ಸೌರವ್ ಗಂಗೂಲಿ ಜೀವನಾಧರಿತ ಸಿನಿಮಾ ಚಿತ್ರೀಕರಣ ವೇಳೆ ಹಾಳಾದ ಪಿಚ್, ಲೀಸೆಸ್ಟರ್‌ಶೈರ್ ಕ್ಲಬ್‌ಗೆ ಭಾರೀ ದಂಡ!
ಲೀಸೆಸ್ಟರ್‌ಶೈರ್ ತಂಡಕ್ಕೆ ಕಳೆದ ತಿಂಗಳು ಗ್ಲಾಮೋರ್ಗನ್ ವಿರುದ್ಧ ನಡೆದಿದ್ದ ಪಂದ್ಯದ ವೇಳೆ ಪಿಚ್‌ನ ಕಳಪೆ ಸ್ಥಿತಿಗಾಗಿ 27 ಅಂಕಗಳನ್ನು ಕಡಿತಗೊಳಿಸಲಾಗಿದೆ. ಇದರ ನಡುವೆ, ಕ್ಲಬ್‌ನ ಮುಖ್ಯ ಗ್ರೌಂಡ್ಸ್‌ಮ್ಯಾನ್ ಪಿಚ್‌ನ ಪರಿಸ್ಥಿತಿಗೆ ಬಾಲಿವುಡ್ ಚಿತ್ರದ ಚಿತ್ರೀಕರಣ ಮತ್ತು ತೀವ್ರ ಬಿಸಿಲಿನ ವಾತಾವರಣವೇ ಕಾರಣ ಎಂದು ಹೇಳಿದ್ದಾರೆ.
ಸೌರವ್ ಗಂಗೂಲಿ ಸಿನಿಮಾವನ್ನು ದೂರಿದ ಲೀಸೆಸ್ಟರ್‌ಶೈರ್. -
ನವದೆಹಲಿ: ಇಂಗ್ಲೆಂಡ್‌ನ ಕೌಂಟಿ ಕ್ರಿಕೆಟ್ (County Championship) ಕ್ಲಬ್ ಲೀಸೆಸ್ಟರ್‌ಶೈರ್ ತಂಡಕ್ಕೆ (Leicestershire) ಕಳಪೆ ಪಿಚ್‌ನಿಂದ ದೊಡ್ಡ ನಷ್ಟ ಉಂಟಾಗಿದೆ. ಕ್ಲಬ್‌ಗೆ 5,000 ಪೌಂಡ್ (ಸುಮಾರು ₹6.43 ಲಕ್ಷ) ದಂಡ ವಿಧಿಸಲಾಗಿದ್ದು, ಇದರ ಜೊತೆಗೆ 27 ಅಂಕಗಳನ್ನು ಕಡಿತಗೊಳಿಸಲಾಗಿದೆ. ಇದರಿಂದ ಲೀಸೆಸ್ಟರ್‌ಶೈರ್ ಕ್ಲಬ್ ಪ್ರಥಮ ಡಿವಿಷನ್‌ನಿಂದ ಹೊರಬೀಳುವ ಅಪಾಯದ ಅಂಚಿಗೆ ತಲುಪಿದೆ. ಸೌರವ್ ಗಂಗೂಲಿ (Sourav Ganguly Biopic) ಅವರ ಜೀವನಾಧರಿತ ಸಿನಿಮಾದ ಚಿತ್ರೀಕರಣ ಇದೇ ಕ್ಲಬ್‌ನ ಮೈದಾನದಲ್ಲಿ ನಡೆಯುತ್ತಿದೆ. ಕಳಪೆ ಪಿಚ್ ನಿರ್ಮಾಣಕ್ಕೆ ಸಿನಿಮಾ ಚಿತ್ರೀಕರಣವೇ ಕಾರಣ ಎಂದು ಲೀಸೆಸ್ಟರ್‌ಶೈರ್ ಕ್ಲಬ್ ವಾದಿಸಿತ್ತು. ಆದರೆ, ಕ್ರಿಕೆಟ್ ಡಿಸಿಪ್ಲಿನ್ ಪ್ಯಾನಲ್ ಈ ವಾದವನ್ನು ಒಪ್ಪಿಕೊಳ್ಳಲಿಲ್ಲ. ಪರಿಣಾಮವಾಗಿ ಕ್ಲಬ್‌ಗೆ ಭಾರೀ ದಂಡ ಹಾಗೂ ಅಂಕ ಕಡಿತದ ಶಿಕ್ಷೆ ವಿಧಿಸಿದೆ.
