ಯುಗಾದಿ ಹಬ್ಬ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

MI vs GT: ಮುಂಬೈ ಇಂಡಿಯನ್ಸ್‌ಗೆ ಸತತ ಎರಡನೇ ಸೋಲು, ಗುಜರಾತ್‌ಗೆ ಮೊದಲನೇ ಜಯ!

MI vs GT Match Highlights: ಬ್ಯಾಟಿಂಗ್‌ ಹಾಗೂ ಬೌಲಿಂಗ್‌ ಎರಡೂ ವಿಭಾಗಗಳಲ್ಲಿ ಸಂಘಟಿತ ಪ್ರದರ್ಶನ ತೋರಿದ ಗುಜರಾತ್‌ ಟೈಟನ್ಸ್‌ ತಂಡ, 2025ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಟೂರ್ನಿಯ 9ನೇ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್‌ ವಿರುದ್ದ 36 ರನ್‌ಗಳ ಗೆಲುವು ಪಡೆಯಿತು. ಆ ಮೂಲಕ ಶುಭಮನ್‌ ಗಿಲ್‌ ನಾಯಕತ್ವದ ಜಿಟಿ ಅಂಕಪಟ್ಟಿಯಲ್ಲಿ ಶುಭಾರಂಭ ಕಂಡಿತು.

ಮುಂಬೈ ಇಂಡಿಯನ್ಸ್‌ ಎದುರು ಗೆದ್ದು ಬೀಗಿದ ಗುಜರಾತ್‌ ಟೈಟನ್ಸ್!

ಮುಂಬೈ ಇಂಡಿಯನ್ಸ್‌ ಎದುರು ಗುಜರಾತ್‌ ಟೈಟನ್ಸ್‌ಗೆ 36 ರನ್‌ ಜಯ.

Profile Ramesh Kote Mar 30, 2025 12:16 AM

ಅಹಮದಾಬಾದ್‌: ಸಾಯಿ ಸುದರ್ಶನ್‌ (63 ರನ್‌) ಅರ್ಧಶತಕ ಹಾಗೂ ಪ್ರಸಿಧ್‌ ಕೃಷ್ಣ (18ಕ್ಕೆ 2) ಅವರ ಮಾರಕ ಬೌಲಿಂಗ್‌ ದಾಳಿಯ ಸಹಾಯದಿಂದ ಗುಜರಾತ್‌ ಟೈಟನ್ಸ್‌ ತಂಡ, 2025ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ (IPL 2025) ಟೂರ್ನಿಯ 9ನೇ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್‌ ವಿರುದ್ಧ 36 ರನ್‌ಗಳಿಂದ ಗೆಲುವು ಪಡೆಯಿತು. ಆ ಮೂಲಕ ಟೂರ್ನಿಯಲ್ಲಿ ಜಿಟಿ ಖಾತೆ ತೆರೆದಿದೆ. ಆದರೆ, ಸತತ ಎರಡನೇ ಪಂದ್ಯದಲ್ಲಿಯೂ ಸೋಲು ಅನುಭವಿಸುವ ಮೂಲಕ ಹಾರ್ದಿಕ್‌ ಪಾಂಡ್ಯ ನಾಯಕತ್ವದ ಮುಂಬೈ ಮುಖಭಂಗ ಅನುಭವಿಸಿತು. ಗುಜರಾತ್‌ ಟೈಟನ್ಸ್‌ ಪರ ಮಾರಕ ಬೌಲಿಂಗ್‌ ದಾಳಿ ನಡೆಸಿ ಎರಡು ವಿಕೆಟ್‌ ಕಿತ್ತ ಪ್ರಸಿಧ್‌ ಕೃಷ್ಣ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.

