IND vs WI: ʻಸಚಿನ್ ಪಾಜಿಗೆ ಯಾರೂ ಸರಿಸಾಟಿಯಿಲ್ಲ..ʼ-ವಿರಾಟ್ ಕೊಹ್ಲಿಯ ಹೇಳಿಕೆಗೆ ಫ್ಯಾನ್ಸ್ ಮೆಚ್ಚುಗೆ !
ಸಚಿನ್ ತೆಂಡೂಲ್ಕರ್ ಅವರ 24 ವರ್ಷಗಳ ಸುದೀರ್ಘ ಕ್ರಿಕೆಟ್ ವೃತ್ತಿಜೀವನದ ಸಾಧನೆಗಳು ಮತ್ತು ಕೊಡುಗೆಗಳಿಗೆ ಹೋಲಿಕೆ ಮಾಡಲು ಸಾಧ್ಯವಿಲ್ಲ ಎಂದು ಭಾರತದ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ ಹೇಳಿದ್ದಾರೆ. ಸಚಿನ್ ಕ್ರಿಕೆಟ್‌ಗೆ ನೀಡಿರುವ ಕೊಡುಗೆ ಅನನ್ಯವಾಗಿದ್ದು, ಅವರ ಸಾಧನೆಗಳಿಗೆ ಸರಿಸಾಟಿಯಿಲ್ಲ ಎಂದು ಕೊಹ್ಲಿ ಅಭಿಪ್ರಾಯಪಟ್ಟಿದ್ದಾರೆ.
ಸಚಿನ್ ಹಾಗೂ ತಮ್ಮ ನಡುವಣ ಹೋಲಿಕೆಗಳ ಬಗ್ಗೆ ವಿರಾಟ್ ಕೊಹ್ಲಿ ಪ್ರತಿಕ್ರಿಯೆ ನೀಡಿದ್ದಾರೆ. -
ತಿರುವನಂತಪುರಂ: ಭಾರತದ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ (Virat Kohli) ಮತ್ತು ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್ (Sachin Tendulkar) ನಡುವಿನ ಹೋಲಿಕೆಗಳು ಹಲವು ವರ್ಷಗಳಿಂದ ಚರ್ಚೆಯಲ್ಲಿವೆ. ಕೊಹ್ಲಿ ಒಂದೊಂದೇ ದಾಖಲೆಗಳನ್ನು ಮುರಿಯುತ್ತಿದ್ದಂತೆ ಈ ಇಬ್ಬರು ಆಟಗಾರರ ನಡುವಿನ ಹೋಲಿಕೆ ಮತ್ತಷ್ಟು ಹೆಚ್ಚಾಗುತ್ತಿದೆ. ಆದರೆ, ಸಚಿನ್ ತೆಂಡೂಲ್ಕರ್ ಅವರ 24 ವರ್ಷಗಳ ಕ್ರಿಕೆಟ್ ವೃತ್ತಿಜೀವನದ ಸಾಧನೆ ಹಾಗೂ ಕ್ರೀಡೆಗೆ ಅವರು ನೀಡಿದ ಕೊಡುಗೆ ಅನನ್ಯವಾಗಿದ್ದು, ಅದನ್ನು ಅಂಕಿ-ಅಂಶಗಳ ಮೂಲಕ ಅಳೆಯಲು ಸಾಧ್ಯವಿಲ್ಲ ಎಂದು ಕೊಹ್ಲಿ ಹೇಳಿದ್ದಾರೆ.
