ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

IPL 2026 Final: ಆರ್‌ಸಿಬಿಗೆ ಸತತ 2ನೇ ಟ್ರೋಫಿ ಗೆದ್ದುಕೊಟ್ಟು ಹಲವು ದಾಖಲೆಗಳನ್ನು ಮುರಿದ ರಜತ್‌ ಪಾಟಿದಾರ್‌!

RCB vs GT: ನಾಯಕನಾಗಿ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡಕ್ಕೆ ಸತತ ಎರಡನೇ ಐಪಿಎಲ್‌ ಟ್ರೋಫಿ ಗೆದ್ದುಕೊಡುವ ಮೂಲಕ ರಜತ ಪಾಟಿದಾರ್‌ ಹಲವು ದಾಖಲೆಗಳನ್ನು ಬರೆದಿದ್ದಾರೆ. ನಾಯಕನಾಗಿ ಆರಂಭಿಕ ಎರಡು ಟೂರ್ನಿಗಳಲ್ಲಿ ಐಪಿಎಲ್‌ ಗೆದ್ದ ಮೊದಲ ನಾಯಕ ಎಂಬ ಕೀರ್ತಿಗೆ ರಜತ್‌ ಭಾಜನರಾಗಿದ್ದಾರೆ.

ಸತತ 2ನೇ ಐಪಿಎಲ್‌ ಗೆದ್ದು ಹಲವು ದಾಖಲೆ ಬರೆದ ರಜತ್‌ ಪಾಟಿದಾರ್‌!

ತಮ್ಮ ನಾಯಕತ್ವದಲ್ಲಿ ಸತತ 2ನೇ ಐಪಿಎಲ್‌ ಗೆದ್ದು ಹಲವು ದಾಖಲೆ ಬರೆದ ರಜತ್‌ ಪಾಟಿದಾರ್‌. -

Profile
Ramesh Kote Jun 1, 2026 12:40 AM

ಅಹಮದಾಬಾದ್‌: ಗುಜರಾತ್‌ ಟೈಟನ್ಸ್‌ ಎದುರು 2026ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ (IPL 2026) ಟೂರ್ನಿಯ ಫೈನಲ್‌ ಪಂದ್ಯದಲ್ಲಿ 5 ವಿಕೆಟ್‌ಗಳ ಗೆಲುವು ಪಡೆದ ಬಳಿಕ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು (RCB) ತಂಡ ಸತತ ಎರಡನೇ ಬಾರಿ ಟ್ರೋಫಿಯನ್ನು ಮುಡಿಗೇರಿಸಿಕೊಂಡಿತು. ಬೌಲರ್‌ಗಳ ಪರಿಣಾಮಕಾರಿ ಬೌಲಿಂಗ್‌ ಹಾಗೂ ವಿರಾಟ್‌ ಕೊಹ್ಲಿ ಅವರ ಹೋರಾಟದ ಅರ್ಧಶತಕದ ಬಲದಿಂದ ಆರ್‌ಸಿಬಿ ಈ ಸಾಧನೆ ಮಾಡಲು ಸಾಧ್ಯವಾಯಿತು. ಇದಕ್ಕೂ ಮುನ್ನ 2025ರಲ್ಲಿ ಆರ್‌ಸಿಬಿ ಚೊಚ್ಚಕ ಐಪಿಎಲ್‌ ಟ್ರೋಫಿಯನ್ನು ಮುಡಿಗೇರಿಸಿಕೊಳ್ಳುವ 18 ವರ್ಷಗಳ ಕನಸನ್ನು ನನಸು ಮಾಡಿಕೊಂಡಿತ್ತು. ಇದೀಗ ತಮ್ಮ ನಾಯಕತ್ವದಲ್ಲಿ ಆರ್‌ಸಿಬಿಗೆ ಸತತ ಎರಡನೇ ಐಪಿಎಲ್‌ ಗೆದ್ದುಕೊಡುವ ಮೂಲಕ ರಜತ್‌ ಪಾಟಿದಾರ್‌ (Rajat Patidar) ಹಲವು ದಾಖಲೆಗಳನ್ನು ಬರೆದಿದ್ದಾರೆ.

