MI vs DC: ಕರುಣ್ ನಾಯರ್ ಹೋರಾಟ ವ್ಯರ್ಥ, ಗೆಲುವಿನ ಸನಿಹ ಬಂದು ಮುಂಬೈಗೆ ಮಣಿದ ಡೆಲ್ಲಿ!
MI vs DC Match Highlights: ದಿಲ್ಲಿಯ ಅರುಣ್ ಜೆಟ್ಲಿ ಕ್ರೀಡಾಂಗಣದಲ್ಲಿ ಭಾನುವಾರ ನಡೆದಿದ್ದ ರೋಚಕ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಮುಂಬೈ ಇಂಡಿಯನ್ಸ್ 12 ರನ್‌ಗಳಿಂದ ಗೆಲುವು ಸಾಧಿಸಿತು. ಡೆಲ್ಲಿ ಪರ ಚೇಸಿಂಗ್‌ನಲ್ಲಿ ಏಕಾಂಗಿ ಹೋರಾಟ ನಡೆಸಿದ್ದ ಕರುಣ್ ನಾಯರ್ 40 ಎಸೆತಗಳಲ್ಲಿ 89 ರನ್ ಸಿಡಿಸಿದ್ದರು. ಆದರೂ ಇನ್ನುಳಿದವರ ವೈಫಲ್ಯದಿಂದ ಡೆಲ್ಲಿ ಸೋಲು ಅನುಭವಿಸಬೇಕಾಯಿತು.

ಡೆಲ್ಲಿ ಕ್ಯಾಪಿಟಲ್ಸ್ ವಿರುದ್ದ ಮುಂಬೈ ಇಂಡಿಯನ್ಸ್‌ಗೆ 12 ರನ್ ರೋಚಕ ಜಯ.

ನವದೆಹಲಿ: ಕರುಣ್ ನಾಯರ್ (89 ರನ್) ಅವರ ಸ್ಪೋಟಕ ಅರ್ಧಶತಕದ ಹೊರತಾಗಿಯೂ ಕರಣ್ ಶರ್ಮಾ (36ಕ್ಕೆ 3) ಅವರ ಸ್ಪಿನ್ ಮೋಡಿಯ ಸಹಾಯದಿಂದ ಮುಂಬೈ ಇಂಡಿಯನ್ಸ್ ತಂಡ, 2025ರ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ 29ನೇ ಪಂದ್ಯದಲ್ಲಿ(MI vs DC) ಡೆಲ್ಲಿ ಕ್ಯಾಪಿಟಲ್ಸ್ ವಿರುದ್ದ 12 ರನ್‌ಗಳ ರೋಚಕ ಗೆಲುವು ಸಾಧಿಸಿತು. ಆ ಮೂಲಕ ಹಾರ್ದಿಕ್ ಪಾಂಡ್ಯ ನಾಯಕತ್ವದ ಮುಂಬೈ ಇಂಡಿಯನ್ಸ್ (Mumbai Indians) ಹದಿನೆಂಟನೇ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ಎರಡನೇ ಗೆಲುವು ಪಡೆದುಕೊಂಡಿತು. ಆದರೆ, 19ನೇ ಓವರ್‌ವರೆಗೂ ಗೆಲ್ಲುವ ನೆಚ್ಚಿನ ತಂಡವಾಗಿದ್ದ ಡೆಲ್ಲಿ ಕ್ಯಾಪಿಟಲ್ಸ್ (Delhi capitals) ಕೊನೆಯಲ್ಲಿ ಮೂರು ರನ್‌ಔಟ್‌ಗಳಿಂದಾಗಿ ಅನಿರೀಕ್ಷಿತವಾಗಿ ಸೋಲು ಒಪ್ಪಿಕೊಳ್ಳಬೇಕಾಯಿತು.
