IND vs SL: ಭಾರತ ತಂಡದ ವೇಗದ ಬೌಲರ್‌ಗಳಿಗೆ ಉಪಯುಕ್ತ ಸಲಹೆ ನೀಡಿದ ಜಾವಗಲ್ ಶ್ರೀನಾಥ್!
ಭಾರತ ತಂಡದಲ್ಲಿ ವೇಗದ ಬೌಲರ್‌ಗಳ ವರ್ಕ್‌ಲೋಡ್ ಮ್ಯಾನೇಜ್‌ಮೆಂಟ್ ಬಗ್ಗೆ ಮಾಜಿ ವೇಗದ ಬೌಲರ್ ಜಾವಗಲ್ ಶ್ರೀನಾಥ್ ಬೆಳಕು ಚೆಲ್ಲಿದ್ದಾರೆ. ಪಂದ್ಯದಲ್ಲಿ ಏಕಾ ಏಕಿಯಾಗಿ ವೇಗದ ಬೌಲರ್‌ಗಳಿಗೆ ದೀರ್ಘಾವಧಿ ಸ್ಪೆಲ್‌ಗಳನ್ನು ನೀಡಬಾರದು. ಬೌಲರ್‌ಗಳು ಪ್ರತ್ಯೇಕವಾಗಿ ಕಾರ್ಯತಂತ್ರ ರೂಪಿಸಿದೆ, ಒಗ್ಗಟ್ಟಾಗಿ ರಣತಂತ್ರ ರೂಪಿಸಿ ಆಡಿದರೆ ತಂಡಕ್ಕೆ ಸಕ್ಸಸ್ ತಂದುಕೊಡಬಹುದು ಎಂದಿದ್ದಾರೆ.
ಭಾರತದ ಬೌಲರ್‌ಗಳಿಗೆ ಜಾವಗಲ್ ಶ್ರೀನಾಥ್ ಮಹತ್ವದ ಸಲಹೆ. -
ನವದೆಹಲಿ: ಒಂದು ತಂಡದ ಯಶಸ್ಸಿಗೆ ಬಲಿಷ್ಠ ವೇಗದ ಬೌಲರ್‌ಗಳ ಗುಂಪು ಹೊಂದಿರುವುದು ಹಾಗೂ ಅವರ ಕೆಲಸದ ಹೊರೆ (ವರ್ಕ್‌ಲೋಡ್) ಸರಿಯಾಗಿ ನಿರ್ವಹಿಸುವುದು ಅತ್ಯಂತ ಮುಖ್ಯ ಎಂದು ಭಾರತ ಕ್ರಿಕೆಟ್ ತಂಡದ (Indian Cricket team) ಮಾಜಿ ವೇಗಿ ಜಾವಗಲ್ ಶ್ರೀನಾಥ್ (Javagal Srinath) ಹೇಳಿದ್ದಾರೆ. 56ರ ವಯಸ್ಸಿನ ಕನ್ನಡಿಗ, ವೇಗದ ಬೌಲಿಂಗ್ ದಾಳಿಯ ರಚನೆಯು ಆಟಗಾರರ ವೈಯಕ್ತಿಕ ಫಿಟ್ನೆಸ್ ಮಾತ್ರವಲ್ಲದೆ, ಇಡೀ ತಂಡದ ಪ್ರದರ್ಶನದ ಮೇಲೂ ನೇರ ಪರಿಣಾಮ ಬೀರುತ್ತದೆ ಎಂದು ಒತ್ತಿಹೇಳಿದ್ದಾರೆ. ಈ ಹಿಂದೆ ಭಾರತದ ಪ್ರಮುಖ ವೇಗದ ಬೌಲರ್ ಆಗಿ ಹೆಚ್ಚಿನ ಪಂದ್ಯಗಳಲ್ಲಿ ಏಕಾಂಗಿಯಾಗಿ ಬೌಲಿಂಗ್ ದಾಳಿಯನ್ನು ಮುನ್ನಡೆಸಿದ್ದ ತಮ್ಮ ಅನುಭವವನ್ನು ಇವರು ಹಂಚಿಕೊಂಡಿದ್ದಾರೆ.
