ʻಫ್ಲೈಯಿಂಗ್ ರೆಡ್ಡಿʼ: ಚಿರತೆಯಂತೆ ಹಾರಿ ಸ್ಟನ್ನಿಂಗ್ ಕ್ಯಾಚ್ ಪಡೆದ ನಿತೀಶ್ ರೆಡ್ಡಿ! ವಿಡಿಯೊ ನೋಡಿ
Nitish Kumar Reddy takes Stunning Catch: ವೆಸ್ಟ್ ಇಂಡೀಸ್ ವಿರುದ್ಧದ ಮೊದಲನೇ ಟೆಸ್ಟ್ ಪಂದ್ಯದ ಮೂರನೇ ದಿನ ಭಾರತ ತಂಡದ ಆಲ್‌ರೌಂಡರ್ ನಿತೀಶ್ ಕುಮಾರ್ ರೆಡ್ಡಿ ಅವರು ಫೀಲ್ಡಿಂಗ್‌ನಲ್ಲಿ ಗಮನ ಸೆಳೆದರು. ವಿಂಡೀಸ್ ದಿಗ್ಗಜ ಶಿವನಾರಾಯಣ್ ಚಂದ್ರಪಾಲ್ ಅವರ ಪುತ್ರ ಚಂದ್ರಪಾಲ್ ತ್ಯಾಗಿನಾರಾಯಣ್ ಅವರ ಸ್ಟನ್ನಿಂಗ್ ಕ್ಯಾಚ್ ಅನ್ನು ನಿತೀಶ್ ರೆಡ್ಡಿ ಪಡೆಯುವ ಮೂಲಕ ಎಲ್ಲರ ಗಮನವನ್ನು ಸೆಳೆದಿದ್ದಾರೆ.

ಚಂದ್ರಪಾಲ್ ತ್ಯಾಗಿನಾರಾಯಣ್ ಅವರ ಸ್ಟನ್ನಿಂಗ್ ಕ್ಯಾಚ್ ಪಡೆದ ನಿತೀಶ್ ರೆಡ್ಡಿ. -

ಅಹಮಾದಾಬಾದ್: ವೆಸ್ಟ್ ಇಂಡೀಸ್ ವಿರುದ್ಧದ ಮೊದಲನೇ ಟೆಸ್ಟ್ ಪಂದ್ಯದ (IND vs WI) ಪ್ರಥಮ ಇನಿಂಗ್ಸ್‌ನಲ್ಲಿ ಬ್ಯಾಟಿಂಗ್‌ಗೆ ಅವಕಾಶ ಪಡೆಯದ ಬಾರತ ತಂಡದ ಆಲ್‌ರೌಂಡರ್ ನಿತೀಶ್ ಕುಮಾರ್ ರೆಡ್ಡಿ (Nitish Kumar Reddy) ಫೀಲ್ಡಿಂಗ್‌ನಲ್ಲಿ ಗಮನವನ್ನು ಸೆಳೆದಿದ್ದಾರೆ. ಇಲ್ಲಿನ ನರೇಂದ್ರ ಮೋದಿ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಮೊದಲನೇ ಟೆಸ್ಟ್ ಪಂದ್ಯದ ಮೂರನೇ ದಿನ ನಿತೀಶ್ ಕುಮಾರ್ ರೆಡ್ಡಿ ಅವರು ವಿಂಡೀಸ್ ದಿಗ್ಗಜ ಶಿವನಾರಾಯಣ್ ಚಂದ್ರಪಾಲ್ ಅವರ ಪುತ್ರ ಚಂದ್ರಪಾಲ್ ತ್ಯಾಗಿನಾರಾಯಣ್ (Chanderpaul Tagneraine) ಅವರ ಸ್ಟನಿಂಗ್ ಕ್ಯಾಚ್ ಅನ್ನು ಗಾಳಿಯಲ್ಲಿ ಹಾರಿ ಪಡೆದರು. ಆ ಮೂಲಕ ಎಲ್ಲರ ಗಮನವನ್ನು ಸೆಳೆದಿದ್ದಾರೆ. ಈ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಅಭಿಮಾನಿಗಳು ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದಾರೆ.
