Asian Games 2026 final: ಚಿನ್ನದ ಪದಕಕ್ಕಾಗಿ ಅ 3 ರಂದು ಭಾರತ vs ಪಾಕಿಸ್ತಾನ ಕಾದಾಟ!
ಶ್ರೀಲಂಕಾ ವಿರುದ್ಧ ಸೆಮಿಫೈನಲ್ ಪಂದ್ಯದಲ್ಲಿ ಭರ್ಜರಿ ಗೆಲುವು ದಾಖಲಿಸಿದ ಭಾರತ ತಂಡ, ಅಕ್ಟೋಬರ್ 3 ರಂದು 2026ರ ಏಷ್ಯಾ ಕ್ರೀಡಾಕೂಟದ ಫೈನಲ್ ಪಂದ್ಯದಲ್ಲಿ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನದ ವಿರುದ್ಧ ಕಾದಾಟ ನಡೆಸಲಿದೆ. ಈ ಹೈವೋಲ್ಟೇಜ್ ಪಂದ್ಯವನ್ನು ಕಣ್ತುಂಬಿಸಿಕೊಳ್ಳಲು ಕ್ರಿಕೆಟ್ ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ.
ಭಾರತ vs ಪಾಕಿಸ್ತಾನ ನಡುವೆ ಅಕ್ಟೋಬರ್ 3 ರಂದು ಫೈನಲ್. -
ನವದೆಹಲಿ: ಸಾಂಪ್ರದಾಯಿಕ ಎದುರಾಳಿಗಳಾದ ಭಾರತ ಹಾಗೂ ಪಾಕಿಸ್ತಾನ (IND vs PAK) ಕ್ರಿಕೆಟ್ ತಂಡಗಳ ನಡುವಣ ಹೈವೋಲ್ಟೇಜ್ ಕಾದಾಟಕ್ಕೆ ಜಪಾನ್‌ನ ನಿಶಿನ್‌ನಲ್ಲಿ ವೇದಿಕೆ ಸಜ್ಜಾಗುತ್ತಿದೆ. ಹೌದು, 2026ರ ಏಷ್ಯಾ ಕ್ರೀಡಾಕೂಟ (Asian Games 2026) ಕ್ರಿಕೆಟ್‌ನ ಫೈನಲ್‌ಗೆ ಭಾರತ ಹಾಗೂ ಪಾಕಿಸ್ತಾನ ತಂಡಗಳು ಅರ್ಹತೆ ಪಡೆದಿದೆ. ಸೆಮಿಫೈನಲ್ ಪಂದ್ಯದಲ್ಲಿ ಶ್ರೀಲಂಕಾ ತಂಡವನ್ನು ಮಣಿಸಿ ಶ್ರೇಯಸ್ ಅಯ್ಯರ್ ನಾಯಕತ್ವದ ಟೀಮ್ ಇಂಡಿಯಾ ಫೈನಲ್‌ಗೆ ಪ್ರವೇಶ ಮಾಡಿದ್ದರೆ, ಪಾಕಿಸ್ತಾನ ತಂಡ, ಬಾಂಗ್ಲಾದೇಶವನ್ನು ಮಣಿಸಿ ಚಿನ್ನದ ಪದಕದ ಪಂದ್ಯಕ್ಕೆ ಅರ್ಹತೆ ಪಡೆದಿದೆ.
2025ರ ಏಷ್ಯಾ ಕಪ್ ಬಳಿಕ ಇದೇ ಮೊದಲ ಬಾರಿ ಉಭಯ ತಂಡಗಳು ಫೈನಲ್‌ನಲ್ಲಿ ಮುಖಾಮುಖಿಯಾಗಲಿದ್ದು, ಏಷ್ಯನ್ ಗೇಮ್ಸ್ ಚಿನ್ನದ ಪದಕಕ್ಕಾಗಿ ನಡೆಯಲಿರುವ ಈ ಪಂದ್ಯ ಭಾರಿ ಕುತೂಹಲ ಮೂಡಿಸಿದೆ. ಭಾರತ–ಪಾಕಿಸ್ತಾನ ನಡುವಿನ ಪಂದ್ಯಗಳು ಸಾಮಾನ್ಯ ಕ್ರಿಕೆಟ್ ಪಂದ್ಯಗಳಿಗಿಂತಲೂ ಹೆಚ್ಚಿನ ಗಮನ ಸೆಳೆಯುತ್ತವೆ. ಈ ಬಾರಿ ಏಷ್ಯನ್ ಗೇಮ್ಸ್ ಚಿನ್ನದ ಪದಕ ಗುರಿ ಇರುವುದರಿಂದ ಪಂದ್ಯದ ಮಹತ್ವ ಮತ್ತಷ್ಟು ಹೆಚ್ಚಾಗಿದೆ. ಎರಡೂ ತಂಡಗಳು ಅಗ್ರಸ್ಥಾನಕ್ಕೇರಲು ಹಾಗೂ ಚಿನ್ನದ ಪದಕ ಗೆಲ್ಲಲು ಕಣಕ್ಕಿಳಿಯಲಿವೆ.