ಪ್ಯಾನೆಲ್ ಚರ್ಚೆಯೊಂದರಲ್ಲಿ ಮಾತನಾಡಿದ ಜಾವಗಲ್ ಶ್ರೀನಾಥ್, “ವೇಗದ ಬೌಲಿಂಗ್ ಎನ್ನುವುದು ಒಬ್ಬ ಬೌಲರ್‌ನ ಕೆಲಸವಲ್ಲ, ಅದು ಬೌಲರ್‌ಗಳ ಗುಂಪಿನ ಪ್ರಯತ್ನ ಎಂದು ನಾನು ಯಾವಾಗಲೂ ನಂಬಿದ್ದೇನೆ. ಇದು ಶಕ್ತಿಯನ್ನು ಉಳಿಸಿಕೊಳ್ಳುವ ವಿಚಾರವೂ ಹೌದು. ಹೀಗೆ ಮಾಡಿದರೆ ಉತ್ತಮ ತಂಡವನ್ನು ಕಟ್ಟಬಹುದು. ಆದರೆ ನೀವು ಏಕಾಂಗಿಯಾಗಿದ್ದರೆ 16-17 ಓವರ್‌ಗಳನ್ನು ಬೌಲ್ ಮಾಡಿದ ನಂತರ ಪರಿಣಾಮವನ್ನು ಕಳೆದುಕೊಳ್ಳುತ್ತೀರಿ. ನಿಮ್ಮ ಬಳಿ ಮೂವರು ಅಥವಾ ನಾಲ್ವರು ಉತ್ತಮ ವೇಗದ ಬೌಲರ್‌ಗಳಿದ್ದರೆ, ತಂಡ ಯಾವಾಗಲೂ ಪರಿಣಾಮಕಾರಿಯಾಗಿರುತ್ತದೆ. ವಿಕೆಟ್ ಪಡೆಯುವ ಸಾಮರ್ಥ್ಯವೂ ಹೆಚ್ಚಾಗಿರುತ್ತದೆ,” ಎಂದು ಹೇಳಿದ್ದಾರೆ.
ಪಂದ್ಯದ ಅಭ್ಯಾಸವಿಲ್ಲದೆ ಇದ್ದಕ್ಕಿದ್ದಂತೆ ಬೌಲಿಂಗ್ ಕೆಲಸದ ಹೊರೆ ಹೆಚ್ಚಿಸುವುದು ವೇಗದ ಬೌಲರ್‌ಗಳಿಗೆ ಅಪಾಯಕಾರಿಯಾಗಬಹುದು ಎಂದು ಶ್ರೀನಾಥ್ ಎಚ್ಚರಿಸಿದ್ದಾರೆ. ಪಂದ್ಯಗಳಲ್ಲಿ ಸೀಮಿತ ಅವಕಾಶ ಪಡೆದ ಬಳಿಕ ಏಕಾಏಕಿ ದೀರ್ಘ ಸ್ಪೆಲ್‌ಗಳನ್ನು ಬೌಲ್ ಮಾಡುವ ಪರಿಸ್ಥಿತಿ ಎದುರಾದರೆ ಸ್ನಾಯು ಸೆಳೆತ, ಲಿಗಮೆಂಟ್ ಅಥವಾ ಹ್ಯಾಮ್‌ಸ್ಟ್ರಿಂಗ್ ಗಾಯಗಳ ಅಪಾಯ ಹೆಚ್ಚಾಗುತ್ತದೆ ಎಂದು ಅವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
SL vs IND: ಭಾರತ ತಂಡಕ್ಕೆ ಆಘಾತ, ಶ್ರೀಲಂಕಾ ಟೆಸ್ಟ್ ಸರಣಿಯಿಂದ ಸಾಯಿ ಸುದರ್ಶನ್ ಔಟ್!
“ನೀವು ಸಾಕಷ್ಟು ಬೌಲ್ ಮಾಡದೆ ಇದ್ದಕ್ಕಿದ್ದಂತೆ ಮೂರನೇ ಸ್ಪೆಲ್‌ಗೆ ಬೌಲ್ ಮಾಡಲು ಬಂದರೆ, ಅದು ಸಾಮಾನ್ಯವಾಗಿ ಮಧ್ಯಾಹ್ನ 3.30ರ ಸಮಯವಾಗಿರುತ್ತದೆ. ಆಗ ಸ್ನಾಯು ಸೆಳೆತವಾಗಬಹುದು ಅಥವಾ ಲಿಗಮೆಂಟ್, ಹ್ಯಾಮ್‌ಸ್ಟ್ರಿಂಗ್ ಸೇರಿದಂತೆ ಯಾವುದೇ ಭಾಗಕ್ಕೆ ಗಾಯವಾಗಬಹುದು. ಹೀಗಾಗಿ ಸಾಕಷ್ಟು ಪಂದ್ಯಗಳನ್ನು ಆಡಬೇಕು. ಅಂದರೆ ವರ್ಷಕ್ಕೆ ಸುಮಾರು 1000ರಿಂದ 1600 ಓವರ್‌ಗಳಷ್ಟು ಬೌಲ್ ಮಾಡುವುದು ಉತ್ತಮ ಫಿಟ್ನೆಸ್ ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ,” ಎಂದು ಶ್ರೀನಾಥ್ ಸಲಹೆ ನೀಡಿದ್ದಾರೆ.