ಶನಿವಾರ ಬೆಳಿಗ್ಗೆ ಭಾರತ ತಂಡ 448 ರನ್‌ಗಳಿಂದ ಪ್ರಥಮ ಇನಿಂಗ್ಸ್ ಅನ್ನು ಮುಂದುವರಿಸಬಹುದೆಂದು ನಿರೀಕ್ಷೆ ಮಾಡಲಾಗಿತ್ತು. ಆದರೆ, ಭಾರತ ತಂಡದ ನಾಯಕ ಶುಭಮನ್ ಗಿಲ್ ಪ್ರಥಮ ಇನಿಂಗ್ಸ್ ಅನ್ನು ಡಿಕ್ಲೆರ್ ಮಾಡಿಕೊಳ್ಳುವ ಮೂಲಕ ಎದುರಾಳಿ ವಿಂಡೀಸ್‌ಗೆ ಅಚ್ಚರಿ ಮೂಡಿಸಿದರು. ವೆಸ್ಟ್ ಇಂಡೀಸ್ ಪರ ಇನಿಂಗ್ಸ್ ಆರಂಭಿಸಿದ ಚಂದ್ರಪಾಲ್ ತ್ಯಾಗಿನಾರಾಯಣ್ ಹಾಗೂ ಜಾನ್ ಕ್ಯಾಂಪ್‌ಬೆಲ್ ಜೋಡಿ ಮತ್ತೊಮ್ಮೆ ವಿಫಲವಾಯಿತು. 23 ಎಸೆತಗಳಲ್ಲಿ 8 ರನ್ ಗಳಿಸಿ ಬ್ಯಾಟ್ ಮಾಡುತ್ತಿದ್ದ ಚಂದ್ರಪಾಲ್ ತ್ಯಾಗಿ ನಾರಾಯಣ್ ಅವರು, 8ನೇ ಓವರ್‌ನ ಎರಡನೇ ಎಸೆತದಲ್ಲಿ ಮೊಹಮ್ಮದ್ ಸಿರಾಜ್ ಎಸೆದ ಶಾರ್ಟ್ ಬಾಲ್ ಅನ್ನು ಫೈನ್ ಲೆಗ್ ಪಕ್ಕ ಹೊಡೆಯಲು ಪ್ರಯತ್ನಿಸಿದರು. ಆದರೆ, ನಿರೀಕ್ಷೆಗೆ ತಕ್ಕೆಂತೆ ಚೆಂಡನ್ನು ಪ್ಲೇಸ್‌ಮೆಂಟ್ ಮಾಡುವಲ್ಲಿ ತ್ಯಾಗಿನಾರಾಯಣ್ ವಿಫಲರಾದರು.
IND vs WI: ರಾಹುಲ್, ಜುರೆಲ್, ಜಡೇಜಾ ಶತಕಗಳ ಬಲದಿಂದ ದೊಡ್ಡ ಮುನ್ನಡೆಯತ್ತ ಭಾರತ!
ಫೈನ್ ಲೆಗ್‌ನಲ್ಲಿ ಚುರುಕಾಗಿ ಫೀಲ್ಡಿಂಗ್‌ನಲ್ಲಿ ತೊಡಗಿದ್ದ ನಿತೀಶ್ ಕುಮಾರ್ ರೆಡ್ಡಿ ಅವರು, ಗಾಳಿಯಲ್ಲಿ ಬರುತ್ತಿದ್ದ ಚೆಂಡನ್ನು ನೋಡಿದ ತಕ್ಷಣ ಅದಕ್ಕೆ ತಕ್ಕಂತೆ ಚಿರತೆಯಂತೆ ಹಾರಿದರು ಹಾಗೂ ಸ್ಟನ್ನಿಂಗ್ ಕ್ಯಾಚ್ ಪಡೆಯುವಲ್ಲಿ ಯಶಸ್ವಿಯಾದರು. ಆ ಮೂಲಕ ಪ್ರವಾಸಿ ತಂಡ ತನ್ನ ಮೊದಲನೇ ವಿಕೆಟ್ ಅನ್ನು ಕಳೆದುಕೊಂಡಿತು ಹಾಗೂ ಭಾರತ ತಂಡದ ಪರ ಸಿರಾಜ್ ಖಾತೆಯನ್ನು ತೆರೆದರು. ಪಂದ್ಯದ ಪ್ರಥಮ ಇನಿಂಗ್ಸ್‌ನಲ್ಲಿ ಬ್ಯಾಟಿಂಗ್‌ಗೆ ಅವಕಾಶ ಪಡೆಯದ ನಿತೀಶ್, ನಾಲ್ಕು ಓವರ್‌ಗಳನ್ನು ಬೌಲ್ ಮಾಡಿದ್ದರು. ಇದೀಗ ದ್ವಿತೀಯ ಇನಿಂಗ್ಸ್‌ನಲ್ಲಿ ಭೋಜನ ವಿರಾಮಕ್ಕೂ ಮುನ್ನ ಹೈದರಾಬಾದ್ ಆಲ್‌ರೌಂಡರ್‌ಗೆ ಬೌಲ್ ಮಾಡಲು ಅವಕಾಶ ಸಿಗಲಿಲ್ಲ. ಈ ಹಿನ್ನೆಲೆಯಲ್ಲಿ ಅವರು ಫೀಲ್ಡಿಂಗ್‌ನಲ್ಲಿ ಹೆಚ್ಚಿನ ಗಮನವನ್ನು ಹರಿಸುತ್ತಿದ್ದಾರೆ.
