆರಂಭಿಕ ಆಘಾತ ಅನುಭವಿಸಿದ ಭಾರತ
ದಕ್ಷಿಣ ಆಫ್ರಿಕಾ ನೀಡಿದ್ದ 214 ರನ್‌ಗಳ ಗುರಿಯನ್ನು ಹಿಂಬಾಲಿಸಿದ ಭಾರತ ತಂಡಕ್ಕೆ ಉತ್ತಮ ಆರಂಭ ಸಿಗಲಿಲ್ಲ. ಉಪ ನಾಯಕ ಶುಭಮನ್ ಗಿಲ್ ಈ ಪಂದ್ಯದಲ್ಲಿಯೂ ವಿಫಲರಾದರು. ತಾನು ಎದುರಿಸಿದ ಮೊದಲನೇ ಎಸೆತದಲ್ಲಿ ಲುಂಗಿ ಎನ್ಗಿಡಿಗೆ ಗೋಲ್ಡನ್ ಡಕ್‌ಔಟ್ ಆದರು. 8 ಎಸೆತಗಳಲ್ಲಿ 18 ರನ್ ಬಾರಿಸಿದ್ದ ಅಭಿಷೇಕ್ ಶರ್ಮಾ, ಮಾರ್ಕೊ ಯೆನ್ಸನ್‌ಗೆ ಶರಣಾದರು. ನಾಲ್ಕನೇ ಕ್ರಮಾಂಕದಲ್ಲಿ ಆಡಿದ ನಾಯಕ ಸೂರ್ಯಕುಮಾರ್ ಯಾದವ್ ಮತ್ತೊಮ್ಮೆ ಕೈ ಕೊಟ್ಟರು. ಮೂರನೇ ಕ್ರಮಾಂಕಕ್ಕೆ ಬಡ್ತಿ ಪಡೆದು ಆಡಿದ ಅಕ್ಷರ್ ಪಟೇಲ್ 21 ಎಸೆತಗಳಲ್ಲಿ 21 ರನ್ ಗಳಿಸಿ ಔಟ್ ಆದರು. ಆ ಮೂಲಕ 7.3 ಓವರ್‌ಗಳಿಗೆ 67 ರನ್ ಗಳಿಸಿದರೂ ಪ್ರಮುಖ 4 ವಿಕೆಟ್‌ಗಳನ್ನು ಕಳೆದುಕೊಂಡಿತು.
Classy and stylish 👏
— BCCI (@BCCI) December 11, 2025
Tilak Varma leading #TeamIndia's chase with his 5⃣th fifty in T20Is 🔝
Updates ▶️ https://t.co/japA2CIofo#INDvSA | @IDFCFIRSTBank | @TilakV9 pic.twitter.com/Wq4c3x0grJ
ತಿಲಕ್ ವರ್ಮಾ ಏಕಾಂಗಿ ಹೋರಾಟ ವ್ಯರ್ಥ
ಮಧ್ಯಮ ಕ್ರಮಾಂಕದಲ್ಲಿ ಬ್ಯಾಟ್ ಬೀಸಿದ ತಿಲಕ್ ವರ್ಮಾ, ಕೊನೆಯ ಓವರ್‌ವರೆಗೂ ಏಕಾಂಗಿ ಹೋರಾಟ ನಡೆಸಿದರು. ಒಂದು ತುದಿಯಲ್ಲಿ ಗಟ್ಟಿಯಾಗಿ ನಿಂತು ಬ್ಯಾಟ್ ಮಾಡಿದ ತಿಲಕ್, ಹರಿಣ ಪಡೆಯ ಬೌಲರ್‌ಗಳನ್ನು ಬಲವಾಗಿ ದಂಡಿಸಿದ್ದರು. ಇವರು ಆಡಿದ 34 ಎಸೆತಗಳಲ್ಲಿ 5 ಸಿಕ್ಸರ್ ಹಾಗೂ ಎರಡು ಬೌಂಡರಿಗಳೊಂದಿಗೆ 62 ರನ್ ಗಳಿಸಿದರು. ಆ ಮೂಲಕ ಕೊನೆಯವರೆಗೂ ಏಕಾಂಗಿ ಹೋರಾಟ ನಡೆಸಿದ್ದರು. ಆದರೆ, ಮತ್ತೊಂದು ತುದಿಯಲ್ಲಿ ವಿಕೆಟ್‌ಗಳು ನಿಯಮಿತವಾಗಿ ಉರುಳುತ್ತಿದ್ದವು ಹಾಗೂ ಯಾರೊಬ್ಬರೂ ದೀರ್ಘಾವಧಿ ತಿಲಕ್‌ಗೆ ಸಾಥ್ ನೀಡಲಿಲ್ಲ. ಇದರ ಪರಿಣಾಮ ಭಾರತ, 19.1 ಓವರ್‌ಗಳಿಗೆ 162 ರನ್‌ಗಳಿಗೆ ಆಲ್‌ಔಟ್ ಆಯಿತು ಹಾಗೂ ಸೋಲು ಒಪ್ಪಿಕೊಂಡಿತು. ತಿಲಕ್‌ಗೆ ಕೆಲಕಾಲ ಸಾಥ್ ನೀಡಿದ್ದ ಹಾರ್ದಿಕ್ ಪಾಂಡ್ಯ 20 ರನ್ ಹಾಗೂ ಜಿತೀಶ್ ಶರ್ಮಾ 17 ಎಸೆತಗಳಲ್ಲಿ 27 ರನ್ ಗಳಿಸಿ ವಿಕೆಟ್ ಒಪ್ಪಿಸಿದರು.
IND vs SA: ಭಾರತ ಟಿ20 ತಂಡದಲ್ಲಿ ಸಮಸ್ಯೆ ಹುಟ್ಟು ಹಾಕಿದ ಶುಭಮನ್ ಗಿಲ್!
ದಕ್ಷಿಣ ಆಫ್ರಿಕಾ ಪರ ಮಾರಕ ಬೌಲಿಂಗ್ ದಾಳಿ ನಡೆಸಿದ ಓಟ್ನೀಲ್ ಬಾರ್ಟಮನ್ 4 ಓವರ್‌ಗಳಿಗೆ 24 ರನ್ ನೀಡಿ 4 ವಿಕೆಟ್ ಸಾಧನೆ ಮಾಡಿದರು. ಲುಂಗಿ ಎನ್ಗಿಡಿ, ಮಾರ್ಕೊ ಯೆನ್ಸನ್ ಹಾಗೂ ಲುಥೊ ಸಿಪಾಮ್ಲಾ ತಲಾ ಎರಡೆರಡು ವಿಕೆಟ್ ಪಡೆದರು.