NZ vs PAK: ಪಾಕಿಸ್ತಾನ ವಿರುದ್ಧದ ಟಿ20ಐ ಸರಣಿಗೆ ನ್ಯೂಜಿಲೆಂಡ್ ತಂಡ ಪ್ರಕಟ!
New Zealand T20I Squad: ಪಾಕಿಸ್ತಾನ ವಿರುದ್ಧ ಐದು ಪಂದ್ಯಗಳ ಟಿ20ಐ ಸರಣಿಗೆ 15 ಸದಸ್ಯರ ನ್ಯೂಜಿಲೆಂಡ್ ತಂಡವನ್ನು ಪ್ರಕಟಿಸಲಾಗಿದೆ. ಈ ತಂಡಕ್ಕೆ ಮೈಕಲ್ ಬ್ರೇಸ್‌ವೆಲ್ ಅವರಿಗೆ ನಾಯಕತ್ವ ನೀಡಲಾಗಿದೆ. ಕಳೆದ ವರ್ಷ ಪಾಕಿಸ್ತಾನ ಪ್ರವಾಸದ ಟಿ20ಐ ಸರಣಿಯಲ್ಲಿ ಕಿವೀಸ್ ತಂಡವನ್ನು ಮುನ್ನಡೆಸಿದ್ದರು ಹಾಗೂ ಈ ಸರಣಿಯಲ್ಲಿ ಉಭಯ ತಂಡಗಳು 2-2 ಅಂತರದಲ್ಲಿ ಸಮಬಲಗೊಳಿಸಿಕೊಂಡಿದ್ದವು.


ನವದೆಹಲಿ: ಭಾರತದ ವಿರುದ್ದ ಐಸಿಸಿ ಚಾಂಪಿಯನ್ಸ್ ಟ್ರೋಫಿ ಟೂರ್ನಿಯ ಪೈನಲ್‌ನಲ್ಲಿ ಸೋತ ಬೇಸರದಲ್ಲಿರುವ ನ್ಯೂಜಿಲೆಂಡ್ (New Zealand) ತಂಡ, ಇದೀಗ ಪಾಕಿಸ್ತಾನ ವಿರುದ್ದದ ಐದು ಪಂದ್ಯಗಳ 20ಐ ಸರಣಿಯನ್ನು ಆಡಲು ಎದುರು ನೋಡುತ್ತಿದೆ. ಈ ಸರಣಿಗಾಗಿ 15 ಸದಸ್ಯರ ನ್ಯೂಜಿಲೆಂಡ್ ಟಿ20 ತಂಡವನ್ನು ಪ್ರಕಟಿಸಲಾಗಿದ್ದು, ಆಲ್‌ರೌಂಡರ್ ಮೈಕಲ್ ಬ್ರೇಸ್‌ವೆಲ್ (Michael Bracewell) ಅವರಿಗೆ ನಾಯಕತ್ವದ ಹೊಣೆಯನ್ನು ನೀಡಲಾಗಿದೆ. ಕಳೆದ ವರ್ಷ ಪಾಕಿಸ್ತಾನ ಪ್ರವಾಸದ ಟಿ20ಐ (NZ vs PAK) ಸರಣಿಯಲ್ಲಿ ಕಿವೀಸ್ ತಂಡವನ್ನು ಮೈಕಲ್ ಬ್ರೇಸ್‌ವೆಲ್ ಅವರೇ ಮುನ್ನಡೆಸಿದ್ದರು. ಆದರೆ, ಈ ಸರಣಿಯಲ್ಲಿ ಉಭಯ ತಂಡಗಳು 2-2 ಅಂತರದಲ್ಲಿ ಸಮಬಲ ಮಾಡಿಕೊಂಡಿದ್ದವು.
