ಯುಗಾದಿ ಹಬ್ಬ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

SRH vs LSG: ಸನ್‌ರೈಸರ್ಸ್‌ ಹೈದರಾಬಾದ್‌ ಅಬ್ಬರಕ್ಕೆ ಕಡಿವಾಣ ಹಾಕಿದ ಲಖನೌ ಸೂಪರ್‌ ಜಯಂಟ್ಸ್‌!

SRH vs LSG‌ Match Highlights: ಶಾರ್ದುಲ್‌ ಠಾಕೂರ್‌ (34ಕ್ಕೆ 4) ಮಾರಕ ಬೌಲಿಂಗ್‌ ದಾಳಿ ಹಾಗೂ ನಿಕೋಲಸ್‌ ಪೂರನ್‌ (70 ರನ್‌) ಅವರ ಸ್ಪೋಟಕ ಬ್ಯಾಟಿಂಗ್‌ ಬಲದಿಂದ ಲಖನೌ ಸೂಪರ್‌ ಜಯಂಟ್ಸ್‌ ತಂಡ, ಸನ್‌ರೈಸರ್ಸ್‌ ಹೈದರಾಬಾದ್‌ ವಿರುದ್ಧ5 ವಿಕೆಟ್‌ಗಳ ಗೆಲುವು ಪಡೆದಿದೆ. ಆ ಮೂಲಕ 2025ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಟೂರ್ನಿಯಲ್ಲಿ ಮೊದಲ ಗೆಲುವಿನ ನಗೆ ಬೀರಿತು.

ಸನ್‌ರೈಸರ್ಸ್‌ಗೆ ಸೋಲಿನ ರುಚಿ ತೋರಿಸಿದ ಲಖನೌ ಜಯಂಟ್ಸ್!

ಸನ್‌ರೈಸರ್ಸ್‌ ಹೈದರಾಬಾದ್‌ ವಿರುದ್ಧ ಲಖನೌ ಸೂಪರ್‌ ಜಯಂಟ್ಸ್‌ಗೆ 5 ವಿಕೆಟ್‌ ಜಯ.

Profile Ramesh Kote Mar 27, 2025 11:36 PM

ಹೈದರಾಬಾದ್‌: ಶಾರ್ದುಲ್‌ ಠಾಕೂರ್‌ (34ಕ್ಕೆ 4) ಮಾರಕ ಬೌಲಿಂಗ್‌ ಹಾಗೂ ನಿಕೋಲಸ್‌ ಪೂರನ್‌ (70) ಸ್ಪೋಟಕ ಬ್ಯಾಟಿಂಗ್‌ ಬಲದಿಂದ ಲಖನೌ ಸೂಪರ್‌ ಜಯಂಟ್ಸ್‌ ತಂಡ, 2025ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ (IPL 2025) ಟೂರ್ನಿಯ ಏಳನೇ ಪಂದ್ಯದಲ್ಲಿ (SRH vs LSG) ಸನ್‌ರೈಸರ್ಸ್‌ ಹೈದರಾಬಾದ್‌ ವಿರುದ್ಧ 5 ವಿಕೆಟ್‌ ಗೆಲುವು ಪಡೆಯಿತು. ಆ ಮೂಲಕ ಹದಿನೆಂಟನೇ ಆವೃತ್ತಿಯ ಐಪಿಎಲ್‌ ಟೂರ್ನಿಯಲ್ಲಿ ರಿಷಭ್‌ ಪಂತ್‌ ನಾಯಕತ್ವದ ಎಲ್‌ಎಸ್‌ಜಿ ತಂಡ ಮೊದಲ ಗೆಲುವಿನ ನಗೆ ಬೀರಿದೆ. ಲಖನೌ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ ಶಾರ್ದುಲ್‌ ಠಾಕೂರ್‌ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.

