KSCA ಚುನಾವಣೆ; ಅಧ್ಯಕ್ಷರಾಗಿ ವೆಂಕಟೇಶ್ ಪ್ರಸಾದ್ ಆಯ್ಕೆ
ಡಿಸೆಂಬರ್ 7ರಂದು ನಡೆದ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಅಧ್ಯಕ್ಷರಾಗಿ ಮಾಜಿ ಕ್ರಿಕೆಟಿಗ ವೆಂಕಟೇಶ್ ಪ್ರಸಾದ್ ಆಯ್ಕೆಯಾಗಿದ್ದಾರೆ. ಅವರು 191 ಮತಗಳ ಅಂತರದಿಂದ ತಮ್ಮ ಸಮೀಪದ ಪ್ರತಿಸ್ಪರ್ಧಿ ಕೆ.ಎನ್.ಶಾಂತಕುಮಾರ್ ಅವರು ವಿರುದ್ಧ ಗೆಲುವು ಸಾಧಿಸಿದ್ದಾರೆ. ಅವರ ಪರ ಒಟ್ಟು 749 ಮತ ಚಲಾವಣೆಯಾಗಿದೆ.
ವೆಂಕಟೇಶ್ ಪ್ರಸಾದ್ -
ಬೆಂಗಳೂರು, ಡಿ. 7: ತೀವ್ರ ಕುತೂಹಲ ಕೆರಳಿಸಿದ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ (KSCA) ಅಧ್ಯಕ್ಷರಾಗಿ ಮಾಜಿ ಕ್ರಿಕೆಟಿಗ ವೆಂಕಟೇಶ್ ಪ್ರಸಾದ್ (Venkatesh Prasad) ಆಯ್ಕೆಯಾಗಿದ್ದಾರೆ. ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸೇರಿ ಒಟ್ಟು 16 ಸ್ಥಾನಗಳಿಗೆ ಭಾನುವಾರ (ಡಿಸೆಂಬರ್ 7) ಬೆಳಗ್ಗೆಯಿಂದ ಸಂಜೆವರೆಗೆ ಮತದಾನ ನಡೆಯಿತು. ರಾತ್ರಿ ವೇಳೆಗೆ ಫಲಿತಾಂಶ ಪ್ರಕಟವಾಗಿದ್ದು, ವೆಂಕಟೇಶ್ ಪ್ರಸಾದ್ 191 ಮತಗಳ ಅಂತರದಿಂದ ಗೆದ್ದಿದ್ದಾರೆ. ಆ ಮೂಲಕ 12 ವರ್ಷಗಳ ಬಳಿಕ ವೆಂಕಟೇಶ್ ಪ್ರಸಾದ್ ಕೆಎಸ್‌ಸಿಎಗೆ ಮರಳಿದ್ದಾರೆ.
ಮಾಜಿ ಕ್ರಿಕೆಟಿಗರಾದ ಜಾವಗಲ್ ಶ್ರೀನಾಥ್ ಹಾಗೂ ಅನಿಲ್ ಕುಂಬ್ಳೆ ಬಣದ ವೆಂಕಟೇಶ್ ಪ್ರಸಾದ್ ಅವರಿಗೆ ಒಟ್ಟು 749 ಮತ ಲಭಿಸಿದರೆ, ಬ್ರಿಜೇಶ್ ಪಾಟೀಲ್ ಬಣದ ಕೆ.ಎನ್.ಶಾಂತಕುಮಾರ್ ಅವರಿಗೆ 558 ಮತಗಳು ಬಿದ್ದಿವೆ.
ಇನ್ನು ವೆಂಕಟೇಶ್ ಪ್ರಸಾದ್ ಬಣದ ಸುಜಿತ್ ಸೋಮಸುಂದರ್ ಉಪಾಧ್ಯಕ್ಷರಾಗಿ, ಮಧುಕರ್ ಖಜಾಂಚಿಯಾಗಿ ನೇಮಕವಾಗಿದ್ದಾರೆ. ಪ್ರಧಾನ ಕಾರ್ಯದರ್ಶಿಯಾಗಿ ಸಂತೋಷ್ ಮೆನನ್ ಗೆಲುವು ಸಾಧಿಸಿದ್ದಾರೆ.
ಕೋರ್ಟ್ ಮೊರೆ ಹೋಗಿದ್ದ ಶಾಂತ ಕುಮಾರ್
ವಿಶೇಷ ಎಂದರೆ ಶಾಂತಕುಮಾರ್ ಕೋರ್ಟ್ ಮೊರೆ ಹೋಗಿ ಚುನಾವಣೆಗೆ ಸ್ಪರ್ಧಿಸಿದ್ದರು. ಆರಂಭದಲ್ಲಿ ಅವರ ನಾಮಪತ್ರ ತಿರಸ್ಕೃತಗೊಂಡಿತ್ತು. ಹೀಗಾಗಿ ಶಾಂತಕುಮಾರ್ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಶಾಂತಕುಮಾರ್ ಅವರ ನಾಮಪತ್ರ ಸಿಂಧುಗೊಳಿಸಿ ಚುನಾವಣೆ ನಡೆಸುವಂತೆ ನ್ಯಾಯಾಲಯ ಆದೇಶ ನೀಡಿತ್ತು.