ಐಪಿಎಲ್‌ ಟೂರ್ನಿಯ ಇತಿಹಾಸದಲ್ಲಿ ಸತತ ಎರಡನೇ ಬಾರಿ ಟ್ರೋಫಿಯನ್ನು ಗೆದ್ದ ತಂಡ ಎಂಬ ದಾಖಲೆಯನ್ನು ಆರ್‌ಸಿಬಿ ಬರೆಯಿತು. ಮೂಲಕ ಎಂಎಸ್‌ ಧೋನಿ ಹಾಗೂ ರೋಹಿತ್‌ ಶರ್ಮಾ ಅವರನ್ನು ಒಳಗೊಂಡ ಎಲೈಟ್‌ ಲೀಸ್ಟ್‌ಗೆ ರಜತ್‌ ಪಾಟಿದಾರ್‌ ಸೇರ್ಪಡೆಯಾದರು. ಎಂಎಸ್‌ ಧೋನಿ 2010 ಮತ್ತು 2011ರಲ್ಲಿ ತಮ್ಮ ನಾಯಕತ್ವದಲ್ಲಿ ಸಿಎಸ್‌ಕೆಗೆ ಪ್ರಶಸ್ತಿ ತಂದುಕೊಟ್ಟಿದ್ದರು. ಇನ್ನು ರೋಹಿತ್‌ ಶರ್ಮಾ ಅವರು 2019 ಮತ್ತು 2020ರಲ್ಲಿ ಮುಂಬೈ ಇಂಡಿಯನ್ಸ್‌ಗೆ ಸತತ ಎರಡು ಕಪ್‌ ಗೆದ್ದುಕೊಟ್ಟಿದ್ದರು. ಗೌತಮ್‌ ಗಂಭೀರ್‌ 2012 ಮತ್ತು 2014ರಲ್ಲಿ ಕೆಕೆಆರ್‌ಗೆ ಎರಡು ಬಾರಿ ಕಪ್‌ ಗೆದ್ದುಕೊಟ್ಟಿದ್ದರು.

RCB vs GT: ʻಈ ಸಲಾನು ಕಪ್‌ ನಮ್ದೇʼ-ಗುಜರಾತ್‌ ವಿರುದ್ಧ ಗೆದ್ದ ಆರ್‌ಸಿಬಿಗೆ ಸತತ ಎರಡನೇ ಐಪಿಎಲ್‌ ಗರಿ!

ದೊಡ್ಡ ದಾಖಲೆ ಬರೆದ ರಜತ್‌ ಪಾಟಿದಾರ್‌

ಐಪಿಎಲ್‌ ಟೂರ್ನಿಯಲ್ಲಿ ನಾಯಕನಾಗಿ ಆರಂಭಿಕ ಎರಡೂ ಟೂರ್ನಿಗಳಲ್ಲಿ ಪ್ರಶಸ್ತಿ ಗೆದ್ದ ಮೊಟ್ಟ ಮೊದಲ ನಾಯಕ ಎಂಬ ದಾಖಲೆಯನ್ನು ರಜತ್‌ ಪಾಟಿದಾರ್‌ ಬರೆದಿದ್ದಾರೆ. ಇದನ್ನೂ ಮುನ್ನ ಶೇನ್‌ ವಾರ್ನ್‌ (ರಾಜಸ್ಥಾನ್‌ ರಾಯಲ್ಸ್‌), ರೋಹಿತ್‌ ಶರ್ಮಾ (ಮುಂಬೈ ಇಂಡಿಯನ್ಸ್‌) ಹಾಗೂ ಹಾರ್ದಿಕ್‌ ಪಾಂಡ್ಯ (ಗುಜರಾತ್‌ ಟೈಟನ್ಸ್‌ ) ನಾಯಕನಾಗಿ ತಮ್ಮ ಮೊದಲ ಆವೃತ್ತಿಯಲ್ಲಿಯೇ ಪ್ರಶಸ್ತಿಯನ್ನು ಗೆದ್ದುಕೊಟ್ಟಿದ್ದರು. ಆದರೆ, ಇದರಲ್ಲಿ ಯಾರೂ ಕೂಡ ನಾಯಕನಾದ ಬಳಿಕ ಆರಂಭಿಕ ಎರಡು ಟ್ರೋಫಿಗಳನ್ನು ಗೆಲ್ಲಲು ಸಾಧ್ಯವಾಗಿರಲಿಲ್ಲ. ಇದೀಗ ರಜತ್‌ ಪಾಟಿದಾರ್‌ ಈ ಸಾಧನೆಗೆ ಭಾಜನರಾಗಿದ್ದಾರೆ.



