ನವದೆಹಲಿ: ಭಾನುವಾರ ಜಮ್ಮು ಮತ್ತು ಕಾಶ್ಮೀರ (Jammu and Kashmir) ಕ್ರಿಕೆಟ್ ತಂಡವು ರಣಜಿ ಟ್ರೋಫಿಯಲ್ಲಿ (Ranji Trophy 2025-26) ಇತಿಹಾಸ ನಿರ್ಮಿಸಿದ್ದು, ಇಂದೋರ್‌ನಲ್ಲಿ ಮಧ್ಯಪ್ರದೇಶ ವಿರುದ್ಧ ಕಠಿಣ ಹೋರಾಟದಲ್ಲಿ 56 ರನ್‌ಗಳ ಜಯ ಸಾಧಿಸುವ ಮೂಲಕ ಇದೇ ಮೊದಲ ಬಾರಿ ಸೆಮಿಫೈನಲ್‌ಗೆ ಲಗ್ಗೆ ಇಟ್ಟಿದೆ. ರಣಜಿ ಟ್ರೋಫಿ ಟೂರ್ನಿಗೆ ಪದಾರ್ಪಣೆ ಮಾಡಿದ 67 ವರ್ಷಗಳ ಬಳಿಕ ಹಾಗೂ ನಾಕ್‌ಔಟ್‌ನಲ್ಲಿ ಆಡಿದ ಆರು ವರ್ಷಗಳ ಬಳಿಕ ಜಮ್ಮು ಮತ್ತು ಕಾಶ್ಮೀರ ತಂಡ, ಆಕಿಬ್ ನಬಿ (Auqib Nabi) ಅವರ ಮಾರಕ ಬೌಲಿಂಗ್ ಸಹಾಯದಿಂದ ಕ್ವಾರ್ಟರ್ ಫೈನಲ್ ಪಂದ್ಯವನ್ನು ಗೆದ್ದು ಟೂರ್ನಿಯ ಅಂತಿಮ ನಾಲ್ಕರ ಹಂತಕ್ಕೆ ಪ್ರವೇಶಿಸಿದೆ.
ಐತಿಹಾಸಿಕ ಈ ಜಯದ ಶಿಲ್ಪಿ ಆಕಿಬ್ ನಬಿ. ವೇಗದ ಬೌಲರ್ ಆಗಿರುವ ಅವರು ಪಂದ್ಯದಲ್ಲಿ ಒಟ್ಟು 110 ರನ್‌ಗಳಿಗೆ 12 ವಿಕೆಟ್‌ಗಳನ್ನು ಪಡೆದು, ಎರಡೂ ಇನಿಂಗ್ಸ್‌ಗಳಲ್ಲಿ ಮಧ್ಯಪ್ರದೇಶದ ಬ್ಯಾಟಿಂಗ್ ಕ್ರಮವನ್ನು ಸಂಪೂರ್ಣವಾಗಿ ನೆಲಕ್ಕೆ ಉರುಳಿಸಿದರು. ಪಂದ್ಯ ಯಾವುದೇ ಹಂತದಲ್ಲಿ ಕೈ ತಪ್ಪುವಂತಾಗುತ್ತಿದ್ದಾಗ, ಪ್ರತೀ ಬಾರಿ ಅದನ್ನು ಜಮ್ಮು ಮತ್ತು ಕಾಶ್ಮೀರ ತಂಡ ಕಮ್ ಬ್ಯಾಕ್ ಮಾಡಲು ಆಕಿಬ್ ನೆರವು ನೀಡಿದರು.
ಪ್ರಥಮ ಇನಿಂಗ್ಸ್‌ನಲ್ಲಿ 40 ರನ್‌ಗಳಿಗೆ 7 ವಿಕೆಟ್‌ಗಳನ್ನು ಕಬಳಿಸಿದ ಅವರ ಅದ್ಭುತ ಪ್ರದರ್ಶನ ನಿರ್ಣಾಯಕವಾಗಿತ್ತು. ಜಮ್ಮು ಮತ್ತು ಕಾಶ್ಮೀರ ತಂಡ 194 ರನ್‌ಗಳಿಗೆ ಆಲೌಟ್ ಆದ ಬಳಿಕ, ಆಕಿಬ್ ನಬಿ ಅವರ ಮಾರಕ ಬೌಲಿಂಗ್ ದಾಳಿಯ ನೆರವಿನಿಂದ ತಮ್ಮ ತಂಡಕ್ಕೆ ಅತ್ಯಂತ ಮಹತ್ವದ 42 ರನ್‌ಗಳ ಮುನ್ನಡೆ ನೀಡಿತು.
KAR vs MUM: ಕೆಎಲ್ ರಾಹುಲ್ ಭರ್ಜರಿ ಶತಕ, ಮುಂಬೈ ವಿರುದ್ಧ ಗೆದ್ದು ಸೆಮಿಫೈನಲ್‌ಗೇರಿದ ಕರ್ನಾಟಕ!