ಇಲ್ಲಿನ ಅರುಣ್ ಜೆಟ್ಲಿ ಕ್ರೀಡಾಂಗಣದಲ್ಲಿ ಭಾನುವಾರ ನಡೆದಿದ್ದ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ನೀಡಿದ್ದ 206 ರನ್‌ಗಳ ಗುರಿಯನ್ನು ಹಿಂಬಾಲಿಸಿದ್ದ ಡೆಲ್ಲಿ ಕ್ಯಾಪಿಟಲ್ಸ್ ಶೂನ್ಯ ಸಂಪಾದನೆಯಲ್ಲಿ ಜೇಕ್ ಮೆಗರ್ಕ್ ಅವರನ್ನು ಕಳೆದುಕೊಂಡಿತ್ತು. ಆದರೆ, ಎರಡನೇ ವಿಕೆಟ್‌ಗೆ ಕರುಣ್ ನಾಯರ್ ಹಾಗೂ ಅಭಿಷೇಕ್ ಪೊರೆಲ್ ಅವರ 119 ರನ್‌ಗಳ ಜೊತೆಯಾಟದ ಬಲದಿಂದ ಭರ್ಜರಿ ಆರಂಭವನ್ನು ಪಡೆಯಿತು. ಈ ವೇಳೆ 25 ಎಸೆತಗಳಲ್ಲಿ 33 ರನ್ ಗಳಿಸಿ ಅಭಿಷೇಕ್ ಪೊರೆಲ್ ವಿಕೆಟ್ ಒಪ್ಪಿಸಿದ್ದರು.
RCB vs RR: ಪಿಂಕ್ ಸಿಟಿಯಲ್ಲಿ ರಾಜಸ್ಥಾನ್‌ಗೆ ಸೋಲಿನ ಬರೆ ಎಳೆದ ಆರ್‌ಸಿಬಿ!
7 ವರ್ಷಗಳ ಬಳಿಕ ಅರ್ಧಶತಕ ಸಿಡಿಸಿದ ಕರುಣ್ ನಾಯರ್
ಕಳೆದ ಪಂದ್ಯಗಳಲ್ಲಿ ಬೆಂಚ್ ಕಾದಿದ್ದ ಕರುಣ್ ನಾಯರ್, ಮುಂಬೈ ಇಂಡಿಯನ್ಸ್ ವಿರುದ್ಧ ಇಂಪ್ಯಾಕ್ಟ್ ಪ್ಲೇಯರ್ ಆಗಿ ಆಡಲು ಸಿಕ್ಕ ಅವಕಾಶವನ್ನು ಸಂಪೂರ್ಣವಾಗಿ ಬಳಿಸಿಕೊಂಡರು. ಅವರು ಒಂದು ತುದಿಯಲ್ಲಿ ಗಟ್ಟಿಯಾಗಿ ನಿಂತು ಲೀಲಾ-ಜಾಲವಾಗಿ ಬ್ಯಾಟ್ ಬೀಸಿದರು. ಜಸ್‌ಪ್ರೀತ್ ಬುಮ್ರಾ, ಹಾರ್ದಿಕ್ ಪಾಂಡ್ಯ ಸೇರಿದಂತೆ ಮುಂಬೈನ ಎಲ್ಲಾ ಬೌಲರ್‌ಗಳಿಗೆ ಬೆವರಿಳಿಸಿದರು. ಅವರು ಆಡಿದ 40 ಎಸೆತಗಳಲ್ಲಿ 5 ಸಿಕ್ಸರ್ ಹಾಗೂ 12 ಬೌಂಡರಿಗಳೊಂದಿಗೆ 89 ರನ್ ಗಳಿಸಿ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಗೆಲ್ಲಿಸುವ ಹಾದಿಯಲ್ಲಿದ್ದರು. ಆದರೆ, 16ನೇ ಓವರ್‌ನಲ್ಲಿ ಮಿಚೆಲ್ ಸ್ಯಾಂಟ್ನರ್ ಎಸೆತವನ್ನು ಅರಿಯುವಲ್ಲಿ ವಿಫಲರಾಗಿ ಕ್ಲೀನ್ ಬೌಲ್ಡ್ ಆದರು. ಏಳು ವರ್ಷಗಳ ಬಳಿಕ ಐಪಿಎಲ್ ಟೂರ್ನಿಯಲ್ಲಿ ಅರ್ಧಶತಕ ಸಿಡಿಸಿದ ಕರುಣ್ ನಾಯರ್ ಬ್ಯಾಟಿಂಗ್ ಎಲ್ಲರ ಗಮನ ಸೆಳೆಯಿತು.
