ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

IND vs NZ: ಟಿ20ಐ ಸರಣಿಯ ಬಳಿಕ ದೇಶಿ ಕ್ರಿಕೆಟ್‌ಗೆ ಮರಳಲು ಸಿದ್ದ ಎಂದ ಭುವನೇಶ್ವರ್‌ ಕುಮಾರ್‌!

ಭುವನೇಶ್ವರ್ ಕುಮಾರ್ ನಾಲ್ಕು ವರ್ಷಗಳ ಬಳಿಕ ಭಾರತ ಟಿ20ಐ ತಂಡಕ್ಕೆ ಮರಳಿದ್ದಾರೆ. ಆರ್‌ಸಿಬಿ ಪರ ಐಪಿಎಲ್‌ ಟೂರ್ನಿಯಲ್ಲಿ ಎರಡು ವರ್ಷಗಳ ಉತ್ತಮ ಪ್ರದರ್ಶನ ಅವರಿಗೆ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಮತ್ತೊಂದು ಅವಕಾಶ ಕಲ್ಪಿಸಿದೆ. ನ್ಯೂಜಿಲೆಂಡ್ ಸರಣಿ ಬಳಿಕ ಅವರು ಮತ್ತೆ ದೇಶಿ ಕ್ರಿಕೆಟ್‌ನಲ್ಲಿ ಆಡಲು ಎದುರು ನೋಡುತ್ತಿದ್ದಾರೆ.

ಟಿ20ಐ ಸರಣಿಯ ಬಳಿಕ ದೇಶಿ ಕ್ರಿಕೆಟ್‌ಗೆ ಮರಳಲು ಸಿದ್ದ: ಭುವನೇಶ್ವರ್‌ ಕುಮಾರ್

ದೇಶಿ ಕ್ರಿಕೆಟ್‌ಗೆ ಮರಳುವ ಬಗ್ಗೆ ತಿಳಿಸಿದ ಭುವನೇಶ್ವರ್‌ ಕುಮಾರ್‌. -

Profile
Ramesh Kote Oct 28, 2026 2:55 PM

ವೆಲ್ಲಿಂಗ್ಟನ್‌: ನ್ಯೂಜಿಲೆಂಡ್ ವಿರುದ್ಧದ ಟಿ20ಐ ಸರಣಿಯ (IND vs NZ) ಬಳಿಕ ಭಾರತದ ವೇಗದ ಬೌಲರ್ ಭುವನೇಶ್ವರ್ ಕುಮಾರ್ (Bhuvneshwar Kumar) ಮತ್ತೆ ದೇಶಿ ಕ್ರಿಕೆಟ್‌ಗೆ ಮರಳಲು ಸಿದ್ಧರಾಗಿದ್ದಾರೆ. ಭಾರತ ತಂಡಕ್ಕೆ ಕಮ್‌ಬ್ಯಾಕ್‌ ಮಾಡಿದ ಬಳಿಕವೂ ಅವರು ಭವಿಷ್ಯದ ಬಗ್ಗೆ ಹೆಚ್ಚು ದೂರದ ಯೋಚನೆ ಮಾಡುತ್ತಿಲ್ಲ. ರಾಷ್ಟ್ರೀಯ ತಂಡಕ್ಕೆ ಮರಳುವುದನ್ನೇ ತಮ್ಮ ಗುರಿಯನ್ನಾಗಿ ಮಾಡಿಕೊಂಡಿರಲಿಲ್ಲ ಎಂದು 36ರ ವಯಸ್ಸಿನ ವೇಗಿ ಸ್ಪಷ್ಟಪಡಿಸಿದ್ದಾರೆ.

ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ಪರ ಐಪಿಎಲ್‌ನ ಕಳೆದ ಎರಡು ಆವೃತ್ತಿಗಳಲ್ಲಿ ಉತ್ತಮ ಪ್ರದರ್ಶನ ನೀಡಿದ ಬಳಿಕ ಭುವನೇಶ್ವರ್ ಕುಮಾರ್‌, ಭಾರತ ತಂಡದ ಟಿ20 ತಂಡಕ್ಕೆ ಮರಳಿದ್ದಾರೆ. 2022ರ ನವೆಂಬರ್ ಬಳಿಕ ಇದೇ ಮೊದಲ ಬಾರಿ ಅವರು ಭಾರತ ತಂಡದಲ್ಲಿ ಸ್ಥಾನ ಪಡೆದಿದ್ದಾರೆ.

