'ʼನಿಜವಾದ ಮುಸ್ಲಿಂ ಗೋಹತ್ಯೆ ಮಾಡುವುದಿಲ್ಲʼ': ಉತ್ತರ ಪ್ರದೇಶದ ಐಪಿಎಸ್ ಅಧಿಕಾರಿಯ ಹೇಳಿಕೆಯಿಂದ ಭುಗಿಲೆದ್ದ ವಿವಾದ
Viral Video: ಉತ್ತರ ಪ್ರದೇಶದ ರಾಮ್‌ಪುರ ಎಸ್‌ಪಿ ಅನಿಲ್ ಕುಮಾರ್ ಸಿಂಗ್ ಸಿಸೋಡಿಯಾ ʼ‘ನಿಜವಾದ ಮುಸ್ಲಿಮರು ಗೋಹತ್ಯೆ ಮಾಡುವುದಿಲ್ಲʼ’ ಎಂದು ನೀಡಿದ ಹೇಳಿಕೆ ವಿವಾದಕ್ಕೆ ಕಾರಣವಾಗಿದೆ. ಹೇಳಿಕೆ ಕುರಿತು ಸ್ಪಷ್ಟನೆ ನೀಡಿರುವ ಅವರು, ʼʼಶ್ರಾವಣ ಮಾಸದಲ್ಲಿ ಧಾರ್ಮಿಕ ಸೌಹಾರ್ದತೆ ಕಾಪಾಡುವ ಉದ್ದೇಶದಿಂದ ಮಾತನಾಡಿದ್ದು, ಯಾವುದೇ ಧರ್ಮ ಅಥವಾ ಸಮುದಾಯದ ಭಾವನೆಗಳಿಗೆ ಧಕ್ಕೆ ತರುವುದು ತಮ್ಮ ಉದ್ದೇಶವಾಗಿರಲಿಲ್ಲʼʼ ಎಂದು ಹೇಳಿದ್ದಾರೆ.
ಅನಿಲ್ ಕುಮಾರ್ ಸಿಂಗ್ ಸಿಸೋಡಿಯಾ (ಸಂಗ್ರಹ ಚಿತ್ರ) -
ಲಖನೌ, ಆ. 8: "ನಿಜವಾದ ಮುಸ್ಲಿಮರು ಗೋಹತ್ಯೆ ಮಾಡುವುದಿಲ್ಲ ಅಥವಾ ಇತರ ಸಮುದಾಯದ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುವಂತಹ ಕೆಲಸಗಳಲ್ಲಿ ತೊಡಗಿಸಿಕೊಳ್ಳುವುದಿಲ್ಲ" ಎಂದು ಉತ್ತರ ಪ್ರದೇಶದ ರಾಮ್‌ಪುರ ಪೊಲೀಸ್ ವರಿಷ್ಠಾಧಿಕಾರಿ (Rampur Superintendent of Police) ಅನಿಲ್ ಕುಮಾರ್ ಸಿಂಗ್ ಸಿಸೋಡಿಯಾ (Anil Kumar Singh Sisodia) ನೀಡಿರುವ ಹೇಳಿಕೆ ಭಾರಿ ವಿವಾದಕ್ಕೆ ಕಾರಣವಾಗಿದೆ. ವಿವಾದ ತೀವ್ರಗೊಳ್ಳುತ್ತಿದ್ದಂತೆಯೇ ಅವರು ತಮ್ಮ ಹೇಳಿಕೆಗೆ ಸ್ಪಷ್ಟನೆ ನೀಡಿದ್ದಾರೆ.
ಶ್ರಾವಣ ಮಾಸದಲ್ಲಿ ಗೋಹತ್ಯೆ ತಡೆಯುವ ಕುರಿತು ಪೊಲೀಸ್ ಲೈನ್ಸ್‌ನಲ್ಲಿ ನಡೆದ ಸಭೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಸಿಸೋಡಿಯಾ, ಗಂಜ್ ಮತ್ತು ಸ್ವಾರ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಇಂತಹ ಘಟನೆಗಳು ವರದಿಯಾಗಿವೆ ಎಂದು ತಿಳಿಸಿದರು.
ರಾಮ್‌ಪುರ ಪೊಲೀಸ್ ವರಿಷ್ಠಾಧಿಕಾರಿ ಹೇಳಿಕೆ:
"Har#*iyon ka ilaaz karna hi mera kaam hai"
— Piyush Rai (@Benarasiyaa) August 7, 2026
Anil Singh, superintendent of Police Rampur, Uttar Pradesh, explaining the difference between a "true Muslim" and "harami Muslim". pic.twitter.com/bDhl98GY4H
"ಇಸ್ಲಾಂ ಪ್ರಕಾರ, ಇನ್ನೊಬ್ಬರ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುವಂತಹ ಯಾವುದೇ ಪ್ರಾಣಿಯ ಮಾಂಸವನ್ನು ಸೇವಿಸುವುದು ಹರಾಮ್ (ನಿಷಿದ್ಧ). ನಿಜವಾದ ಮುಸ್ಲಿಂ ಎಂದಿಗೂ ಇಂತಹ ಕೃತ್ಯದಲ್ಲಿ ತೊಡಗುವುದಿಲ್ಲ. ಇಂತಹ ಚಟುವಟಿಕೆಗಳಲ್ಲಿ ತೊಡಗಿರುವವರು ಒಂದೋ ಮುಸ್ಲಿಮರಲ್ಲ, ಇಲ್ಲವೇ ಅತ್ಯಂತ ಕೀಳು ಮಟ್ಟದ ವ್ಯಕ್ತಿಗಳು. ಇಂತಹವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದು ನನ್ನ ಕರ್ತವ್ಯ" ಎಂದು ಅವರು ಹೇಳಿದರು.
