KAR vs SAU: ಶ್ರೇಯಸ್ ಗೋಪಾಲ್ ಸ್ಪಿನ್ ಮೋಡಿ ವ್ಯರ್ಥ, ಡ್ರಾನಲ್ಲಿ ಅಂತ್ಯ ಕಂಡರೂ ಕರ್ನಾಟಕಕ್ಕೆ ಒಂದು ಅಂಕ!
KAR vs SAUR Match Highlights: ರಾಜ್‌ಕೋಟ್‌ನ ನಿರಂಜನ್ ಶಾ ಕ್ರೀಡಾಂಗಣದಲ್ಲಿ ಶನಿವಾರ ಅಂತ್ಯವಾದ ಕರ್ನಾಟಕ ಹಾಗೂ ಸೌರಾಷ್ಟ್ರ ತಂಡಗಳ ನಡುವಣ 2025-26ರ ರಣಜಿ ಟ್ರೋಫಿ ಟೂರ್ನಿಯ ಎಲೈಟ್ ಬಿ ಪಂದ್ಯ ಡ್ರಾನಲ್ಲಿ ಅಂತ್ಯ ಕಂಡಿತು. ಪ್ರಥಮ ಇನಿಂಗ್ಸ್‌ನಲ್ಲಿನ ಅಲ್ಪ ಮುನ್ನಡೆಯ ಕಾರಣ ಸೌರಾಷ್ಟ್ರ 3 ಅಂಕ ಪಡೆದರೆ, ಮಯಾಂಕ್ ಅಗರ್ವಾಲ್ ನಾಯಕತ್ವದ ಕರ್ನಾಟಕ ತಂಡ ಒಂದು ಅಂಕಕ್ಕೆ ತೃಪ್ತಿಪಟ್ಟುಕೊಂಡಿತು.

ಸೌರಾಷ್ಟ್ರ ವಿರುದ್ಧದ ಪಂದ್ಯದಲ್ಲಿ 11 ವಿಕೆಟ್‌ಗಳನ್ನು ಕಬಳಿಸಿದ ಶ್ರೇಯಸ್ ಗೋಪಾಲ್. -

ರಾಜ್‌ಕೋಟ್: ಶ್ರೇಯಸ್ ಗೋಪಾಲ್ (Shreyas Gopal) ಅವರ ಸ್ಪಿನ್ ಮೋಡಿಯ ಹೊರತಾಗಿಯೂ ಕರ್ನಾಟಕ ತಂಡ, ಸೌರಾಷ್ಟ್ರ ಎದುರಿನ 2025-26ರ ಸಾಲಿನ ರಣಜಿ ಟ್ರೋಫಿ (Ranji Trophy 2025-26) ಟೂರ್ನಿಯ ತನ್ನ ಮೊದಲನೇ ಪಂದ್ಯದಲ್ಲಿ (KAR vs SAU) ಡ್ರಾಗೆ ತೃಪ್ತಿಪಟ್ಟುಕೊಂಡಿತು. ಪ್ರಥಮ ಇನಿಂಗ್ಸ್‌ನಲ್ಲಿನ ಕೇವಲ 4 ರನ್ ಮುನ್ನಡೆ ಪಡೆದಿದ್ದರ ಫಲವಾಗಿ ಜಯದೇವ್ ಉನಾದ್ಕಟ್ ನಾಯಕತ್ವದ ಸೌರಾಷ್ಟ್ರ ತಂಡ 3 ಅಂಕವನ್ನು ಪಡೆದರೆ, ಮಯಾಂಕ್ ಅಗರ್ವಾಲ್ ಸಾರಥ್ಯದ ಕರ್ನಾಟಕ ತಂಡ ಒಂದೇ ಒಂದು ಅಂಕವನ್ನು ತನ್ನ ಖಾತೆಗೆ ಸೇರಿಸಿಕೊಂಡಿತು. ಈ ಪಂದ್ಯದಲ್ಲಿ ಒಟ್ಟು 10 ವಿಕೆಟ್‌ಗಳನ್ನು ಕಬಳಿಸಿದ್ದ ಧರ್ಮೇಂದ್ರ ಸಿನ್ಹ್ ಜಡೇಜಾ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.