𝗜𝗺𝗽𝗮𝗰𝘁𝗳𝘂𝗹. 𝗖𝗹𝗶𝗻𝗶𝗰𝗮𝗹. 𝗠𝗮𝘁𝗰𝗵-𝘄𝗶𝗻𝗻𝗲𝗿. 💪
— IndianPremierLeague (@IPL) April 13, 2025
Karn Sharma walks away with Player of the Match after a brilliant 3⃣-wicket haul that changed the course of #DCvMI 🔝
Scorecard ▶ https://t.co/sp4ar866UD#TATAIPL | @mipaltan pic.twitter.com/ntPgKPuIz9
ಡೆಲ್ಲಿ ಕ್ಯಾಪಿಟಲ್ಸ್ 193ಕ್ಕೆ ಆಲ್‌ಔಟ್
ಕರುಣ್ ನಾಯರ್ ವಿಕೆಟ್ ಒಪ್ಪಿಸಿದ ಬಳಿಕ ಪಂದ್ಯದ ದಿಕ್ಕು ಸಂಪೂರ್ಣವಾಗಿ ಮುಂಬೈ ಪರ ತಿರುಗಿತು. ಈ ವೇಳೆ ಕರಣ್ ಶರ್ಮಾ, ಕೆಎಲ್ ರಾಹುಲ್ ಹಾಗೂ ಟ್ರಿಸ್ಟನ್ ಸ್ಟಬ್ಸ್ ಅವರನ್ನು ಔಟ್ ಮಾಡುವ ಮೂಲಕ ಡೆಲ್ಲಿ ಮೇಲೆ ಒತ್ತಡವೇರಿದರು. ವಿಪ್ರಾಜ್ ನಿಗಮ್ (14) ಅವರನ್ನು ಮಿಚೆಲ್ ಸ್ಯಾಂಟ್ನರ್ ಕಟ್ಟಿ ಹಾಕಿದರು. ಕೊನೆಯಲ್ಲಿ ಡೆಲ್ಲಿ ತಂಡವನ್ನು ಗೆಲ್ಲಿಸುವ ಹಾದಿಯಲ್ಲಿ ಆಶುತೋಶ್ ಶರ್ಮಾ 19ನೇ ಓವರ್‌ನಲ್ಲಿ ರನ್ ಔಟ್ ಆದರು. ಆ ಮೂಲಕ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಗೆಲುವಿನ ಕನಸು ಭಗ್ನವಾಯಿತು. ಕೊನೆಯಲ್ಲಿ ಕುಲ್ದೀಪ್ ಯಾದವ್ ಹಾಗೂ ಮೋಹಿತ್ ಶರ್ಮಾ ಕೂಡ ರನೌಟ್ ಆದರು. ಅಂತಿಮವಾಗಿ 19ನೇ ಓವರ್‌ನಲ್ಲಿ ಮುಂಬೈ ಇಂಡಿಯನ್ಸ್ ಅಚ್ಚರಿ ರೀತಿಯಲ್ಲಿ 12 ರನ್‌ಗಳ ಗೆಲುವು ಸಾಧಿಸಿತು. ಡೆಲ್ಲಿ ಕ್ಯಾಪಿಟಲ್ಸ್ 19 ಓವರ್‌ಗಳಿಗೆ 193 ರನ್‌ಗಳಿಗೆ ಆಲ್‌ಔಟ್ ಆಯಿತು.
