ಯುಗಾದಿ ಹಬ್ಬ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

MI vs GT: ಹಾರ್ದಿಕ್‌ ಪಾಂಡ್ಯ ಜತೆಗಿನ ಕಿರಿಕ್‌ ಬಗ್ಗೆ ಪ್ರತಿಕ್ರಿಯಿಸಿದ ಸಾಯಿ ಕಿಶೋರ್‌!

ಹದಿನೆಂಟನೇ ಆವೃತ್ತಿಯ ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಟೂರ್ನಿಯ 9ನೇ ಪಂದ್ಯದಲ್ಲಿ ಗುಜರಾತ್ ಟೈಟನ್ಸ್, ಮುಂಬೈ ಇಂಡಿಯನ್ಸ್ ವಿರುದ್ದ 36 ರನ್‌ಗಳಿಂದ ಗೆಲುವು ಪಡೆಯಿತು. ಈ ಪಂದ್ಯದಲ್ಲಿ ಹಾರ್ದಿಕ್ ಪಾಂಡ್ಯ ಹಾಗೂ ಸಾಯಿ ಕಿಶೋರ್ ಕಿರಿಕ್‌ ನಡೆದಿತ್ತು. ಪಂದ್ಯದ ಬಳಿಕ ಈ ವಿಷಯದ ಬಗ್ಗೆ ಗುಜರಾತ್‌ ಟೈಟನ್ಸ್‌ ಸ್ಪಿನ್ನರ್‌ ಬಹಿರಂಗಪಡಿಸಿದ್ದಾರೆ.

ಹಾರ್ದಿಕ್‌ ಪಾಂಡ್ಯ ಜತೆಗಿನ ಕಿರಿಕ್‌ ಬಗ್ಗೆ ಸಾಯಿ ಕಿಶೋರ್‌ ಪ್ರತಿಕ್ರಿಯೆ!

ಹಾರ್ದಿಕ್‌ ಪಾಂಡ್ಯ-ಸಾಯಿ ಕಿಶೋರ್‌ ನಡುವೆ ಕಿರಿಕ್‌

Profile Ramesh Kote Mar 30, 2025 4:15 PM

ಅಹಮದಾಬಾದ್: ಹದಿನೆಂಟನೇ ಆವೃತ್ತಿಯ ಇಂಡಿಯನ್‌ ಪ್ರೀಮಿಯರ್‌ ಲೀಗ್‌ (IPL 2025) ಟೂರ್ನಿಯ 9ನೇ ಪಂದ್ಯದಲ್ಲಿ ಶುಭಮನ್ ಗಿಲ್ ಸಾರಥ್ಯದ ಗುಜರಾತ್ ಟೈಟನ್ಸ್ (GT) ತಂಡ, ಎದುರಾಳಿ ಮುಂಬೈ ಇಂಡಿಯನ್ಸ್ (MI) ತಂಡವನ್ನು 36 ರನ್‌ಗಳಿಂದ ಸೋಲಿಸಿದೆ. ಆ ಮೂಲಕ ಶುಭಮನ್‌ ಗಿಲ್‌ ಟೂರ್ನಿಯಲ್ಲಿ ಮೊದಲನೇ ಗೆಲುವು ಪಡೆದರೆ, ಮುಂಬೈ ಇಂಡಿಯನ್ಸ್‌ ಸತತ ಎರಡನೇ ಸೋಲು ಅನುಭವಿಸಿದಂತಾಯಿತು. ಅಂದ ಹಾಗೆ ಮುಂಬೈ ಇನಿಂಗ್ಸ್‌ನಲ್ಲಿ ಸಾಯಿ ಕಿಶೋರ್‌ (Sai Kishore) ಹಾಗೂ ಹಾರ್ದಿಕ್‌ ಪಾಂಡ್ಯ ನಡುವೆ ಕಿರಿಕ್‌ ನಡೆದಿತ್ತು. ಈ ವೇಳೆ ಇಬ್ಬರೂ ಪರಸ್ಪರ ಗುರಾಯಿಸಿಕೊಂಡಿದ್ದರು. ಪಂದ್ಯದ ಬಳಿಕ ಈ ಬಗ್ಗೆ ಸಾಯಿ ಕಿಶೋರ್‌ ಪ್ರತಿಕ್ರಿಯಿಸಿದ್ದಾರೆ.

