ʻನಮಗೆ 15 ರಿಂದ 20 ರನ್ ಕಡಿಮೆʼ-ಡಿಸಿ ಎದುರು ಆರ್‌ಸಿಬಿ ಸೋಲಲು ಇದೇ ಕಾರಣ ಎಂದ ರಜತ್ ಪಾಟಿದಾರ್!
RCB vs DC: ಬ್ಯಾಟಿಂಗ್ ವೈಫಲ್ಯದಿಂದಾಗಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ, ಎದುರಾಳಿ ಡೆಲ್ಲಿ ಕ್ಯಾಪಿಟಲ್ಸ್ ಎದುರು 6 ವಿಕೆಟ್‌ಗಳ ಸೋಲು ಅನುಭವಿಸಿತು. ಆ ಮೂಲಕ 2026ರ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಆರ್‌ಸಿಬಿಗೆ ಇದು ಎರಡನೇ ಸೋಲಾಯಿತು. ಪಂದ್ಯದ ಬಳಿಕ ಆರ್‌ಸಿಬಿ ನಾಯಕ ರಜತ್ ಪಾಟಿದಾರ್ ಮಾತನಾಡಿದ್ದಾರೆ.
ಆರ್‌ಸಿಬಿ ಸೋಲಿಗೆ ಕಾರಣ ತಿಳಿಸಿದ ರಜತ್ ಪಾಟಿದಾರ್. -
ಬೆಂಗಳೂರು: ಡೆಲ್ಲಿ ಕ್ಯಾಪಿಟಲ್ಸ್ (DC) ಎದುರು ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡ 6 ವಿಕೆಟ್‌ಗಳಿಂದ ಸೋಲು ಅನುಭವಿಸಿತು. ಬಳಿಕ ಮಾತನಾಡಿದ ರಜತ್ ಪಾಟಿದಾರ್ (Rajat Patidar) ಆರ್‌ಸಿಬಿ ಸೋಲಲು ಪ್ರಮುಖ ಕಾರಣವೇನೆಂದು ಬಹಿರಂಗಪಡಿಸಿದ್ದಾರೆ. ನಮ್ಮ ತಂಡ 15 ರಿಂದ 20 ರನ್‌ಗಳನ್ನು ಹೆಚ್ಚುವರಿಯಾಗಿ ಕಲೆ ಹಾಕಿದ್ದರೆ, ಫಲಿತಾಂಶ ವಿಭಿನ್ನವಾಗಿರುತ್ತಿತ್ತು ಎಂದು ಹೇಳಿದ್ದಾರೆ. ಅಂದ ಹಾಗೆ ಇದು 2026ರ ಸಾಲಿನ ಇಂಡಿಯನ್ ಪ್ರೀಮಿಯರ್ ಲೀಗ್ (IPL 2026) ಟೂರ್ನಿಯಲ್ಲಿ ಆರ್‌ಸಿಬಿ ಪಾಲಿಗೆ ಎರಡನೇ ಸೋಲಾಗಿದೆ. ಇದಕ್ಕೂ ಮುನ್ನ ರಾಜಸ್ಥಾನ್ ರಾಯಲ್ಸ್ ಎದುರು ಸೋತಿತ್ತು. ಈ ಸೋಲಿನ ಹೊರತಾಗಿಯೂ ಆರ್‌ಸಿಬಿ ಪಾಯಿಂಟ್ಸ್ ಟೇಬಲ್‌ನಲ್ಲಿ ಎರಡನೇ ಸ್ಥಾನದಲ್ಲಿ ಉಳಿದಿದೆ.
ಶನಿವಾರ ಇಲ್ಲಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದಿದ್ದ ಪಂದ್ಯ ಆರ್‌ಸಿಬಿ ಟಾಸ್ ಸೋತು ಮೊದಲು ಬ್ಯಾಟ್ ಮಾಡುವಂತಾಗಿತ್ತು. ಆರ್‌ಸಿಬಿ ಪರ ಇನಿಂಗ್ಸ್ ಆರಂಭಿಸಿದ ಫಿಲ್ ಸಾಲ್ಟ್ ಹಾಗೂ ವಿರಾಟ್ ಕೊಹ್ಲಿ ಮೊದಲನೇ ವಿಕೆಟ್‌ಗೆ 31 ಎಸೆತಗಳಲ್ಲಿ 52 ರನ್‌ಗಳ ಜೊತೆಯಾಟವನ್ನು ಆಡಿದ್ದರು. ಈ ಹಾದಿಯಲ್ಲಿ ಆರ್‌ಸಿಬಿ ಒಂದು ಹಂತದಲ್ಲಿ 10ರ ಸರಾಸರಿಯಲ್ಲಿ ರನ್ ಗಳಿಸಿತ್ತು.
