ವಕ್ಫ್​ ತಿದ್ದುಪಡಿ ಮಸೂದೆ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

RCB vs RR: ಪಿಂಕ್‌ ಸಿಟಿಯಲ್ಲಿ ರಾಜಸ್ಥಾನ್‌ಗೆ ಸೋಲಿನ ಬರೆ ಎಳೆದ ಆರ್‌ಸಿಬಿ!

RCB vs RR Match Highlights: ಬೌಲಿಂಗ್‌ ಹಾಗೂ ಬ್ಯಾಟಿಂಗ್‌ ಎರಡೂ ವಿಭಾಗಗಳಲ್ಲಿ ಸಂಘಟಿತ ಪ್ರದರ್ಶನ ತೋರಿದ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡ, 2025ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಟೂರ್ನಿಯ ಪಂದ್ಯದಲ್ಲಿ ರಾಜಸ್ಥಾನ್‌ ರಾಯಲ್ಸ್‌ ಎದುರು 9 ವಿಕೆಟ್‌ಗಳಿಂದ ಗೆಲುವು ಪಡೆದಿದೆ. ಆ ಮೂಲಕ ಆರ್‌ಸಿಬಿ ಟೂರ್ನಿಯಲ್ಲಿ ನಾಲ್ಕನೇ ಜಯ ದಾಖಲಿಸಿದೆ.

ಕೊಹ್ಲಿ-ಸಾಲ್ಟ್‌ ಫಿಫ್ಟಿ; ರಾಜಸ್ಥಾನ್‌ ಎದುರು ಆರ್‌ಸಿಬಿಗೆ 9 ವಿಕೆಟ್‌ ಜಯ!

ರಾಜಸ್ಥಾನ್‌ ರಾಯಲ್ಸ್‌ ವಿರುದ್ಧ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡಕ್ಕೆ 9 ವಿಕೆಟ್‌ ಜಯ.

Profile Ramesh Kote Apr 13, 2025 6:57 PM

ಜೈಪುರ: ಫಿಲ್‌ ಸಾಲ್ಟ್‌ (65) ಹಾಗೂ ವಿರಾಟ್‌ ಕೊಹ್ಲಿ (62*) ಅವರ ಅರ್ಧಶತಕಗಳ ಬಲದಿಂದ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು (Royal Challengers Bengaluru) ತಂಡ, 2025ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಟೂರ್ನಿಯ 28ನೇ ಪಂದ್ಯದಲ್ಲಿ (RCB vs RR) ರಾಜಸ್ಥಾನ್‌ ರಾಯಲ್ಸ್‌ (Rajasthan Royals) ವಿರುದ್ಧ 9 ವಿಕೆಟ್‌ಗಳ ಭರ್ಜರಿ ಗೆಲುವು ಪಡೆದಿದೆ. ಆ ಮೂಲಕ ಟೂರ್ನಿಯಲ್ಲಿ ನಾಲ್ಕನೇ ಗೆಲುವು ಪಡೆದ ರಜತ್‌ ಪಾಟಿದಾರ್‌ ನಾಯಕತ್ವದ ಆರ್‌ಸಿಬಿ, ಮೂರನೇ ಸ್ಥಾನಕ್ಕೆ ಲಗ್ಗೆ ಇಟ್ಟಿದೆ. ಆದರೆ, ಈ ಪಂದ್ಯದಲ್ಲಿ ಸೋಲು ಅನುಭವಿಸಿದ ಸಂಜು ಸ್ಯಾಮ್ಸನ್‌ ನಾಯಕತ್ವದ ರಾಜಸ್ಥಾನ್‌, ಅಂಕಪಟ್ಟಿಯಲ್ಲಿ 7ನೇ ಸ್ಥಾನದಲ್ಲಿಯೇ ಉಳಿದಿದೆ.