ಶನಿವಾರ ಇಲ್ಲಿನ ನಿರಂಜನ್ ಶಾ ಕ್ರೀಡಾಂಗಣದಲ್ಲಿ ಒಂದು ವಿಕೆಟ್ ನಷ್ಟಕ್ಕೆ 89 ರನ್‌ಗಳ ಮೂಲಕ ನಾಲ್ಕನೇ ಹಾಗೂ ಅಂತಿಮ ದಿನದಾಟವನ್ನು ಆರಂಭಿಸಿದ ಕರ್ನಾಟಕ ತಂಡ, ಮಯಾಂಕ್ ಅಗರ್ವಾಲ್ ಅರ್ಧಶತಕದ ಬಲದಿಂದ ದ್ವಿತೀಯ ಇನಿಂಗ್ಸ್‌ನಲ್ಲಿ 74.2 ಓವರ್‌ಗಳಿಗೆ 232 ರನ್‌ಗಳಿಗೆ ಆಲ್‌ಔಟ್ ಆಯಿತು. ಆ ಮೂಲಕ ಎದುರಾಳಿ ಸೌರಾಷ್ಟ್ರ ತಂಡಕ್ಕೆ ಅಂತಿಮ ಇನಿಂಗ್ಸ್‌ನಲ್ಲಿ 229 ರನ್‌ಗಳ ಗುರಿಯನ್ನು ನೀಡಿತ್ತು. ಕರ್ನಾಟಕ ತಂಡದ ಪರ ದ್ವಿತೀಯ ಇನಿಂಗ್ಸ್‌ನಲ್ಲಿ ಅತ್ಯುತ್ತಮ ಬ್ಯಾಟ್ ಮಾಡಿದ ನಾಯಕ ಮಯಾಂಕ್ ಅಗರ್ವಾಲ್ (64 ರನ್, 126 ಎಸೆತಗಳು) ಅರ್ಧಶತಕವನ್ನು ಬಾರಿಸಿದರು. ಇವರ ಜೊತೆಗೆ ನಿಕಿನ್ ಜೋಸ್ 34 ರನ್, ಕೆ ಶ್ರೀಜಿತ್ 31 ರನ್ ಹಾಗೂ ಎಂ ವೆಂಕಟೇಶ್ 28 ರನ್ ಗಳಿಸಿದ್ದರು.
MP vs PUN: ಶತಕದ ಮೂಲಕ ರಣಜಿ ಟ್ರೋಫಿ ಪಯಣವನ್ನು ಆರಂಭಿಸಿದ ರಜತ್ ಪಾಟಿದಾರ್!
ಬಳಿಕ ಗುರಿಯನ್ನು ಹಿಂಬಾಲಿಸಿದ್ದ ಸೌರಾಷ್ಟ್ರ ತಂಡಕ್ಕೆ ಶ್ರೇಯಸ್ ಗೋಪಾಲ್ ತಮ್ಮ ಸ್ಪಿನ್ ಮೋಡಿಯ ಮೂಲಕ ಆರಂಭಿಕ ಆಘಾತವನ್ನು ನೀಡಿದ್ದರು. ಆರಂಭಿಕ ಬ್ಯಾಟ್ಸ್‌ಮನ್‌ಗಳಾದ ಹಾರ್ವಿಕ್ ದೇಸಾಯಿ (13), ಚಿರಾಗ್ ಜಾನಿ (15) ಹಾಗೂ ಅನ್ಷ್ ಗೋಸಾಯಿ (2) ಅವರನ್ನು ಶ್ರೇಯಸ್ ಗೋಪಾಲ್ ಆರಂಭದಲ್ಲಿ ಔಟ್ ಮಾಡಿದ್ದರು. ಆ ಮೂಲಕ ಕರ್ನಾಟಕ ತಂಡಕ್ಕೆ ಗೆಲುವಿನ ಭರವಸೆಯನ್ನು ಮೂಡಿಸಿದ್ದರು. ನಂತರ ಶಿಖರ್ ಶೆಟ್ಟಿ ಅವರು ಅರ್ಪಿತ್ ವಸವಡ ಅವರ ವಿಕೆಟ್ ಕಿತ್ತರು. ಇದರೊಂದಿಗೆ ಸೌರಾಷ್ಟ್ರ ತಂಡ 43 ರನ್‌ಗಳಿಗೆ 4 ವಿಕೆಟ್ ಕಳೆದುಕೊಂಡು ಸೋಲಿನ ಭೀತಿಗೆ ಒಳಗಾಗಿತ್ತು.
