IPL 2025: ವಿರಾಟ್ ಕೊಹ್ಲಿಯ ಸ್ಟ್ರೈಕ್ ರೇಟ್ ಕಡಿಮೆ ಎಂದವರಿಗೆ ಎಬಿಡಿ ತಿರುಗೇಟು!
ABD slammed Kohli’s strike rate critics: ಪ್ರಸ್ತುತ ನಡೆಯುತ್ತಿರುವ 2025ರ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ವಿರಾಟ್ ಕೊಹ್ಲಿಯ ಸ್ಟ್ರೈಕ್ ರೇಟ್ ಬಗ್ಗೆ ಟೀಕಿಸುತ್ತಿದ್ದವರಿಗೆ ಆರ್‌ಸಿಬಿ ದಿಗ್ಗಜ ಎಬಿ ಡಿ ವಿಲಿಯರ್ಸ್ ತಿರುಗೇಟು ನೀಡಿದ್ದಾರೆ. ವಿರಾಟ್ ಕೊಹ್ಲಿ ಆರ್‌ಸಿಬಿಗೆ ಪ್ರಮುಖ ಆಧಾರ ಸ್ಥಂಭ ಎಂದು ಹೇಳಿದ್ದಾರೆ.

ವಿರಾಟ್ ಕೊಹ್ಲಿಯನ್ನು ಬೆಂಬಲಿಸಿದ ಎಬಿಡಿ.

ನವದೆಹಲಿ: ಪ್ರಸ್ತುತ ನಡೆಯುತ್ತಿರುವ 2025ರ ಇಂಡಿಯನ್ ಪ್ರೀಮಿಯರ್ ಲೀಗ್ (IPL 2025) ಟೂರ್ನಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡದ ವಿರಾಟ್ ಕೊಹ್ಲಿಯ (Virat Kohli) ಸ್ಟ್ರೈಕ್ ರೇಟ್ ಅನ್ನು ಟೀಕಿಸುತ್ತಿದ್ದವರಿಗೆ ದಕ್ಷಿಣ ಆಫ್ರಿಕಾ ಮಾಜಿ ನಾಯಕ ಹಾಗೂ ಆರ್‌ಸಿಬಿ ದಿಗ್ಗಜ ಎಬಿ ಡಿವಿಲಿಯರ್ಸ್ (AB De Villiers) ತಿರುಗೇಟು ನೀಡಿದ್ದಾರೆ. ಆರ್‌ಸಿಬಿಗೆ ವಿರಾಟ್ ಕೊಹ್ಲಿ ಪ್ರಮುಖ ಆಧಾರ ಸ್ಥಂಭ ಎಂದು ಹೇಳಿದ್ದಾರೆ. ಇದೀಗ ನಡೆಯುತ್ತಿರುವ ಹದಿನೆಂಟನೇ ಆವೃತ್ತಿಯಲ್ಲಿ ವಿರಾಟ್ ಕೊಹ್ಲಿ ಮಿಂಚಿನ ಫಾರ್ಮ್‌ನಲ್ಲಿದ್ದಾರೆ ಅವರು ಇಲ್ಲಿಯವರೆಗೂ ಆಡಿದ 11 ಪಂದ್ಯಗಳಿಂದ 63.12ರ ಸರಾಸರಿ ಹಾಗೂ 143.46ರ ಸ್ಟ್ರೈಕ್ ರೇಟ್‌ನಲ್ಲಿ 505 ರನ್‌ಗಳನ್ನು ಗಳಿಸಿದ್ದಾರೆ. ಆ ಮೂಲಕ ಅತಿ ಹೆಚ್ಚು ರನ್ ಗಳಿಸಿದ ಬ್ಯಾಟ್ಸ್‌ಮನ್‌ಗಳ ಪಟ್ಟಿಯಲ್ಲಿ ಅಗ್ರ ಸ್ಥಾನದಲ್ಲಿದ್ದಾರೆ.
ವಿರಾಟ್ ಕೊಹ್ಲಿಯ ಅತ್ಯುತ್ತಮ ಬ್ಯಾಟಿಂಗ್ ಪ್ರದರ್ಶನದ ಬಲದಿಂದ ಆರ್‌ಸಿಬಿ ಟೂರ್ನಿಯ ಪಾಯಿಂಟ್ಸ್ ಟೇಬಲ್‌ನಲ್ಲಿ ಅಗ್ರ ಸ್ಥಾನವನ್ನು ಅಲಂಕರಿಸಿದೆ. ಆಡಿದ 11 ಪಂದ್ಯಗಳ ಪೈಕಿ ಮೂರರಲ್ಲಿ ಸೋತು ಇನ್ನುಳಿದ ಎಂಟು ಪಂದ್ಯಗಳನ್ನು ಗೆದ್ದಿದೆ. ಆ ಮೂಲಕ ಪ್ಲೇಆಫ್ಸ್‌ಗೆ ಸನಿಹದಲ್ಲಿದೆ. ಈ ಹಿನ್ನೆಲೆಯಲ್ಲಿ ವಿರಾಟ್ ಕೊಹ್ಲಿಯನ್ನು ಎಬಿ ಡಿ ಮುಕ್ತಕಂಠದಿಂದ ಗುಣಗಾನ ಮಾಡಿದ್ದಾರೆ. ವಿರಾಟ್ ಕೊಹ್ಲಿ ಆರ್‌ಸಿಬಿಯ ಸುರಕ್ಷಕ ಆಟಗಾರ ಎಂದು ಎಬಿಡಿ ಬಣ್ಣಿಸಿದ್ದಾರೆ. ಅಲ್ಲದೆ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ವಿರಾಟ್ ಕೊಹ್ಲಿಯ ಇನಿಂಗ್ಸ್ ಅನ್ನು ಇದೇ ವೇಳೆ ಎಬಿಡಿ ಸ್ಮರಿಸಿಕೊಂಡಿದ್ದಾರೆ.