ಭಾನುವಾರ ಇಲ್ಲಿನ ಸವಾಯ್‌ ಮಾನ್‌ಸಿಂಗ್‌ ಕ್ರೀಡಾಂಗಣದಲ್ಲಿ ರಾಜಸ್ಥಾನ್‌ ರಾಯಲ್ಸ್‌ ನೀಡಿದ್ದ 174 ರನ್‌ಗಳ ಗುರಿಯನ್ನು ಹಿಂಬಾಲಿಸಿದ ಆರ್‌ಸಿಬಿ, ಅಗ್ರ ಕ್ರಮಾಂಕದ ಬ್ಯಾಟ್ಸ್‌ಮನ್‌ಗಳ ಅತ್ಯುತ್ತಮ ಪ್ರದರ್ಶನದ ನೆರವಿನಿಂದ 17.3 ಓವರ್‌ಗಳಿಗೆ ಒಂದು ವಿಕೆಟ್‌ ನಷ್ಟಕ್ಕೆ 175 ರನ್‌ ಗಳಿಸಿ ಭರ್ಜರಿ ಗೆಲುವು ಪಡೆಯಿತು. 196ರ ಸ್ಟ್ರೈಕ್‌ ರೇಟ್‌ನಲ್ಲಿ ಬ್ಯಾಟ್‌ ಮಾಡಿದ ಫಿಲ್‌ ಸಾಲ್ಟ್‌ ಕೇವಲ 33 ಎಸೆತಗಳಲ್ಲಿ 6 ಸಿಕ್ಸರ್‌ ಹಾಗೂ 5 ಬೌಂಡರಿಗಳೊಂದಿಗೆ 65 ರ್‌ಗಳನ್ನು ಸಿಡಿಸಿ ಆರ್‌ಸಿಬಿ ಗೆಲುವಿಗೆ ನೆರವು ನೀಡಿದರು ಹಾಗೂ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.

ರಾಜಸ್ಥಾನ್‌ ರಾಯಲ್ಸ್‌ ವಿರುದ್ದ ಕಣಕ್ಕೆ ಇಳಿದು ನೂತನ ಮೈಲುಗಲ್ಲು ಸ್ಥಾಪಿಸಿದ ಭುವನೇಶ್ವರ್‌ ಕುಮಾರ್‌!

ಫಿಲ್‌ ಸಾಲ್ಟ್‌-ವಿರಾಟ್‌ ಕೊಹ್ಲಿ ಜುಗಲ್‌ಬಂದಿ

ಆರ್‌ಸಿಬಿ ಪರ ಇನಿಂಗ್ಸ್‌ ಆರಂಭಿಸಿದ ಫಿಲ್‌ ಸಾಲ್ಟ್‌ ಹಾಗೂ ವಿರಾಟ್‌ ಕೊಹ್ಲಿ ಸ್ಪೋಟಕ ಬ್ಯಾಟ್‌ ಮಾಡಿದರು. ಇವರು ಪವರ್‌ಪ್ಲೇನಲ್ಲಿ 65 ರನ್‌ಗಳನ್ನು ಕಲೆ ಹಾಕುವ ಜೊತೆಗೆ ಮುರಿಯದ ಮೊದಲನೇ ವಿಕೆಟ್‌ಗೆ 92 ರನ್‌ಗಳನ್ನು ಸಿಡಿಸಿ ಆರ್‌ಸಿಬಿಗೆ ಭರ್ಜರಿ ಆರಂಭವನ್ನು ತಂದುಕೊಟ್ಟರು. ಫಿಲ್‌ ಸಾಲ್ಟ್‌ ವಿಕೆಟ್‌ ಒಪ್ಪಿಸಿದ ಬಳಿಕ ಸ್ಪೋಟಕ ಬ್ಯಾಟ್‌ ಮಾಡಿದ ವಿರಾಟ್‌ ಕೊಹ್ಲಿ, 45 ಎಸೆತಗಳಲ್ಲಿ ಎರಡು ಸಿಕ್ಸರ್‌ ಹಾಗೂ 4 ಬೌಂಡರಿಗಳೊಂದಿಗೆ ಅಜೇಯ 62 ರನ್‌ ಗಳಿಸಿ ಆರ್‌ಸಿಬಿ ತಂಡವನ್ನು ಗೆಲುವಿನ ದಡ ಸೇರಿಸಿದರು. ವಿರಾಟ್‌ ಕೊಹ್ಲಿ ಜೊತೆ ಎರಡನೇ ವಿಕೆಟ್‌ಗೆ 83 ರನ್‌ಗಳನ್ನು ಕಲೆ ಹಾಕಿದ್ದ ಕನ್ನಡಿಗ ದೇವದತ್‌ ಪಡಿಕ್ಕಲ್‌, 28 ಎಸೆತಗಳಲ್ಲಿ ಅಜೇಯ 40 ರನ್‌ ಗಳಿಸಿ ತಂಡಕ್ಕೆ ಆಸರೆಯಾದರು.