ಆದರೆ, ಸಮರ್ ಗಜ್ಜರ್ (43* ರನ್) ಹಾಗೂ ಜೇ ಗೋಯಲ್ (41 ರನ್) ಅವರು 81 ರನ್‌ಗಳ ಜೊತೆಯಾಟವನ್ನು ಆಡುವ ಮೂಲಕ ಸೌರಾಷ್ಟ್ರ ತಂಡಕ್ಕೆ ಆಸರೆಯಾದರು ಹಾಗೂ ತಮ್ಮ ತಂಡವನ್ನು ಸೋಲಿನ ಭೀತಿಯಿಂದ ಪಾರು ಮಾಡಿದರು. ಅಂತಿಮವಾಗಿ ಸೌರಾಷ್ಟ್ರ ನಾಲ್ಕನೇ ದಿನದಾಟದ ಅಂತ್ಯಕ್ಕೆ 43 ಓವರ್‌ಗಳಿಗೆ 5 ವಿಕೆಟ್‌ಗಳ ನಷ್ಟಕ್ಕೆ 128 ರನ್‌ಗಳನ್ನು ಕಲೆ ಹಾಕಿತು. ಪಂದ್ಯ ಡ್ರಾನಲ್ಲಿ ಅಂತ್ಯ ಕಂಡರೂ ಪ್ರಥಮ ಇನಿಂಗ್ಸ್‌ನಲ್ಲಿನ 4 ರನ್ ಮುನ್ನಡೆಯ ಫಲವಾಗಿ ಆತಿಥೇಯರು 3 ಅಂಕಗಳನ್ನು ಪಡೆದು, ಎಲೈಟ್ ಬಿ ಪಾಯಿಂಟ್ಸ್ ಟೇಬಲ್‌ನಲ್ಲಿ ನಾಲ್ಕನೇ ಸ್ಥಾನಕ್ಕೆ ಲಗ್ಗೆ ಇಟ್ಟರು. ಇನ್ನು ಕರ್ನಾಟಕ ತಂಡ ಒಂದು ಅಂಕದೊಂದಿಗೆ ಆರನೇ ಸ್ಥಾನವನ್ನು ಪಡೆದುಕೊಂಡಿದೆ.
ರಣಜಿ ಟೂರ್ನಿಯಲ್ಲಿ ಆರ್‌ಸಿಬಿ ನಾಯಕ ಮಿಂಚು, ಡಬಲ್ ಸೆಂಚುರಿ ಬಾರಿಸಿದ ರಜತ್ ಪಾಟಿದಾರ್!
ಇದಕ್ಕೂ ಮುನ್ನ ಕರ್ನಾಟಕ ತಂಡ ಪ್ರಥಮ ಇನಿಂಗ್ಸ್‌ನಲ್ಲಿ 372 ರನ್‌ಗಳನ್ನು ಕಲೆ ಹಾಕಿದ್ದರೆ, ಎದುರಾಳಿ ಸೌರಾಷ್ಟ್ರ ತಂಡ ಪ್ರಥಮ ಇನಿಂಗ್ಸ್‌ನಲ್ಲಿ 376 ರನ್‌ಗಳ ಮೊತ್ತವನ್ನು ದಾಖಲಿಸಿತ್ತು. ಕರ್ನಾಟಕ ಪರ ಪ್ರಥಮ ಇನಿಂಗ್ಸ್‌ನಲ್ಲಿ ದೇವದತ್ ಪಡಿಕ್ಕಲ್ (96 ರನ್), ಕರುಣ್ ನಾಯರ್ (73 ರನ್), ಆರ್ ಸ್ಮರಣ್ (77 ರನ್) ಹಾಗೂ ಶ್ರೇಯಸ್ ಗೋಪಾಲ್ (56) ಅವರು ಅರ್ಧಶತಕಗಳನ್ನು ಬಾರಿಸಿದ್ದರು. ಸೌರಾಷ್ಟ್ರ ಪರ ಧರ್ಮೇಂದ್ರ ಜಡೇಜಾ 7 ವಿಕೆಟ್ ಕಿತ್ತಿದ್ದರು.
ಇನ್ನು ಸೌರಾಷ್ಟ್ರ ತಂಡದ ಪರ ಪ್ರಥಮ ಇನಿಂಗ್ಸ್‌ನಲ್ಲಿ ಚಿರಾಗ್ ಜಾನಿ (91 ರನ್), ಅರ್ಪಿತ್ ವಸವಡ (58 ರನ್) ಅವರು ಅತ್ಯುತ್ತಮ ಬ್ಯಾಟಿಂಗ್ ಪ್ರದರ್ಶನವನ್ನು ತೋರಿದ್ದರು. ಕರ್ನಾಟಕ ಪರ ಶ್ರೇಯಸ್ ಗೋಪಾಲ್ 8 ವಿಕೆಟ್ ಕಿತ್ತಿದ್ದರು.