Asian Games 2026: ಶ್ರೀಲಂಕಾ ವಿರುದ್ಧ ಅರ್ಧಶತಕ ಬಾರಿಸಿ ವಿರಾಟ್ ಕೊಹ್ಲಿ ದಾಖಲೆ ಮುರಿದ ಇಶಾನ್ ಕಿಶನ್!
ಈ ಶನಿವಾರ ನಡೆಯಲಿರುವ ಫೈನಲ್ ಪಂದ್ಯದಲ್ಲಿ ರಾಷ್ಟ್ರೀಯ ಗೌರವದ ಜೊತೆಗೆ ಏಷ್ಯನ್ ಗೇಮ್ಸ್‌ನ ಚಿನ್ನದ ಪದಕವೂ ಮುಂದಿದೆ. ಹೀಗಾಗಿ ಈ ಪಂದ್ಯ ಸಾಮಾನ್ಯ ಕ್ರಿಕೆಟ್ ಅಭಿಮಾನಿಗಳಷ್ಟೇ ಅಲ್ಲದೆ, ದೇಶದಾದ್ಯಂತದ ಕ್ರೀಡಾಭಿಮಾನಿಗಳ ಗಮನ ಸೆಳೆಯುವ ನಿರೀಕ್ಷೆಯಿದೆ. ಭಾರತ–ಪಾಕಿಸ್ತಾನ ಫೈನಲ್ ಎಂದರೆ ಕ್ರಿಕೆಟ್ ಅಭಿಮಾನಿಗಳಿಗೆ ವಿಶೇಷ ಸಂದರ್ಭ. ಏಷ್ಯಾದ ಎರಡು ಸಾಂಪ್ರದಾಯಿಕ ಎದುರಾಳಿಗಳು ಒಂದೇ ವೇದಿಕೆಯಲ್ಲಿ ಪ್ರಶಸ್ತಿಗಾಗಿ ಸೆಣಸಾಡಲಿರುವುದರಿಂದ, ಪಂದ್ಯ ಆರಂಭಕ್ಕೂ ಮುನ್ನವೇ ಉಭಯ ದೇಶಗಳ ಅಭಿಮಾನಿಗಳಲ್ಲಿ ಭಾರಿ ನಿರೀಕ್ಷೆ ಮೂಡಿದೆ.
ಸೆಮಿಫೈನಲ್‌ನಲ್ಲಿ ಭಾರತ ತಂಡ ತನ್ನ ಸಂಪೂರ್ಣ ಸಾಮರ್ಥ್ಯವನ್ನು ಪ್ರದರ್ಶಿಸಿತು. ಶ್ರೀಲಂಕಾ ವಿರುದ್ಧದ ಪಂದ್ಯದಲ್ಲಿ ಬ್ಯಾಟಿಂಗ್ ಮತ್ತು ಬೌಲಿಂಗ್‌ನಲ್ಲಿ ಪ್ರಾಬಲ್ಯ ಸಾಧಿಸಿದ ಭಾರತ 124 ರನ್‌ಗಳ ಭರ್ಜರಿ ಜಯ ದಾಖಲಿಸಿ ಚಿನ್ನದ ಪದಕದತ್ತ ಮತ್ತೊಂದು ಹೆಜ್ಜೆ ಇಟ್ಟಿದೆ. ಇತ್ತ ಪಾಕಿಸ್ತಾನ ತಂಡ ಬಾಂಗ್ಲಾದೇಶ ವಿರುದ್ಧದ ಸೆಮಿಫೈನಲ್‌ನಲ್ಲಿ ಆರು ವಿಕೆಟ್‌ಗಳ ಗೆಲುವು ಸಾಧಿಸಿ ಫೈನಲ್‌ಗೆ ಅರ್ಹತೆ ಪಡೆದುಕೊಂಡಿದೆ. ಇದಕ್ಕೂ ಮುನ್ನ ಹಾಂಕಾಂಗ್ ವಿರುದ್ಧದ ಕ್ವಾರ್ಟರ್‌ಫೈನಲ್ ಪಂದ್ಯ ಮಳೆಯಿಂದಾಗಿ ಬಾಧಿತವಾಗಿತ್ತು. ಆದರೆ ಪಾಕಿಸ್ತಾನ ಸೆಮಿಫೈನಲ್‌ನಲ್ಲಿ ಬಾಂಗ್ಲಾದೇಶವನ್ನು ಮಣಿಸಿ ಪ್ರಶಸ್ತಿ ಸುತ್ತಿಗೆ ಪ್ರವೇಶಿಸಿದೆ.