ಕೆಎಸ್‌ಸಿಎ ಚುನಾವಣೆ: ಚಿನ್ನಸ್ವಾಮಿ ಕ್ರೀಡಾಂಗಣದ 'ಗತವೈಭವ' ಮರಳಿ ತರಲು ಬದ್ಧ; ವೆಂಕಟೇಶ್ ಪ್ರಸಾದ್
ನ್ಯಾಯಾಲಯ ಹೇಳಿದ್ದೇನು?
200 ರೂ. ಹಿಂಬಾಕಿ ಪಾವತಿಸಿಲ್ಲ ಎಂಬ ಕಾರಣಕ್ಕೆ ಕರ್ನಾಟಕ ರಾಜ್ಯ ಕ್ರಿಕೆಟ್ ಅಕಾಡೆಮಿಯ (ಕೆಎಸ್‌ಸಿಎ) ಅಧ್ಯಕ್ಷ ಸ್ಥಾನಕ್ಕೆ ಸಲ್ಲಿಸಿದ ನಾಮಪತ್ರವನ್ನು ತಿರಸ್ಕರಿಸಿದ ಚುನಾವಣಾಧಿಕಾರಿ ಕ್ರಮ ಪ್ರಶ್ನಿಸಿ ಕೆ.ಎನ್.ಶಾಂತಕುಮಾರ್ ಸಲ್ಲಿಸಿರುವ ಅರ್ಜಿಯನ್ನು ಪುರಸ್ಕರಿಸಿದ ಹೈಕೋರ್ಟ್ ಚುನಾವಣೆಯಲ್ಲಿ ಅವರಿಗೆ ಸ್ಪರ್ಧಿಸಲು ಅವಕಾಶ ನೀಡಿತ್ತು. ನ್ಯಾ. ಸೂರಜ್ ಗೋವಿಂದರಾಜ್ ಅವರಿದ್ದ ಹೈಕೋರ್ಟ್ ಪೀಠ ನವೆಂಬರ್ 29ರಂದು ಈ ಆದೇಶ ನೀಡಿತ್ತು.
ಅಧ್ಯಕ್ಷ ಸ್ಥಾನಕ್ಕೆ ಅಭ್ಯರ್ಥಿಗಳ ಪಟ್ಟಿಯನ್ನು ಪ್ರಕಟಿಸುವಂತೆ ಕೆಎಸ್‌ಸಿಎ ಚುನಾವಣಾ ಅಧಿಕಾರಿಗೆ ಹೈಕೋರ್ಟ್ ಸೂಚಿಸಿತ್ತು. ಆ ಮೂಲಕ ನವೆಂಬರ್ 24ರಂದು ಚುನಾವಣಾ ಅಧಿಕಾರಿ ನೀಡಿದ್ದ ಹಿಂದಿನ ನಿರ್ಧಾರವನ್ನು ಹೈಕೋರ್ಟ್ ರದ್ದುಗೊಳಿಸಿತ್ತು.
12 ವರ್ಷಗಳ ಬಳಿಕ ಕೆಎಸ್‌ಸಿಎಗೆ ಆಗಮನ
56 ವರ್ಷದ ವೆಂಕಟೇಶ್ ಈ ಹಿಂದೆ 2010ರಿಂದ 2013ರವರೆಗೆ ಕೆಎಸ್‌ಸಿಎ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು. ಆಗ ಅನಿಲ್ ಕುಂಬ್ಳೆ ಅಧ್ಯಕ್ಷರಾಗಿದ್ದರು. ಜಾವಗಲ್ ಶ್ರೀನಾಥ್ ಕಾರ್ಯದರ್ಶಿಯಾಗಿದ್ದರು. 12 ವರ್ಷ ಬಳಿಕ ವೆಂಕಟೇಶ್ ಮತ್ತೆ ಕೆಎಸ್‌ಸಿಎಗೆ ಆಗಮಿಸಿದ್ದಾರೆ. ಕೆಎಸ್‌ಸಿಎ ಆಡಳಿತ ಸಮಿತಿ ಸದಸ್ಯ, ವಕ್ತಾರರಾಗಿದ್ದ ವಿನಯ್ ಮೃತ್ಯುಂಜಯ 2019ರಿಂದ 2022ರ ವರೆಗೆ ಖಜಾಂಚಿಯಾಗಿ ಕಾರ್ಯನಿರ್ವಹಿಸಿದ್ದರು. ಅವರು ಬಿಸಿಸಿಐ ಆರ್ಥಿಕ ಸಮಿತಿ ಸದಸ್ಯರಾಗಿಯೂ ಸೇವೆ ಸಲ್ಲಿಸಿದ್ದಾರೆ.
1969ರಲ್ಲಿ ಬೆಂಗಳೂರಿನಲ್ಲಿ ಜನಿಸಿದ ವೆಂಕಟೇಶ್ ಪ್ರಸಾದ್ 1994ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದರು. ಅವರು 33 ಟೆಸ್ಟ್ ಪಂದ್ಯದಿಂದ 96 ವಿಕೆಟ್ ಕಬಳಿಸಿದ್ದರೆ, 161 ಏಕದಿನ ಪಂದ್ಯದಿಂದ 196 ವಿಕೆಟ್ ಉರುಳಿಸಿದ್ದಾರೆ.