173 ರನ್‌ಗಳನ್ನು ಕಲೆ ಹಾಕಿದ್ದ ಆರ್‌ಆರ್‌

ಇದಕ್ಕೂ ಮುನ್ನ ಟಾಸ್‌ ಸೋತು ಮೊದಲು ಬ್ಯಾಟ್‌ ಮಾಡುವಂತಾಗಿದ್ದ ರಾಜಸ್ಥಾನ್‌ ರಾಯಲ್ಸ್‌ ತಂಡ, ಯಶಸ್ವಿ ಜೈಸ್ವಾಲ್‌ (75 ರನ್‌) ಅವರ ಅರ್ಧಶತಕದ ಬಲದಿಂದ ತನ್ನ ಪಾಲಿನ 20 ಓವರ್‌ಗಳಿಗೆ 4 ವಿಕೆಟ್‌ ನಷ್ಟಕ್ಕೆ 173 ರನ್‌ಗಳನ್ನು ಕಲೆ ಹಾಕಿತು. ಆ ಮೂಲಕ ಎದುರಾಳಿ ಆರ್‌ಸಿಬಿಗೆ 174 ರನ್‌ಗಳ ಸ್ಪರ್ಧಾತ್ಮಕ ಗುರಿಯನ್ನು ನೀಡಿತ್ತು. ಜೈಸ್ವಾಲ್‌ ಬಿಟ್ಟರೆ ಮಧ್ಯಮ ಕ್ರಮಾಂಕದಲ್ಲಿ ರಿಯಾನ್‌ ಪರಾಗ್‌ (30 ರನ್‌) ಹಾಗೂ ಧ್ರುವ್‌ ಜುರೆಲ್‌ (30) ಉತ್ತಮ ಪ್ರದರ್ಶನ ತೋರಿದ್ದರು. ಆದರೆ, ಇನ್ನುಳಿದ ಬ್ಯಾಟ್ಸ್‌ಮನ್‌ಗಳು ವೈಫಲ್ಯ ಅನುಭವಿಸಿದ ಕಾರಣ ಆರ್‌ಆರ್‌ 173ಕ್ಕೆ ಶಕ್ತವಾಗಿತ್ತು.