ಗೋಹತ್ಯೆ ನಿಷೇಧ ಆದೇಶಕ್ಕೆ ಸುಪ್ರೀಂ ಕೋರ್ಟ್ ತಡೆ: ವಿಜಯ್ ಸರ್ಕಾರಕ್ಕೆ ಜಯ
ಇದರ ಜತೆಗೆ, ರಾಮ್‌ಪುರದ ಮುತ್ತವಲ್ಲಿಗಳು ಹಾಗೂ ಧರ್ಮಗುರುಗಳೊಂದಿಗೆ ಸಭೆ ನಡೆಸಿ ಇಂತಹ ಘಟನೆಗಳು ನಡೆಯದಂತೆ ಮನವಿ ಮಾಡುವುದಾಗಿ ಎಸ್‌ಪಿ ತಿಳಿಸಿದರು. ಅಲ್ಲದೆ, ಕಳೆದ 10 ವರ್ಷಗಳಲ್ಲಿ ಗೋಹತ್ಯೆ ಪ್ರಕರಣಗಳಲ್ಲಿ ಭಾಗಿಯಾಗಿರುವ ವ್ಯಕ್ತಿಗಳ ಸಮಗ್ರ ವಿವರ, ಜಾಮೀನು ಷರತ್ತುಗಳು ಹಾಗೂ ಜವಾಬ್ದಾರಿದಾರರ ಮಾಹಿತಿ ಒಳಗೊಂಡ ಡಾಕ್ಯುಮೆಂಟ್ ಸಿದ್ಧಪಡಿಸಿ ವಿಶೇಷ ಪರಿಶೀಲನಾ ಅಭಿಯಾನ ನಡೆಸುವಂತೆ ಪೊಲೀಸ್ ಠಾಣೆಗಳಿಗೆ ಸೂಚನೆ ನೀಡಿದರು.
ಸ್ಪಷ್ಟನೆ
ಹೇಳಿಕೆ ವಿವಾದಕ್ಕೀಡಾಗುತ್ತಿದ್ದಂತೆಯೇ ಸ್ಪಷ್ಟನೆ ನೀಡಿದ ಸಿಸೋಡಿಯಾ, "ದಾರೂಲ್ ಉಲೂಮ್ ದೇವಬಂದ್ ಸಂಸ್ಥೆಯು ಹಲವು ಬಾರಿ ನೀಡಿದ್ದ ಹೇಳಿಕೆಯನ್ನು ಉಲ್ಲೇಖಿಸಿ ನಾನು ಮಾತನಾಡಿದ್ದೆ. ಶ್ರಾವಣ ಮಾಸದಲ್ಲಿ ಪರಸ್ಪರ ಸೌಹಾರ್ದತೆ ಕಾಪಾಡಲು ಮತ್ತು ಇತರ ಸಮುದಾಯದ ಭಾವನೆಗಳಿಗೆ ಧಕ್ಕೆ ತರದಂತೆ ಸಾಮಾಜಿಕ ಮನವಿ ಮಾಡುವುದು ನನ್ನ ಉದ್ದೇಶವಾಗಿತ್ತು. ಸಮಾಜದಲ್ಲಿ ಸೌಹಾರ್ದತೆ, ಶಾಂತಿ ಮತ್ತು ಧಾರ್ಮಿಕ ಭಾವೈಕ್ಯತೆಯನ್ನು ಎತ್ತಿಹಿಡಿಯುವುದೇ ನನ್ನ ಮೂಲ ಉದ್ದೇಶವಾಗಿತ್ತೇ ವಿನಃ ಯಾವುದೇ ಧರ್ಮ, ಸಮುದಾಯ ಅಥವಾ ವ್ಯಕ್ತಿಯ ಭಾವನೆಗಳಿಗೆ ಧಕ್ಕೆ ತರುವುದು ನನ್ನ ಇರಾದೆಯಾಗಿರಲಿಲ್ಲ. ನನ್ನ ಹೇಳಿಕೆಯನ್ನು ಬೇರೆ ರೀತಿಯಲ್ಲಿ ಅರ್ಥೈಸಿಕೊಳ್ಳಲಾಗಿದ್ದು, ಯಾರಿಗಾದರೂ ನೋವಾಗಿದ್ದರೆ ಅದು ನನ್ನ ಉದ್ದೇಶವಾಗಿರಲಿಲ್ಲ" ಎಂದು ಸಿಸೋಡಿಯಾ ತಿಳಿಸಿದ್ದಾರೆ.