IND vs AFG: ನಿತೀಶ್ ರೆಡ್ಡಿ ಇನ್, ಅರ್ಷದೀಪ್ ಔಟ್? ಮೂರನೇ ಒಡಿಐಗೆ ಪ್ಲೇಯಿಂಗ್ XI ಬಗ್ಗೆ ರಯಾನ್ ಡಶಾಟ್ ಸುಳಿವು!
ಅಫ್ಘಾನಿಸ್ತಾನ ವಿರುದ್ಧದ ಮೂರನೇ ಏಕದಿನ ಪಂದ್ಯಕ್ಕಾಗಿ ಭಾರತ ತಂಡದಲ್ಲಿ ಕೆಲವು ಬದಲಾವಣೆಗಳನ್ನು ಮಾಡುವ ಸಾಧ್ಯತೆ ಇದೆ. ಸರಣಿಯಲ್ಲಿ ಈಗಾಗಲೇ ಮುನ್ನಡೆ ಸಾಧಿಸಿರುವ ಭಾರತ, ಚೆನ್ನೈನಲ್ಲಿ ನಡೆಯಲಿರುವ ಅಂತಿಮ ಪಂದ್ಯದಲ್ಲಿ ಕ್ಲೀನ್‌ಸ್ವೀಪ್ ಗುರಿಯೊಂದಿಗೆ ಕಣಕ್ಕಿಳಿಯಲಿದೆ. ಆಲ್‌ರೌಂಡರ್ ನಿತೀಶ್ ಕುಮಾರ್ ರೆಡ್ಡಿ ಆಯ್ಕೆಗೆ ಲಭ್ಯವಾಗಿದ್ದು, ಅವರಿಗೆ ಅವಕಾಶ ಸಿಗುವ ಸಾಧ್ಯತೆ ಇದೆ.
ಭಾರತದ ಪ್ಲೇಯಿಂಗ್ XIನಲ್ಲಿ ಬದಲಾವಣೆ ಬಗ್ಗೆ ರಯಾನ್ ಟೆನ್ ಡಶಾಟ್ ಸುಳಿವು. -
ಚೆನ್ನೈ: ಅಫ್ಘಾನಿಸ್ತಾನ ವಿರುದ್ಧದ ಮೂರನೇ ಏಕದಿನ ಪಂದ್ಯಕ್ಕೆ (IND vs AFG) ಭಾರತ ತಂಡದಲ್ಲಿ ಕೆಲ ಬದಲಾವಣೆಗಳನ್ನು ಮಾಡುವ ಯೋಜನೆ ಇದೆ ಎಂದು ಸಹಾಯಕ ಕೋಚ್ ರಯಾನ್ ಟೆನ್ ಡಶಾಟ್ (Ryan Ten Deschate) ತಿಳಿಸಿದ್ದಾರೆ. ಸರಣಿಯಲ್ಲಿ ಈಗಾಗಲೇ 2-0 ಅಂತರದಲ್ಲಿ ಏಕದಿನ ಸರಣಿಯನ್ನು ವಶಪಡಿಸಿಕೊಂಡಿರುವ ಭಾರತ, ಶುಕ್ರವಾರ ಚೆನ್ನೈನ ಎಂಎ ಚಿದಂಬರಂ ಕ್ರೀಡಾಂಗಣದಲ್ಲಿ ನಡೆಯಲಿರುವ ಅಂತಿಮ ಪಂದ್ಯದಲ್ಲಿ ಕ್ಲೀನ್‌ಸ್ವೀಪ್ ಗುರಿಯೊಂದಿಗೆ ಕಣಕ್ಕಿಳಿಯಲಿದೆ. ಎಡ ತೊಡೆಯ ನೋವಿನ ಕಾರಣ ಲಖನೌನಲ್ಲಿ ನಡೆದಿದ್ದ ಎರಡನೇ ಏಕದಿನ ಪಂದ್ಯದಿಂದ ಹೊರಗುಳಿದಿದ್ದ ಆಲ್‌ರೌಂಡರ್ ನಿತೀಶ್ ಕುಮಾರ್ ರೆಡ್ಡಿ ಈಗ ಆಯ್ಕೆಗೆ ಲಭ್ಯರಾಗಿದ್ದಾರೆ ಎಂದು ಅವರು ತಿಳಿಸಿದ್ದಾರೆ.