ಇಲ್ಲಿನ ರಾಜೀವ್‌ ಗಾಂಧಿ ಇಂಟರ್‌ನ್ಯಾಷನಲ್‌ ಕ್ರಿಕೆಟ್‌ ಕ್ರೀಡಾಂಗಣದಲ್ಲಿ ಗುರುವಾರ ನಡೆದಿದ್ದ ಪಂದ್ಯದಲ್ಲಿ ಟಾಸ್‌ ಸೋತು ಮೊದಲು ಬ್ಯಾಟ್‌ ಮಾಡುವಂತಾಗಿದ್ದ ಸನ್‌ರೈಸರ್ಸ್‌ ಹೈದರಾಬಾದ್‌ ತಂಡ, ತನ್ನ ಪಾಲಿನ 20 ಓವರ್‌ಗಳಿಗೆ 9 ವಿಕೆಟ್‌ಗಳ ನಷ್ಟಕ್ಕೆ 190 ರನ್‌ಗಳನ್ನು ಕಲೆ ಹಾಕಿತ್ತು. ಆ ಮೂಲಕ ಎದುರಾಳಿ ಲಖನೌ ಸೂಪರ್‌ ಜಯಂಟ್ಸ್‌ ತಂಡಕ್ಕೆ 191 ರನ್‌ಗಳ ಸ್ಪರ್ಧಾತ್ಮಕ ಗುರಿಯನ್ನು ನೀಡಿತ್ತು. ಗುರಿ ಹಿಂಬಾಲಿಸಿದ ಲಖನೌ, ನಿಕೋಲಸ್‌ ಪೂರನ್‌ ಹಾಗೂ ಮಿಚೆಲ್‌ ಮಾರ್ಷ್‌ (52) ಅವರ ಅರ್ಧಶತಕಗಳ ಬಲದಿಂದ 16.1 ಓವರ್‌ಗಳಿಗೆ 5 ವಿಕೆಟ್‌ ಕಳೆದುಕೊಂಡು 193 ರನ್‌ಗಳನ್ನು ಗಳಿಸಿ ಗೆದ್ದು ಸಂಭ್ರಮಿಸಿತು.

SRH vs LSG: ಔಟ್‌ ಆದ ಕೋಪದಲ್ಲಿ ನೆಲಕ್ಕೆ ಜೋರಾಗಿ ಹೆಲ್ಮೆಟ್‌ ಹೊಡೆದ ನಿತೀಶ್‌ ರೆಡ್ಡಿ!

ಪೂರನ್‌-ಮಾರ್ಷ್‌ ಜುಗಲ್‌ಬಂದಿ

ಗುರಿ ಹಿಂಬಾಲಿಸಿದ ಲಖನೌ ಸೂಪರ್ ಜಯಂಟ್ಸ್‌ ತಂಡ ಬಹುಬೇಗ ಆರಂಭಿಕ ಬ್ಯಾಟ್ಸ್‌ಮನ್‌ ಏಡೆನ್‌ ಮಾರ್ಕ್ರಮ್‌ ವಿಕೆಟ್‌ ಅನ್ನು ಕಳೆದುಕೊಂಡಿತು. ಈ ವೇಳೆ ಎರಡನೇ ವಿಕೆಟ್‌ಗೆ ಜೊತೆಯಾದ ಮಿಚೆಲ್‌ ಮಾರ್ಷ್‌ ಹಾಗೂ ನಿಕೋಲಸ್‌ ಪೂರನ್‌ ಅಬ್ಬರದ ಬ್ಯಾಟಿಂಗ್‌ ಪ್ರದರ್ಶನವನ್ನು ತೋರಿದರು. ಈ ಜೋಡಿ ಮುರಿಯದ ಎರಡನೇ ವಿಕೆಟ್‌ಗೆ 116 ರನ್‌ಗಳನ್ನು ಕಲೆ ಹಾಕಿತು. ಆ ಮೂಲಕ ಲಖನೌ ತಂಡಕ್ಕೆ ಭರ್ಜರಿ ಅಡಿಪಾಯವನ್ನು ಹಾಕಿತು.