ʻಆರ್‌ಸಿಬಿಯನ್ನು ತೊರೆಯಲು ನಿರ್ಧರಿಸಿದ್ದೆʼ-ಕಠಿಣ ದಿನಗಳನ್ನು ನೆನೆದ ವಿರಾಟ್ ಕೊಹ್ಲಿ!
"ವಿರಾಟ್ ಕೊಹ್ಲಿ ಯಾವಾಗಲೂ ಇದ್ದೇ ಇರುತ್ತಾರೆ. ಆರ್‌ಸಿಬಿಗೆ ಅವರು ಸುರಕ್ಷಕ. ಅವರು ಇದ್ದರೆ, ನೀವು ಭಯ ಪಡುವ ಅಗತ್ಯವಿಲ್ಲ. ವಿರಾಟ್ ಕೊಹ್ಲಿ ನಿಮ್ಮ ಬಳಿ ಇದ್ದರೆ, ನಿಮಗೆ ಭಯ ಇರುವುದಿಲ್ಲ. ಅದು ಕಥೆ. ಯಾವುದೂ ಎಂದಿಗೂ ಬದಲಾಗಿಲ್ಲ ಮತ್ತು ನಾನು ನಿಮ್ಮೆಲ್ಲ ಮಾಧ್ಯಮ ಜನರಿಗೆ ಹೇಳಲು ಬಯಸುವುದನ್ನು ನಾನು ಮರೆತಿಲ್ಲ. ನನಗೆ ಆನೆಯ ಮೆದುಳು ಇದೆ. ನನ್ನ ಎಲ್ಲಾ ಪತ್ರಕರ್ತ ಮಿತ್ರರೇ, ನಾನು ನಿಮ್ಮನ್ನು ಪ್ರೀತಿಸುತ್ತೇನೆ. ಆದರೆ ವಿರಾಟ್ ಕೊಹ್ಲಿ ತುಂಬಾ ನಿಧಾನವಾಗಿ ಬ್ಯಾಟ್ ಮಾಡುತ್ತಾರೆ ಎಂದು ನೀವು ಹೇಳಿದ್ದು ನೆನಪಿದೆ ಅಲ್ವಾ? ವಿರಾಟ್ ನಿನ್ನೆ ರಾತ್ರಿ ಸುಮಾರು 200 ಸ್ಟ್ರೈಕ್ ರೇಟ್ ನಲ್ಲಿ ಬ್ಯಾಟಿಂಗ್ ನಡೆಸಿದ್ದಾರೆ. ಅದನ್ನ ತಿನ್ನಿ," ಎಂದು ಮಾಧ್ಯಮಗಳ ವಿರುದ್ಧ ಎಬಿಡಿ ಗುಡುಗಿದ್ದಾರೆ.
IPL 2025: ಭಾರತ, ಆರ್‌ಸಿಬಿ ನಾಯಕತ್ವವನ್ನು ತೊರೆಯಲು ಕಾರಣ ತಿಳಿಸಿದ ವಿರಾಟ್ ಕೊಹ್ಲಿ!
ಮೇ 3 ರಂದು ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ವಿರಾಟ್ ಕೊಹ್ಲಿ ಅಬ್ಬರಿಸಿದ್ದರು. ಅವರು ಆಡಿದ್ದ 33 ಎಸೆತಗಳಲ್ಲಿ 62 ರನ್‌ಗಳನ್ನು ಸಿಡಿಸಿದ್ದರು. ಆ ಮೂಲಕ ಆರ್‌ಸಿಬಿ ತನ್ನ ಪಾಲಿನ 20 ಓವರ್‌ಗಳಿಗೆ 5 ವಿಕೆಟ್‌ಗಳ ನಷ್ಟಕ್ಕೆ 213 ರನ್‌ಗಳನ್ನು ಕಲೆ ಹಾಕಿತ್ತು. ಆ ಮೂಲಕ ಎದುರಾಳಿ ಸಿಎಸ್‌ಕೆಗೆ 214 ರನ್‌ಗಳ ಗುರಿಯನ್ನು ನೀಡಿತ್ತು. ಅಂತಿಮವಾಗಿ ರಜತ್ ಪಾಟಿದಾರ್ ನಾಯಕತ್ವದ ಆರ್‌ಸಿಬಿ ಕೇವಲ ಎರಡು ರನ್‌ಗಳಿಂದ ರೋಚಕ ಗೆಲುವು ದಾಖಲಿಸಿತ್ತು. ಆ ಮೂಲಕ ಟೂರ್ನಿಯ ಪಾಯಿಂಟ್ಸ್ ಟೇಬಲ್‌ನಲ್ಲಿ ಪುನಃ ಅಗ್ರ ಸ್ಥಾನಕ್ಕೆ ಲಗ್ಗೆ ಇಟ್ಟಿತ್ತು.