ಬೌಲಿಂಗ್ ವರ್ಕ್‌ಲೋಡ್ ಮ್ಯಾನೇಜ್‌ಮೆಂಟ್ ಅಗತ್ಯ
ಇತ್ತೀಚಿನ ವರ್ಷಗಳಲ್ಲಿ ವೇಗದ ಬೌಲರ್‌ಗಳ ಗಾಯಗಳು ದೊಡ್ಡ ಚಿಂತೆಯಾಗಿ ಪರಿಣಮಿಸಿರುವ ಹಿನ್ನೆಲೆಯಲ್ಲಿ, ಗಾಯಗಳನ್ನು ತಡೆಯಲು ಬೌಲಿಂಗ್ ಕೆಲಸದ ಹೊರೆ ಸರಿಯಾಗಿ ನಿರ್ವಹಿಸುವ ಅಗತ್ಯವಿದೆ ಎಂಬ ಶ್ರೀನಾಥ್ ಅವರ ಸಂದೇಶ ಮಹತ್ವ ಪಡೆದಿದೆ. 1997ರಲ್ಲಿ ಭುಜದ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದ ಶ್ರೀನಾಥ್, ಉನ್ನತ ಮಟ್ಟದಲ್ಲಿ ನಿರಂತರವಾಗಿ ವೇಗದ ಬೌಲಿಂಗ್ ಮಾಡುವುದರಿಂದ ದೇಹದ ಮೇಲೆ ಉಂಟಾಗುವ ಒತ್ತಡವನ್ನು ಸ್ವತಃ ಅನುಭವಿಸಿದ್ದಾರೆ.
2026-27ರ ದೇಶಿ ಋತುವಿನ ನಿಮಿತ್ತ ಕರ್ನಾಟಕ ಕ್ರಿಕೆಟ್ ತಂಡಕ್ಕೆ ವಿನಯ್ ಕುಮಾರ್ ಹೆಡ್ ಕೋಚ್?
ವರ್ಕ್‌ಲೋಡ್ ಮ್ಯಾನೇಜ್‌ಮೆಂಟ್ ಜೊತೆಗೆ 1990ರ ದಶಕದ ಮ್ಯಾಚ್ ಫಿಕ್ಸಿಂಗ್ ಹಗರಣದ ಬಳಿಕ ಭಾರತೀಯ ಕ್ರಿಕೆಟ್‌ನ ಪಯಣದ ಬಗ್ಗೆಯೂ ಶ್ರೀನಾಥ್ ಮಾತನಾಡಿದ್ದಾರೆ. ಆ ಅವಧಿಯಲ್ಲಿ ಭಾರತೀಯ ತಂಡದ ಆಟಗಾರರು ಒಗ್ಗಟ್ಟಿನಿಂದ ತೋರಿದ ದೃಢನಿಶ್ಚಯವು ಕ್ರಿಕೆಟ್‌ನ ವಿಶ್ವಾಸಾರ್ಹತೆಯನ್ನು ಮರಳಿ ಸ್ಥಾಪಿಸಲು ಹಾಗೂ ದೇಶದ ಒಳಗೆ ಮತ್ತು ಹೊರಗೆ ಗೆಲುವಿನ ಸಂಸ್ಕೃತಿಯನ್ನು ನಿರ್ಮಿಸಲು ಪ್ರಮುಖ ಪಾತ್ರ ವಹಿಸಿತು ಎಂದು ಅವರು ಹೇಳಿದ್ದಾರೆ.
“ಮ್ಯಾಚ್ ಫಿಕ್ಸಿಂಗ್ ಹಗರಣದ ನಂತರ ಹಲವು ಒಳ್ಳೆಯ ಸಂಗತಿಗಳು ನಮ್ಮ ಪಾಲಿಗೆ ನಡೆದವು. ಭಾರತ ತಂಡದ ಪ್ರತಿಯೊಬ್ಬ ಆಟಗಾರನಲ್ಲೂ ಆ ಚಿತ್ರಣವನ್ನು ಬದಲಿಸಿ, ಕ್ರಿಕೆಟ್ ಸ್ವಚ್ಛವಾಗಿದೆ ಎಂಬುದನ್ನು ಜಗತ್ತಿಗೆ ಸಾಬೀತುಪಡಿಸಬೇಕೆಂಬ ದೃಢನಿಶ್ಚಯ ಇತ್ತು. ಪ್ರತಿಯೊಬ್ಬರೂ ನಾಯಕತ್ವದ ಗುಣ ತೋರಿಸಿದರು. ಬಳಿಕ ತಂಡ ಭಾರತದಲ್ಲಿ ಮಾತ್ರವಲ್ಲದೆ ವಿದೇಶಗಳಲ್ಲಿಯೂ ಗೆಲ್ಲಲು ಆರಂಭಿಸಿತು,” ಎಂದು ಜಾವಗಲ್ ಶ್ರೀನಾಥ್ ತಿಳಿಸಿದ್ದಾರೆ.