ಇಲ್ಲಿನ ನರೇಂದ್ರ ಮೋದಿ ಕ್ರಿಕೆಟ್‌ ಕ್ರೀಡಾಂಗಣದಲ್ಲಿ ಶನಿವಾರ ನಡೆದಿದ್ದ ಪಂದ್ಯದಲ್ಲಿ ಗುಜರಾತ್‌ ಟೈಟನ್ಸ್‌ ನೀಡಿದ್ದ 197 ರನ್‌ಗಳ ಗುರಿಯನ್ನು ಹಿಂಬಾಲಿಸಿದ ಮುಂಬೈ ಇಂಡಿಯನ್ಸ್‌ ತಂಡ ತನ್ನ ಪಾಲಿನ 20 ಓವರ್‌ಗಳನ್ನು ಪೂರ್ಣಗೊಳಿಸಿದರೂ 6 ವಿಕೆಟ್‌ಗಳ ನಷ್ಟಕ್ಕೆ 160 ರನ್‌ಗಳಿಗೆ ಸೀಮಿತವಾಯಿತು. ಆ ಮೂಲಕ ಸೋಲು ಅನುಭವಿಸಿತು. ಮುಂಬೈ ಇಂಡಿಯನ್ಸ್‌ ಪರ ತಿಲಕ್‌ ವರ್ಮಾ (38) ಹಾಗೂ ಸೂರ್ಯಕುಮಾರ್‌ ಯಾದವ್‌ (48) ಅವರನ್ನು ಹೊರತುಪಡಿಸಿ ಇನ್ನುಳಿದ ಬ್ಯಾಟ್ಸ್‌ಮನ್‌ಗಳು ವೈಫಲ್ಯ ಅನುಭವಿಸಿದರು. ಹಾಗಾಗಿ ಸೋಲು ಅನುಭವಿಸಬೇಕಾಯಿತು.

IPL 2025: ಚೆನ್ನೈ ಸೂಪರ್‌ ಕಿಂಗ್ಸ್‌ಗೆ ಮತ್ತೆ ಎಂಎಸ್‌ ಧೋನಿ ನಾಯಕನಾಗಬೇಕೆಂದ ಸಂಜಯ್‌ ಮಾಂಜ್ರೇಕರ್‌!

ಇನಿಂಗ್ಸ್‌ ಆರಂಭಿಸಿದ್ದ ರೋಹಿತ್‌ ಶರ್ಮಾ ಹಾಗೂ ರಯಾನ್‌ ರಿಕೆಲ್ಟನ್‌ ಅವರನ್ನು ಮೊಹಮ್ಮದ್‌ ಸಿರಾಜ್‌ ಆರಂಭದಲ್ಲಿಯೇ ಔಟ್‌ ಮಾಡಿದ್ದರು. ತಿಲಕ್‌ ವರ್ಮಾ ಹಾಗೂ ಸೂರ್ಯಕುಮಾರ್‌ ಮೂರನೇ ವಿಕೆಟ್‌ಗೆ ಸ್ವಲ್ಪ ಹೊತ್ತು ಕ್ರೀಸ್‌ನಲ್ಲಿ ಉತ್ತಮ ಪ್ರದರ್ಶನ ತೋರಿದರೂ ಇವರಿಂದ ತಂಡವನ್ನು ಗೆಲ್ಲಿಸಲು ಸಾಧ್ಯವಾಗಲ್ಲಿ, ಈ ಒಬ್ಬರೂ ಬ್ಯಾಟ್ಸ್‌ಮನ್‌ಗಳನ್ನು ಪ್ರಸಿಧ್‌ ಕೃಷ್ಣ ಔಟ್‌ ಮಾಡಿದ್ದರು. ರಾಬಿನ್‌ ಮಿಂಝ್‌ ಹಾಗೂ ಹಾರ್ದಿಕ್‌ ಪಾಂಡ್ಯ ಅವರು ಕೂಡ ಹೆಚ್ಚು ಹೊತ್ತು ಕ್ರೀಸ್‌ನಲ್ಲಿ ಉಳಿಯಲಿಲ್ಲ. ನಮನ್‌ ಧೀರ್‌ ಹಾಗೂ ಮಿಚೆಲ್‌ ಸ್ಯಾಂಟ್ನರ್‌ ತಲಾ 18 ರನ್‌ ಗಳಿಸಿದರೂ ಪ್ರಯೋಜನಕ್ಕೆ ಬರಲಿಲ್ಲ.

