ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

IND vs WI: ಮೂರನೇ ಪಂದ್ಯದಲ್ಲಿ 5 ವಿಕೆಟ್‌ ಸೋಲಿನ ಬಳಿಕ ಭಾರತ ತಂಡಕ್ಕೆ ಭಾರಿ ದಂಡ ವಿಧಿಸಿದ ಐಸಿಸಿ!

ವೆಸ್ಟ್‌ ಇಂಡೀಸ್‌ ವಿರುದ್ಧದ ಮೂರನೇ ಏಕದಿನ ಪಂದ್ಯದಲ್ಲಿ ನಾಲ್ಕು ಓವರ್‌ಗಳ ನಿಧಾನಗತಿಯ ಬೌಲಿಂಗ್‌ ಕಾರಣ ಭಾರತ ಕ್ರಿಕೆಟ್‌ ತಂಡಕ್ಕೆ ಐಸಿಸಿ, ಪಂದ್ಯದ ಸಂಭಾವನೆಯಲ್ಲಿ ಶೇ 20 ರಂದು ಹಾಗೂ ವೆಸ್ಟ್‌ ಇಂಡೀಸ್‌ ತಂಡಕ್ಕೆ ಎರಡು ಓವರ್‌ಗಳ ನಿಧಾನಗತಿಯ ಬೌಲಿಂಗ್‌ಗೆ ಶೇ. 10ರಷ್ಟು ದಂಡವನ್ನು ವಿಧಿಸಿದೆ. ಈ ಪಂದ್ಯದಲ್ಲಿ ಭಾರತ ತಂಡ 5 ವಿಕೆಟ್‌ಗಳಿಂದ ಸೋಲು ಅನುಭವಿಸಿತ್ತು.

ಮೂರನೇ ಪಂದ್ಯದ ಬಳಿಕ ಭಾರತ ತಂಡಕ್ಕೆ ಭಾರಿ ದಂಡ ವಿಧಿಸಿದ ಐಸಿಸಿ!

ಭಾರತ, ವೆಸ್ಟ್‌ ಇಂಡೀಸ್‌ ತಂಡಗಳಿಗೆ ದಂಡ ವಿಧಿಸಿದ ಐಸಿಸಿ. -

Profile
Ramesh Kote Oct 5, 2026 3:33 PM

ನವದೆಹಲಿ: ನವ ಚಂಡೀಗಢದ ಮುಲ್ಲಾನ್‌ಪುರದಲ್ಲಿ ಶನಿವಾರ ನಡೆದಿದ್ದ ಮೂರನೇ ಹಾಗೂ ಏಕದಿನ ಸರಣಿಯ ಕೊನೆಯ ಪಂದ್ಯದಲ್ಲಿ (IND vs WI) ನಿಧಾನಗತಿಯ ಬೌಲಿಂಗ್‌ ಕಾರಣ ಭಾರತ ಹಾಗೂ ವೆಸ್ಟ್‌ ಇಂಡೀಸ್‌ ಎರಡೂ ತಂಡಗಳಿಗೂ ದಂಡವನ್ನು ವಿಧಿಸಲಾಗಿದೆ. ಶುಭಮನ್‌ ಗಿಲ್‌ (Shubaman Gill) ನಾಯಕತ್ವದ ಟೀಮ್‌ ಇಂಡಿಯಾ ನಾಲ್ಕು ಓವರ್‌ಗಳನ್ನು ನಿಧಾನಗತಿಯಲ್ಲಿ ಬೌಲ್‌ ಮಾಡಿದ್ದರೆ, ಶೇಯ್‌ ಹೋಪ್‌ (Shai Hope) ನಾಯಕ್ವದ ಪ್ರವಾಸಿ ವೆಸ್ಟ್‌ ಇಂಡೀಸ್‌ ತಂಡ ಎರಡು ಓವರ್‌ಗಳನ್ನು ನಿಧಾನಗತಿಯಲ್ಲಿ ಬೌಲ್‌ ಮಾಡಿತ್ತು. ಈ ಪಂದ್ಯದಲ್ಲಿ ಶೇಯ್‌ ಹೋಪ್‌ ಅವರ ಭರ್ಜರಿ ಬ್ಯಾಟಿಂಗ್‌ ಬಲದಿಂದ ವೆಸ್ಟ್‌ ಇಂಡೀಸ್‌ ಗೆಲುವು ಪಡೆದಿತ್ತು. ಆದರೆ, ಪಂದ್ಯದ ಸೋಲಿನ ಹೊರತಾಗಿಯೂ ಭಾರತ ತಂಡ, ಆರಂಭಿಕ ಎರಡು ಪಂದ್ಯಗಳ ಗೆಲುವಿನ ಮೂಲಕ ಏಕದಿನ ಸರಣಿಯನ್ನು 2-1 ಅಂತರದಲ್ಲಿ ಮುಡಿಗೇರಿಸಿಕೊಂಡಿತು.

