ಕರ್ನಾಟಕ ಬಜೆಟ್​ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹೋಳಿ ಹಬ್ಬ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

IPL 2025: ವೆಂಕಟೇಶ್‌ ಅಯ್ಯರ್‌ ಬದಲು ಅಜಿಂಕ್ಯ ರಹಾನೆಗೆ ಕಕೆಆರ್‌ ನಾಯಕತ್ವ ನೀಡದೆ ಇರಲು ಕಾರಣ ತಿಳಿಸಿದ ವೆಂಕಿ ಮೈಸೂರು!

Venky Mysore on KKR Captaincy: ಮುಂಬರುವ 2025ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಟೂರ್ನಿಯ ನಿಮಿತ್ತ ಕೋಲ್ಕತಾ ನೈಟ್‌ ರೈಡರ್ಸ್‌ ತಂಡದ ನಾಯಕತ್ವಕ್ಕೆ ಅಜಿಂಕ್ಯ ರಹಾನೆ ಅವರನ್ನು ಆಯ್ಕೆ ಮಾಡಲಾಗಿತ್ತು. ಆ ಮೂಲಕ ವೆಂಕಟೇಶ್‌ ಅಯ್ಯರ್‌ ಅವರನ್ನು ಕೈ ಬಿಡಲಾಗಿತ್ತು. ಈ ಬಗ್ಗೆ ಕೆಕೆಆರ್‌ ಸಿಇಒ ವೆಂಕಿ ಮೈಸೂರು ಸ್ಪಷ್ಟಪಡಿಸಿದ್ದಾರೆ.

IPL 2025: ವೆಂಕಟೇಶ್‌ ಅಯ್ಯರ್‌ಗೆ ಕೆಕೆಆರ್‌ ನಾಯಕತ್ವ ಏಕೆ ನೀಡಿಲ್ಲ?

ವೆಂಕಟೇಶ್‌ ಅಯ್ಯರ್‌ಗೆ ಕೆಕೆಆರ್‌ ನಾಯಕತ್ವ ತಪ್ಪಲು ಕಾರಣ ತಿಳಿಸಿದ ವೆಂಕಿ ಮೈಸೂರು.

Profile Ramesh Kote Mar 13, 2025 8:21 PM

ನವದೆಹಲಿ: ಮುಂಬರುವ 2025ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ (IPL 2025) ಟೂರ್ನಿಯ ನಿಮಿತ್ತ ಕೋಲ್ಕತಾ ನೈಟ್‌ ರೈಡರ್ಸ್‌ ತಂಡಕ್ಕೆ ಹಿರಿಯ ಬ್ಯಾಟ್ಸ್‌ಮನ್‌ ಅಜಿಂಕ್ಯ ರಹಾನೆಗೆ ನಾಯಕತ್ವವನ್ನು ನೀಡಲಾಗಿದೆ. ಆ ಮೂಲಕ ಮೆಗಾ ಹರಾಜಿನಲ್ಲಿ ದಾಖಲೆಯ ಮೊತ್ತಕ್ಕೆ ಉಳಿಸಿಕೊಂಡಿದ್ದ ವೆಂಕಟೇಶ್‌ ಅಯ್ಯರ್‌ ಅವರನ್ನು ನಾಯಕತ್ವದ ರೇಸ್‌ನಿಂದ ಕೈ ಬಿಡಲಾಗಿತ್ತು. ಇತ್ತೀಚೆಗೆ ಮಾತನಾಡಿದ್ದ ಕೋಲ್ಕತಾ ನೈಟ್‌ ರೈಡರ್ಸ್‌ ಸಿಇಒ ವೆಂಕಿ ಮೈಸೂರು, ವೆಂಕಟೇಶ್‌ ಅಯ್ಯರ್‌ಗೆ ಕೆಕೆಆರ್‌ ನಾಯಕತ್ವ ಏಕೆ ನೀಡಲಿಲ್ಲ ಎಂಬುದನ್ನು ಬಹಿರಂಗಪಡಿಸಿದ್ದಾರೆ. ಮಾರ್ಚ್‌ 22 ರಂದು ಕೋಲ್ಕತಾದ ಈಡನ್‌ ಗಾರ್ಡನ್ಸ್‌ ಕ್ರೀಡಾಂಗಣದಲ್ಲಿ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ವಿರುದ್ದ ಕೋಲ್ಕತಾ ನೈಟ್‌ ರೈಡರ್ಸ್‌ ತನ್ನ ಮೊದಲನೇ ಪಂದ್ಯವನ್ನು ಆಡಲಿದೆ.