ಹಾರ್ದಿಕ್ ಪಾಂಡ್ಯ ಮತ್ತು ಗುಜರಾತ್ ಸ್ಪಿನ್ನರ್ ಆರ್ ಸಾಯಿ ಕಿಶೋರ್ ನಡುವಿನ ಘರ್ಷಣೆ ಬಗ್ಗೆ ಸೋಶಿಯಲ್‌ ಮೀಡಿಯಾದಲ್ಲಿ ಸಾಕಷ್ಟು ಚರ್ಚೆ ನಡೆಯಿತು. ಮುಂಬೈ ಇನಿಂಗ್ಸ್‌ನ 15ನೇ ಓವರ್‌ನ ನಾಲ್ಕನೇ ಎಸೆತದಲ್ಲಿ ಈ ಘಟನೆ ನಡೆದಿತ್ತು. ಹಾರ್ದಿಕ್ ಪಾಂಡ್ಯ ಚೆಂಡನ್ನು ಮತ್ತೆ ಬೌಲರ್ ಕಡೆಗೆ ತಳ್ಳಿದರು. ಚೆಂಡನ್ನು ಎತ್ತಿಕೊಳ್ಳುವಾಗ ಸಾಯಿ ಕಿಶೋರ್ ಹಾರ್ದಿಕ್ ಕಡೆಗೆ ನೋಡಿ ಗುರಾಯಿಸಿದರು. ಈ ವೇಳೆ ಮುಂಬೈ ಇಂಡಿಯನ್ಸ್ ನಾಯಕ ಹಾರ್ದಿಕ್ ಕೈ ಬೀಸಿ ಅವಾಚ್ಯ ಶಬ್ದಗಳಿಂದ ನಿಂದಿಸಿದರು. ಸ್ಪಿನ್ನರ್ ಸಾಯಿ ಕಿಶೋರ್ ಕೂಡ ಹಿಂದೆ ಸರಿಯದೆ ಹಾರ್ದಿಕ್ ಪಾಂಡ್ಯ ಅವರನ್ನು ಗುರಾಯಿಸಿದರು. ಅಂಪೈರ್ ಮಧ್ಯ ಪ್ರವೇಶಿಸಿ ಇಬ್ಬರು ಆಟಗಾರರನ್ನು ಬೇರ್ಪಡಿಸಿದರು.

MI vs GT: ಮುಂಬೈ ಇಂಡಿಯನ್ಸ್‌ಗೆ ಸತತ ಎರಡನೇ ಸೋಲು, ಗುಜರಾತ್‌ಗೆ ಮೊದಲನೇ ಜಯ!

ಹಾರ್ದಿಕ್‌ ಜತೆಗಿನ ಕಿರಿಕ್‌ ಬಗ್ಗೆ ಸಾಯಿ ಕಿಶೋರ್ ಹೇಳಿದ್ದೇನು?

ಪಂದ್ಯದ ನಂತರ ಸಾಯಿ ಕಿಶೋರ್‌ಗೆ ಇಯಾನ್ ಬಿಷಪ್ ಈ ವಿವಾದದ ಬಗ್ಗೆ ಪ್ರಶ್ನೆಯನ್ನು ಕೇಳಿದರು. ಇದಕ್ಕೆ ಪ್ರತಿಕ್ರಿಯಿಸಿದ ಸಾಯಿ ಕಿಶೋರ್, "ಅವರು ನನ್ನ ಒಳ್ಳೆಯ ಗೆಳೆಯ, ಮೈದಾನದ ಒಳಗೆ ಈ ರೀತಿ ಇರಬೇಕು. ಮೈದಾನದೊಳಗೆ ಯಾರು ಬೇಕಾದರೂ ಎದುರಾಳಿಯಾಗಬಹುದು ಆದರೆ ನಾವು ವೈಯಕ್ತಿಕವಾಗಿ ವಿಷಯಗಳನ್ನು ತೆಗೆದುಕೊಳ್ಳುವುದಿಲ್ಲ. ನಾವು ಉತ್ತಮ ಸ್ಪರ್ಧಿಗಳು, ಆಟವು ಹೀಗಿರಬೇಕು ಎಂದು ನಾನು ಭಾವಿಸುತ್ತೇನೆ," ಎಂದು ಹೇಳಿದ್ದಾರೆ.