ದ್ವಿತೀಯ ಇನಿಂಗ್ಸ್‌ನಲ್ಲಿ ಮಧ್ಯಪ್ರದೇಶ ತಂಡದ ಬೌಲರ್‌ಗಳು ಪ್ರಬಲವಾಗಿ ಕಮ್‌ಬ್ಯಾಕ್ ಮಾಡಿದ್ದರು ಹಾಗೂ ಜಮ್ಮು ಮತ್ತು ಕಾಶ್ಮೀರ ಪಡೆದಿದ್ದ ಮುನ್ನಡೆ ಅಸ್ಥಿರವಾಗಿ ಕಂಡಿತು. ಕಣಿವೆ ರಾಜ್ಯದ ತಂಡ 73 ರನ್‌ಗಳಿಗೆ 5 ವಿಕೆಟ್‌ಗಳನ್ನು ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. ಇದರ ಪರಿಣಾಮ ಪಂದ್ಯ ಮತ್ತೊಮ್ಮೆ ಮಧ್ಯ ಪ್ರದೇಶ ತಂಡದ ಕಡೆಗೆ ತಿರುಗಿತು. ಆದರೆ ಕೆಳಕ್ರಮದ ಆಟಗಾರರ ಹೋರಾಟ ಪಂದ್ಯಕ್ಕೆ ಹೊಸ ತಿರುವು ತಂದುಕೊಟ್ಟಿತು.
ಅಬಿದ್ ಮುಷ್ಟಾಕ್ 41 ರನ್‌ಗಳನ್ನು ಗಳಿಸಿದರೆ, ವಂಶರಾಜ್ ಶರ್ಮಾ ಶಾಂತ ಮತ್ತು ಸ್ಥಿರ ಆಟದೊಂದಿಗೆ ಅಜೇಯ 54 ರನ್‌ಗಳನ್ನು ಸಿಡಿಸಿದರು. ಅದಕ್ಕಿಂತ ಮುಖ್ಯವಾಗಿ, ಸುನೀಲ್ ಕುಮಾರ್ ಮತ್ತು ಯುಧ್ವೀರ್ ಸಿಂಗ್ ನಡುವಿನ ಕೊನೆಯ ವಿಕೆಟ್‌ಗೆ ಸೇರಿದ 65 ರನ್‌ಗಳ ಜೊತೆಯಾಟ ಮುನ್ನಡೆಯನ್ನು ಸಾಕಷ್ಟು ವಿಸ್ತರಿಸಿತು. ಆ ಮೂಲಕ ಜಮ್ಮು ಮತ್ತು ಕಾಶ್ಮೀರ ತಂಡ ದ್ವಿತೀಯ ಇನಿಂಗ್ಸ್‌ನಲ್ಲಿ 70.3 ಓವರ್‌ಗಳಿಗೆ 248 ರನ್‌ಗಳಿಗೆ ಆಲ್‌ಔಟ್ ಆಯುತು. ಆ ಮೂಲಕ ಎದುರಾಳಿ ಮಧ್ಯ ಪ್ರದೇಶ ತಂಡಕ್ಕೆ 291 ರನ್‌ಗಳ ಗುರಿಯನ್ನು ನೀಡಿತು.
207 ರನ್ ಗಳಿಸಿ ಚುಟಕು ವಿಶ್ವಕಪ್ ಟೂರ್ನಿಯಲ್ಲಿ ಇತಿಹಾಸ ಬರೆದ ಸ್ಕಾಟ್ಲೆಂಡ್!
ನಾಲ್ಕನೇ ದಿನದ ಆಟವನ್ನು ಮಧ್ಯಪ್ರದೇಶ ತಂಡ 5 ವಿಕೆಟ್ ಕಳೆದುಕೊಂಡು 87 ರನ್‌ಗಳೊಂದಿಗೆ ಪುನರಾರಂಭಿಸಿತು. ಗೆಲುವಿಗೆ ಇನ್ನೂ 204 ರನ್‌ಗಳು ಅಗತ್ಯವಿದ್ದವು. ಆರಂಭದಲ್ಲೇ ಉಪನಾಯಕ ವೆಂಕಟೇಶ್ ಅಯ್ಯರ್ ವಿಕೆಟ್ ಕಳೆದುಕೊಂಡುದು ತಂಡಕ್ಕೆ ದೊಡ್ಡ ಹೊಡೆತವಾಯಿತು. ಆದರೂ ಸರಂಶ್ ಜೈನ್ ಆಕ್ರಮಣಕಾರಿ 64 ರನ್‌ಗಳ ಇನಿಂಗ್ಸ್ ಆಡುತ್ತಾ ಗೆಲುವಿನ ಆಶೆಯನ್ನು ಜೀವಂತವಾಗಿಟ್ಟರು. ಅವರಿಗೆ ಶುಭಂ ಶರ್ಮಾ ಹಾಗೂ ರಾಮ್‌ವೀರ್ ಗುರ್ಜಾರ್ ಬೆಂಬಲ ನೀಡಿದರು. ಕೆಲ ಕಾಲ ಪಂದ್ಯವು ಸಮಬಲದಲ್ಲೇ ಹೋರಾಟ ನಡೆಯುತ್ತಿತ್ತು.