ಮತ್ತೊಂದು ಮೈಲುಗಲ್ಲು ತಲುಪಿದ ರಜತ್‌

ಐಪಿಎಲ್‌ ಇತಿಹಾಸದಲ್ಲಿ ಅತ್ಯಂತ ಕಡಿಮೆ ಪಂದ್ಯಗಳಲ್ಲಿ ನಾಯಕನಾಗಿ ಎರಡು ಟ್ರೋಫಿಗಳನ್ನು ಗೆದ್ದ ಮೊದಲ ಆಟಗಾರ ಎಂಬ ದಾಖಲೆಯನ್ನು ಪಾಟಿದಾರ್‌ ಬರೆದಿದ್ದಾರೆ. ರಜತ್‌ ಪಾಟಿದಾರ್‌ ನಾಯಕತ್ವದಲ್ಲಿ ಆರ್‌ಸಿಬಿ ಆಡಿದ 28 ಪಂದ್ಯಗಳಲ್ಲಿ ಎರಡು ಟ್ರೋಫಿಗಳನ್ನು ಮುಡಿಗೇರಿಸಿಕೊಂಡಿದ್ದಾರೆ. ಇದಕ್ಕೂ ಮುನ್ನ ಈ ದಾಖಲೆ ರೋಹಿತ್‌ ಶರ್ಮಾ ಅವರ ಹೆಸರಿನಲ್ಲಿತ್ತು.

ಅತಿ ಕಡಿಮೆ ಪಂದ್ಯಗಳಲ್ಲಿ ಎರಡು ಐಪಿಎಲ್‌ ಟ್ರೋಫಿಗಳನ್ನು ಗೆದ್ದ ನಾಯಕರ ವಿವರ

ರಜತ್ ಪಟಿದಾರ್: 28

ರೋಹಿತ್ ಶರ್ಮಾ: 44

ಎಂಎಸ್ ಧೋನಿ: 59

ಗೌತಮ್ ಗಂಭೀರ್: 79



ಟಿ20ಐ ಕ್ರಿಕೆಟ್‌ಗೆ ಪದಾರ್ಪಣೆ ಮಾಡುವ ಮೊದಲೇ 2 ಐಪಿಎಲ್‌ ಗೆದ್ದ ಪಾಟಿದಾರ್‌

ಇದರೊಂದಿಗೆ ರಜತ್‌ ಪಾಟಿದಾರ್‌ ಅವರು ಟಿ20ಐ ಕ್ರಿಕೆಟ್‌ಗೆ ಪದಾರ್ಪಣೆ ಮಾಡುವುದಕ್ಕೂ ಮುನ್ನವೇ ಎರಡು ಐಪಿಎಲ್‌ ಪ್ರಶಸ್ತಿಗಳನ್ನು ಗೆದ್ದ ಮೊದಲ ನಾಯಕ ಎಂಬ ಅಪೂರ್ವ ದಾಖಲೆಯನ್ನು ನಿರ್ಮಿಸಿದ್ದಾರೆ. ಈ ಹಿಂದೆ ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ನಲ್ಲಿ ಆಡದೇ ಐಪಿಎಲ್‌ ಪ್ರಶಸ್ತಿ ಗೆದ್ದ ಏಕೈಕ ನಾಯಕ ಎಂದರೆ ಶೇನ್‌ ವಾನ್‌. ಆಸ್ಟ್ರೇಲಿಯಾದ ದಂತಕಥೆ ವಾರ್ನ್ ಅವರು 2005ರಲ್ಲಿ ಮೊದಲ ಟಿ20ಐ ಅಂತಾರಾಷ್ಟ್ರೀಯ ಪಂದ್ಯ ನಡೆಯುವ ಮುನ್ನವೇ ವೈಟ್-ಬಾಲ್ ಕ್ರಿಕೆಟ್‌ಗೆ ವಿದಾಯ ಹೇಳಿದ್ದರು.

ಅಷ್ಟೇ ಅಲ್ಲದೆ, 2008ರಲ್ಲಿ ನಡೆದಿದ್ದ ಉದ್ಘಾಟನಾ ಐಪಿಎಲ್‌ ಟೂರ್ನಿಯಲ್ಲಿ ರಾಜಸ್ಥಾನ್‌ ರಾಯಲ್ಸ್‌ ತಂಡವನ್ನು ಚಾಂಪಿಯನ್ ಪಟ್ಟಕ್ಕೇರಿಸಿದ್ದ ವೇಳೆಗೆ, ವಾರ್ನ್ ಎಲ್ಲಾ ಮಾದರಿಯ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದರು.