IND sv SA: ʻಮೊಹಮ್ಮದ್ ಶಮಿಯನ್ನು ಕರೆತನ್ನಿʼ-ಗೌತಮ್ ಗಂಭೀರ್‌ಗೆ ಸೌರವ್ ಗಂಗೂಲಿ ಸಲಹೆ!
ದಕ್ಷಿಣ ಆಫ್ರಿಕಾ ವಿರುದ್ಧ ಎರಡನೇ ಟೆಸ್ಟ್ ಪಂದ್ಯದ ನಿಮಿತ್ತ ಭಾರತ ತಂಡದ ಹೆಡ್ ಕೋಚ್ ಗೌತಮ್ ಗಂಭೀರ್‌ಗೆ ಮಾಜಿ ನಾಯಕ ಹಾಗೂ ಬಿಸಿಸಿಐ ಮಾಜಿ ಅಧ್ಯಕ್ಷ ಸೌರವ್ ಗಂಗೂಲಿ ಉಪಯುಕ್ತ ಸಲಹೆಯನ್ನು ನೀಡಿದ್ದಾರೆ. ಎರಡನೇ ಟೆಸ್ಟ್ ಪಂದ್ಯಕ್ಕೆ ಹಿರಿಯ ವೇಗಿ ಮೊಹಮ್ಮದ್ ಶಮಿಯನ್ನು ಕರೆ ತನ್ನಿ ಎಂದು ಹೇಳಿದ್ದಾರೆ.
ಗೌತಮ್ ಗಂಭೀರ್‌ಗೆ ಮಹತ್ವದ ಸಲಹೆ ನೀಡಿದ ಸೌರವ್ ಗಂಗೂಲಿ. -
ನವದೆಹಲಿ: ದಕ್ಷಿಣ ಆಫ್ರಿಕಾ ವಿರುದ್ದ ಮೊದಲನೇ ಟೆಸ್ಟ್ ಪಂದ್ಯದಲ್ಲಿ (IND vs SA) ಭಾರತ ತಂಡ 30 ರನ್‌ಗಳ ಹೀನಾಯ ಸೋಲು ಅನುಭವಿಸಿದ ಬಳಿಕ ಭಾರತ ತಂಡದ ಹೆಡ್ ಕೋಚ್ ಗೌತಮ್ ಗಂಭೀರ್ (Gautam Gambhir) ಅವರ ಬಗ್ಗೆ ಹಲವು ಪ್ರಶ್ನೆಗಳು ಎದ್ದಿವೆ ಹಾಗೂ ಹಲವು ಸಲಹೆಗಳು ಕೂಡ ಕೇಳಿ ಬಂದಿವೆ. ಇದರ ನಡುವೆ ಭಾರತ ತಂಡದ ಮಾಜಿ ನಾಯಕ ಹಾಗೂ ಬಿಸಿಸಿಐ ಮಾಜಿ ಅಧ್ಯಕ್ಷ ಸೌರವ್ ಗಂಗೂಲಿ (Sourav Ganguly) ಅವರು ಹೆಡ್ ಕೋಚ್ ಗೌತಮ್ ಗಂಭೀರ್‌ಗೆ ಮಹತ್ವದ ಸಲಹೆಯನ್ನು ನೀಡಿದ್ದಾರೆ. ಎರಡನೇ ಟೆಸ್ಟ್ ಪಂದ್ಯಕ್ಕೆ ಹಿರಿಯ ವೇಗಿ ಮೊಹಮದ್ ಶಮಿ ಅವರನ್ನು ಕರೆ ತನ್ನಿ ಎಂದು ಸಲಹೆ ನೀಡಿದ್ದಾರೆ. ಭಾನುವಾರ ದಕ್ಷಿಣ ಆಫ್ರಿಕಾ ತಂಡ 30 ರನ್‌ಗಳಿಂದ ಭಾರತ ತಂಡವನ್ನು ಮಣಿಸಿತ್ತು. ಆ ಮೂಲಕ 15 ವರ್ಷಗಳ ಬಳಿಕ ಇದೇ ಮೊದಲ ಬಾರಿ ಭಾರತದ ನೆಲದಲ್ಲಿ ಹರಿಣ ಪಡೆ ಟೆಸ್ಟ್ ಪಂದ್ಯವನ್ನು ಗೆದ್ದಂತಾಯಿತು.
