ಕರ್ನಾಟಕ ಬಜೆಟ್​ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

NZ vs PAK: ಎರಡನೇ ಟಿ20ಐ ಪಂದ್ಯದಲ್ಲಿಯೂ ಪಾಕ್‌ಗೆ ಸೋಲಿನ ಬರೆ ಎಳೆದ ಕಿವೀಸ್‌!

NZ vs PAK 2nd T20I Match Highlights: ಬೌಲಿಂಗ್‌ ಹಾಗೂ ಬ್ಯಾಟಿಂಗ್‌ ಎರಡೂ ವಿಭಾಗಗಳಲ್ಲಿ ಅತ್ಯುತ್ತಮ ಪ್ರದರ್ಶನ ತೋರಿದ ನ್ಯೂಜಿಲೆಂಡ್‌ ತಂಡ, ಎರಡನೇ ಟಿ20ಐ ಪಂದ್ಯದಲ್ಲಿ ಪಾಕಿಸ್ತಾನದ ವಿರುದ್ಧ 5 ವಿಕೆಟ್‌ ಗೆಲುವು ಪಡೆದಿದೆ. ಆ ಮೂಲಕ ಐದು ಪಂದ್ಯಗಳ ಟಿ 20ಐ ಸರಣಿಯಲ್ಲಿ 2-0 ಮುನ್ನಡೆಯನ್ನು ಪಡೆದಿದೆ.

ಎರಡನೇ ಟಿ20ಐ ಪಂದ್ಯದಲ್ಲಿಯೂ ಪಾಕ್‌ಗೆ ಸೋಲಿನ ಬರೆ ಎಳೆದ ಕಿವೀಸ್‌!

ಪಾಕಿಸ್ತಾನ ಎದುರು ನ್ಯೂಜಿಲೆಂಡ್‌ ತಂಡಕ್ಕೆ 5 ವಿಕೆಟ್‌ ಜಯ

Profile Ramesh Kote Mar 18, 2025 6:29 PM

ನವದೆಹಲಿ: ಬೌಲಿಂಗ್‌ ಹಾಗೂ ಬ್ಯಾಟಿಂಗ್‌ ಎರಡೂ ವಿಭಾಗಗಳಲ್ಲಿ ಸಂಘಟಿತ ಪ್ರದರ್ಶನ ತೋರಿದ ನ್ಯೂಜಿಲೆಂಡ್‌ ತಂಡ ಎರಡನೇ ಟಿ20ಐ ಪಂದ್ಯದಲ್ಲಿಯೂ ಪಾಕಿಸ್ತಾನ ವಿರುದ್ಧ ಐದು ವಿಕೆಟ್‌ಗಳ ಜಯ ಸಾಧಿಸಿತು. ಆ ಮೂಲಕ ಐದು ಪಂದ್ಯಗಳ ಟಿ20ಐ ಸರಣಿಯಲ್ಲಿ 2-0 ಮುನ್ನಡೆಯನ್ನು ಪಡೆದುಕೊಂಡಿದೆ. ಮಾರ್ಚ್‌ 18 ರಂದು ಮಂಗಳವಾರ ಡ್ಯೂನ್‌ಡಿನ್‌ನ ಯೂನಿವರ್ಸಿಟಿ ಓವಲ್‌ ಕ್ರೀಡಾಂಗಣದಲ್ಲಿ ನಡೆದಿದ್ದ ಪಂದ್ಯಕ್ಕೆ ಮಳೆ ಅಡ್ಡಿ ಉಂಟು ಮಾಡಿತ್ತು. ಈ ಹಿನ್ನೆಲೆಯಲ್ಲಿ ಈ ಪಂದ್ಯವನ್ನು 15 ಓವರ್‌ಗಳಿಗೆ ಸೀಮಿತಗೊಳಿಸಲಾಗಿತ್ತು. ಮೊದಲು ಬ್ಯಾಟ್‌ ಮಾಡಿದ್ದ ಪಾಕಿಸ್ತಾನ ತಂಡ 9 ವಿಕೆಟ್‌ಗಳ ನಷ್ಟಕ್ಕೆ 135 ರನ್‌ಗಳನ್ನು ಕಲೆ ಹಾಕಿತ್ತು. ಬಳಿಕ ಗುರಿ ಹಿಂಬಾಲಿಸಿದ ನ್ಯೂಜಿಲೆಂಡ್‌ ತಂಡ 13.1 ಓವರ್‌ಗಳಿಗೆ ಗುರಿಯನ್ನು ತಲುಪಿತು. ಕಿವೀಸ್‌ ಪರ ಸ್ಪೋಟಕ ಬ್ಯಾಟ್‌ ಮಾಡಿದ ಟಿಮ್‌ ಸೀಫರ್ಟ್‌ ಕೇವಲ 22 ಎಸೆತಗಳಲ್ಲಿ 45 ರನ್‌ಗಳನ್ನು ಸಿಡಿಸಿ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.