2017ರಲ್ಲಿಯೇ ಸಚಿನ್ ಅವರೊಂದಿಗೆ ತಮ್ಮನ್ನು ಹೋಲಿಸುವುದರ ಕುರಿತು ಮಾತನಾಡಿದ್ದ ಕೊಹ್ಲಿ, ಸಚಿನ್ ಅವರ ಆಟದ ಮಟ್ಟ ತಮಗಿಂತಲೂ ಉನ್ನತವಾದದ್ದು ಎಂದು ಹೇಳಿದ್ದರು. ಇದೀಗ ಒಂಬತ್ತು ವರ್ಷಗಳ ಬಳಿಕವೂ ತಮ್ಮ ಅಭಿಪ್ರಾಯದಲ್ಲಿ ಯಾವುದೇ ಬದಲಾವಣೆಯಾಗಿಲ್ಲ ಎಂಬುದನ್ನು ಕೊಹ್ಲಿ ಸ್ಪಷ್ಟಪಡಿಸಿದ್ದಾರೆ. ಏಕದಿನ ಕ್ರಿಕೆಟ್‌ನಲ್ಲಿ ಸಚಿನ್‌ಗಿಂತ ಹೆಚ್ಚು ಶತಕಗಳನ್ನು ದಾಖಲಿಸಿದ್ದರೂ, ತಮಗೆ ಸ್ಫೂರ್ತಿಯಾದ ಕ್ರಿಕೆಟ್ ದಿಗ್ಗಜನ ಬಗ್ಗೆ ಕೊಹ್ಲಿ ಹೊಂದಿರುವ ಗೌರವ ಕಡಿಮೆಯಾಗಿಲ್ಲ.
IND vs WI: ತಿರುವನಂತಪುರಂನಲ್ಲಿ ಶತಕ ಸಿಡಿಸಿ ಅಪರೂಪದ ದಾಖಲೆ ಬರೆದ ವಿರಾಟ್ ಕೊಹ್ಲಿ!
ಸಚಿನ್ ಮತ್ತು ಧೋನಿ ಬಗ್ಗೆ ಕೊಹ್ಲಿ ಹೇಳಿದ್ದೇನು?
ಸಚಿನ್ ತೆಂಡೂಲ್ಕರ್ ಮತ್ತು ತಮ್ಮ ನಡುವಿನ ಹೋಲಿಕೆಗಳ ಕುರಿತು ಮಾತನಾಡಿದ ವಿರಾಟ್ ಕೊಹ್ಲಿ, ಸಚಿನ್ ಅವರನ್ನು ಯಾವಾಗಲೂ ತಮ್ಮ ಪಾಲಿಗೆ ವಿಶೇಷ ವ್ಯಕ್ತಿಯಾಗಿಯೇ ಕಾಣುವುದಾಗಿ ಹೇಳಿದ್ದಾರೆ. ಇದೇ ವೇಳೆ, ತಮ್ಮ ಮೊದಲ ನಾಯಕ ಎಂಎಸ್ ಧೋನಿ ಅವರ ಬಗ್ಗೆಯೂ ಗೌರವದ ಮಾತುಗಳನ್ನಾಡಿದ್ದಾರೆ.
"ನನ್ನ ಪಾಲಿಗೆ ಸಚಿನ್ ಪಾಜಿ ಯಾವಾಗಲೂ ಸಚಿನ್ ಪಾಜಿಯೇ ಆಗಿರುತ್ತಾರೆ. ಅದೇ ರೀತಿ, ನನ್ನ ಮೊದಲ ನಾಯಕ ಎಂಬ ಕಾರಣಕ್ಕೆ ಎಂಎಸ್ ಧೋನಿ ಕೂಡ ಯಾವಾಗಲೂ ನನಗೆ ವಿಶೇಷ ವ್ಯಕ್ತಿಯಾಗಿರುತ್ತಾರೆ. ನನ್ನ ಮನಸ್ಸಿನಲ್ಲಿ ಈ ವಿಚಾರಗಳು ಎಂದಿಗೂ ಬದಲಾಗುವುದಿಲ್ಲ. ನಾನು ಈಗಾಗಲೇ ಎಲ್ಲವನ್ನೂ ಸಾಧಿಸಿರುವ ವ್ಯಕ್ತಿ ಎಂದು ನನ್ನನ್ನು ಎಂದಿಗೂ ಭಾವಿಸಿಕೊಂಡಿಲ್ಲ. ನಾನು ಎಲ್ಲವನ್ನೂ ಮಾಡಿದ್ದೇನೆ, ಇನ್ನು ಏನೂ ಉಳಿದಿಲ್ಲ ಎಂದು ಹೇಳುವ ಹಂತಕ್ಕೆ ಒಬ್ಬ ಆಟಗಾರ ನಿಜವಾಗಿಯೂ ತಲುಪಲು ಸಾಧ್ಯವಿಲ್ಲ," ಎಂದು ವಿರಾಟ್ ಕೊಹ್ಲಿ ಹೇಳಿದ್ದಾರೆ.