ಸೂರ್ಯಕುಮಾರ್ ಬ್ಯಾಟಿಂಗ್‌ಗೆ ಸಾಯಿ ಕಿಶೋರ್‌ ಮೆಚ್ಚುಗೆ

ಸಾಯಿ ಕಿಶೋರ್ ಕೂಡ ಸೂರ್ಯಕುಮಾರ್ ಯಾದವ್ ಬ್ಯಾಟಿಂಗ್ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. "ನಾನು ಇಂದು ಹೆಚ್ಚಿನ ಸಹಾಯವನ್ನು ಪಡೆಯುತ್ತಿಲ್ಲ, ಆದ್ದರಿಂದ ನಾನು ರಕ್ಷಣಾತ್ಮಕವಾಗಿ ಬೌಲ್‌ ಮಾಡಬೇಕಾಯಿತು ಮತ್ತು ತಂಡಕ್ಕಾಗಿ ಕೆಲಸ ಮಾಡಬೇಕಾಗಿತ್ತು. ಪಿಚ್ ನೋಡುವುದಕ್ಕಿಂತ ಉತ್ತಮವಾಗಿತ್ತು. ಸೂರ್ಯಕುಮಾರ್ ಯಾದವ್ ಉತ್ತಮವಾಗಿ ಬ್ಯಾಟ್‌ ಮಾಡಿದರು, ಅವರು ನನ್ನ ಎಲ್ಲಾ ಗುಡ್ ಲೆನ್ತ್‌ ಎಸೆತಗಳಲ್ಲಿ ಸ್ವೀಪ್ ಹೊಡೆತಗಳನ್ನು ಆಡಿದರು. ಯಾರಾದರೂ ಉತ್ತಮ ಹೊಡೆತವನ್ನು ಆಡಿದರೆ, ನೀವು ಬ್ಯಾಟ್ಸ್‌ಮನ್‌ಗೆ ಕ್ರೆಡಿಟ್ ನೀಡಬೇಕು," ಎಂದು ಹೇಳಿದ್ದಾರೆ.



ಗುಜರಾತ್ 36 ರನ್‌ ಜಯ

ಗುಜರಾತ್ ಟೈಟನ್ಸ್ 20 ಓವರ್‌ಗಳಲ್ಲಿ 196/8 ರನ್ ಗಳಿಸಿತು. ಸಾಯಿ ಸುದರ್ಶನ್ 63 ರನ್‌ಗಳ ಇನಿಂಗ್ಸ್ ಆಡಿದರು. ಶುಭ್‌ಮನ್ ಗಿಲ್ ಮತ್ತು ಜೋಸ್ ಬಟ್ಲರ್ ಕ್ರಮವಾಗಿ 38 ಮತ್ತು 39 ರನ್‌ಗಳ ಉಪಯುಕ್ತ ಕೊಡುಗೆ ನೀಡಿದರು. ಈ ಬ್ಯಾಟ್ಸ್‌ಮನ್‌ಗಳಿಂದಾಗಿ ಜಿಟಿ ಉತ್ತಮ ಸ್ಕೋರ್ ಮಾಡುವಲ್ಲಿ ಯಶಸ್ವಿಯಾಗಿತ್ತು. ಮುಂಬೈ ಇಂಡಿಯನ್ಸ್ ಬ್ಯಾಟಿಂಗ್ ಫಲಕಾರಿಯಾಗದೇ ತಂಡ 160 ರನ್ ಗಳಿಸಲಷ್ಟೇ ಶಕ್ತವಾಯಿತು. ಈ ಪಂದ್ಯವನ್ನು ಗುಜರಾತ್ 36 ರನ್‌ಗಳಿಂದ ಗೆದ್ದುಕೊಂಡಿತು.