ಕೌಂಟಿ ಚಾಂಪಿಯನ್‌ಶಿಪ್‌ನಲ್ಲಿ ಲೀಸೆಸ್ಟರ್‌ಶೈರ್ ತಂಡ, ಗ್ಲಾಮೋರ್ಗನ್ ವಿರುದ್ಧದ ಪಂದ್ಯಕ್ಕಾಗಿ ಕಳಪೆ ಗುಣಮಟ್ಟದ ಪಿಚ್ ಸಿದ್ಧಪಡಿಸಿತ್ತು ಎಂದು ಪಂದ್ಯ ರೆಫರಿ ವರದಿ ಮಾಡಿದ್ದರು. ಈ ಪಂದ್ಯ ಆಗಸ್ಟ್ 20ರಿಂದ 23ರವರೆಗೆ ನಡೆದಿತ್ತು. ಪಂದ್ಯದ ಪಿಚ್ ಕಳಪೆ ಗುಣಮಟ್ಟದ್ದಾಗಿತ್ತು ಎಂದು ಪರಿಗಣಿಸಿದ ಕ್ರಿಕೆಟ್ ಡಿಸಿಪ್ಲಿನ್ ಪ್ಯಾನಲ್, ಇದಕ್ಕೆ ಲೀಸೆಸ್ಟರ್‌ಶೈರ್ ಕ್ಲಬ್‌ನ್ನೇ ಹೊಣೆಗಾರನೆಂದು ತೀರ್ಮಾನಿಸಿ ದಂಡ ಹಾಗೂ ಅಂಕ ಕಡಿತದ ಶಿಕ್ಷೆ ವಿಧಿಸಿದೆ.
IND vs WI: ವೆಸ್ಟ್ ಇಂಡೀಸ್ ವಿರುದ್ಧದ ಒಡಿಐ, ಟಿ20ಐ ಸರಣಿಗಳಿಗೆ ಭಾರತ ತಂಡ ಪ್ರಕಟ!
ಗೆಲುವಿನಿಂದ ಬಂದ ಅಂಕಗಳೂ ಕಡಿತ
ಲೀಸೆಸ್ಟರ್‌ಶೈರ್ ತಂಡ, ಗ್ಲಾಮೋರ್ಗನ್ ವಿರುದ್ಧದ ಪಂದ್ಯದಲ್ಲಿ 42 ರನ್‌ಗಳ ಗೆಲುವು ಸಾಧಿಸಿತ್ತು. ಆದರೆ, ಈ ಗೆಲುವಿನಿಂದ ಲಭಿಸಿದ 19 ಅಂಕಗಳನ್ನೂ ಪ್ಯಾನಲ್ ಕಡಿತಗೊಳಿಸಿದೆ. ಇದರ ಜೊತೆಗೆ 8 ಅಂಕಗಳ ದಂಡವನ್ನೂ ವಿಧಿಸಲಾಗಿದೆ. ಈ ತೀರ್ಪಿನ ವಿರುದ್ಧ ಮೇಲ್ಮನವಿ ಸಲ್ಲಿಸಲು ಕ್ಲಬ್‌ಗೆ 10 ದಿನಗಳ ಕಾಲಾವಕಾಶ ನೀಡಲಾಗಿದೆ. ಲೀಸೆಸ್ಟರ್‌ಶೈರ್ ಮೇಲ್ಮನವಿ ಸಲ್ಲಿಸದಿದ್ದರೆ ಅಥವಾ ಸಲ್ಲಿಸಿದ ಮೇಲ್ಮನವಿಯೂ ತಿರಸ್ಕೃತವಾದರೆ ಈ ಕ್ಲಬ್ ಪ್ರಥಮ ದರ್ಜೆ ಅರ್ಹತೆಯನ್ನು ಕಳೆದುಕೊಳ್ಳುವ ಅಪಾಯ ಮುಂದುವರಿಯಲಿದೆ.
ಗಂಗೂಲಿ ಬಯೋಪಿಕ್ ಚಿತ್ರೀಕರಣದ ವೇಳೆ ಹಾಳಾದ ಪಿಚ್?
ಲೀಸೆಸ್ಟರ್‌ಶೈರ್‌ನ ಮುಖ್ಯ ಗ್ರೌಂಡ್ಸ್‌ಮ್ಯಾನ್ ಕ್ಯಾಲಮ್ ಲೆವಿನ್ ಅವರು, ಭಾರತ ತಂಡದ ಮಾಜಿ ನಾಯಕ ಸೌರವ್ ಗಂಗೂಲಿ ಅವರ ಬಯೋಪಿಕ್ ಚಿತ್ರೀಕರಣದ ವೇಳೆ ಇಲ್ಲಿನ ಪಿಚ್ ಹಾಳಾಗಿದೆ ಎಂದು ಆರೋಪ ಮಾಡಿದ್ದಾರೆ.
