IPL 2026: ರಿಷಭ್ ಪಂತ್ ವೈಫಲ್ಯಕ್ಕೆ ನಿಜವಾದ ಕಾರಣ ತಿಳಿಸಿದ ಚೇತೇಶ್ವರ್ ಪೂಜಾರ!
ಸಹಜ ಆಕ್ರಮಣಕಾರಿ ಶೈಲಿಯ ಬ್ಯಾಟರ್ ಆಗಿರುವ ರಿಷಭ್ ಪಂತ್ ಟೆಸ್ಟ್ ಕ್ರಿಕೆಟ್‌ನಲ್ಲಿ ಸಾಧಿಸಿರುವ ಯಶಸ್ಸನ್ನು ಐಪಿಎಲ್ ಟೂರ್ನಿಯಲ್ಲಿ ಮರುಕಳಿಸಲು ಸಾಧ್ಯವಾಗದಿರುವುದು ಆಶ್ಚರ್ಯಕರ ಸಂಗತಿ ಎಂದು ಚೇತೇಶ್ವರ್ ಪೂಜಾರ ಹೇಳಿದ್ದಾರೆ. ಪಂತ್ ಅವರ ಮಾನದಂಡಗಳಿಗೆ ಹೋಲಿಸಿದರೆ, ಐಪಿಎಲ್‌ನಲ್ಲಿ ಅವರ ಅಂಕಿಅಂಶಗಳು ಇನ್ನೂ ನಿರೀಕ್ಷಿತ ಮಟ್ಟ ತಲುಪಿಲ್ಲ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ರಿಷಭ್ ಪಂತ್ ಬ್ಯಾಟಿಂಗ್ ವೈಫಲ್ಯಕ್ಕೆ ಕಾರಣ ತಿಳಿಸಿದ ಪೂಜಾರ. -
ನವದೆಹಲಿ: ಸಹಜವಾಗಿ ಆಕ್ರಮಣಕಾರಿ ಬ್ಯಾಟಿಂಗ್ ಶೈಲಿಯನ್ನು ಹೊಂದಿರುವ ವಿಕೆಟ್ ಕೀಪರ್-ಬ್ಯಾಟರ್ ರಿಷಭ್ ಪಂತ್ (Rishabh Pant) ತಮ್ಮ ಟೆಸ್ಟ್ ಕ್ರಿಕೆಟ್ ಯಶಸ್ಸನ್ನು ಇಂಡಿಯನ್ ಪ್ರೀಮಿಯರ್ ಲೀಗ್ (IPL 2026) ಟೂರ್ನಿಯಲ್ಲಿ ಮರುಕಳಿಸಲು ಸಾಧ್ಯವಾಗದಿರುವ ಬಗ್ಗೆ ಭಾರತ ಟೆಸ್ಟ್ ತಂಡದ ಮಾಜಿ ಬ್ಯಾಟ್ಸ್‌ಮನ್ ಚೇತೇಶ್ವರ್ ಪೂಜಾರ (Cheteshwar Pujara) ಅಚ್ಚರಿ ವ್ಯಕ್ತಪಡಿಸಿದ್ದಾರೆ. ಪಂತ್ ದೊಡ್ಡ ದೊಡ್ಡ ಶಾಟ್‌ಗಳನ್ನು ಹೊಡೆಯುವ ಸಾಮರ್ಥ್ಯವನ್ನು ಹೊಂದಿದ್ದಾರೆ ಹಾಗೂ ಒಬ್ಬರೇ ತಮ್ಮ ಆಕ್ರಮಣಕಾರಿ ಬ್ಯಾಟಿಂಗ್ ಶೈಲಿಯ ಮೂಲಕ ತಂಡವನ್ನು ಗೆಲ್ಲಿಸುವ ಸಾಮರ್ಥ್ಯವನ್ನು ಹೊಂದಿದ್ದಾರೆ. ಆದರೂ ಅವರು ಐಪಿಎಲ್ ಟೂರ್ನಿಯಲ್ಲಿ ತಮ್ಮ ಸಾಮರ್ಥ್ಯಕ್ಕೆ ತಕ್ಕ ಆಟವನ್ನು ಆಡುತ್ತಿಲ್ಲ ಎಂಬುದು ಮಾಜಿ ಆಟಗಾರನಿಗೆ ಅಚ್ಚರಿ ಉಂಟು ಮಾಡಿದೆ.