ಮಿಚೆಲ್ ಸ್ಯಾಂಟ್ನರ್ ಅವರು ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಗೆ ಸಜ್ಜಾಗುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಇವರು ಟಿ20ಐ ಸರಣಿಗೆ ಅಲಭ್ಯರಾಗಿದ್ದಾರೆ. ಈ ಕಾರಣದಿಂದ ಮೈಕಲ್ ಬ್ರೇಸ್‌ವೆಲ್‌ಗೆ ನಾಯಕತ್ವವನ್ನು ನೀಡಲಾಗಿದೆ. ಮಿಚೆಲ್ ಸ್ಯಾಂಟ್ನರ್ ಜೊತೆಗೆ ಆರಂಭಿಕ ಬ್ಯಾಟ್ಸ್‌ಮನ್ ಡೆವೋನ್ ಕಾನ್ವೆ, ಲಾಕಿ ಫರ್ಗ್ಯೂಸನ್, ಗ್ಲೆನ್ ಫಿಲಿಪ್ಸ್ ಹಾಗೂ ರಚಿನ್ ರವೀಂದ್ರ ಕೂಡ ಐಪಿಎಲ್ ಟೂರ್ನಿಯಲ್ಲಿ ಆಡಲಿದ್ದಾರೆ. ಅಂದಹಾಗೆ ಮೈಕಲ್ ಬ್ರೇಸ್‌ವೆಲ್ ಅವರು ಇತ್ತೀಚೆಗೆ ಐಸಿಸಿ ಚಾಂಪಿಯನ್ಸ್ ಟ್ರೋಫಿ ಟೂರ್ನಿಯಲ್ಲಿ ರನ್ನರ್ ಅಪ್ ಆಗಿ ಕಿವೀಸ್ ಪರ ಆಡಿದ್ದರು. ಬಾಂಗ್ಲಾದೇಶ ವಿರುದ್ಧದ ಪಂದ್ಯದಲ್ಲಿ 4 ವಿಕೆಟ್ ಹಾಗೂ ಭಾರತದ ವಿರುದ್ಧ ಫೈನಲ್ ಪಂದ್ಯದಲ್ಲಿ ಅರ್ಧಶತಕವನ್ನು ಬಾರಿಸಿದ್ದರು.
IND vs NZ: ರೋಹಿತ್ ಶರ್ಮಾ ಬ್ಯಾಟಿಂಗ್‌ನಿಂದ ಬೌಲರ್‌ಗಳು ಭಯ ಬಿದ್ದಿದ್ದರೆಂದ ಮಿಚೆಲ್ ಸ್ಯಾಂಟ್ನರ್!
"ತಮ್ಮ ರಾಷ್ಟ್ರೀಯ ತಂಡಕ್ಕೆ ನಾಯಕನಾಗುವುದು ನಿಜಕ್ಕೂ ಹೆಮ್ಮೆಯ ಸಂಗತಿ. ಕಳೆದ ವರ್ಷ ಪಾಕಿಸ್ತಾನದಲ್ಲಿ ನ್ಯೂಜಿಲೆಂಡ್ ತಂಡವನ್ನು ಮುನ್ನಡೆಸುವುದನ್ನು ಆನಂದಿಸಿದ್ದೇನೆ. ಅಂದು ಆಡಿದ್ದ ಬಹುತೇಕ ಆಟಗಾರರು ಈ ಸರಣಿಯಲ್ಲಿಯೂ ಆಡಲಿದ್ದಾರೆ," ಎಂದು ನ್ಯೂಜಿಲೆಂಡ್ ಕ್ರಿಕೆಟ್‌ನ ಸುದ್ದಿಗೋಷ್ಠಿಯಲ್ಲಿ ಮೈಕಲ್ ಬ್ರೇಸ್‌ವೆಲ್ ಸಂತಸ ವ್ಯಕ್ತಪಡಿಸಿದ್ದಾರೆ.
ಆಟಗಾರರ ವರ್ಕ್‌ಲೋಡ್ ಮ್ಯಾನೇಜ್‌ಮೆಂಟ್ ಸಲುವಾಗಿ ನ್ಯೂಜಿಲೆಂಡ್ ಕ್ರಿಕೆಟ್‌ನ ಆಯ್ಕೆದಾರರು ವೇಗದ ಬೌಲರ್‌ಗಳಾದ ಕೈಲ್ ಜೇಮಿಸನ್ ಹಾಗೂ ವಿಲ್ ರೌರ್ಕಿ ಅವರನ್ನು ಆರಂಭಿಕ ಮೂರು ಪಂದ್ಯಗಳಿಗೆ ಮಾತ್ರ ಪರಿಗಣಿಸಿದ್ದಾರೆ. ಭಾರತದ ವಿರುದ್ಧದ ಐಸಿಸಿ ಚಾಂಪಿಯನ್ಸ್ ಟ್ರೋಫಿ ಟೂರ್ನಿಯ ಪೈನಲ್ ಪಂದ್ಯಕ್ಕೆ ಅಲಭ್ಯರಾಗಿದ್ದ ಮ್ಯಾಟ್ ಹೆನ್ರಿ ನಾಲ್ಕು ಹಾಗೂ ಐದನೇ ಪಂದ್ಯಗಳಿಗೆ ಲಭ್ಯರಾಗಲಿದ್ದಾರೆ.