ಗುರಿ ಹಿಂಬಾಲಿಸಿದ ನ್ಯೂಜಿಲೆಂಡ್‌ ತಂಡಕ್ಕೆ ಟಿಮ್‌ ಸೀಫರ್ಟ್‌ ಹಾಗೂ ಫಿನ್‌ ಆಲೆನ್‌ ಸ್ಪೋಟಕ ಆರಂಭವನ್ನು ತಂದುಕೊಟ್ಟಿದ್ದರು. ಮೊದಲ ಓವರ್‌ನಲ್ಲಿ ಶಾಹೀನ್‌ ಶಾ ಅಫ್ರಿದಿಗೆ ಟಿಮ್‌ ಸೀಫರ್ಟ್‌ ಮೇಡಿನ್‌ ಕೊಟ್ಟಿದ್ದರು. ಆದರೆ, ಮೂರನೇ ಓವರ್‌ನಲ್ಲಿ ಅಫ್ರಿದಿಗೆ ಟಿಮ್‌ ಸೀಫರ್ಟ್‌ ನಾಲ್ಕು ಭರ್ಜರಿ ಸಿಕ್ಸರ್‌ ಸೇರಿದಂತೆ ಆರು ಎಸೆತಗಳಲ್ಲಿ 26 ರನ್‌ಗಳನ್ನು ಸಿಡಿಸಿದರು. ಇದಕ್ಕೂ ಮುನ್ನ ಫಿನ್‌ ಆಲೆನ್‌ ಅವರು ಮೊಹಮ್ಮದ್‌ ಅಲಿಗೆ ಮೂರು ಸಿಕ್ಸರ್‌ಗಳನ್ನು ಸಿಡಿಸಿದ್ದರು. ಆ ಮೂಲಕ ಮುರಿಯದ ಮೊದಲನೇ ವಿಕೆಟ್‌ಗೆ ಈ ಜೋಡಿ 4.4 ಓವರ್‌ಗಳಿಗೆ 66 ರನ್‌ಗಳನ್ನು ಕಲೆ ಹಾಕಿತು ಹಾಗೂ ಕಿವೀಸ್‌ ಭರ್ಜರಿ ಆರಂಭವನ್ನು ಪಡೆಯಿತು.

NZ vs PAK: ಪಾಕಿಸ್ತಾನ ವಿರುದ್ಧದ ಟಿ20ಐ ಸರಣಿಗೆ ನ್ಯೂಜಿಲೆಂಡ್‌ ತಂಡ ಪ್ರಕಟ!