𝘝𝘪𝘤𝘵𝘰𝘳𝘺 𝘵𝘢𝘴𝘵𝘦𝘴 𝘴𝘸𝘦𝘦𝘵𝘦𝘳 𝘸𝘩𝘦𝘯 𝘪𝘵’𝘴 𝘵𝘩𝘪𝘴 𝘤𝘭𝘰𝘴𝘦! 💙
— IndianPremierLeague (@IPL) April 13, 2025
3⃣ run-outs, high drama and #MI walk away with a thrilling win to break #DC's unbeaten run 👊
Scorecard ▶ https://t.co/sp4ar866UD#TATAIPL | #DCvMI | @mipaltan pic.twitter.com/q9wvt5yqoe
ಸ್ಪಿನ್ ಮೋಡಿ ಮಾಡಿ 4 ಓವರ್‌ಗಳಲ್ಲಿ 36 ರನ್ ನೀಡಿ ಪ್ರಮುಖ 3 ವಿಕೆಟ್ ಕಿತ್ತ ಕರಣ್ ಶರ್ಮಾ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು. ಮಿಚೆಲ್ ಸ್ಯಾಂಟ್ನರ್ ಕೂಡ ಎರಡು ವಿಕೆಟ್ ಕಿತ್ತರು.
205 ರನ್ ಕಲೆ ಹಾಕಿದ್ದ ಮುಂಬೈ ಇಂಡಿಯನ್ಸ್
ಇದಕ್ಕೂ ಮುನ್ನ ಟಾಸ್ ಸೋತು ಮೊದಲು ಬ್ಯಾಟ್ ಮಾಡುವಂತಾಗಿದ್ದ ಮುಂಬೈ ಇಂಡಿಯನ್ಸ್ ತಂಡ, ತಿಲಕ್ ವರ್ಮಾ, ಸೂರ್ಯಕುಮಾರ್ ಯಾದವ್ ಹಾಗೂ ನಮನ್ ಧೀರ್ ಅವರ ಸ್ಪೋಟಕ ಬ್ಯಾಟಿಂಗ್ ಬಲದಿಂದ ತನ್ನ ಪಾಲಿನ 20 ಓವರ್‌ಗಳಲ್ಲಿ 5 ವಿಕೆಟ್‌ಗಳ ನಷ್ಟಕ್ಕೆ 205 ರನ್‌ಗಳನ್ನು ಕಲೆ ಹಾಕಿತ್ತು. ಆ ಮೂಲಕ ಎದುರಾಳಿ ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕೆ 206 ರನ್‌ಗಳ ಗುರಿಯನ್ನು ನೀಡಿತ್ತು.
Welcome back to the IPL, Karun 💙❤️ pic.twitter.com/QcLmXaxnY6
— Delhi Capitals (@DelhiCapitals) April 13, 2025
ಮುಂಬೈ ಇಂಡಿಯನ್ಸ್ ಪರ ಇನಿಂಗ್ಸ್ ಆರಂಭಿಸಿದ್ದ ರೋಹಿತ್ ಶರ್ಮಾ ಹಾಗೂ ರಯಾನ್ ರಿಕೆಲ್ಟನ್ ಜೋಡಿ ಮುರಿಯದ ಮೊದಲನೇ ವಿಕೆಟ್‌ಗೆ 47 ರನ್ ಕಲೆ ಹಾಕಿ ತಂಡಕ್ಕೆ ಉತ್ತಮ ಆರಂಭವನ್ನು ನೀಡಿತ್ತು. ಔಟ್ ಆಫ್ ಫಾರ್ಮ್ ರೋಹಿತ್ ಶರ್ಮಾ 17 ರನ್ ಗಳಿಸಿ ವಿಕೆಟ್ ಒಪ್ಪಿಸಿದರು. ರಯಾನ್ ರಿಕೆಲ್ಟನ್ 25 ಎಸೆತಗಳಲ್ಲಿ 41 ರನ್ ಗಳಿಸಿ ಮುಂಬೈಗೆ ಸ್ಪೋಟಕ ಆರಂಭ ತಂದುಕೊಟ್ಟು ಔಟ್ ಆದರು. ಈ ವೇಳೆ ಮುಂಬೈ ಇಂಡಿಯನ್ಸ್ 75 ರನ್ ಗಳಿಸಿ ಉತ್ತಮ ಆರಂಭ ಪಡದಿತ್ತು.