ಜಿಯೊ ಹಾಟ್‌ಸ್ಟಾರ್ ಜೊತೆ ಮಾತನಾಡಿದ ಚೇತೇಶ್ವರ್ ಪೂಜಾರ, ನಾಯಕತ್ವದ ಜವಾಬ್ದಾರಿ ರಿಷಭ್ ಪಂತ್ ಅವರ ಪ್ರದರ್ಶನದ ಮೇಲೆ ಪರಿಣಾಮ ಬೀರಿರಬಹುದು ಎಂದು ಅಭಿಪ್ರಾಯಪಟ್ಟಿದ್ದಾರೆ. ವಿಕೆಟ್‌ಕೀಪರ್-ಬ್ಯಾಟರ್ ಆಗಿರುವ ಪಂತ್ ಕೇವಲ ಬ್ಯಾಟಿಂಗ್ ಮೇಲೆಯೇ ಗಮನಹರಿಸಿದರೆ ಇನ್ನಷ್ಟು ಉತ್ತಮ ಪ್ರದರ್ಶನ ನೀಡಬಹುದು ಎಂದು ಅವರು ಹೇಳಿದ್ದಾರೆ.
2026ರ ಐಪಿಎಲ್ ಪ್ಲೇಆಫ್ಸ್‌ಗಾಗಿ ಪಾಕಿಸ್ತಾನ ಪ್ರವಾಸವನ್ನು ನಿರಾಕರಿಸಿದ ಆಸ್ಟ್ರೇಲಿಯಾ ಆಟಗಾರರು!
ರಿಷಭ್ ಪಂತ್ ಇನ್ನೂ ಭಾರತ ತಂಡದ ಮೊದಲ ಆಯ್ಕೆಯ ಟೆಸ್ಟ್ ವಿಕೆಟ್‌ಕೀಪರ್ ಆಗಿದ್ದರೂ, ವೈಟ್-ಬಾಲ್ ಸ್ವರೂಪದಲ್ಲಿ ಅವರ ಸ್ಥಾನಮಾನ ಕುಸಿದಿದೆ. 2024ರ ಟಿ20 ವಿಶ್ವಕಪ್ ವಿಜೇತ ಭಾರತೀಯ ತಂಡದ ಭಾಗವಾಗಿದ್ದರೂ, ಅವರು ಈಗ ಟಿ20ಐ ತಂಡದಲ್ಲಿ ನಿಯಮಿತ ಆಟಗಾರರಾಗಿಲ್ಲ. ಏಕದಿನ ಕ್ರಿಕೆಟ್‌ನಲ್ಲಿ ಕೂಡ ಕೆಎಲ್ ರಾಹುಲ್ ಬಳಿಕ ಎರಡನೇ ಆಯ್ಕೆಯ ವಿಕೆಟ್‌ಕೀಪರ್ ಆಗಿದ್ದಾರೆ.
ಐಪಿಎಲ್ ವೃತ್ತಿ ಜೀವನದಲ್ಲಿ ಪಂತ್ 134 ಪಂದ್ಯಗಳಲ್ಲಿ 3,757 ರನ್ ಗಳಿಸಿದ್ದು, ಎರಡು ಶತಕಗಳು ಮತ್ತು 20 ಅರ್ಧಶತಕಗಳನ್ನು 146 ಸ್ಟ್ರೈಕ್‌ರೇಟ್‌ನೊಂದಿಗೆ ದಾಖಲಿಸಿದ್ದಾರೆ. ಆದರೆ ಟೆಸ್ಟ್ ಕ್ರಿಕೆಟ್‌ನಲ್ಲಿ ಅವರು ಇನ್ನಷ್ಟು ಯಶಸ್ಸು ಕಂಡಿದ್ದು, 49 ಪಂದ್ಯಗಳಲ್ಲಿ 3,476 ರನ್ ಗಳಿಸಿದ್ದಾರೆ. ಇದರಲ್ಲಿ ಇಂಗ್ಲೆಂಡ್, ಆಸ್ಟ್ರೇಲಿಯಾ ಮತ್ತು ದಕ್ಷಿಣ ಆಫ್ರಿಕಾದಲ್ಲಿ ಗಳಿಸಿದ ಶತಕಗಳನ್ನು ಒಳಗೊಂಡಂತೆ ಒಟ್ಟು ಎಂಟು ಶತಕಗಳಿವೆ.