ನ್ಯೂಜಿಲೆಂಡ್ ವಿರುದ್ಧ ವೆಲ್ಲಿಂಗ್ಟನ್‌ನಲ್ಲಿ ನಡೆದಿದ್ದ ಮೂರನೇ ಟಿ20ಐ ಪಂದ್ಯದ ಬಳಿಕ ಮಾತನಾಡಿದ ಭುವನೇಶ್ವರ್, ಭಾರತ ತಂಡಕ್ಕೆ ಮರಳುವ ಬಗ್ಗೆ ನಿರಂತರವಾಗಿ ಯೋಚಿಸುವ ಬದಲು ಕ್ರಿಕೆಟ್ ಆಡುವುದರ ಮೇಲೆ ಮತ್ತು ಎದುರಾದ ಸವಾಲುಗಳನ್ನು ಎದುರಿಸುವುದರ ಮೇಲೆ ಗಮನ ಹರಿಸಿದ್ದಾಗಿ ತಿಳಿಸಿದ್ದಾರೆ. ಈ ಪಂದ್ಯದಲ್ಲಿ ಭಾರತ ಗೆಲುವು ಸಾಧಿಸುವ ಮೂಲಕ ಐದು ಪಂದ್ಯಗಳ ಟಿ20ಐ ಸರಣಿಯಲ್ಲಿ 3-0 ಅಂತರದ ಮುನ್ನಡೆ ಪಡೆದು ಸರಣಿಯನ್ನು ವಶಪಡಿಸಿಕೊಂಡಿತ್ತು.

ಅಭಿಷೇಕ್‌ ಶರ್ಮಾ ಸ್ಪೋಟಕ ಶತಕ, ಮೂರನೇ ಪಂದ್ಯ ಗೆದ್ದು ಟಿ20ಐ ಸರಣಿಯನ್ನು ವಶಪಡಿಸಿಕೊಂಡ ಭಾರತ!

'ಭಾರತ ತಂಡಕ್ಕೆ ಮರಳುವುದನ್ನು ನಾನು ಬೆನ್ನಟ್ಟಿರಲಿಲ್ಲ'

ತಮ್ಮ ಕಮ್‌ಬ್ಯಾಕ್‌ ಕುರಿತು ಮಾತನಾಡಿದ ಭುವನೇಶ್ವರ್ ಕುಮಾರ್, ಭಾರತ ತಂಡದ ಪರ ಆಡುವುದು ಪ್ರತಿಯೊಬ್ಬ ಕ್ರಿಕೆಟಿಗನ ಕನಸಾಗಿದ್ದು, ಮತ್ತೊಮ್ಮೆ ದೇಶವನ್ನು ಪ್ರತಿನಿಧಿಸುತ್ತಿರುವುದಕ್ಕೆ ಹೆಮ್ಮೆ ಇದೆ ಎಂದು ಹೇಳಿದ್ದಾರೆ.

“ನಿಜ ಹೇಳಬೇಕೆಂದರೆ, ನಾನು ಭಾರತ ತಂಡಕ್ಕೆ ಮರಳುವುದನ್ನು ಬೆನ್ನಟ್ಟಿರಲಿಲ್ಲ. ಹೌದು, ಅದು ನನ್ನ ಕನಸು. ಇದರಿಂದ ನನಗೆ ಸಂತೋಷವಿಲ್ಲ ಎಂದು ಹೇಳುತ್ತಿಲ್ಲ. ನಾನು ತುಂಬಾ ಸಂತೋಷವಾಗಿದ್ದೇನೆ. ಭಾರತಕ್ಕಾಗಿ ಆಡುವುದು, ದೇಶವನ್ನು ಪ್ರತಿನಿಧಿಸುವುದು ಹೆಮ್ಮೆಯ ವಿಷಯ,” ಎಂದು ಭುವನೇಶ್ವರ್ ತಿಳಿಸಿದ್ದಾರೆ.