RCB vs DC: ತವರು ಅಂಗಣದಲ್ಲಿ ಆರ್‌ಸಿಬಿ ಗೆಲುವಿಗೆ ಬ್ರೇಕ್ ಹಾಕಿದ ಡೆಲ್ಲಿ ಕ್ಯಾಪಿಟಲ್ಸ್!
15ನೇ ಓವರ್‌ವರೆಗೂ ಆರ್‌ಸಿಬಿ ಉತ್ತಮವಾಗಿ ಸಾಗುತ್ತಿತ್ತು. ಆದರೆ, ಫಿಲ್ ಸಾಲ್ಟ್ 63 ರನ್ ಗಳಿಸಿದ್ದು ಬಿಟ್ಟರೆ ಮಧ್ಯಮ ಕ್ರಮಾಂಕದಲ್ಲಿ ಯಾವುದೇ ಬ್ಯಾಟ್ಸ್‌ಮನ್ ದೀರ್ಘಾವಧಿ ಬ್ಯಾಟ್ ಮಾಡಲಿಲ್ಲ ಹಾಗೂ ಡೆತ್ ಓವರ್‌ಗಳಲ್ಲಿ ಆರ್‌ಸಿಬಿ ತಂಡದಿಂದ ಹೆಚ್ಚಿನ ರನ್ ಮೂಡಿಬರಲಿಲ್ಲ. ಡೆತ್ ಓವರ್‌ಗಳಲ್ಲಿ ಆರ್‌ಸಿಬಿ ಗಳಿಸಿದ್ದು ಕೇವಲ 28 ರನ್ ಮಾತ್ರ. ಇದು ಆರ್‌ಸಿಬಿಗೆ ಭಾರಿ ಹಿನ್ನಡೆಯಾಯಿತು. ಒಂದು ವೇಳೆ ಡೆತ್ ಓವರ್‌ಗಳಲ್ಲಿ ಡಿಸಿ ಬೌಲರ್‌ಗಳು ಪರಿಣಾಮಕಾರಿಯಾಗಿ ದಾಳಿ ನಡೆಸಿದರು, ಇದು ಆರ್‌ಸಿಬಿಗೆ ಭಾರಿ ಹಿನ್ನಡೆಯಾಯಿತು. ಇದರ ಪರಿಣಾಮ ಆರ್‌ಸಿಬಿ ತನ್ನ ಪಾಲಿನ 20 ಓವರ್‌ಗಳಿಗೆ 175 ರನ್‌ಗಳನ್ನು ಕಲೆ ಹಾಕಿತು.
Just a minor setback. Proud of the fight our boys showed on the field. ❤️
— Royal Challengers Bengaluru (@RCBTweets) April 18, 2026
We go again next Friday. 👊#PlayBold #ನಮ್ಮRCB #IPL2026 #RCBvDC pic.twitter.com/rm3IDShT1h
ಬಳಿಕ ಗುರಿ ಹಿಂಬಾಲಿಸಿದ ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕೆ ಪವರ್‌ಪ್ಲೇನಲ್ಲಿ ಮೂರು ವಿಕೆಟ್ ಕಿತ್ತು ಭುವನೇಶ್ವರ್ ಕುಮಾರ್ ಆರಂಭಿಕ ಆಘಾತ ನೀಡಿದರು. ಕೇವಲ 18 ರನ್‌ಗಳಿಗೆ ಡಿಸಿ ಮೂರು ವಿಕೆಟ್ ಕಳೆದುಕೊಂಡು ಆರಂಭಿಕ ಆಘಾತ ಅನುಭವಿಸಿತ್ತು. ಆದರೆ, ಕೆಎಲ್ ರಾಹುಲ್ ಹಾಗೂ ಟ್ರಿಸ್ಟನ್ ಸ್ಟಬ್ಸ್ ಅವರ ಅರ್ಧಶತಕಗಳ ಬಲದಿಂದ ಡಿಸಿ ಸಂಕಷ್ಟದಿಂದ ಪಾರಾಗಿತ್ತು. ಆದರೂ ಆರ್‌ಸಿಬಿ ಬೌಲರ್‌ಗಳು ಕೊನೆಯವರೆಗೂ ಹೋರಾಟ ನಡೆಸಿದ್ದರು. 20ನೇ ಓವರ್‌ನಲ್ಲಿ ಡೆಲ್ಲಿಗೆ 15 ರನ್ ಅಗತ್ಯವಿದ್ದಾಗ ರೊಮ್ಯಾರಿಯೊ ಶೆಫರ್ಡ್‌ಗೆ ಡೇವಿಡ್ ಮಿಲ್ಲರ್ ಎರಡು ಸಿಕ್ಸರ್ ಹಾಗೂ ಒಂದು ಬೌಂಡರಿ ಗಳಿಸಿ ಆರ್‌ಸಿಬಿಗೆ ಸೋಲುಣಿಸಿದರು.