ʻ100 ರೈಸಿಂಗ್ ಸ್ಟಾರ್ಸ್ ಪಟ್ಟಿಯಲ್ಲಿ ಸ್ಥಾನʼ: ವೈಭವ್ ಸೂರ್ಯವಂಶಿಗೆ TIME ಗೌರವ!
ಈ ಗೆಲುವಿನೊಂದಿಗೆ ಟೂರ್ನಿಯ ಅಗ್ರ ಶ್ರೇಯಾಂಕ ಹೊಂದಿದ್ದ ಎರಡು ತಂಡಗಳೇ ಫೈನಲ್‌ನಲ್ಲಿ ಮುಖಾಮುಖಿಯಾಗುವಂತಾಗಿದೆ. ಭಾರತ ಮತ್ತು ಪಾಕಿಸ್ತಾನ ಎರಡೂ ತಂಡಗಳು ತಮ್ಮ-ತಮ್ಮ ಸೆಮಿಫೈನಲ್ ಪಂದ್ಯಗಳಲ್ಲಿ ವಿಶ್ವಾಸ ಮೂಡಿಸುವ ಪ್ರದರ್ಶನ ನೀಡಿರುವುದರಿಂದ ಫೈನಲ್‌ನಲ್ಲಿ ತೀವ್ರ ಪೈಪೋಟಿ ನಿರೀಕ್ಷಿಸಲಾಗಿದೆ.
2026ರ ಏಷ್ಯಾ ಕ್ರೀಡಾಕೂಟದ ಫೈನಲ್ ಪಂದ್ಯಕ್ಕೆ ಉಭಯ ತಂಡಗಳು
ಭಾರತ: ವೈಭವ್ ಸೂರ್ಯವಂಶಿ, ಅಭಿಷೇಕ್ ಶರ್ಮಾ, ಸಂಜು ಸ್ಯಾಮ್ಸನ್ (ವಿಕೆಟ್ ಕೀಪರ್), ಶ್ರೇಯಸ್ ಅಯ್ಯರ್ (ನಾಯಕ), ಇಶಾನ್ ಕಿಶನ್, ತಿಲಕ್ ವರ್ಮಾ, ಶಿವಂ ದುಬೇ, ಅಕ್ಷರ್ ಪಟೇಲ್, ವಾಷಿಂಗ್ಟನ್ ಸುಂದರ್, ರವಿ ಬಿಷ್ಣೋಯ್, ಜಸ್‌ಪ್ರೀತ್ ಬುಮ್ರಾ, ಅರ್ಷದೀಪ್ ಸಿಂಗ್, ಯಶ್ ಠಾಕೂರ್, ವಿಪ್ರಜ್ ನಿಗಮ್
ಪಾಕಿಸ್ತಾನ: ಸಹಿಬ್ಝಾದಾ ಫರ್ಹಾನ್ (ನಾಯಕ), ಸೈಮ್ ಆಯುಬ್, ಉಸ್ಮಾನ್ ಖಾನ್ (ವಿಕೆಟ್ ಕೀಪರ್), ಮಾಝ್ ಸದಾಖತ್, ಹಸನ್ ನವಾಝ್, ಅಬ್ದುಲ್ ಸಮದ್, ಅರಾಫತ್ ಮಿನ್ಹ್ಯಾಸ್, ಅಹ್ಮದ್ ದನಿಯಾಲ್, ಮೊಹಮ್ಮದ್ ವಸೀಮ್ ಜೂನಿಯರ್, ಅಬ್ರಾರ್ ಅಹ್ಮದ್, ಸೂಫಿಯಾನ್ ಮೊಖಿಮ್, ಹೈದರ್ ಅಲಿ, ಆಕಿಫ್ ಜಾವೇದ್, ಸಾದ್ ಮಸೂದ್, ಆಲಿ ರಾಝಾ
ಪಂದ್ಯದ ವಿವರ
2026ರ ಏಷ್ಯಾ ಕ್ರೀಡಾಕೂಟದ ಫೈನಲ್
ಭಾರತ vs ಪಾಕಿಸ್ತಾನ
ದಿನಾಂಕ: ಅಕ್ಟೋಬರ್ 03, 2026
ಸಮಯ: ಬೆಳಿಗ್ಗೆ 10:00 (ಭಾರತೀಯ ಕಾಲಮಾನ)
ಸ್ಥಳ: ಕರೋಗಿ ಸ್ಪೋರ್ಟ್ಸ್ ಕ್ಲಬ್, ನಿಶಿನ್
ನೇರ ಪ್ರಸಾರ: ಸೋನಿ ಸ್ಪೋರ್ಟ್ಸ್ ನೆಟ್‌ವರ್ಕ್ಸ್