2023ರಲ್ಲಿ ಆಸ್ಟ್ರೇಲಿಯಾ ವಿರುದ್ಧ ವಿಶ್ವ ಟೆಸ್ಟ್ ಚಾಂಪಿಯನ್‌ಷಿಪ್ ಫೈನಲ್‌ನಲ್ಲಿ ಭಾರತ ತಂಡದ ಪರ ಕೊನೆಯ ಬಾರಿ ಮೊಹಮ್ಮದ್ ಶಮಿ ಟೆಸ್ಟ್ ಪಂದ್ಯವನ್ನು ಆಡಿದ್ದರು. ಇದಾದ ಬಳಿಕ ಗಾಯಕ್ಕೆ ತುತ್ತಾಗಿದ್ದ ಅವರು ಭಾರತ ತಂಡಕ್ಕೆ ಕಮ್‌ಬ್ಯಾಕ್ ಮಾಡಲು ಸಾಧ್ಯವಾಗಿಲ್ಲ. ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯಿಂದಲೂ ಅವರನ್ನು ರಾಷ್ಟ್ರೀಯ ಟೆಸ್ಟ್ ತಂಡದಿಂದ ಕಡೆಗಣಿಸಲಾಗುತ್ತಿದೆ. ವೆಸ್ಟ್ ಇಂಡೀಸ್ ನಂತರ, ಇದೀಗ ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್ ಸರಣಿಯಿಂದಲೂ ಅವರನ್ನು ಕೈ ಬಿಡಲಾಗಿದೆ.
ಸ್ಪೋರ್ಟ್ಸ್ ತಕ್ ಜೊತೆ ಮಾತನಾಡಿದ ಸೌರವ್ ಗಂಗೂಲಿ, ಮೊಹಮ್ಮದ್ ಶಮಿ ಅವರ ಮೇಲೆ ಗೌತಮ್ ಗಂಭೀರ್ ವಿಶ್ವಾಸವನ್ನು ಇಡಬೇಕಾದ ಅಗತ್ಯವಿದೆ. ಮೊಹಮ್ಮದ್ ಶಮಿ, ಜಸ್‌ಪ್ರೀತ್ ಬುಮ್ರಾ ಹಾಗೂ ಮೊಹಮ್ಮದ್ ಶಮಿ ಅವರ ಮೇಲೆ ನಂಬಿಕೆಯನ್ನು ಇಡಬೇಕು. ಶಮಿ ಹಾಗೂ ಸ್ಪಿನ್ನರ್‌ಗಳು ಭಾರತ ತಂಡಕ್ಕೆ ಟೆಸ್ಟ್ ಪಂದ್ಯವನ್ನು ಗೆದ್ದು ಕೊಡಬಲ್ಲರು ಎಂದು ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.
IND vs SA: ʻಗೌತಮ್ ಗಂಭೀರ್ ಭಾರತ ತಂಡದ ಅತ್ಯಂತ ಕೆಟ್ಟ ಕೋಚ್ʼ-ರೊಚ್ಚಿಗೆದ್ದ ಅಭಿಮಾನಿಗಳು!
"ನನಗೆ ಗೌತಮ್ ಎಂದರೆ ತುಂಬಾ ಇಷ್ಟ; ಅವರು 2011 ಮತ್ತು ಟಿ20 ವಿಶ್ವಕಪ್ ಟೂರ್ನಿಗಳಲ್ಲಿ ಉತ್ತಮ ಪ್ರದರ್ಶನವನ್ನು ತೋರಿದ್ದಾರೆ. ಅವರು ಸ್ವಲ್ಪ ಕಾಲ ಮುಂದುವರಿಯುತ್ತಾರೆ, ಆದರೆ ಅವರು ಭಾರತದ ಉತ್ತಮ ಪಿಚ್‌ಗಳಲ್ಲಿ ಆಡಬೇಕು. ಅವರು ಬುಮ್ರಾ, ಸಿರಾಜ್ ಮತ್ತು ಶಮಿ ಅವರ ಮೇಲೆ ನಂಬಿಕೆ ಇಡಬೇಕು," ಎಂದು ಸ್ಪೋರ್ಟ್ಸ್ ಟಕ್ ಜೊತೆ ಮಾತನಾಡುವಾಗ ಗಂಗೂಲಿ ಈ ರೀತಿ ಹೇಳಿದರು.
"ಭಾರತ ಟೆಸ್ಟ್ ತಂಡದಲ್ಲಿ ಆಡಲು ಮೊಹಮ್ಮದ್ ಶಮಿ ಅರ್ಹರಾಗಿದ್ದಾರೆ. ಶಮಿ ಹಾಗೂ ಸ್ಪಿನ್ನರ್‌ಗಳು ಭಾರತ ತಂಡವನ್ನು ಗೆಲ್ಲಿಸಬಲ್ಲರು," ಎಂದು ಅವರು ಭವಿಷ್ಯ ನುಡಿದಿದ್ದಾರೆ.