IPL 2026: 26 ರನ್‌ಗೆ ಔಟಾದರೂ ವಿಶೇಷ ದಾಖಲೆಯನ್ನು ಬರೆದ ಟಿಮ್ ಡೇವಿಡ್!
ಆರ್‌ಸಿಬಿ ಸೋಲಿಗೆ ಕಾರಣ ತಿಳಿಸಿದ ರಜತ್ ಪಾಟಿದಾರ್
ಪಂದ್ಯದ ಬಳಿಕ ಸ್ಟಾರ್ ಸ್ಪೋರ್ಟ್ಸ್ ಜೊತೆ ಮಾತನಾಡಿದ ಆರ್‌ಸಿಬಿ ಕಪ್ತಾನ ರಜತ್ ಪಾಟಿದಾರ್, "ಹೌದು, ಪಂದ್ಯ ಕೊನೆಯ ತನಕ ಬಂದಿತ್ತು. ಆದರೆ, ನಮಗೆ 15 ರಿಂದ 20 ರನ್ ಕಡಿಮೆಯಾಗಿದೆ. ನಮ್ಮ ಆರಂಭ ಉತ್ತಮವಾಗಿತ್ತು, ವಿಶೇಷವಾಗಿ ವಿರಾಟ್ ಕೊಹ್ಲಿ ಭಾಯ್ ಹಾಗೂ ಫಿಲ್ ಸಾಲ್ಟ್ ಅವರು ನಮಗೆ ಉತ್ತಮ ಆರಂಭ ತಂದುಕೊಟ್ಟಿದ್ದರು ಎಂದು ಭಾವಿಸುತ್ತೇನೆ. ಆದರೆ, 12 ಅಥವಾ 13ನೇ ಓವರ್ ಬಳಿಕ ನಾವು ವಿಕೆಟ್‌ಗಳನ್ನು ಕಳೆದುಕೊಂಡೆವು, ಇದರಿಂದ ನಮಗೆ ಭಾರಿ ಹಿನ್ನಡೆಯಾಯಿತು," ಎಂದು ಹೇಳಿದ್ದಾರೆ.
"ಪಂದ್ಯದ ಪ್ರಥಮ ಇನಿಂಗ್ಸ್‌ನಲ್ಲಿ ಬ್ಯಾಟಿಂಗ್‌ಗೆ ಪಿಚ್ ಸ್ವಲ್ಪ ಕಠಿಣವಾಗಿತ್ತು ಎಂದು ನಾನು ಹೇಳುತ್ತೇನೆ. ಡಿಸಿ ಚೇಸಿಂಗ್‌ನಲ್ಲಿ ಕೊನೆಯ ಓವರ್‌ವರೆಗೂ ನಾನು ನಡೆಸಿದ ಹೋರಾಟ ಉತ್ತಮವಾಗಿತ್ತು, ಇದು ನಮ್ಮ ಪಾಲಿಗೆ ಸಕಾರಾತ್ಮಕ ಸಂಕೇತ. ನಿಮಗೆ ಹೇಗೆ ಅನಿಸುತ್ತದೆ ಹಾಗೆ ಬೌಲ್ ಮಾಡಿ ಎಂಬುದು ಬೌಲರ್‌ಗಳ ಜೊತೆಗಿನ ಚರ್ಚೆಯಾಗಿತ್ತು. ಇದು ದೀರ್ಘಾವಧಿ ಟೂರ್ನಿಯಾಗಿದೆ ಆದರೆ, ನಾವು ಹಿಂದಕ್ಕೆ ಹೋಗಿ, ತಪ್ಪುಗಳನ್ನು ಅರಿತುಕೊಂಡು ಅವುಗಳನ್ನು ಪರಿಹರಿಸುತ್ತೇವೆ," ಎಂದು ಆರ್‌ಸಿಬಿ ಕ್ಯಾಪ್ಟನ್ ತಿಳಿಸಿದ್ದಾರೆ.