ಏಕದಿನ ಕ್ರಿಕೆಟ್‌ನಲ್ಲಿ 15 ಸಾವಿರ ರನ್ ಪೂರೈಸಿದ ವಿರಾಟ್ ಕೊಹ್ಲಿ
"ನಮ್ಮ ಸಾಧನೆಗಳ ಬಗ್ಗೆ ತೃಪ್ತಿ ಇರಬಹುದು. ಆದರೆ, ಕ್ರೀಡೆಯಲ್ಲಿ ವಿನಮ್ರತೆಯಿಂದ ಅಭ್ಯಾಸ ಮಾಡುತ್ತಾ, ಉತ್ತಮ ಪ್ರದರ್ಶನ ನೀಡುತ್ತಾ, ಸರಿಯಾದ ಮಾರ್ಗದಲ್ಲಿ ಮುನ್ನಡೆಯಬೇಕು. ಅಹಂಕಾರದಿಂದ ನಾನು ಎಲ್ಲರಿಗಿಂತ ಉತ್ತಮ ಎಂಬ ಭಾವನೆ ಬೆಳೆಸಿಕೊಂಡರೆ ಅಲ್ಲಿಗೇ ನಮ್ಮ ಬೆಳವಣಿಗೆ ನಿಲ್ಲುತ್ತದೆ. ಸಚಿನ್ ಅವರು ತಮ್ಮ ಕಾಲಘಟ್ಟದಲ್ಲಿ ಕ್ರಿಕೆಟ್ ಆಟವನ್ನೇ ಬದಲಾಯಿಸಿದವರು. ಅವರ ಸಾಧನೆ ಸಂಖ್ಯೆಗಳು ಮತ್ತು ದಾಖಲೆಗಳ ಹೋಲಿಕೆಗಿಂತಲೂ ದೊಡ್ಡದು. ಅವರು ಜನರ ಮನಸ್ಸಿನಲ್ಲಿ ಬೀರಿರುವ ಪ್ರಭಾವವನ್ನು ಎಂದಿಗೂ ಮರೆಯಲು ಸಾಧ್ಯವಿಲ್ಲ" ಎಂದು ಕೊಹ್ಲಿ ತಿಳಿಸಿದ್ದಾರೆ.
ಸಚಿನ್ ದಾಖಲೆಗಳನ್ನೂ ಮೀರಿಸಿದ ವಿರಾಟ್ ಕೊಹ್ಲಿ
ವೆಸ್ಟ್ ಇಂಡೀಸ್ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ವಿರಾಟ್ ಕೊಹ್ಲಿ ತಮ್ಮ 55ನೇ ಏಕದಿನ ಶತಕ ದಾಖಲಿಸಿದ್ದರು. ಇದೇ ಪಂದ್ಯದಲ್ಲಿ ಏಕದಿನ ಕ್ರಿಕೆಟ್‌ನಲ್ಲಿ ಅತ್ಯಂತ ವೇಗವಾಗಿ 15,000 ರನ್ ಗಳಿಸಿದ ಆಟಗಾರ ಎಂಬ ಸಾಧನೆಯನ್ನೂ ಮಾಡಿದ್ದರು.
ಸಚಿನ್ ತೆಂಡೂಲ್ಕರ್ ಏಕದಿನ ಕ್ರಿಕೆಟ್‌ನಲ್ಲಿ 15,000 ರನ್ ಗಳಿಸಲು 377 ಇನಿಂಗ್ಸ್‌ಗಳನ್ನು ತೆಗೆದುಕೊಂಡಿದ್ದರೆ, ಕೊಹ್ಲಿ ಕೇವಲ 303 ಇನಿಂಗ್ಸ್‌ಗಳಲ್ಲಿ ಈ ಮೈಲುಗಲ್ಲು ತಲುಪಿದ್ದಾರೆ. ಈ ಮೂಲಕ ಸಚಿನ್‌ಗಿಂತ 74 ಇನಿಂಗ್ಸ್‌ಗಳಷ್ಟು ವೇಗವಾಗಿ ಕೊಹ್ಲಿ ಈ ಸಾಧನೆ ಮಾಡಿದ್ದಾರೆ.