ನಿಕೋಲಸ್‌ ಪೂರನ್‌ ಅಬ್ಬರ

ಕಳೆದ ಪಂದ್ಯದಂತೆ ಈ ಪಂದ್ಯದಲ್ಲಿಯೂ ಬ್ಯಾಟಿಂಗ್‌ನಲ್ಲಿ ಅಬ್ಬರಿಸಿದ ನಿಕೋಲಸ್‌ ಪೂರನ್‌, ಸನ್‌ರೈಸರ್ಸ್‌ ಬೌಲರ್‌ಗಳಿಗೆ ಬೆವರಿಳಿಸಿದರು. ಇವರು ಆಡಿದ ಕೇವಲ 26 ಎಸೆತಗಳಲ್ಲಿ 6 ಸಿಕ್ಸರ್‌ ಹಾಗೂ 6 ಬೌಂಡರಿಗಳೊಂದಿಗೆ 70 ರನ್‌ಗಳನ್ನು ಸಿಡಿಸಿದರು. ಅದರಲ್ಲಿಯೂ ವಿಶೇಷವಾಗಿ ಅವರು 269.23ರ ಸ್ಟ್ರೈಕ್‌ ರೇಟ್‌ನಲ್ಲಿ ಬ್ಯಾಟ್‌ ಬೀಸಿದ್ದು ಎಲ್ಲರ ಗಮನವನ್ನು ಸೆಳೆದಿದ್ದಾರೆ. ಇನ್ನು ಇವರ ಜೊತೆ ಹೆಚ್ಚಿನ ಸಮಯ ಕ್ರೀಸ್‌ನಲ್ಲಿದ್ದ ಮಿಚೆಲ್‌ ಮಾರ್ಷ್‌ 31 ಎಸೆತಗಳಲ್ಲಿ ನಿರ್ಣಾಯಕ 52 ರನ್‌ಗಳನ್ನು ಕಲೆ ಹಾಕಿದರು. ಕೊನೆಯಲ್ಲಿ ಅಬ್ದುಲ್‌ ಸಮದ್‌ 8 ಎಸೆತಗಳಲ್ಲಿ ಅಜೇಯ 22 ರನ್‌ ಸಿಡಿಸಿ ತಂಡವನ್ನು ಗೆಲುವಿನ ದಡ ಮುಟ್ಟಿಸಿದರು.



190 ರನ್‌ಗಳನ್ನು ಕಲೆ ಹಾಕಿದ್ದ ಹೈದರಾಬಾದ್‌

ಇದಕ್ಕೂ ಮುನ್ನ ಟಾಸ್‌ ಸೋತು ಮೊದಲು ಬ್ಯಾಟ್‌ ಮಾಡಿದ್ದ ಸನ್‌ರೈಸರ್ಸ್‌ ಹೈದರಾಬಾದ್‌ ತಂಡಕ್ಕೆ ನಿರೀಕ್ಷಿತ ಆರಂಭ ಸಿಗಲಿಲ್ಲ. ಶಾರ್ದುಲ್‌ ಠಾಕೂರ್‌ ತಮ್ಮ ಮಾರಕ ದಾಳಿಯಿಂದ ಅಭಿಷೇಕ್‌ ಶರ್ಮಾ ಹಾಗೂ ಇಶಾನ್‌ ಕಿಶನ್‌ ಅವರನ್ನು ಮೂರನೇ ಓವರ್‌ನಲ್ಲಿ ಔಟ್‌ ಮಾಡಿ ಸನ್‌ರೈಸರ್ಸ್‌ಗೆ ಆರಂಭಿಕ ಆಘಾತ ನೀಡಿದ್ದರು. ಆದರೆ, ಒಂದು ತುದಿಯಲ್ಲಿ ಸ್ಪೋಟಕ ಬ್ಯಾಟಿಂಗ್‌ ಮುಂದುವರಿಸಿದ್ದ ಟ್ರಾವಿಸ್‌ ಹೆಡ್‌ 28 ಎಸೆತಗಳಲ್ಲಿ 47 ರನ್‌ ಗಳಿಸಿ ಪ್ರಿನ್ಸ್‌ ಯಾದವ್‌ಗೆ ಕ್ಲೀನ್‌ ಬೌಲ್ಡ್‌ ಆದರು.