RCB vs LSG ಪಂದ್ಯಕ್ಕೆ ಸಂಭಾವ್ಯ ಪ್ಲೇಯಿಂಗ್ XI, ಪಿಚ್ ರಿಪೋರ್ಟ್, ಹೆಡ್ ಟು ಹೆಡ್ ದಾಖಲೆ!
“ರಿಷಭ್ ಪಂತ್‌ನಂತಹ ಆಟಗಾರ ಟೆಸ್ಟ್ ಕ್ರಿಕೆಟ್‌ನಲ್ಲಿ ಯಾವುದೇ ಬೌಲರ್ ಮೇಲೆ ದಾಳಿ ಮಾಡಬಲ್ಲರು. ಆದರೆ ಐಪಿಎಲ್ ಅಂಕಿಅಂಶಗಳನ್ನು ನೋಡಿದರೆ, ಅದು ಟೆಸ್ಟ್ ಮಟ್ಟದಷ್ಟು ಉತ್ತಮವಾಗಿಲ್ಲ ಎಂಬುದು ನನಗೂ ಆಶ್ಚರ್ಯಕರವಾಗಿದೆ,” ಎಂದ ಚೇತೇಶ್ವರ್ ಪೂಜಾರ, “ಇದು ಮನಸ್ಥಿತಿಗೆ ಸಂಬಂಧಿಸಿದ ವಿಷಯವೂ ಆಗಿರಬಹುದು. ರಿಷಭ್ ಹೇಗೆ ಆಡಬೇಕು ಎಂಬುದರ ಬಗ್ಗೆ ಇನ್ನಷ್ಟು ಸ್ಪಷ್ಟತೆ ಇರಬೇಕು,” ಎಂದು ಅವರು ಹೇಳಿದ್ದಾರೆ.
ಪಂತ್‌ಗೆ ಸ್ಪಷ್ಟ ಚಿಂತನೆಯ ಅಗತ್ಯವಿದೆ: ಪೂಜಾರ
“ತಾಂತ್ರಿಕವಾಗಿ ನೋಡಿದರೆ, ರಿಷಭ್ ಪಂತ್ ಅವರ ಬ್ಯಾಟಿಂಗ್‌ನಲ್ಲಿ ದೊಡ್ಡ ಮಟ್ಟದ ಬದಲಾವಣೆಗಳ ಅಗತ್ಯವಿದೆ ಎಂದು ನನಗೆ ಕಾಣಿಸುವುದಿಲ್ಲ. ಇದು ಸಂಪೂರ್ಣವಾಗಿ ಮನಸ್ಥಿತಿಗೆ ಸಂಬಂಧಿಸಿದ ವಿಷಯ. ಅವರು ಬ್ಯಾಟಿಂಗ್‌ಗೆ ಬರುವಾಗ ಏನು ಮಾಡಬೇಕು, ಯಾವ ರೀತಿಯ ಶಾಟ್‌ಗಳನ್ನು ಆಡಬೇಕು ಎಂಬುದರ ಬಗ್ಗೆ ಸ್ಪಷ್ಟವಾದ ಚಿಂತನೆ ಮತ್ತು ಯೋಜನೆ ಇರಬೇಕು. ಟೆಸ್ಟ್ ಕ್ರಿಕೆಟ್‌ನಲ್ಲಿ ತಮ್ಮ ಬಲವಾದ ಪ್ರದೇಶಗಳು ಯಾವುವು ಎಂಬುದು ಅವರಿಗೆ ಚೆನ್ನಾಗಿ ಗೊತ್ತಿದೆ. ಫೀಲ್ಡರ್‌ಗಳನ್ನು ಬೌಂಡರಿ ಬಳಿ ಇಟ್ಟಿದ್ದರೂ, ಸರಿಯಾದ ಖಾಲಿ ಜಾಗಗಳನ್ನು ಆಯ್ದು ಶಾಟ್‌ಗಳನ್ನು ಆಡುತ್ತಾರೆ,” ಎಂದು ಚೇತೇಶ್ವರ್ ಪುಜಾರ ವಿವರಿಸಿದ್ದಾರೆ.