ಆದರೆ, ಎದುರಾಳಿ ತಂಡದ ಪ್ರತಿರೋಧವನ್ನು ಆಕಿಬ್ ನಬಿ ಮುರಿದರು. ಸ್ಟಂಪ್‌ಗಳ ಸುತ್ತಮುತ್ತಿನಿಂದ ಬೌಲ್ ಮಾಡಿದ ಅವರು ಇನ್‌ಸ್ವಿಂಗ್ ಎಸೆದು ಸರಂಶ್ ಜೈನ್ ಅವರ ರಕ್ಷಣಾತ್ಮಕ ಆಟವನ್ನು ಭೇದಿಸಿದರು. ಇದರಿಂದ ಮಧ್ಯಪ್ರದೇಶ ತಂಡಕ್ಕೆ ದೊಡ್ಡ ಹೊಡೆತ ಬಿದ್ದಂತಾಯಿತು. ಆ ಮೂಲಕ 211 ರನ್‌ಗಳಿಗೆ 9 ವಿಕೆಟ್‌ಗಳನ್ನು ಕಳೆದುಕೊಂಡ ಸ್ಥಿತಿಯಲ್ಲಿ ಫಲಿತಾಂಶ ಬಹುತೇಕ ಜಮ್ಮು ಮತ್ತು ಕಾಶ್ಮೀರ ಪರ ತಿರುಗಿತು. ಆದರೆ ಕೊನೆಯ ವಿಕೆಟ್‌ಗೆ ಆರ್ಯನ್ ಪಾಂಡೆ ಮತ್ತು ಕುಲ್ದೀಪ್ ಸೇನ್ ಹಠದ 23 ರನ್‌ಗಳ ಜೊತೆಯಾಟ ಆಡುತ್ತಾ ಸಂಭ್ರಮವನ್ನು ಸ್ವಲ್ಪ ತಡಗೊಳಿಸಿದರು. ಕೊನೆಗೆ ಯುಧ್ವೀರ್ ಸಿಂಗ್, ಆರ್ಯನ್ ಪಾಂಡೆಯನ್ನು ಬೌಲ್ಡ್ ಮಾಡುವ ಮೂಲಕ ಜಮ್ಮು ಮತ್ತು ಕಾಶ್ಮೀರದ ಐತಿಹಾಸಿಕ ಜಯವನ್ನು ಖಚಿತಪಡಿಸಿದರು.
ಬೃಹತ್ ಮೊತ್ತ ಪೇರಿಸಿಯೂ ಸೋಲು ಕಂಡ ಆಫ್ಘಾನ್; ಕಿವೀಸ್‌ಗೆ 5 ವಿಕೆಟ್ ಜಯ
ಅಗ್ರ ಐವರು ಬೌಲರ್‌ಗಳ ಪಟ್ಟಿಯಲ್ಲಿ ಆಕಿಬ್ ನಬಿ
ನಬಿಯವರ ಈ ಸೀಸನ್‌ನ ಪ್ರದರ್ಶನ ದಿನದಿಂದ ದಿನಕ್ಕೆ ಇನ್ನಷ್ಟು ವೇಗ ಪಡೆಯುತ್ತಿದೆ. ಈ ಆವೃತ್ತಿಯಲ್ಲಿ ಟಾಪ್ ಐದು ವಿಕೆಟ್ ಪಡೆಯುವವರ ಪಟ್ಟಿಯಲ್ಲಿ ಸ್ಥಾನ ಪಡೆದಿರುವ ಏಕೈಕ ವೇಗದ ಬೌಲರ್ ಆಗಿದ್ದಾರೆ. ಇದುವರೆಗೆ 46 ವಿಕೆಟ್‌ಗಳನ್ನು ಪಡೆದಿರುವ ನಬಿ, 52 ವಿಕೆಟ್‌ಗಳೊಂದಿಗೆ ಮುಂಚೂಣಿಯಲ್ಲಿರುವ ಉತ್ತರಾಖಂಡದ ಮಯಾಂಕ್ ಮಿಶ್ರಾ ನಂತರ ಎರಡನೇ ಸ್ಥಾನದಲ್ಲಿದ್ದಾರೆ. 2024–25 ಸೀಸನ್ ಆರಂಭದಿಂದ ಇಲ್ಲಿವರೆಗೆ ನಬಿ 97 ಪ್ರಥಮ ದರ್ಜೆ ವಿಕೆಟ್‌ಗಳನ್ನು ಕಬಳಿಸಿದ್ದು, ದೇಶಿ ಕ್ರಿಕೆಟ್ ವಲಯದಲ್ಲಿ ಅತ್ಯಂತ ಸ್ಥಿರ ಮತ್ತು ನಂಬಿಗಸ್ತ ವೇಗದ ಬೌಲರ್‌ಗಳಲ್ಲೊಬ್ಬರಾಗಿ ಅವರು ಹೊರಹೊಮ್ಮುತ್ತಿರುವುದನ್ನು ಇದು ಸ್ಪಷ್ಟಪಡಿಸುತ್ತದೆ.