ವೇಗದ ಬೌಲರ್ ಅರ್ಷದೀಪ್ ಸಿಂಗ್ ಅವರಿಗೆ ಈ ಪಂದ್ಯದಲ್ಲಿ ವಿಶ್ರಾಂತಿ ನೀಡುವ ಸಾಧ್ಯತೆಯಿದೆ ಎಂಬ ಸೂಚನೆಯನ್ನು ಅವರು ನೀಡಿದ್ದಾರೆ. ಜೊತೆಗೆ, ಭಾರತ ತಂಡದ ಬ್ಯಾಟಿಂಗ್ ವಿಭಾಗದಲ್ಲಿಯೂ ಕನಿಷ್ಠ ಒಂದು ಬದಲಾವಣೆ ಅಥವಾ ಅದಕ್ಕಿಂತ ಹೆಚ್ಚಿನ ಬದಲಾವಣೆಗಳನ್ನು ಮಾಡುವ ಸಾಧ್ಯತೆ ಇದೆ ಎಂದು ಮಾಹಿತಿ ನೀಡಿದ್ದಾರೆ.
ಸರಣಿ ಕ್ಲೀನ್ ಸ್ವೀಪ್ ಯೋಜನೆಯಲ್ಲಿ ಭಾರತ; ಆಫ್ಘಾನ್‌ಗೆ ವೈಟ್‌ವಾಶ್ ಭೀತಿ!
“ಇಲ್ಲ, ಮೊದಲ ಎರಡು ಪಂದ್ಯಗಳಲ್ಲಿ ಆಡಿದ ತಂಡದಲ್ಲಿ ನಾವು ಕೆಲವು ಬದಲಾವಣೆಗಳನ್ನು ಮಾಡಲಿದ್ದೇವೆ. ಈ ಸರಣಿಗೆ ಬರುವಾಗಲೇ ವಿವಿಧ ಸಂಯೋಜನೆಗಳನ್ನು ಪರೀಕ್ಷಿಸುವುದು ಮತ್ತು ಎಲ್ಲ ಆಟಗಾರರಿಗೂ ಸಮಾನ ಅವಕಾಶ ನೀಡುವುದು ನಮ್ಮ ಪ್ರಮುಖ ಉದ್ದೇಶವಾಗಿತ್ತು. ಅರ್ಷದೀಪ್ ಸಿಂಗ್ ಅವರಂತಹ ಆಟಗಾರರು ಮೊದಲ ಎರಡು ಪಂದ್ಯಗಳಲ್ಲಿ ಅತ್ಯುತ್ತಮವಾಗಿ ಬೌಲ್ ಮಾಡಿದ್ದಾರೆ. ಆದ್ದರಿಂದ ಅವರಿಗೆ ನಾಳೆಯ (ಜೂನ್ 20) ಪಂದ್ಯದಲ್ಲಿ ವಿಶ್ರಾಂತಿ ನೀಡುವ ಸಾಧ್ಯತೆ ಇದೆ. ಇದೇ ರೀತಿಯಾಗಿ ಒಬ್ಬ ಬ್ಯಾಟರ್‌ಗೂ ವಿಶ್ರಾಂತಿ ನೀಡಬಹುದು. ಅವರ ಸ್ಥಾನದಲ್ಲಿ ಬೇರೆ ಆಟಗಾರರನ್ನು ಆಡಿಸಿ, ಸ್ವಲ್ಪ ವಿಭಿನ್ನ ಸಂಯೋಜನೆಯೊಂದಿಗೆ ಕಣಕ್ಕಿಳಿಯಲಿದ್ದೇವೆ,” ಎಂದು ಸಹಾಯಕ ಕೋಚ್ ರಯಾನ್ ಟೆನ್ ಡಶಾಟ್ ಪಂದ್ಯ ಪೂರ್ವ ಸುದ್ದಿಗೋಷ್ಠಿಯಲ್ಲಿ ಹೇಳಿದ್ದಾರೆ.
“ನಿತೀಶ್ ಕುಮಾರ್ ರೆಡ್ಡಿ ಕಳೆದ ಪಂದ್ಯದಲ್ಲಿಯೂ ಆಡಬಹುದಾಗಿತ್ತು. ಆದರೆ ಈಗ ಅವರು ಸಂಪೂರ್ಣವಾಗಿ ಸಿದ್ಧರಾಗಿದ್ದು, ನಾಳೆಯ ಪಂದ್ಯಕ್ಕೆ ಲಭ್ಯರಾಗಿದ್ದಾರೆ,” ಎಂದು ಅವರು ತಿಳಿಸಿದ್ದಾರೆ.