ಗುಜರಾತ್‌ ಟೈಟನ್ಸ್‌ ಪರ ಮೊಹಮ್ಮದ್‌ ಸಿರಾಜ್‌ ಹಾಗೂ ಪ್ರಸಿಧ್‌ ಕೃಷ್ಣ ತಲಾ ಎರಡೆರಡು ವಿಕೆಟ್‌ ಪಡೆದರು.



196 ರನ್‌ ಕಲೆ ಹಾಕಿದ ಗುಜರಾತ್‌

ಇದಕ್ಕೂ ಮುನ್ನ ಟಾಸ್‌ ಸೋತು ಮೊದಲು ಬ್ಯಾಟ್‌ ಮಾಡುವಂತಾಗಿದ್ದ ಗುಜರಾತ್‌ ಟೈಟನ್ಸ್‌ ತಂಡ, ಸಾಯಿ ಸುದರ್ಶನ್‌ ಅರ್ಧಶತಕದ ಬಲದಿಂದ ತನ್ನ ಪಾಲಿನ 20 ಓವರ್‌ಗಳಿಗೆ 8 ವಿಕೆಟ್‌ಗಳ ನಷ್ಟಕ್ಕೆ 196 ರನ್‌ಗಳನ್ನು ಕಲೆ ಹಾಕಿತು. ಆ ಮೂಲಕ ಎದುರಾಳಿ ಮುಂಬೈ ಇಂಡಿಯನ್ಸ್‌ ತಂಡಕ್ಕೆ 197 ರನ್‌ಗಳ ಗುರಿಯನ್ನು ನೀಡಿತ್ತು.

ಉತ್ತಮ ಆರಂಭ ಪಡೆದಿದ್ದ ಜಿಟಿ

ಮೊದಲು ಬ್ಯಾಟ್‌ ಮಾಡುವಂತಾದ ಗುಜರಾತ್‌ ಟೈಟನ್ಸ್‌ ತಂಡದ ಪರ ಇನಿಂಗ್ಸ್‌ ಆರಂಭಿಸಿದ ಶುಭಮನ್‌ ಗಿಲ್‌ ಹಾಗೂ ಸಾಯಿ ಸುದರ್ಶನ್‌ ಜೋಡಿ ಭರ್ಜರಿ ಬ್ಯಾಟಿಂಗ್‌ ಪ್ರದರ್ಶನವನ್ನು ತೋರಿತು. ಮುಂಬೈ ಬೌಲರ್‌ಗಳನ್ನು ಸಮರ್ಥವಾಗಿ ಎದುರಿಸಿದ ಈ ಜೋಡಿ ಮುರಿಯದ ಮೊದಲನೇ ವಿಕೆಟ್‌ಗೆ 8.3 ಓವರ್‌ಗಳಿಗೆ 78 ರನ್‌ಗಳನ್ನು ಕಲೆ ಹಾಕಿ ಗುಜರಾತ್‌ ಟೈಟನ್ಸ್‌ಗೆ ಉತ್ತಮ ಆರಂಭವನ್ನು ತಂದುಕೊಟ್ಟಿತ್ತು. 27 ಎಸೆತಗಳಲ್ಲಿ ಒಂದು ಸಿಕ್ಸರ್‌ ಹಾಗೂ 4 ಬೌಂಡರಿಗಳೊಂದಿಗೆ 38 ರನ್‌ ಗಳಿಸಿ ಉತ್ತಮ ಆರಂಭ ಪಡೆದಿದ್ದ ನಾಯಕ ಶುಭಮನ್‌ ಗಿಲ್‌, ಹಾರ್ದಿಕ್‌ ಪಾಂಡ್ಯಗೆ ದೊಡ್ಡ ಹೊಡೆತವನ್ನು ಹೊಡೆಯಲು ಪ್ರಯತ್ನಿಸಿ ಕ್ಯಾಚ್‌ ಕೊಟ್ಟರು.

IPL 2025: ಆರ್‌ಸಿಬಿ ತಂಡ ಹಳೆಯ ಆವೃತ್ತಿಗಳಿಗಿಂತ 10 ಪಟ್ಟು ಉತ್ತಮವಾಗಿದೆ ಎಂದ ಎಬಿ ಡಿ ವಿಲಿಯರ್ಸ್‌!