ಟಿಮ್‌ ಸೀಫರ್ಟ್‌-ಫಿನ್‌ ಆಲೆನ್‌ ಅಬ್ಬರ

ಪವರ್‌ಪ್ಲೇನಲ್ಲಿ ಸ್ಪೋಟಕ ಬ್ಯಾಟ್‌ ಮಾಡಿದ್ದ ಕಿವೀಸ್‌ ಆರಂಭಿಕ ಟಿಮ್‌ ಸೀಫರ್ಟ್‌ ಕೇವಲ 22 ಎಸೆತಗಳಲ್ಲಿ 5 ಸಿಕ್ಸರ್‌ ಹಾಗೂ 3 ಬೌಂಡರಿಗಳೊಂದಿಗೆ

45 ರನ್‌ಗಳನ್ನು ಸಿಡಿಸಿದರು. ಆ ಮೂಲಕ ಕಿವೀಸ್‌ಗೆ ಸ್ಪೋಟಕ ಆರಂಭವನ್ನು ತಂದುಕೊಟ್ಟರು. ಅದರಲ್ಲಿಯೂ ವಿಶೇಷವಾಗಿ 204.55ರ ಸ್ಟ್ರೈಕ್‌ ರೇಟ್‌ನಲ್ಲಿನ ಅವರ ಬ್ಯಾಟಿಂಗ್‌ ಎಲ್ಲರ ಗಮನ ಸೆಳೆಯಿತು. ಇವರಿಗೆ ಮೊದಲನೇ ವಿಕೆಟ್‌ಗೆ ಸಾಥ್‌ ನೀಡಿದ್ದ ಫಿನ್‌ ಆಲೆನ್‌ ಕೂಡ 237.50ರ ಸ್ಟ್ರೈಕ್‌ರೇಟ್‌ನಲ್ಲಿ ಕೇವಲ 16 ಎಸೆತಗಳಲ್ಲಿ 38 ರನ್‌ಗಳನ್ನು ಬಾರಿಸಿದರು. ಕೊನೆಯ ಹಂತದಲ್ಲಿ ಮಿಚೆಲ್‌ ಹೇ ಕೇವಲ 16 ಎಸೆತಗಳಲ್ಲಿ ಅಜೇಯ 21 ರನ್‌ ಗಳಿಸಿದರು.



ಪಾಕಿಸ್ತಾನಕ್ಕೆ ಆರಂಭಿಕ ಆಘಾತ

ಇದಕ್ಕೂ ಮುನ್ನ ಟಾಸ್‌ ಸೋತು ಮೊದಲು ಬ್ಯಾಟ್‌ ಮಾಡಿದ್ದ ಪಾಕಿಸ್ತಾನ ತಂಡ ಆರಂಭಿಕ ಆಘಾತ ಅನುಭವಿಸಿತ್ತು. ತಂಡದ ಮೊತ್ತ 19 ರನ್‌ಗಳು ಇರುವಾಗಲೇ ಎರಡು ವಿಕೆಟ್‌ಗಳನ್ನು ಕಳೆದುಕೊಂಡಿತು. ಒ೦ದು ರನ್‌ ಇರುವಾಗ ಹಸನ್‌ ರವಾಝ್‌ ಅವರನ್ನು ಜಾಕೋಬ್‌ ಡಫಿ ಔಟ್‌ ಮಾಡಿದರೆ, ತಂಡದ ಮೊತ್ತ19 ರನ್‌ ಇರುವಾಗ ಮೊಹಮ್ಮದ್‌ ಹ್ಯಾರಿಸ್‌ (11) ಅವರನ್ನು ಬೆನ್‌ ಸೀರ್ಸ್‌ ಔಟ್‌ ಮಾಡಿದರು.