ಯಶಸ್ವಿ ಜೈಸ್ವಾಲ್ ಮೇಲೆ ಒತ್ತಡ
ಸಹಾಯಕ ಕೋಚ್ ರಯಾನ್ ಟೆನ್ ಡಶಾಟ್ ಅವರು ಯುವ ಬ್ಯಾಟರ್ ಯಶಸ್ವಿ ಜೈಸ್ವಾಲ್ ಕುರಿತೂ ಮಾತನಾಡಿದ್ದು, ಭಾರತೀಯ ಬ್ಯಾಟಿಂಗ್ ವಿಭಾಗದಲ್ಲಿರುವ ಅಪಾರ ಸ್ಪರ್ಧೆಯನ್ನು ಉಲ್ಲೇಖಿಸಿದ್ದಾರೆ. ಆರು ತಿಂಗಳ ಬಳಿಕ ಏಕದಿನ ತಂಡಕ್ಕೆ ಮರಳಿದ್ದ ಜೈಸ್ವಾಲ್, ಎರಡನೇ ಏಕದಿನ ಪಂದ್ಯದಲ್ಲಿ ಆರಂಭಿಕ ಬ್ಯಾಟರ್ ಆಗಿ ಅವಕಾಶ ಪಡೆದಿದ್ದರು. ಆದರೆ ಆ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಲು ವಿಫಲರಾದ ಅವರು, ಕೇವಲ ನಾಲ್ಕು ರನ್ ಗಳಿಸಿ ವಿಕೆಟ್ ಒಪ್ಪಿಸಿದರು.
IND vs ENG: ಇಂಗ್ಲೆಂಡ್ ವಿರುದ್ಧದ ಏಕದಿನ ಸರಣಿಯಲ್ಲಿ ಆಡಲಿರುವ ವಿರಾಟ್ ಕೊಹ್ಲಿ?
“ಮೂರನೇ ಕ್ರಮಾಂಕಕ್ಕೆ ನಮ್ಮ ಬಳಿ ಅಪಾರ ಗುಣಮಟ್ಟ ಮತ್ತು ಹೆಚ್ಚಿನ ಡೆಪ್ತ್ ಇರುವ ಕಾರಣ, ಯಶಸ್ವಿ ಜೈಸ್ವಾಲ್ ಅವಕಾಶಕ್ಕಾಗಿ ಕಾಯಬೇಕಾಗಿದೆ. ಆದರೆ ನಮ್ಮ ಮೊದಲ ಆದ್ಯತೆ ಯಾವಾಗಲೂ ಸರಣಿಯನ್ನು ಗೆಲ್ಲುವುದೇ ಆಗಿದ್ದು, ಅದಕ್ಕಾಗಿ ಅತ್ಯುತ್ತಮ ತಂಡವನ್ನು ಕಣಕ್ಕಿಳಿಸುವುದಾಗಿದೆ,” ಎಂದು ಸಹಾಯಕ ಕೋಚ್ ಹೇಳಿದ್ದಾರೆ.
“ಜೈಸ್ವಾಲ್‌ಗೆ ಕೆಲವು ಅವಕಾಶಗಳು ಸಿಗುತ್ತವೆ. ಆದರೆ ಭಾರತೀಯ ಕ್ರಿಕೆಟ್‌ನಲ್ಲಿ ಸ್ಪರ್ಧೆಯ ಮಟ್ಟ ತುಂಬಾ ಹೆಚ್ಚಿರುವುದರಿಂದ ಅದು ಅತ್ಯಂತ ಕಠಿಣವಾಗಿದೆ. ಆದರೂ, ಇಂತಹ ಸರಿಯಾದ ಅವಕಾಶಗಳು ಸಿಕ್ಕಾಗ ಅವರು ರನ್‌ಗಳನ್ನು ಗಳಿಸಲೇಬೇಕು. ಭಾರತೀಯ ಕ್ರಿಕೆಟ್‌ನ ಸ್ವಭಾವವೇ ಇದಾಗಿದೆ,” ಎಂದು ಡಶಾಟ್ ತಿಳಿಸಿದ್ದಾರೆ.