ಕಳೆದ ವರ್ಷ ಡಿಸೆಂಬರ್‌ನಲ್ಲಿ ನಡೆದಿದ್ದ ಮೆಗಾ ಹರಾಜಿನಲ್ಲಿ ಶ್ರೇಯಸ್‌ ಅಯ್ಯರ್‌ ಅವರ ಬದಲು ವೆಂಕಟೇಶ್‌ ಅಯ್ಯರ್‌ ಅವರನ್ನು ಕೆಕೆಆರ್‌ ಉಳಿಸಿಕೊಂಡಿತ್ತು. ವೆಂಕಟೇಶ್‌ ಅಯ್ಯರ್‌ಗೆ 23.75 ಕೋಟಿ ರೂ. ಗಳನ್ನು ನೀಡಿ ಉಳಿಸಿಕೊಂಡಿತ್ತು. ಆ ಮೂಲಕ ವೆಂಕಟೇಶ್‌ ಅಯ್ಯರ್‌ಗೆ ಈ ಬಾರಿ ನಾಯಕತ್ವ ನೀಡಬಹುದೆಂದು ನಿರೀಕ್ಷಿಸಲಾಗಿತ್ತು. ಆದರೆ, ಮೆಗಾ ಹರಾಜಿನಲ್ಲಿ 1.5 ಕೋಟಿ ರೂ.ಗಳಿಗೆ ಖರೀದಿಸಿದ್ದ ಅಜಿಂಕ್ಯ ರಹಾನೆಗೆ ನಾಯಕತ್ವವನ್ನು ನೀಡಲಾಗಿದೆ.

IPL 2025: ಕೋಲ್ಕತಾ ನೈಟ್‌ ರೈಡರ್ಸ್‌ಗೆ ಅಜಿಂಕ್ಯ ರಹಾನೆ ನಾಯಕ, ವೆಂಕಟೇಶ್‌ ಅಯ್ಯರ್‌ ಉಪ ನಾಯಕ!

ವೆಂಕಟೇಶ್‌ ಅಯ್ಯರ್‌ಗೆ ನಾಯಕತ್ವ ತಪ್ಪಲು ಕಾರಣವೇನು?

ವೆಂಕಟೇಶ್‌ ಅಯ್ಯರ್‌ ಬದಲು ಅಜಿಂಕ್ಯ ರಹಾನೆಗೆ ಕೆಕೆಆರ್‌ ನಾಯಕತ್ವ ನೀಡಲು ಕಾರಣವೇನೆಂದು ವೆಂಕಿ ಮೈಸೂರು ಬಹಿರಂಗಪಡಿಸಿದ್ದಾರೆ. "ಐಪಿಎಲ್‌ ಕಠಿಣ ಟೂರ್ನಿಯಾಗಿದೆ. ವೆಂಕಟೇಶ್‌ ಅಯ್ಯರ್‌ ಬಗ್ಗೆ ನಾವು ಸಾಕಷ್ಟು ಯೋಚನೆ ಮಾಡಿದ್ದೆವು. ಆದರೆ ನಾಯಕತ್ವವು ಯುವ ಆಟಗಾರನಿಗೆ ಹೊರೆಯಾಗುತ್ತದೆ ಎಂಬುದನ್ನು ನಾವು ಇದೇ ಸಮಯದಲ್ಲಿ ಯೋಚಿಸಿದ್ದೇವೆ. ನಾಯಕತ್ವವನ್ನು ನಿಭಾಯಿಸುವಾಗ ಬಹಳಷ್ಟು ಜನರು ಬಹಳಷ್ಟು ಸವಾಲುಗಳನ್ನು ಎದುರಿಸುವುದನ್ನು ನಾವು ನೋಡಿದ್ದೇವೆ. ನಾಯಕತ್ವವು ಸಾಕಷ್ಟು ಅನುಭವ ಮತ್ತು ಪ್ರಬುದ್ದತೆಯನ್ನು ಹೊಂದಿದೆ. ಇದೆಲ್ಲವನ್ನು ಅಜಿಂಕ್ಯ ರಹಾನೆ ತಂದುಕೊಡುತ್ತಾರೆಂದು ನಾವು ಭಾವಿಸಿದ್ದೇವೆ," ಎಂದು ವೆಂಕಿ ಮೂಸೂರು ಇಎಸ್‌ಪಿಎನ್‌ ಕ್ರಿಕ್‌ಇನ್ಪೊಗೆ ತಿಳಿಸಿದ್ದಾರೆ.