“ನಿಗದಿತ ಸಮಯದಲ್ಲಿ ಅಗತ್ಯವಿರುವ ಓವರ್‌ಗಳನ್ನು ಪೂರ್ಣಗೊಳಿಸದ ಕಾರಣ ಭಾರತ ತಂಡಕ್ಕೆ ಪಂದ್ಯ ಶುಲ್ಕದ ಶೇ.20 ಹಾಗೂ ವೆಸ್ಟ್ ಇಂಡೀಸ್ ತಂಡಕ್ಕೆ ಶೇ.10 ದಂಡ ವಿಧಿಸಲಾಗಿದೆ. ಸಮಯದ ವಿನಾಯಿತಿಗಳನ್ನು ಪರಿಗಣಿಸಿದ ಬಳಿಕ ಭಾರತ ತಂಡ ನಾಲ್ಕು ಓವರ್‌ಗಳು ಹಾಗೂ ವೆಸ್ಟ್ ಇಂಡೀಸ್ ತಂಡ ಎರಡು ಓವರ್‌ಗಳಷ್ಟು ಕಡಿಮೆ ಓವರ್‌ಗಳನ್ನು ಎಸೆದಿರುವುದು ಕಂಡುಬಂದಿದೆ,” ಎಂದು ಐಸಿಸಿ ಪ್ರಕಟಣೆಯಲ್ಲಿ ತಿಳಿಸಿದೆ.

IND vs WI: ವಿಂಡೀಸ್‌ಗೆ ಜಯ ತಂದುಕೊಟ್ಟ ಶೇಯ್‌ ಹೋಪ್‌, 3ನೇ ಪಂದ್ಯ ಸೋತರೂ ಏಕದಿನ ಸರಣಿ ಗೆದ್ದ ಭಾರತ!

“ಎಮಿರೇಟ್ಸ್ ಐಸಿಸಿ ಇಂಟರ್‌ನ್ಯಾಷನಲ್ ಪ್ಯಾನೆಲ್ ಆಫ್ ಮ್ಯಾಚ್ ರೆಫರೀಸ್‌ನ ಪ್ರಕಾಶ್ ಭಟ್ ಅವರು ಈ ದಂಡವನ್ನು ವಿಧಿಸಿದ್ದಾರೆ. ಎರಡೂ ತಂಡಗಳ ನಾಯಕರು ತಮ್ಮ ತಪ್ಪನ್ನು ಒಪ್ಪಿಕೊಂಡು ಪ್ರಸ್ತಾವಿತ ದಂಡವನ್ನು ಸ್ವೀಕರಿಸಿದ್ದಾರೆ. ಹೀಗಾಗಿ ಅಧಿಕೃತ ವಿಚಾರಣೆಯ ಅಗತ್ಯ ಎದುರಾಗಲಿಲ್ಲ. ಮೈದಾನ ಅಂಪೈರ್‌ಗಳಾದ ಜಯರಾಮನ್ ಮದನಗೋಪಾಲ್ ಮತ್ತು ಸ್ಯಾಮ್ ನೊಗಾಜ್ಸ್ಕಿ, ಮೂರನೇ ಅಂಪೈರ್ ಶರ್ಫುದ್ದೌಲಾ ಇಬ್ನೆ ಶಾಹಿದ್ ಹಾಗೂ ನಾಲ್ಕನೇ ಅಂಪೈರ್ ವೀರೇಂದ್ರ ಶರ್ಮಾ ಅವರು ಈ ಪ್ರಕರಣದಲ್ಲಿ ಆರೋಪಗಳನ್ನು ದಾಖಲಿಸಿದ್ದರು” ಎಂದು ಐಸಿಸಿ ತಿಳಿಸಿದೆ.

ವೆಸ್ಟ್ ಇಂಡೀಸ್ ವಿರುದ್ಧ ಭಾರತಕ್ಕೆ ಏಕದಿನ ಸರಣಿ ಗೆಲುವು

ವೆಸ್ಟ್ ಇಂಡೀಸ್ ವಿರುದ್ಧದ ಮೂರು ಪಂದ್ಯಗಳ ಏಕದಿನ ಸರಣಿಯನ್ನು ಭಾರತ 2-1 ಅಂತರದಲ್ಲಿ ಗೆದ್ದುಕೊಂಡಿದೆ. ಮೂರನೇ ಏಕದಿನ ಪಂದ್ಯದಲ್ಲಿ ಭಾರತ 5 ವಿಕೆಟ್‌ಗಳಿಂದ ಸೋತರೂ, ಮೊದಲ ಎರಡು ಪಂದ್ಯಗಳಲ್ಲಿ ದಾಖಲಿಸಿದ ಗೆಲುವಿನ ಆಧಾರದ ಮೇಲೆ ಸರಣಿಯನ್ನು ತನ್ನದಾಗಿಸಿಕೊಂಡಿತು.