IND vs NZ: ನ್ಯೂಜಿಲೆಂಡ್‌ಗೆ ಮಣ್ಣು ಮುಕ್ಕಿಸಿ ಮೂರನೇ ಚಾಂಪಿಯನ್ಸ್ ಟ್ರೋಫಿ ಗೆದ್ದ ಭಾರತ!
ಹ್ಯಾಮ್‌ಸ್ಟ್ರಿಂಗ್ ಇಂಜುರಿಯಿಂದ ಗುಣಮುಖರಾಗಿರುವ ಬೆನ್ ಸೀರ್ಸ್ ಹಾಗೂ ಶ್ರೀಲಂಕಾ ವಿರುದ್ಧದ ಸರಣಿಗೆ ಅಲಭ್ಯರಾಗಿದ್ದ ಇಶ್ ಸೋಧಿ ಅವರು ಇದೀಗ ರಾಷ್ಟ್ರೀಯ ತಂಡಕ್ಕೆ ಮರಳಿದ್ದಾರೆ. ಮಾಜಿ ನಾಯಕ ಕೇನ್ ವಿಲಿಯಮ್ಸನ್ ಅಲಭ್ಯರಾಗಿದ್ದಾರೆ. ಅವರು ಆಯ್ಕೆಗೆ ತಮ್ಮ ಹೆಸರನ್ನು ಪರಿಗಣಿಸಿರಲಿಲ್ಲ. ಬೆವೆನ್ ಜಾಕೋಬ್ಸ್ ಅವರು ಐಪಿಎಲ್ ಟೂರ್ನಿಯಲ್ಲಿ ಆಡುತ್ತಿರುವ ಕಾರಣ, ಅವರು ಪಾಕ್ ಟಿ20 ಸರಣಿಗ ಅಲಭ್ಯರಾಗಿದ್ದಾರೆ. ಮಾರ್ಚ್ 16 ರಂದು ಉಭಯ ತಂಡಗಳ ನಡುವಣ ಟಿ20ಐ ಸರಣಿ ಆರಂಭವಾಗಲಿದೆ.
ಪಾಕಿಸ್ತಾನ ಟಿ20ಐ ಸರಣಿಗೆ ನ್ಯೂಜಿಲೆಂಡ್ ತಂಡ
ಮೈಕಲ್ ಬ್ರೇಸ್‌ವೆಲ್ (ನಾಯಕ), ಫಿನ್ ಆಲೆನ್, ಮಾರ್ಕ್ ಚಾಪ್ಮನ್, ಜಾಕೋಬ್ ಡಫಿ, ಝ್ಯಾಕ್ ಫೌಕ್ಸ್ (4 ಮತ್ತು 5ನೇ ಪಂದ್ಯಗಳಿಗೆ), ಮಿಚ್ ಹೇ, ಮ್ಯಾಟ್ ಹೆನ್ರಿ (4 ಮತ್ತು 5ನೇ ಪಂದ್ಯಗಳಿಗೆ), ಕೈಲ್ ಜೇಮಿಸನ್ (1,2,3 ಪಂದ್ಯಗಳಿಗೆ), ಡ್ಯಾರಿಲ್ ಮಿಚೆಲ್, ಜಿಮ್ಮಿ ನೀಶಮ್, ವಿಲ್ ರೌರ್ಕಿ (1,2,3 ಪಂದ್ಯಗಳು), ಟಿಮ್ ರಾಬಿನ್ಸನ್, ಬೆನ್ ಸೀರ್ಸ್, ಟಿಮ್ ಸೀಫರ್ಟ್, ಇಶ್ ಸೋಧಿ