𝗪𝗛𝗔𝗧. 𝗔. 𝗖𝗔𝗧𝗖𝗛. 👏
— BCCI (@BCCI) October 4, 2025
Nitish Kumar Reddy grabs a flying stunner 🚀
Mohd. Siraj strikes early for #TeamIndia ☝️
Updates ▶️ https://t.co/MNXdZceTab#INDvWI | @IDFCFIRSTBank | @NKReddy07 pic.twitter.com/1Bph4oG9en
ಇನಿಂಗ್ಸ್ ಗೆಲುವಿನ ಸನಿಹದಲ್ಲಿ ಭಾರತ
ವೆಸ್ಟ್ ಇಂಡೀಸ್ ತಂಡವನ್ನು ಪ್ರಥಮ ಇನಿಂಗ್ಸ್‌ನಲ್ಲಿ 162 ರನ್‌ಗಳಿಗೆ ಆಲ್‌ಔಟ್ ಮಾಡಿದ್ದ ಭಾರತ ತಂಡ, ತನ್ನ ಮೊದಲನೇ ಇನಿಂಗ್ಸ್‌ನಲ್ಲಿ ದೊಡ್ಡ ಮೊತ್ತವನ್ನು ಕಲೆ ಹಾಕಿತ್ತು. ಕೆಎಲ್ ರಾಹುಲ್, ಧ್ರುವ್ ಜುರೆಲ್ ಹಾಗೂ ರವೀಂದ್ರ ಜಡೇಜಾ ಅವರ ಶತಕಗಳ ಬಲದಿಂದ ಟೀಮ್ ಇಂಡಿಯಾ ಪ್ರಥಮ ಇನಿಂಗ್ಸ್‌ನಲ್ಲಿ 128 ಓವರ್‌ಗಳಲ್ಲಿ 5 ವಿಕೆಟ್‌ಗಳ ನಷ್ಟಕ್ಕೆ 448 ರನ್‌ಗಳನ್ನು ಕಲೆ ಹಾಕಿತ್ತು. ಆ ಮೂಲಕ ಶುಭಮನ್ ಗಿಲ್ ನಾಯಕತ್ವದ ಟೀಮ್ ಇಂಡಿಯಾ ಪ್ರಥಮ ಇನಿಂಗ್ಸ್‌ನಲ್ಲಿ 286 ರನ್‌ಗಳ ಮುನ್ನಡೆಯನ್ನು ಪಡೆದಿದೆ. ಇದೀಗ ದ್ವಿತೀಯ ಇನಿಂಗ್ಸ್ ಆರಂಭಿಸಿದ ವಿಂಡೀಸ್, ಆರಂಭಿಕ ಆಘಾತವನ್ನು ಅನುಭವಿಸಿದೆ. ಅವರು 32 ಓವರ್‌ಗಳ ವೇಳೆಗೆ 89 ರನ್‌ಗಳಿಗೆ 5 ವಿಕೆಟ್‌ಗಳನ್ನು ಕಳೆದುಕೊಂಡಿದ್ದಾರೆ. ಪ್ರವಾಸಿ ತಂಡ ಇನ್ನೂ 197 ರನ್‌ಗಳ ಹಿನ್ನಡೆಯಲ್ಲಿದೆ. ಭಾರತ ತಂಡಕ್ಕೆ ಈ ಪಂದ್ಯವನ್ನು ಗೆಲ್ಲಲು 5 ವಿಕೆಟ್‌ಗಳ ಅಗತ್ಯವಿದೆ.