ಪಾಕ್‌ಗೆ ಸಲ್ಮಾನ್‌ ಅಘಾ ಆಸರೆ

ಪಾಕಿಸ್ತಾನ ತಂಡ 52 ರನ್‌ಗಳನ್ನು ಕಲೆ ಹಾಕುವ ಹೊತ್ತಿಗೆ 4 ವಿಕೆಟ್‌ಗಳನ್ನು ಕಳೆದುಕೊಂಡಿತ್ತು. ಒಂದು ತುದಿಯಲ್ಲಿ ಗಟ್ಟಿಯಾಗಿ ನಿಂತು ಬ್ಯಾಟ್‌ ಮಾಡಿದ್ದ ನಾಯಕ ಸಲ್ಮಾನ್‌ ಅಘಾ, ಕೇವಲ 28 ಎಸೆತಗಳಲ್ಲಿ 3 ಸಿಕ್ಸರ್‌ ಹಾಗೂ 4 ಬೌಂಡರಿಗಳೊಂದಿಗೆ 46 ರನ್‌ಗಳನ್ನು ಸಿಡಿಸಿದರು. ಇವರನ್ನು ಹೊರತು ಪಡಿಸಿ ಶದಾಬ್‌ ಖಾನ್‌ 26 ರನ್‌ ಹಾಗೂ ಶಾಹೀನ್‌ ಶಾ ಅಫ್ರಿದಿ 22 ರನ್‌ಗಳ ಕೊಡುಗೆಯನ್ನು ತಂಡಕ್ಕೆ ನೀಡಿದರು. ಈ ಮೂವರು ಬ್ಯಾಟ್ಸ್‌ಮನ್‌ಗಳನ್ನು ಹೊರತುಪಡಿಸಿ ಪಾಕಿಸ್ತಾನ ತಂಡದ ಇನ್ನುಳಿದ ಬ್ಯಾಟ್ಸ್‌ಮನ್‌ಗಳು ಕಿವೀಸ್‌ ವೇಗದ ಬೌಲಿಂಗ್‌ ದಾಳಿಯನ್ನು ಎದುರಿಸುವಲ್ಲಿ ವಿಫಲರಾದರು.

ನ್ಯೂಜಿಲೆಂಡ್‌ ತಂಡದ ಪರ ಶಿಸ್ತುಬದ್ದ ಬೌಲಿಂಗ್‌ ದಾಳಿ ನಡೆಸಿದ ಜಾಕೋಬ್‌ ಡಫಿ, ಬೆನ್‌ ಸೀರ್ಸ್‌, ಜಿಮ್ಮಿ ನೀಶಮ್‌ ಹಾಗೂ ಇಶ್‌ ಸೋಧಿ ತಲಾ ಎರಡೆರಡು ವಿಕೆಟ್‌ಗಳನ್ನು ಕಬಳಿಸಿದರು.



ಸತತ ಎರಡು ಪಂದ್ಯಗಳನ್ನು ಸೋತಿರುವ ಪಾಕಿಸ್ತಾನ ತಂಡ, ಟಿ20 ಸರಣಿಯನ್ನು ಗೆಲ್ಲಬೇಕೆಂದರೆ ಮುಂದಿನ ಮೂರೂ ಪಂದ್ಯಗಳಲ್ಲಿ ಆತಿಥೇಯ ನ್ಯೂಜಿಲೆಂಡ್‌ ತಂಡವನ್ನು ಸೋಲಿಸಬೇಕು. ಮುಂದಿನ ಪಂದ್ಯಗಳಲ್ಲಿ ಪಾಕಿಸ್ತಾನ ತಂಡಕ್ಕೆ ಮಾಡು ಇಲ್ಲವೆ ಮಡಿ ಪರಿಸ್ಥಿತಿ ಉಂಟಾಗಿದೆ. ಆದರೆ, ಈಗಾಗಲೇ 2-0 ಮುನ್ನಡೆಯನ್ನು ಗಳಿಸಿರುವ ನ್ಯೂಜಿಲೆಂಡ್‌ ತಂಡ, ಟಿ20 ಸರಣಿಯನ್ನು ವಶಪಡಿಸಿಕೊಳ್ಳಲು ಕೊನೆಯ 3 ಪಂದ್ಯಗಳಲ್ಲಿ ಒಂದರಲ್ಲಿ ಗೆದ್ದರೆ ಸಾಕು.