ವಿಶ್ವಕಪ್ ಸಮೀಪಿಸುತ್ತಿರುವಾಗ ಈ ಪ್ರದರ್ಶನದ ಅಗತ್ಯವಿತ್ತು; ಕೆ.ಎಲ್. ರಾಹುಲ್

ಮೂರನೇ ಏಕದಿನ ಪಂದ್ಯದಲ್ಲಿ ಭಾರತ ತಂಡದ ನಾಯಕ ಶುಭಮನ್ ಗಿಲ್ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡರು. 50 ಓವರ್‌ಗಳಲ್ಲಿ ಭಾರತ 7 ವಿಕೆಟ್ ನಷ್ಟಕ್ಕೆ 351 ರನ್‌ಗಳ ಬೃಹತ್ ಮೊತ್ತ ಕಲೆಹಾಕಿತು. ಕೆಎಲ್ ರಾಹುಲ್ ಅಜೇಯ 129 ರನ್ ಹಾಗೂ ರೋಹಿತ್ ಶರ್ಮಾ 92 ರನ್ ಗಳಿಸಿ ತಂಡದ ಬೃಹತ್ ಮೊತ್ತಕ್ಕೆ ಪ್ರಮುಖ ಕೊಡುಗೆ ನೀಡಿದರು.

352 ರನ್‌ಗಳ ಕಠಿಣ ಗುರಿ ಬೆನ್ನಟ್ಟಿದ ವೆಸ್ಟ್ ಇಂಡೀಸ್ 48.2 ಓವರ್‌ಗಳಲ್ಲಿ ಕೇವಲ 5 ವಿಕೆಟ್ ಕಳೆದುಕೊಂಡು ಗುರಿ ತಲುಪಿತು. ನಾಯಕ ಶೇಯ್‌ ಹೋಪ್ ಅಮೋಘ ಬ್ಯಾಟಿಂಗ್ ಪ್ರದರ್ಶಿಸಿ 143 ಎಸೆತಗಳಲ್ಲಿ 162 ರನ್‌ಗಳ ಭರ್ಜರಿ ಇನ್ನಿಂಗ್ಸ್ ಆಡಿದರು. ಹೋಪ್‌ಗೆ ಉತ್ತಮ ಸಾಥ್ ನೀಡಿದ ವೆಸ್ಟ್ ಇಂಡೀಸ್‌ನ ಮೂರನೇ ಕ್ರಮಾಂಕದ ಬ್ಯಾಟರ್ ಆಮಿರ್ ಜಂಗೂ ಅರ್ಧಶತಕ ದಾಖಲಿಸಿದರು. ಐದನೇ ಕ್ರಮಾಂಕದ ಕೀಮೋ ಪಾಲ್ ಕೂಡ 40ಕ್ಕೂ ಹೆಚ್ಚು ರನ್ ಗಳಿಸಿ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು.

ಭಾರತದಲ್ಲಿ ಅದ್ಭುತ ಪ್ರದರ್ಶನಕ್ಕೆ ಧೋನಿ ನೀಡಿದ ಸಲಹೆ ರಿವೀಲ್‌ ಮಾಡಿದ ಶಾಯ್ ಹೋಪ್

ಟಿ20ಐ ಸರಣಿಯಲ್ಲಿ ಭಾರತ vs ವಿಂಡೀಸ್‌ ಕಾದಾಟ

ಏಕದಿನ ಸರಣಿ ಮುಕ್ತಾಯಗೊಂಡಿದ್ದು, ಇದೀಗ ಭಾರತ ಮತ್ತು ವೆಸ್ಟ್ ಇಂಡೀಸ್ ನಡುವೆ ಐದು ಪಂದ್ಯಗಳ ಟಿ20 ಸರಣಿ ನಡೆಯಲಿದೆ. ಅಕ್ಟೋಬರ್ 6ರಂದು ಲಖನೌನಲ್ಲಿ ಮೊದಲ ಟಿ20 ಪಂದ್ಯ ನಡೆಯಲಿದೆ. ಟಿ20 ಸರಣಿಗಾಗಿ ಭಾರತ ತಂಡಕ್ಕೆ ಸುಮಾರು ಎಂಟು ಹೊಸ ಆಟಗಾರರು ಸೇರ್ಪಡೆಯಾಗಿದ್ದಾರೆ. ಎರಡು ಬಾರಿ ಟಿ20 ವಿಶ್ವಕಪ್ ಗೆದ್ದಿರುವ ವೆಸ್ಟ್ ಇಂಡೀಸ್ ತಂಡವನ್ನು ಶೇಯ್‌ ಹೋಪ್ ಮುನ್ನಡೆಸಲಿದ್ದಾರೆ.