‌ಅರ್ಧಶತಕ ಸಿಡಿಸಿದ ಯಶಸ್ವಿ ಜೈಸ್ವಾಲ್

ಕಳೆದ ಪಂದ್ಯಗಳಲ್ಲಿ ಸತತ ಬ್ಯಾಟಿಂಗ್‌ ವೈಫಲ್ಯ ಅನುಭವಿಸಿದ ಯಶಸ್ವಿ ಜೈಸ್ವಾಲ್‌, ಆರ್‌ಸಿಬಿ ವಿರುದ್ಧದ ಪಂದ್ಯದಲ್ಲಿ ಅರ್ಧಶತಕ ಸಿಡಿಸಿ ಫಾರ್ಮ್‌ಗೆ ಮರಳಿದರು. ಸಂಜು ಸ್ಯಾಮ್ಸನ್‌ಜೊತೆ ಇನಿಂಗ್ಸ್‌ ಆರಂಭಿಸಿದ ಯಶಸ್ವಿ ಜೈಸ್ವಾಲ್‌ ಒಂದು ತುದಿಯಲ್ಲಿ ಗಟ್ಟಿಯಾಗಿ ನಿಂತು ಬ್ಯಾಟ್‌ ಬೀಸಿದರು. ಸಂಜು 15 ರನ್‌ ಗಳಿಸಿ ವಿಕೆಟ್‌ ಒಪ್ಪಿಸಿದರೂ ಮತ್ತೊಂದು ಬದಿಯಲ್ಲಿ ಕೆಲ ಕಾಲ ಬ್ಯಾಟ್‌ ಬೀಸಿದ ಜೈಸ್ವಾಲ್‌, 47 ಎಸೆತಗಳಲ್ಲಿ 75 ರನ್‌ಗಳನ್ನು ಸಿಡಿಸಿದರು. ಆ ಮೂಲಕ ರಾಜಸ್ಥಾನ್‌ ರಾಯಲ್ಸ್‌ ಮೊತ್ತವನ್ನು 120ರ ಗಡಿ ದಾಟಿಸಿ ವಿಕೆಟ್‌ ಒಪ್ಪಿಸಿದ್ದರು.

ಆದರೆ, ಮಧ್ಯಮ ಕ್ರಮಾಂಕದಲ್ಲಿ ರಿಯಾನ್‌ ಪರಾಗ್‌ (30 ರನ್‌) ಹಾಗೂ ಧ್ರುವ್‌ ಜುರೆಲ್‌ (35) ಉತ್ತಮ ಪ್ರದರ್ಶನ ತೋರಿದರು. ಆದರೆ, ಇವರು ದೊಡ್ಡ ಸ್ಟ್ರೈಕ್‌ ರೇಟ್‌ನಲ್ಲಿ ರನ್‌ ಕಲೆ ಹಾಕಲು ಆರ್‌ಸಿಬಿ ಬೌಲರ್‌ಗಳು ಅವಕಾಶ ಮಾಡಿಕೊಡಲಿಲ್ಲ. ಅದರಲ್ಲಿಯೂ ವಿಶೇಷವಾಗಿ ಆರ್‌ಸಿಬಿ ಪರ ಕೃಣಾಲ್‌ ಪಾಂಡ್ಯ 4 ಓವರ್‌ಗಳಿಗೆ 29 ರನ್‌ ನೀಡಿ ಒಂದು ವಿಕೆಟ್‌ ಕಿತ್ತರು. ಜಾಶ್‌ ಹೇಝಲ್‌ವುಡ್‌ 26 ರನ್‌ ನೀಡಿ ಒಂದು ವಿಕೆಟ್‌ ಪಡೆದರು.



ಸ್ಕೋರ್‌ ವಿವರ

ರಾಜಸ್ಥಾನ್‌ ರಾಯಲ್ಸ್:‌ 20 ಓವರ್‌ಗಳಿಗೆ 173-4 (ಯಶಸ್ವಿ ಜೈಸ್ವಾಲ್‌ 73, ಧ್ರುವ್‌ ಜುರೆಲ್‌ 35, ರಿಯಾನ್‌ ಪರಾಗ್‌ 30; ಕೃಣಾಲ್‌ ಪಾಂಡ್ಯ 29ಕ್ಕೆ 1, ಜಾಶ ಹೇಝಲ್‌ವುಡ್‌ 26ಕ್ಕೆ 1)

ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು: 17.3 ಓವರ್‌ಗಳಿಗೆ 175-1 (ಫಿಲ್‌ ಸಾಲ್ಟ್‌ 65, ವಿರಾಟ್‌ ಕೊಹ್ಲಿ 62*, ದೇವದತ್‌ ಪಡಿಕ್ಕಲ್‌ 40* (ಕುಮಾರ ಕಾರ್ತಿಕೇಯ 25ಕ್ಕೆ 1)

ಪಂದ್ಯ ಶ್ರೇಷ್ಠ ಪ್ರಶಸ್ತಿ: ಫಿಲ್‌ ಸಾಲ್ಟ್‌