ಗಾಯದಿಂದ ಗುಣಮುಖರಾಗಿ ದೇಶಿ ಕ್ರಿಕೆಟ್‌ಗೆ ಮರಳಿದ ಬಳಿಕ ಮೊಹಮ್ಮದ್ ಶಮಿ ಪಶ್ಚಿಮ ಬಂಗಾಳ ಪರ ಆಡಿದ 4 ಪಂದ್ಯಗಳಿಂದ 17 ವಿಕೆಟ್‌ಗಳನ್ನು ಕಬಳಿಸಿದ್ದಾರೆ. ಆ ಮೂಲಕ ಎಲ್ಲರ ಗಮನವನ್ನು ಸೆಳೆದಿದ್ದಾರೆ. ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್ ಸರಣಿಗೆ ಆಯ್ಕೆಯಾಗಬಹುದೆಂದು ಶಮಿ ನಿರೀಕ್ಷೆ ಮಾಡಿದ್ದರು. ಆದರೆ, ಬಿಸಿಸಿಐ ಆಯ್ಕೆ ಸಮಿತಿಯು ಹಿರಿಯ ವೇಗಿಗೆ ನಿರಾಶೆ ಮೂಡಿಸಿತ್ತು.
IND vs SA:ಆಸ್ಪತ್ರೆಯಿಂದ ಡಿಸ್ಚಾರ್ಜ್ ಆದ ಶುಭಮನ್ ಗಿಲ್ ಎರಡನೇ ಟೆಸ್ಟ್‌ಗೆ ಅನುಮಾನ!
ಉತ್ತಮ ವಿಕೆಟ್‌ಗಳಲ್ಲಿ ಆಡುವಂತೆ ಗಂಗೂಲಿ ಸಲಹೆ
"ಉತ್ತಮ ವಿಕೆಟ್‌ಗಳಲ್ಲಿ ಆಡಿ. ಈ ಮಾತನ್ನು ಗೌತಮ್ ಗಂಭೀರ್ ಕೇಳುತ್ತಿದ್ದಾರೆಂದು ನಾನು ಭಾವಿಸುತ್ತೇನೆ. ಅವರು ಪಂದ್ಯವನ್ನು ಪಿಚ್‌ನಿಂದ ಹೊರಗೆ ತೆಗೆದುಕೊಳ್ಳಬೇಕು. ಏಕೆಂದರೆ ಅವರ ಬ್ಯಾಟ್ಸ್‌ಮನ್‌ಗಳಿಂದ 300 ರಿಂದ 400 ರನ್‌ಗಳು ಮೂಡಿ ಬರುತ್ತಿಲ್ಲ. ಅವರು ಇನ್ನೂ ಟೆಸ್ಟ್ ಪಂದ್ಯಗಳನ್ನು ಗೆಲ್ಲುತ್ತಿಲ್ಲ," ಎಂದು ಸೌರವ್ ಗಂಗೂಲಿ ತಿಳಿಸಿದ್ದಾರೆ.
"ಇಂಗ್ಲೆಂಡ್‌ನಲ್ಲಿ ಬ್ಯಾಟ್ಸ್‌ಮನ್‌ಗಳು ರನ್‌ಗಳನ್ನು ಕಲೆ ಹಾಕಿದ್ದರು. ಈ ಕಾರಣದಿಂದಲೇ ಭಾರತ ತಂಡ ಆಂಗ್ಲರ ನಾಡಿಯಲ್ಲಿ ಟೆಸ್ಟ್ ಪಂದ್ಯಗಳನ್ನು ಗೆದ್ದಿದ್ದರು. ಅವರು ಖಂಡಿತವಾಗಿಯೂ ಉತ್ತಮ ವಿಕೆಟ್‌ಗಳಲ್ಲಿ ಆಡಬೇಕಾಗಿದೆ ಹಾಗೂ ಗಂಭೀರ್ ತಮ್ಮ ಆಟಗಾರರ ಮೇಲೆ ನಂಬಿಕೆ ಇಡಬೇಕು. ಟೆಸ್ಟ್ ಪಂದ್ಯ ಐದು ದಿನಗಳ ನಡೆಯಬೇಕು, ಮೂರು ದಿನಗಳ ಕಾಲ ಅಲ್ಲ," ಎಂದು ಬಿಸಿಸಿಐ ಮಾಜಿ ಅಧ್ಯಕ್ಷ ಹೇಳಿದ್ದಾರೆ.