IPL 2025: ಕೊಹ್ಲಿ-ಸಾಲ್ಟ್‌ ಓಪನರ್ಸ್‌, ಕೆಕೆಆರ್‌ ವಿರುದ್ದದ ಆರಂಭಿಕ ಪಂದ್ಯಕ್ಕೆ ಆರ್‌ಸಿಬಿ ಸಂಭಾವ್ಯ ಪ್ಲೇಯಿಂಗ್‌ XI

ಅಯ್ಯರ್‌ಗೆ ಉಪ ನಾಯಕತ್ವ

ಮೆಗಾ ಹರಾಜಿನ ನಿಮಿತ್ತ ವೆಂಕಟೇಶ್‌ ಅಯ್ಯರ್‌ ಅವರನ್ನು ರಿಲೀಸ್‌ ಮಾಡುವ ಮೂಲಕ ಕೋಲ್ಕತಾ ಫ್ರಾಂಚೈಸಿ ಎಲ್ಲರಿಗೂ ಅಚ್ಚರಿ ಮೂಡಿಸಿತ್ತು. ಆದರೆ, ಅವರನ್ನು ದೊಡ್ಡ ಮೊತ್ತಕ್ಕೆ ಖರೀದಿಸುವ ಮೂಲಕ ಕೆಕೆಆರ್‌, ಅವರಿಗೆ ಉಪ ನಾಯಕತ್ವವನ್ನು ನೀಡಿದೆ. ಕಳೆದ ಎರಡು ಆವೃತ್ತಿಗಳಲ್ಲಿ ಚೆನ್ನೈ ಸೂಪರ್‌ ಕಿಂಗ್ಸ್‌ ತಂಡದ ಪರ ಆಡಿದ್ದ ಅಜಿಂಕ್ಯ ರಹಾನೆ ಅವರನ್ನು ಮೆಗಾ ಹರಾಜಿನ ಕೊನೆಯ ಹಂತದಲ್ಲಿ ಕೋಲ್ಕತಾ ಫ್ರಾಂಚೈಸಿ ಖರೀದಿಸಿತ್ತು.

2022ರ ಐಪಿಎಲ್‌ ಟೂರ್ನಿಯಲ್ಲಿ ಅಜಿಂಕ್ಯ ರಹಾನೆ ಕೋಲ್ಕತಾ ನೈಟ್‌ ರೈಡರ್ಸ್‌ ತಂಡದ ಪರ ಆಡಿದ್ದರು. ಈ ವೇಳೆ ಅವರು ಏಳು ಪಂದ್ಯಗಳನ್ನು ಆಡಿ 133 ರನ್‌ಗಳನ್ನು ಕಲೆ ಹಾಕಿದ್ದರು. ಭಾರತ ತಂಡವನ್ನು ಮೂರೂ ಸ್ವರೂಪದಲ್ಲಿ ಮುನ್ನಡೆಸಿರುವ ಅನುಭವವನ್ನು ಹೊಂದಿರುವ ಅಜಿಂಕ್ಯಾ ರಹಾನೆ, ಕೆಕೆಆರ್‌ ತಂಡವನ್ನು ಮುನ್ನಡೆಸಲು ಸೂಕ್ತ ಅಭ್ಯರ್ಥಿಯಾಗಿದ್ದಾರೆ. 2018 ಮತ್ತು 2019ರಲ್ಲಿ ರಾಜಸ್ಥಾನ್‌ ರಾಯಲ್ಸ್‌ ತಂಡವನ್ನು ಅಜಿಂಕ್ಯ ರಹಾನೆ ಮುನ್ನಡೆಸಿದ್ದರು.

IPL 2025: ಡೆಲ್ಲಿ ಕ್ಯಾಪಿಟಲ್ಸ್‌ ನಾಯಕತ್ವವನ್ನು ನಿರಾಕರಿಸಿದ ಕೆಎಲ್‌ ರಾಹುಲ್‌!

ಮಾರ್ಚ್‌ 22ರಂದು ಮೊದಲನೇ ಪಂದ್ಯ

ಶ್ರೇಯಸ್‌ ಅಯ್ಯರ್‌ ನಾಯಕತ್ವದಲ್ಲಿ ಕೆಕೆಆರ್‌ ತಂಡ, 2024ರ ಐಪಿಎಲ್‌ ಟೂರ್ನಿಯಲ್ಲಿ ಚಾಂಪಿಯನ್‌ ಆಗಿತ್ತು. ಇದೀಗ ಮುಂದಿನ ಆವೃತ್ತಿಯಲ್ಲಿಯೂ ಚಾಂಪಿಯನ್‌ ಪಟ್ಟವನ್ನು ಉಳಿಸಿಕೊಳ್ಳಲು ಅಜಿಂಕ್ಯ ರಹಾನೆ ನಾಯಕತ್ವದ ಕೆಕೆಆರ್‌ ಎದುರು ನೋಡುತ್ತಿದೆ. ಮಾರ್ಚ್‌ 22 ರಂದು ಆರ್‌ಸಿಬಿ ಎದುರು ಕೆಕೆಆರ್‌ ತನ್ನ ಮೊದಲನೇ ಪಂದ್ಯವನ್ನು ಆಡಲಿದೆ.