ಮುಂದಿನ 10 ಪಂದ್ಯಗಳಲ್ಲಿ ಅಭಿಷೇಕ್, ಸಂಜು ಇನಿಂಗ್ಸ್ ಆರಂಭಿಸಬೇಕೆಂದ ಎಸ್ ಬದ್ರಿನಾಥ್!
“ಈ ಬಾರಿ ಇದು ಈಗಾಗಲೇ ಬಳಸಲಾಗಿದ್ದ ಪಿಚ್ ಆಗಿತ್ತು. ಸುಮಾರು 10 ವಾರಗಳ ಹಿಂದೆ ಇದೇ ಪಿಚ್‌ನಲ್ಲಿ ಎರಡು ಟಿ20 ಪಂದ್ಯಗಳು ನಡೆದಿದ್ದವು. ಪಂದ್ಯಕ್ಕೂ ಮುನ್ನ ನನ್ನ ನಿಯಂತ್ರಣಕ್ಕೆ ಮೀರಿದ ಹಲವು ಸಂಗತಿಗಳು ಇಲ್ಲಿ ನಡೆದಿದ್ದವು. ಉದಾಹರಣೆಗೆ, ಹವಾಮಾನವು 35 ಡಿಗ್ರಿ ಸೆಲ್ಸಿಯಸ್‌ನಷ್ಟಿತ್ತು. ಪಂದ್ಯದ ನಾಲ್ಕು ದಿನಗಳ ಮೊದಲು ಯಾವುದೇ ಮುಂಗಡ ಯೋಜನೆ ಇಲ್ಲದ ಬಾಲಿವುಡ್ ಚಿತ್ರ ಚಿತ್ರೀಕರಣದ ಕಾರ್ಯಕ್ರಮವೂ ನಡೆದಿತ್ತು. ಆ ಸಂದರ್ಭದಲ್ಲಿ ಪಿಚ್‌ನಲ್ಲಿ ಕೆಲಸ ಮಾಡಲು ನನಗೆ ಅನುಮತಿ ಇರಲಿಲ್ಲ. ಅದನ್ನು ಮುಚ್ಚಿಡಲು ಅಥವಾ ಬೇರೆ ಯಾವುದೇ ಕೆಲಸ ಮಾಡಲು ಸಹ ನನಗೆ ಅವಕಾಶ ನೀಡಲಾಗಿರಲಿಲ್ಲ,” ಎಂದು ಅವರು ದೂರಿದ್ದಾರೆ.
ಕೊನೆಯ ಪಂದ್ಯದಲ್ಲಿ ಗೆಲುವು ಅನಿವಾರ್ಯ
ಲೀಸೆಸ್ಟರ್‌ಶೈರ್ ತಂಡ 12 ಪಂದ್ಯಗಳಿಂದ 89 ಅಂಕಗಳನ್ನು ಹೊಂದಿದೆ. ಕೌಂಟಿ ಚಾಂಪಿಯನ್‌ಶಿಪ್‌ನ ಟಾಪ್ ಟಯರ್‌ನಲ್ಲಿ ಸ್ಥಾನ ಉಳಿಸಿಕೊಳ್ಳಲು, ಪ್ರಥಮ ಡಿವಿಷನ್‌ನ ತನ್ನ ಕೊನೆಯ ಪಂದ್ಯದಲ್ಲಿ ಹ್ಯಾಂಪ್‌ಶೈರ್ ವಿರುದ್ಧ ಗೆಲ್ಲುವುದು ಅನಿವಾರ್ಯವಾಗಿದೆ. ಈ ಕುರಿತು ಕ್ಲಬ್ ಕಾನೂನುಬದ್ಧವಾಗಿ ತನ್ನ ಪರಿಸ್ಥಿತಿಯನ್ನು ಪರಿಶೀಲಿಸುತ್ತಿದೆ ಎಂದು ತಿಳಿಸಿದೆ. ಇದರ ನಂತರ ಮುಂದಿನ ನಿರ್ಧಾರ ಕೈಗೊಳ್ಳಲಾಗುವುದು. ಅಂಕಗಳ ಕಡಿತ ಹಾಗೂ ಭಾರೀ ದಂಡದ ವಿರುದ್ಧ ಲೀಸೆಸ್ಟರ್‌ಶೈರ್ ಕ್ಲಬ್ ಮೇಲ್ಮನವಿ ಸಲ್ಲಿಸುವ ಅವಕಾಶವನ್ನು ಹೊಂದಿದೆ.