ಮಧ್ಯಮ ಕ್ರಮಾಂಕದಲ್ಲಿ ಉತ್ತಮ ಬ್ಯಾಟಿಂಗ್‌ ಪ್ರದರ್ಶನ ತೋರಿದ ನಿತೀಶ್‌ ಕುಮಾರ್‌ ರೆಡ್ಡಿ (32), ಹೆನ್ರಿಚ್‌ ಕ್ಲಾಸೆನ್‌ (26) ಹಾಗೂ ಅನಿಕೇತ್‌ ವರ್ಮಾ (36) ಅವರು ಉತ್ತಮ ಆರಂಭ ಪಡೆದಿದ್ದರು. ಆದರೆ, ಇದನ್ನು ದೊಡ್ಡ ಇನಿಂಗ್ಸ್‌ಗೆ ಪರಿವರ್ತಿಸುವಲ್ಲಿ ವಿಫಲವಾದರು. ಕೊನೆಯ ನಾಯಕ ಪ್ಯಾಟ್‌ ಕಮಿನ್ಸ್‌ ಮೂರು ಸಿಕ್ಸರ್‌ ಸಿಡಿಸುವ ಮೂಲಕ ತಂಡದ ಮೊತ್ತವನ್ನು 190ರ ಸನಿಹ ತಂದಿದ್ದರು.

SRH vs LSG: ಟ್ರಾವಿಸ್‌ ಹೆಡ್‌ರನ್ನು ಕ್ಲೀನ್‌ ಬೌಲ್ಡ್‌ ಮಾಡಿದ ಪ್ರಿನ್ಸ್‌ ಯಾದವ್‌ ಯಾರು?

4 ವಿಕೆಟ್‌ ಕಿತ್ತ ಶಾರ್ದುಲ್‌ ಠಾಕೂರ್‌

ತನ್ನ ಮೊದಲನೇ ಪಂದ್ಯದಲ್ಲಿ ರಾಜಸ್ಥಾನ್‌ ರಾಯಲ್ಸ್‌ ವಿರುದ್ಧದ ಪಂದ್ಯದಲ್ಲಿ ಬ್ಯಾಟಿಂಗ್‌ ಮೂಲಕ ಅಬ್ಬರಿಸಿದ್ದ ಸನ್‌ರೈಸರ್ಸ್‌ ಹೈದರಾಬಾದ್‌ ತಂಡದ ಬ್ಯಾಟ್ಸ್‌ಮನ್‌ಗಳು ಲಖನೌ ಸೂಪರ್‌ ಜಯಂಟ್ಸ್‌ ಬೌಲರ್‌ಗಳ ಎದುರು ಪರದಾಡಿದರು. ಅದರಲ್ಲಿಯೂ ವಿಶೇಷವಾಗಿ ಶಾರ್ದುಲ್‌ ಠಾಕೂರ್‌ ಎದುರು ಹಿನ್ನಡೆ ಅನುಭವಿಸಿದರು. ಮಾರಕ ಬೌಲಿಂಗ್‌ ದಾಳಿ ನಡೆಸಿದ ಶಾರ್ದುಲ್‌ 4 ವಿಕೆಟ್‌ ಪಡೆದು ಯಶಸ್ವಿ ಬೌಲರ್‌ ಎನಿಸಿಕೊಂಡರು. ಬೌಲ್‌ ಮಾಡಿದ ಇನ್ನುಳಿದ ನಾಲ್ವರೂ ಬೌಲರ್‌ಗಳು ಕೂಡ ತಲಾ ಒಂದೊಂದು ವಿಕೆಟ್‌ ಪಡೆದರು.

ಸ್ಕೋರ್‌ ವಿವರ

ಸನ್‌ರೈಸರ್ಸ್‌ ಹೈದರಾಬಾರ್‌: 20 ಓವರ್‌ಗಳಿಗೆ 190-9 ( ಟ್ರಾವಿಸ್‌ ಹೆಡ್‌ 47, ನಿತೀಶ್‌ ರೆಡ್ಡಿ 32, ಅನಿಕೇತ್‌ ವರ್ಮಾ 36; ಶಾರ್ದುಲ್‌ ಠಾಕೂರ್‌ 34ಕ್ಕೆ 4)

ಲಖನೌ ಸೂಪರ್‌ ಜಯಂಟ್ಸ್‌: ನಿಕೋಲಸ್‌ ಪೂರನ್‌ 70, ಮಿಚೆಲ್‌ ಮಾರ್ಷ್‌ 52; ಪ್ಯಾಟ್‌ ಕಮಿನ್ಸ್‌ 29 ಕ್ಕೆ 2

ಪಂದ್ಯ ಶ್ರೇಷ್ಠ ಪ್ರಶಸ್ತಿ: ಶಾರ್ದುಲ್‌ ಠಾಕೂರ್