ಸಾಯಿ ಸುದರ್ಶನ್‌ ಅರ್ಧಶತಕ

ಮೂರನೇ ಕ್ರಮಾಂಕದಲ್ಲಿ ಕ್ರೀಸ್‌ಗೆ ಬಂದಿದ್ದ ಜೋಸ್‌ ಬಟ್ಲರ್‌ ಕೂಡ 39 ರನ್‌ ಗಳಿಸಿ ಉತ್ತಮ ಆರಂಭವನ್ನು ಪಡೆದಿದ್ದರು. ಆದರೆ, ಮುಜೀಬ್‌ ಉರ್ ರೆಹಮಾನ್‌ ಎಸೆತದಲ್ಲಿ ವಿಕೆಟ್‌ ಒಪ್ಪಿಸಿದರು. ಒಂದು ತುದಿಯಲ್ಲಿ ಗಟ್ಟಿಯಾಗಿ ನಿಂತು ಬ್ಯಾಟ್‌ ಮಾಡಿದ ಸಾಯಿ ಸುದರ್ಶನ್‌ ಮುಂಬೈ ಇಂಡಿಯನ್ಸ್‌ ಬೌಲರ್‌ಗಳನ್ನು ಸಮರ್ಥವಾಗಿ ಎದುರಿಸಿದರು. ಆದರೆ, ಇವರಿಗೆ ಮತ್ತೊಂದು ತುದಿಯಲ್ಲಿ ಯಾವುದೇ ಬ್ಯಾಟ್ಸ್‌ಮನ್‌ ದೀರ್ಘಾವಧಿ ಸಾಥ್‌ ನೀಡಲಿಲ್ಲ. ಅಂದ ಹಾಗೆ ಸುದರ್ಶನ್‌ ಆಡಿದ 41 ಎಸೆತಗಳಲ್ಲಿ ಎರಡು ಸಿಕ್ಸರ್‌ ಹಾಗೂ 4 ಬೌಂಡರಿಗಳೊಂದಿಗೆ 63 ರನ್‌ಗಳನ್ನು ಕಲೆ ಹಾಕಿದರು. ಆ ಮೂಲಕ ಜಿಟಿ ಮೊತ್ತ 180 ಸನಿಹ ತರಲು ಸಹಾಯ ಮಾಡಿದರು. ಶೆರ್ಫೆನ್‌ ಋದರ್‌ಫೋರ್ಡ್‌ 11 ಎಸೆತಗಳಲ್ಲಿ ಸ್ಪೋಟಕ 18 ರನ್‌ಗಳನ್ನು ಸಿಡಿಸಿದರು.



ಸ್ಕೋರ್‌ ವಿವರ

ಗುಜರಾತ್‌ ಟಟನ್ಸ್‌: 20 ಓವರ್‌ಗಳಿಗೆ 196-8 (ಸಾಯಿ ಸುದರ್ಶನ್‌ 63, ಜೋಸ್‌ ಬಟ್ಲರ್‌ 39, ಶುಭಮನ್‌ ಗಿಲ್‌ 38; ಹಾರ್ದಿಕ್‌ ಪಾಂಡ್ಯ 29ಕ್ಕೆ 2, ಟ್ರೆಂಟ್‌ ಬೌಲ್ಟ್‌ 34 ಕ್ಕೆ 1)

ಮುಂಬೈ ಇಂಡಿಯನ್ಸ್‌: 20 ಓವರ್‌ಗಳಲ್ಲಿ 160-6 (ಸೂರ್ಯಕುಮಾರ್‌ ಯಾದವ್‌ 48, ತಿಲಕ್‌ ವರ್ಮಾ 39; ಮೊಹಮ್ಮದ್‌ ಸಿರಾಜ್‌ 34 ಕ್ಕೆ 2, ಪ್ರಸಿಧ್‌ ಕೃಷ್ಣ 18ಕ್ಕೆ 2

ಪಂದ್ಯ ಶ್ರೇಷ್ಠ ಪ್ರಶಸ್ತಿ: ಪ್ರಸಿಧ್‌ ಕೃಷ್ಣ