“ಹೀಗಾಗಿ, ಭಾರತ ತಂಡಕ್ಕೆ ಮರಳಿರುವುದಕ್ಕೆ ನನಗೆ ತುಂಬಾ ಹೆಮ್ಮೆಯಿದೆ. ಆದರೆ ನಿಜವೆಂದರೆ, ನಾನು ಅದನ್ನೇ ಗುರಿಯಾಗಿಸಿಕೊಂಡು ಪ್ರಯತ್ನಿಸುತ್ತಿರಲಿಲ್ಲ. ಕಳೆದ ನಾಲ್ಕು ವರ್ಷಗಳಲ್ಲಿ ನನ್ನ ಮುಂದೆ ಬಂದ ಟೂರ್ನಿಗಳು, ಸವಾಲುಗಳು, ಕ್ರಿಕೆಟ್‌ಗೆ ಸಂಬಂಧಿಸಿದ ವಿಚಾರಗಳು ಮತ್ತು ಫಿಟ್‌ನೆಸ್‌ಗೆ ಸಂಬಂಧಿಸಿದ ಕೆಲಸಗಳ ಮೇಲೆ ಗಮನ ಹರಿಸುತ್ತಿದ್ದೆ. ಭಾರತ ತಂಡಕ್ಕೆ ಮರಳಬೇಕೆಂಬ ಒಂದೇ ಕಾರಣಕ್ಕಾಗಿ ಕ್ರಿಕೆಟ್ ಆಡಬೇಕು ಎಂದು ನಾನು ಎಂದಿಗೂ ಯೋಚಿಸಲಿಲ್ಲ,” ಎಂದು ಅವರು ಹೇಳಿದ್ದಾರೆ.

IND vs NZ: 35 ಎಸೆತಗಳಲ್ಲಿ ಸ್ಫೋಟಕ ಶತಕ ಸಿಡಿಸಿದ ಹಿಂದಿನ ರಹಸ್ಯ ತೆರೆದಿಟ್ಟ ಅಭಿಷೇಕ್‌ ಶರ್ಮಾ!

ಐಪಿಎಲ್ ಪ್ರದರ್ಶನವೇ ಪುನರಾಗಮನಕ್ಕೆ ಕಾರಣ

ತಮ್ಮ ಮನೋಭಾವವೇ ಎಲ್ಲವನ್ನೂ ಸುಲಭವಾಗಿಸಿತು ಎಂದು ಭುವನೇಶ್ವರ್ ಅಭಿಪ್ರಾಯಪಟ್ಟಿದ್ದಾರೆ. ನಿರೀಕ್ಷೆಯ ಒತ್ತಡಕ್ಕೆ ಒಳಗಾಗದೆ ತಮ್ಮ ಆಟದ ಮೇಲೆ ಗಮನಹರಿಸಿದ್ದರಿಂದ ಉತ್ತಮ ಪ್ರದರ್ಶನ ನೀಡಲು ಸಾಧ್ಯವಾಯಿತು ಎಂದು ಅವರು ಹೇಳಿದ್ದಾರೆ.

“ನನ್ನ ಈ ಮನೋಭಾವದಿಂದ ಎಲ್ಲವೂ ತುಂಬಾ ಸುಲಭವಾಯಿತು ಎಂದು ನಾನು ಭಾವಿಸುತ್ತೇನೆ. ಅದೃಷ್ಟವಶಾತ್, ಉತ್ತಮ ಪ್ರದರ್ಶನಗಳು ಬಂದವು. ಇದಕ್ಕೆ ಸಂಪೂರ್ಣ ಶ್ರೇಯಸ್ಸು ಕಳೆದ ಎರಡು ವರ್ಷಗಳ ಐಪಿಎಲ್ ಪ್ರದರ್ಶನಗಳಿಗೆ ಸಲ್ಲಬೇಕು. ಆ ಪ್ರದರ್ಶನಗಳ ಕಾರಣದಿಂದಲೇ ಭಾರತ ತಂಡಕ್ಕೆ ಮರಳುವ ಅವಕಾಶ ಸಿಕ್ಕಿದೆ,” ಎಂದು ಭುವನೇಶ್ವರ್ ಕುಮಾರ್ ತಿಳಿಸಿದ್ದಾರೆ.

ಭಾರತ ತಂಡಕ್ಕೆ ಮರಳಿರುವ ಭುವನೇಶ್ವರ್, ಸದ್ಯದ ಟಿ20 ಸರಣಿ ಮುಗಿದ ಬಳಿಕ ಮತ್ತೆ ದೇಶೀಯ ಕ್ರಿಕೆಟ್‌ನಲ್ಲಿ ಆಡಲು ಸಿದ್ಧರಾಗಿದ್ದಾರೆ. ರಾಷ್ಟ್ರೀಯ ತಂಡಕ್ಕೆ ಮರಳುವುದನ್ನೇ ಏಕೈಕ ಗುರಿಯನ್ನಾಗಿ ಮಾಡಿಕೊಳ್ಳದೆ, ತಮ್ಮ ಮುಂದೆ ಬಂದ ಅವಕಾಶಗಳನ್ನು ಬಳಸಿಕೊಂಡು ಪ್ರದರ್ಶನ ನೀಡಿರುವುದು ಅವರ ಕ್ರಿಕೆಟ್ ಪಯಣದ ಪ್ರಮುಖ ಅಂಶವಾಗಿದೆ.