ನಂತರ ಸೂರ್ಯಕುಮಾರ್ ಹಾಗೂ ತಿಲಕ್ ವರ್ಮಾ 60 ರನ್‌ಗಳ ಜೊತೆಯಾಟವನ್ನು ಆಡಿದ್ದರು. ಈ ವೇಳೆ ಸೂರ್ಯಕುಮಾರ್ ಯಾದವ್ 28 ಎಸೆತಗಳಲ್ಲಿ 40 ರನ್ ಗಳಿಸಿ ಔಟ್ ಆಗಿದ್ದರು. ಆದರೆ, ಸ್ಪೋಟಕ ಬ್ಯಾಟ್ ಮಾಡಿದ್ದ ತಿಲಕ್ ವರ್ಮಾ 33 ಎಸೆತಗಳಲ್ಲಿ 59 ರನ್ ಗಳಿಸಿ ತಂಡದ ಮೊತ್ತವನ್ನು 200ರ ಗಡಿ ದಾಟಿಸಿದ್ದರು. ಅಲ್ಲದೆ 17 ಎಸೆತಗಳಲ್ಲಿ ಅಜೇಯ 38 ರನ್ ಸಿಡಿಸಿದ್ದ ನಮನ್ ಧೀರ್ ಅವರ ಜೊತೆ 62 ರನ್‌ಗಳ ನಿರ್ಣಾಯಕ ಜೊತೆಯಾಟವನ್ನು ಆಡಿದ್ದರು. ಡೆಲ್ಲಿ ಪರ ವಿಪ್ರಾಜ್ ನಿಗಮ್ ಮತ್ತು ಕುಲ್ದೀಪ್ ಯಾದವ್ ತಲಾ ಎರಡೆರಡು ವಿಕೆಟ್ ಕಿತ್ತಿದ್ದರು.
Offense ekdum tagda tha, ab defence ki baari hain 💪💙#MumbaiIndians #PlayLikeMumbai #TATAIPL #DCvMI pic.twitter.com/1vTAKVEKOZ
— Mumbai Indians (@mipaltan) April 13, 2025
ಸ್ಕೋರ್ ವಿವರ
ಮುಂಬೈ ಇಂಡಿಯನ್ಸ್: 20 ಓವರ್‌ಗಳಿಗೆ 205-5 (ತಿಲಕ್ ವರ್ಮಾ 59 , ರಯಾನ್ ರಿಕೆಲ್ಟನ್ 41, ಸೂರ್ಯಕುಮಾರ್ ಯಾದವ್ 40, ನಮನ್ ಧೀರ್ 38*; ವಿಪ್ರಾಜ್ ನಿಗಮ್ 41ಕ್ಕೆ 2, ಕುಲ್ದೀಪ್ ಯಾದವ್ 25ಕ್ಕೆ 2)
ಡೆಲ್ಲಿ ಕ್ಯಾಪಿಟಲ್ಸ್: 19 ಓವರ್‌ಗಳಿಗೆ 193-10 (ಕರುಣ್ ನಾಯರ್ 89, ಅಭಿಷೇಕ್ ಪೊರೆಲ್ 33; ಕರಣ್ ಶರ್ಮಾ 36ಕ್ಕೆ 3, ಮಿಚೆಲ್ ಸ್ಯಾಂಟ್ನರ್ 43 ಕ್ಕೆ 2)
ಪಂದ್ಯ ಶ್ರೇಷ್ಠ ಪ್ರಶಸ್ತಿ: ಕರಣ್ ಶರ್ಮಾ